ಚಾಮುಂಡಿಯು ನಮ್ಮವಳು, ಮಹಿಷಾ ಕೂಡ ನಮ್ಮವನೇ. ನಮ್ಮವರಿಂದ ನಮ್ಮವರನ್ನೇ ಕೊಲೆಗೈಸಿದರೊ ಅಥವಾ ಅವರೇ ಪಿತೂರಿಯಿಂದ ಕೊಲೆಮಾಡಿ ನಮ್ಮವರ ತಲೆಗೆ ಕಟ್ಟಿದ್ರೋ ಗೊತ್ತಿಲ್ಲ ಒಟ್ಟಾರೆ ವಿಜಯದಶಮಿ ಅಂತಾರೆ..
ಯಾವುದೇ ಧರ್ಮದಲ್ಲಿ ಯಾರನ್ನೋ ಕೊಲೆಗೈದ ದಿನವನ್ನು ಹಬ್ಬವಾಗಿ ಆಚರಿಸೋದಿಲ್ಲ ಆದರೆ ನಮ್ಮ ಧರ್ಮದಲ್ಲಿ ಆಚರಣೆ ಮಾಡ್ತೇವೆ ಅಥವಾ ಆಚರಣೆ ಮಾಡಿಸಲಾಗ್ತಿದೆ.
ಬಲಿಚಕ್ರವರ್ತಿ, ರಾವಣ, ಮಹಿಷಾ, ಹಿರಣ್ಯಕಶಿಪು ಹೀಗೆ ಅನೇಕರನ್ನು ಧರ್ಮದ ಕಾರಣಕ್ಕೆ ಸಂಹಾರ ಮಾಡಲಾಗಿದೆ ಎಂದು ಪುರಾಣಗಳಲ್ಲಿ ದಾಖಲಿಸಿದ್ದಾರೆ.
ವಿಜ್ಞಾನವನ್ನು ನಂಬುವವನಾಗಿ, ಒಬ್ಬ Independent Researcher ಆಗಿ ನಾನು ದೆವ್ವ ಭೂತ ರಾಕ್ಷಸ ದೇವರು ಅಥವಾ ಯಾವುದೇ ಅಲೌಕಿಕ ಶಕ್ತಿಯನ್ನು ನಂಬಲಾರೆ. ಇದನ್ನೇ ಬುದ್ಧನಿಂದ ಹಿಡಿದು ಬಸವಣ್ಣ, ಅಂಬೇಡ್ಕರ್, ಪೆರಿಯಾರ್, ಫುಲೆ, ಕುವೆಂಪು ವರೆಗೂ ಹೇಳುತ್ತಾ ಬಂದಿದ್ದಾರೆ. ಈ ದೇವರು ದೆವ್ವಗಳೆಲ್ಲ ಈ ದೇಶಕ್ಕೆ ಆರ್ಯ ಬ್ರಾಹ್ಮಣರ ಆಗಮನವಾದ ನಂತರ ಕೃತಕವಾಗಿ ಜನ್ಮತಾಳಿವೆ ಎಂದು ದಾಖಲೆ ಸಮೇತ ನಿರೂಪಿಸಿದ್ದಾರೆ.
ಹೀಗಿದ್ದಾಗ ಈ ಮೌಢ್ಯವನ್ನು ನಂಬದ ನನ್ನಂತವನ ತಲೆಯಲ್ಲಿ ಬರೋದು ಈ ರಾಕ್ಷಸರೆಲ್ಲ ಯಾರಾಗಿದ್ರು? ಅವರ ಇತಿಹಾಸ ಯಾಕೆ ದಾಖಲಾಗಲಿಲ್ಲ? ಯಾಕೆ ಅವರನ್ನೆಲ್ಲ ಕೇವಲ ಪುರಾಣಗಳಿಗೆ ಮಾತ್ರ ಸೀಮಿತವಾಗಿಸಿದ್ರು. ಅವರನ್ನೆಲ್ಲ ಪುರಾಣಗಳಿಗೆ ಸೀಮಿತವಾವಿಸಿದ ಕಾರಣಕ್ಕೆ ಇಂದು ನಮ್ಮ ನಡುವೆಯೇ ಇರುವ ಅನೇಕ ದೊಡ್ಡ ದೊಡ್ಡ ವಿದ್ವಾಂಸರು ಕೂಡ ಪುರಾಣಗಳಲ್ಲಿ ಬರುವ ಯಾವುದೇ ವ್ಯಕ್ತಿಗೂ ನೈಜ ಇತಿಹಾಸವಿಲ್ಲ ಮತ್ತು ಅವುಗಳಲ್ಲಿ ಬರುವ ದೇವಾನುದೇವತೆಗಳಾಗಲಿ ಅಥವಾ ದೆವ್ವಗಳು, ರಾಕ್ಷಸರು, ಅಸುರರು ಇವುಗಳೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ಹೇಳುತ್ತಿದ್ದಾರೆ. ಆದರೆ ಅದೇ ಪುರಾಣಗಳಲ್ಲಿ ಬರುವ ರಾಕ್ಷಸರನ್ನು ಸಂಹಾರ ಮಾಡಿದ ದಿನವೆಂದು ನಿಗದಿಸಿ ಹಬ್ಬಗಳನ್ನು ಆಚರಿಸಲಾಗುತ್ತಿದೆ.
