ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿರುವ ಡಾ.ಆನಂದ್ ತೇಲ್ತುಂಬ್ಡೆ ಅವರಿಗೆ ಅಭಿನಂದನೆಗಳು

3 years ago

ಕರ್ನಾಟಕ ಸರಕಾರದ ಪ್ರತಿಷ್ಠಿತ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಡಾ. ಆನಂದ್ ತೇಲ್ತುಂಬ್ಡೆ ಅವರನ್ನು ಆಯ್ಕೆ ಮಾಡಿರುತ್ತದೆ. ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಪ್ರಮಥ ಪ್ರತಿಪಾದಕ ಮತ್ತು ವಚನ ಚಳವಳಿಯ ಕೇಂದ್ರ ದಾರ್ಶನಿಕ ನಾಯಕನಾದ ಬಸವಣ್ಣನವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದ ನಂತರದಲ್ಲಿ ಪ್ರತಿಷ್ಠಿತ ಬಸವ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿರುವ ಡಾ.ಆನಂದ್ ತೇಲ್ತುಂಬ್ಡೆ ಅವರಿಗೆ ಮತ್ತು ಅವರನ್ನು ಗುರುತಿಸಿದ ಆಯ್ಕೆ ಸಮಿತಿಗೆ ಅಭಿನಂದನೆಗಳು.

ಅಂತಾರಾಷ್ಟ್ರೀಯ ಖ್ಯಾತಿಯ ಚಿಂತಕ, ಲೇಖಕರಾಗಿರುವ ಡಾ.ಆನಂದ್ ತೇಲ್ತುಂಬ್ಡೆಯವರು, ಪ್ರಭುತ್ವದ ಲೋಪಗಳನ್ನು ಪ್ರಶ್ನಿಸಿದರೆಂಬ ಕಾರಣಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದವರು. ಸದಾಕಾಲವೂ ದಮನಿತರ ಧ್ವನಿಯಾಗಿರುವ ಡಾ.ತೇಲ್ತುಂಬ್ಡೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗಳಾದ ರಮಾಬಾಯಿಯವರನ್ನು ವಿವಾಹವಾಗಿ, ಡಾ.ಅಂಬೇಡ್ಕರ್ ಮರು ಓದಿನ ಚಿಂತನೆಗಳನ್ನು ತಮ್ಮ ಅಮೂಲ್ಯವಾದ ಬರೆಹಗಳು ಮತ್ತು ಭಾಷಣಗಳ ಮೂಲಕ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಪ್ರಾಧ್ಯಾಪಕರಾಗಿಯೂ ಅಪಾರ ವಿದ್ಯಾರ್ಥಿ ಸಮೂಹ ಮತ್ತು ಜನಪರ ಸಂಘಟನೆಗಳ ಕಾರ್ಯಕರ್ತರನ್ನು ಬೌದ್ಧಿಕವಾಗಿ ಪ್ರಭಾವಿಸಿ ಎಚ್ಚರದಲ್ಲಿರಿಸಿರುವ ಬಹುಮುಖ್ಯ ಧ್ವನಿಯಾಗಿದ್ದಾರೆ. ಇವರ “ಖೈರ್ಲಾಂಜಿ” ಎಂಬ ಇಂಗ್ಲಿಶ್ ಕೃತಿಯ ‘Exploding myths’ ಎಂಬ ಅಧ್ಯಾಯವನ್ನು ‘ಒಡೆದ ಮಿಥ್ಯೆಗಳು’ ಎಂಬ ಹೆಸರಿನಲ್ಲಿ ಅನುವಾದಿಸಿದ ಹೆಮ್ಮೆ ನನ್ನದು.

ದಿನಾಂಕ 04-01-2009 ರಂದು ‘ಸ್ವಾಭಿಮಾನಿ ದಲಿತ ಶಕ್ತಿ (SDS)’ ಸಂಘಟನೆಯ ವತಿಯಿಂದ ಆಯೋಜಿಸಿದ್ದ ‘ಹಿಂದುತ್ವ V/s ದಲಿತತ್ವ’ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ನಾನು ವಹಿಸಿಕೊಂಡಿದ್ದೆ. ಈ ವಿಚಾರ ಸಂಕಿರಣವನ್ನು ಡಾ.ಆನಂದ್ ತೇಲ್ತುಂಬ್ಡೆ ಉದ್ಘಾಟಿಸಿದ್ದರು. ನಂತರದಲ್ಲಿ ಕರ್ನಾಟಕದಲ್ಲಿ ನಡೆದ ಅನೇಕ ಭೂಹೋರಾಟಗಳಲ್ಲಿ ಹಾಗೂ ವಿಚಾರ ಸಂಕಿರಣಗಳಲ್ಲಿ, ವಿಶೇಷವಾಗಿ, ದಿನಾಂಕ : 21 07-2017 ರಿಂದ 23-07-2017 ರವರೆಗೆ ಬೆಂಗಳೂರಿನಲ್ಲಿ ನಡೆದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಂತರರಾಷ್ಟ್ರೀಯ ಸಮಾವೇಶ Quest For Equity ಯಲ್ಲಿ ಆನಂದ್ ತೇಲ್ತುಂಬ್ಡೆ ಭಾಗವಹಿಸಿದ್ದರು. ಆಗೆಲ್ಲಾ ಅವರ ಜೊತೆಯಲ್ಲಿ ನಾನು ಒಡನಾಡಿದ ಸಂತೋಷ ನನಗಿದೆ.

ಪ್ರತಿಷ್ಠಿತ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿರುವ ಡಾ.ಆನಂದ್ ತೇಲ್ತುಂಬ್ಡೆ ಅವರಿಗೆ ಅಭಿನಂದನೆಗಳು.

  • ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು

Leave a Reply