ಬೆಂಗಳೂರು: ನಿಜವಾದ ಸಾಧಕರನ್ನು ಹುಡುಕುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತದೆ. ಯಾವುದೇ ಆಸೆ ಆಮಿಷಕ್ಕೆ ಹಾಗೂ ಒತ್ತಡಕ್ಕೆ ಮಣಿಯದೇ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಸಾಧಕರನ್ನು ಹುಡುಕಿ ಅವರಿಗೆ ಗೌರವಿಸುವ ಮೂಲಕ ಕನ್ನಡ ನಾಡಿಗೆ ಮಾದರಿಯಾಗುವ ಮಾರ್ಗದರ್ಶನವನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರು ನೀಡಿದ್ದಾರೆ. ಅವರ ಮಾರ್ಗದರ್ಶನದಂತೆ ಪರಿಷತ್ತು ತನ್ನ ಕಾರ್ಯನಿರ್ವಹಿಸುತ್ತಾ ಬಂದಿದೆ, ಅದರ ಪರಿಣಾಮವೇ ಯಾವುದೇ ವಸೂಲಿ ಅಥವಾ ಮರ್ಜಿಗೆ ತಲೆಕೆಡಿಸಿಕೊಳ್ಳದೇ ಸಾಧಕರ ಆಯ್ಕೆ ಮಾಡಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ʻನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿʼ, ʻಪಂಕಜಶ್ರೀ ಸಾಹಿತ್ಯ ದತ್ತಿʼ, ʻಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿʼ ಹಾಗೂ ʻಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿʼ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತಿಗಳು, ಕಲಾವಿದರು, ಹೋರಾಟಗಾರು ಸೇರಿದಂತೆ ಯಾವುದೇ ಸಾಧಕರು ಪ್ರಶಸ್ತಿಗಾಗಿ ಅರ್ಜಿ ಹಿಡಿದು ಸರಕಾರದಲ್ಲಿ ಅಥವಾ ಇತರ ಸಂಘ ಸಂಸ್ಥೆಗಳಿಗೆ ಅಲೆಯುವುದು ಅವರ ಸಾಧನೆಗೆ ಅವಮಾನ. ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ಸಾಧಕರಿಗೆ ಅವಮಾನ ಆಗದಂತೆ ಸೂಕ್ತ ವ್ಯಕ್ತಿಗಳು ನಾಡಿನ ಯಾವುದೇ ಮೂಲೆಯಲ್ಲಿ ಇದ್ದರೂ ಅಂತವರನ್ನು ಗುರುತಿಸುವ ಕೆಲಸವನ್ನು ಪರಿಷತ್ತು ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದರು.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆಯನ್ನು ಕಾಯುವುದಕ್ಕೆ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ. ನಮ್ಮಲ್ಲಿ ಇರುವ ಕಾನೂನುಗಳನ್ನು ಒಳ್ಳೆಯತನಕ್ಕೆ ಉಪಯೋಗ ಬರುವುದಕ್ಕಿಂತ ದುರುಪಯೋಗಕ್ಕೆ ಬರುವುದೇ ಹೆಚ್ಚಾಗುತ್ತಿದೆ. ಪಾರದರ್ಶಕ ವ್ಯವಸ್ಥೆ ಜಾರಿಯಾಗಬೇಕು ಎನ್ನುವ ಕಾರಣಕ್ಕೆ ಇರುವ ಮಾಹಿತಿ ಹಕ್ಕು ಕಾಯ್ದೆಯನ್ನು ಕೆಲವೇ ಕೆಲವು ಮಾಹಿತಿ ಹಕ್ಕು ಕಾರ್ಯಕರ್ತರು ಹೊರತು ಪಡಿಸಿ ಬಹುತೇಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಕಾನೂನು ಹರಿತವಾದ ಖಡ್ಗ ಇದ್ದಂತೆ. ಆತ್ಮರಕ್ಷಣೆಯನ್ನು ಮಾಡಿಕೊಳ್ಳಬಹುದು ಹಾಗೂ ಯಾರನ್ನಾದರೂ ಸಂಹಾರ ಮಾಡಲೂ ಬಳಸಬಹದು. ಅದಕ್ಕೆ ಪರಿಷತ್ತು ಈ ಕಾನೂನನ್ನು ನಿರಂತರವಾಗಿ ಜನಪರವಾಗಿ ಬಳಸುತ್ತಿರುವವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶ ಕಟ್ಟುವಲ್ಲಿ ನಾಯಕರ ಪಾತ್ರ ಮುಖ್ಯವಲ್ಲ, ಬದಲಿಗೆ ನೆಲ ಮೂಲ ಸಂಸ್ಕೃತಿಯನ್ನು ಕಾಯುವ ಸಾಮಾನ್ಯ ಜನರ ಪಾತ್ರ ಮುಖ್ಯವಾದದು. ಆದರೆ ಸಾಮಾನ್ಯ ಜನರ ಕೊಡುಗೆಗಳನ್ನು ದಾಖಲಿಸುವವರು ಮರೆತು ಬಿಟ್ಟಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಸದ್ದಿಲ್ಲದೇ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವವರಿಗೆ ಗುರುತಿಸುವ ಕೆಲಸ ಮಾಡುತ್ತಿದೆ. ಸಮಾಜದ ವಿವಿಧ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ಕ್ರಾಂತಿಕಾರಕ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಮಾಡುತ್ತದೆ ಎಂದು ಹೆಮ್ಮೆ ವ್ಯಕ್ತ ಪಡಿಸಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ, ಈ ಜಗತ್ತಿನಲ್ಲಿ ಪ್ರಾಮಾಣಿಕರಿಗೆ ಕಷ್ಟಗಳು ಬರುತ್ತಲೇ ಇರುತ್ತದೆ. ಆದರೆ ಒಂದಿಲ್ಲೊಂದು ದಿನ ಅಂತವರನ್ನು ಈ ಸಮಾಜ ಗುರುತಿಸುತ್ತದೆ. ಇವತ್ತಿನ ಎಲ್ಲಾ ರಂಗಗಳು ಕೆಡುತ್ತಿವೆ. ಸಂವಿಧಾನ, ಕಾಯ್ದೆ, ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳುವ ಜನರೇ ಜಾಸ್ತಿಯಾದ್ದಾರೆ. ಇಂತವರ ಮಧ್ಯ ಕನ್ನಡ ಸಾಹಿತ್ಯ ಪರಿಷತ್ತು ಪ್ರಾಮಾಣಿಕವಾಗಿ ಕನ್ನಡ ಕಟ್ಟಿ ಬೆಳೆಸುವ ಕೆಲಸ ಮಾಡುತ್ತಿದೆ. ಪರಿಷತ್ತಿನ ಜೊತೆಗೆ ನಾವು ಸದಾ ನಿಂತು ಕನ್ನಡ ಕಟ್ಟವ ಕೆಲಸಕ್ಕೆ ಸಹಕಾರಿಯಾಗಲಿದ್ದೇವೆ. ಒಳ್ಳೆಯ ಕೆಲಸ ಮಾಡುವಾಗ ತಗಾದೆ ಎತ್ತುವ ತುಂಟರು ಇದ್ದೇ ಇರುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳದೆ ಆತ್ಮಸಾಕ್ಷಿಗೆ ಗೌರವ ಕೊಟ್ಟು ನಮ್ಮ ಕರ್ತವ್ಯ ಮಾಡಬೇಕು ಎಂದು ಸಲಹೆ ನೀಡಿದರು.
೨೦೨೨ನೆಯ ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ ಸ್ವಿಕರಿಸಿ, ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತು ಒಂದು ಪ್ರಶಸ್ತಿಯನ್ನು ಘೋಷಣೆ ಮಾಡುತ್ತಿದೆ ಎಂದರೆ ಅದರ ಗೌರವ ಅಗಣಿತ. ಪರಿಷತ್ತಿನ ಯಾವುದೇ ದತ್ತಿ ಪ್ರಶಸ್ತಿಯಾಗಲಿ ಅದಕ್ಕೆ ಸರಿ ಸಮನಾದ ಇನ್ನೊಂದು ಪ್ರಶಸ್ತಿಗಳು ಕಾಣುವುದಿಲ್ಲ. ಇಲ್ಲಿ ಕೊಡುವ ಪ್ರಶಸ್ತಿಗೆ ಅದರದ್ದೇ ಗೌರವ ಇರುತ್ತದೆ. ಅದರಲ್ಲಿಯೂ ಕ್ರಿಯಾಶೀಲ ಕೆಲಸ ಮಾಡಿದವರನ್ನು ಹುಡುಕಿ ಗೌರವಿಸುವುದು ಎಂದರೆ ಸ್ವಚ್ಛ ನಿರ್ಭಯ ಸಮಾಜ ನಿರ್ಮಾಣಕ್ಕೆ ಸದ್ದಿಲ್ಲದೇ ತೊಡಗಿಕೊಂಡಂತೆ ಎಂದು ಹೇಳಿದರು.
೨೦೨೨ನೆಯ ಸಾಲಿನ ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಪತ್ರಕರ್ತೆ ಹಾಗೂ ಲೇಖಕಿ ಬೆಂಗಳೂರಿನ ಶೋಭಾ ಹೆಚ್. ಜಿ. ಅವರಿಗೆ, ೨೦೨೩ ನೆಯ ಸಾಲಿನ ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿ ಪ್ರಶಸ್ತಿಯನ್ನು ಬೆಂಗಳೂರಿನ ಕಲಾಶ್ರೀ ಡಾ. ವಿಜಯಮಾಲಾ ರಂಗನಾಥ್ ಮತ್ತು ಮೈಸೂರಿನ ಪತ್ರಕರ್ತ ಹಾಗೂ ಸಾಹಿತ್ಯ ಸಂಘಟಕ ಭೇರ್ಯ ರಾಮಕುಮಾರ ಇವರಿಗೆ ಹಾಗೂ ೨೦೨೩ನೆಯ ಸಾಲಿನ ಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿ ಪ್ರಶಸ್ತಿಯನ್ನು ಬೆಳಗಾವಿ ಜಿಲ್ಲೆಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗುಂಡಪ್ಪ ಗಡಾದ ಅವರಿಗೆ ಪ್ರದಾನ ಮಾಡಲಾಯಿತು.
ದತ್ತಿ ದಾನಿಗಳಾದ ಡಾ. ಎ.ಪುಷ್ಪಾ ಅಯ್ಯಂಗಾರ, ಶ್ರೀ ಎನ್. ಕೆ. ರಮೇಶ್ ಹಾಗೂ ಮೈಸೂರಿನ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ. ಮಹೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಸ್ವಾಗತಿಸಿದರು. ಡಾ. ಪದ್ಮಿನಿ ನಾಗರಾಜು ವಂದಿಸಿದರು. ಗೌರವ ಕೋಶಾಧ್ಯಕ್ಷ ಡಾ. ಬಿ.ಎಮ್. ಪಟೇಲ್ ಪಾಂಡು ಕಾರ್ಯಕ್ರಮವನ್ನು ನಿರೂಪಿಸಿದರು.