ಉದಾಹರಣೆಗೆ ಕೈರ್ಲಾಂಜಿ ಯಲ್ಲಿ ಸುರೇಖಾ ಬೋಟ್ಮನ್ಗೆ ಮತ್ತು ಅವರ ಹೆಣ್ಣುಮಗಳ ಮೇಲೆ ಮೇಲ್ಜಾತಿಯವರು ಅತ್ಯಾಚಾರ ಮಾಡಿ ಬರ್ಬರವಾಗಿ ಹತ್ಯೆಮಾಡಿದ್ರು, ಕೋರ್ಟ್ ಹೇಳಿದ್ದು ಏನೆಂದರೆ ಸುರೇಖಾ ಅವರಿಗೆ ಅಕ್ರಮ ಸಂಬಂಧವಿತ್ತು ಆ ಕಾರಣಕ್ಕೆ ಬೇಸತ್ತ ಗ್ರಾಮಸ್ಥರು ಕೊಲೆಗೈದಿದ್ದಾರೆ ಎಂದು ಕೆಲವರಿಗೆ ಸಾಮಾನ್ಯ ಸಜೆ ನೀಡಿತ್ತು ಅಷ್ಟೇ. ಅಲ್ಲಿ ನಡೆದಿರುವುದೇ ಬೇರೆ, ಆದರೆ ಕೋರ್ಟು ಕೊಟ್ಟ ತೀರ್ಪು ಬೇರೆ. ಅಲ್ಲಿ ನಿಜವಾಗಿಯೂ ನಡೆದ ಘಟನೆಯನ್ನು ದಾಖಲಿಸಲು ಆ ಮನೆಯಲ್ಲಿ ಯಾರೂ ಉಳಿಯಲಿಲ್ಲ ಆದರೆ ಗ್ರಾಮಸ್ಥರು ಹೇಳಿದ ಕಟ್ಟು ಕಥೆಯು ಕೋರ್ಟಿನಲ್ಲಿ ದಾಖಲೆಯಾಗಿ ಈಗಲೂ ಉಳಿದಿದೆ.. ಈ ಪುರಾಣಗಳು ಕೂಡ ಅದೇ ಮಾದರಿಯದ್ದು. ಏಕೆಂದರೆ ಸಾವಿರಾರು ವರ್ಷಗಳಿಂದಲೂ ಶಿಕ್ಷಣ ಪೆನ್ನು ಅಕ್ಷರ ಬಲ್ಲವರು ತಮಗೆ ಬೇಕಾದ ಹಾಗೆ ಪುರಾಣ ಬರೆದುಕೊಂಡ್ರು ಮತ್ತು ಅದು ಈಗಲೂ ನಮ್ಮನ್ನು ಆಳುತ್ತಿದೆ..
ಬೆಳಿಗ್ಗೆ ಸ್ನೇಹಿತರೊಬ್ಬರು ಕರೆ ಮಾಡಿ ನೀವು ಈದ್ ಹಬ್ಬಕ್ಕೆ ಶುಭಾಶಯ ಕೋರಿದ್ರಿ ಆದ್ರೆ ದಸರಾ ಹಬ್ಬಕ್ಕೆ ಯಾಕೆ ಶುಭಾಶಯಗಳನ್ನು ಕೋರಿಲ್ಲ ಎಂದು ಪ್ರಶ್ನಿಸದ್ರು. ನನ್ನ ನಿಲುವು ಮತ್ತು ಸಿದ್ದಾಂತದ ಬಗ್ಗೆ ಅವರಿಗೆ ಸ್ಪಷ್ಟತೆ ಇಲ್ಲದ ಕಾರಣ ಅವರು ಕೇವಲ ರಾಜಕೀಯ ದೃಷ್ಟಿಕೋನದಿಂದ ಮಾತ್ರ ನೋಡಿದಾಗ ಅವರಲ್ಲಿ ಈ ರೀತಿಯ ಅಸ್ಪಷ್ಟ ಪ್ರಶ್ನೆಗಳು ಏಳಬಹುದು..
ನೈಜ ಇತಿಹಾಸವನ್ನು ನಾವೆಲ್ಲರೂ ಅರಿಯಬೇಕು. ಈ ವೈದಿಕರು ಕಟ್ಟಿದ ಅನೇಕ ಹಬ್ಬಗಳನ್ನು ನಮ್ಮ ಚಿಂತನೆಗೆ ಒಳಪಡಿಸಬೇಕು. ಮೂಲತಃ ಪ್ರಕೃತಿ ಆರಾಧಕರಾಗಿದ್ದು, ಸಿಂಧೂ ನಾಗರೀಕತೆಯನ್ನು ಕಟ್ಟಿದ ಮೂಲಜನರು ಹೇಗೆ ಈ ಮೌಢ್ಯಕ್ಕೆ ಬಲಿಯಾದ್ರು ಅನ್ನೋದರ ಬಗ್ಗೆ ವೈಚಾರಿಕವಾಗಿ ಪರಿಶೀಲಿಸುವ ಗುಣ ಬೆಳೆಸಿಕೊಳ್ಳಬೇಕು..
ಎಲ್ಲರಿಗೂ ಮಹಿಶೂರು (ಮೈಸೂರು) ದಸರಾ ಹಬ್ಬದ ಶುಭಾಶಯಗಳು❤️❤️
– ರುದ್ರು ಪುನೀತ್




