ಬಿಜೆಪಿಯವರು ವಿಧಾನಸಭಾ ಚುನಾವಣೆ ವೇಳೆ ಚಿಲುಮೆ ಸಂಸ್ಥೆ ಬಳಸಿಕೊಂಡು ಅಕ್ರಮ ಎಸಗಿದರು: ಡಿ ಕೆ ಶಿವಕುಮಾರ್

9 months ago

ಬೆಂಗಳೂರು: ನಮ್ಮ ರಾಜಕೀಯ ನಿಲುವಿನ ಬಗ್ಗೆ ಬೇರೆಯವರಿಗೆ ಏಕೆ ಇರುಸುಮುರುಸಾಗುತ್ತಿದೆ. ನಾವು ಏಕೆ ಬೇರೆಯವರಿಗೆ ಇದರ ಬಗ್ಗೆ ಉತ್ತರಿಸಬೇಕು. ನಾವು ಕರ್ನಾಟಕದ ಜನರಿಗೆ ಉತ್ತರದಾಯಿಗಳು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

ಮತಗಳ್ಳತನದ ವಿರುದ್ದ ಪ್ರತಿಭಟನೆ ನಗರದ ಒಳಗೆ ಹಮ್ಮಿಕೊಂಡಿರುವ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ವಿಧಾನಸಭಾ ಚುನಾವಣೆ ವೇಳೆ ಚಿಲುಮೆ ಸಂಸ್ಥೆ ಬಳಸಿಕೊಂಡು ಅಕ್ರಮ ಎಸಗಿದರು ಎಂದು ಆರೋಪಿಸಿದರು.

ನಮ್ಮ ನಾಯಕರು ಇದರ ಬಗ್ಗೆ ಮಾತನಾಡುತ್ತಾರೆ. ಈ ವಿಚಾರದಲ್ಲಿ ತನಿಖೆ ನಡೆಸಿಯೇ ನಮ್ಮ ನಾಯಕರು ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ರಾಜಕೀಯ ಉದ್ದೇಶಕ್ಕೆ ರಾಜ್ಯಕ್ಕೆ ಬರುತ್ತಿಲ್ಲ. ಬದಲಾಗಿ ಜನರನ್ನು ಎಚ್ಚರಗೊಳಿಸಲು ಬರುತ್ತಿದ್ದಾರೆ. ನಮಗೆ ಪ್ರಜಾಪ್ರಭುತ್ವ ಉಳಿಯಬೇಕು. ಚುನಾವಣಾ ಆಯೋಗ ರಾಜಕೀಯ ಪಕ್ಷದ ಭಾಗವಾಗುವುದನ್ನು ತಪ್ಪಿಸಬೇಕು ಎಂದರು. 

ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಮತಗಳ್ಳತನ ನಡೆಸಿದೆ ಎಂಬುದನ್ನು ಜನರ ಗಮನಕ್ಕೆ ತರಬೇಕು ಎಂಬುದು ನಮ್ಮ ಉದ್ದೇಶ. ಬಿಜೆಪಿ ಮತಗಳ್ಳತನದ ಬಗ್ಗೆ ಪ್ರತಿಭಟನಾ ಸಭೆ ಅಥವಾ ರ್ಯಾಲಿ ಮಾಡಬೇಕೆ ಎನ್ನುವುದನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.

ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ನಮ್ಮ ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿಯವರು ಚುನಾವಣಾ ಅಕ್ರಮ ಎಸಗಿರುವುದನ್ನು ಬೆಳಕಿಗೆ ತರಬೇಕು. ಈ ಬಗ್ಗೆ ಪಕ್ಷದಿಂದಲೂ ಸಂಶೋಧನೆ ನಡೆದಿದೆ. ಆದರೆ ಜನ ಸೇರುವುದರ ಕುರಿತು ನ್ಯಾಯಲಯದ ನಿರ್ದೇಶನ ಹಾಗೂ ಸರ್ಕಾರದ ಮಾರ್ಗಸೂಚಿಗಳು ಇರುವ ಕಾರಣಕ್ಕೆ ಪ್ರತಿಭಟನೆಯ ಸ್ವರೂಪವನ್ನು ಚರ್ಚೆ ಮಾಡಲಾಗುವುದು ಎಂದರು.

Leave a Reply