ಠುಸ್ ಪಟಾಕಿ ಆಯ್ತಾ ಬಿಜೆಪಿಯ ‘ಮುಡಾಸ್ತ್ರ’!?

2 years ago

ಶತಾಯಗತಾಯ ಸಿದ್ದರಾಮಯ್ಯನವರನ್ನ ಮುಡಾ ಖೆಡ್ಡಾಕ್ಕೆ ಕೆಡವಿ ರಾಜೀನಾಮೆ ಕೊಡಿಸಿಯೇ ತೀರುತ್ತೇವೆ; ಆ ಮೂಲಕ, ಆಪರೇಷನ್‌ ಕಳ್ಳಾಟಕ್ಕೆ ಅಖಾಡ ಅಣಿಮಾಡಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಕೆಡವಿಯೇ ಕೆಡವುತ್ತೇವೆ ಅಂತ ಆರ್ಭಟಿಸುತ್ತಿದ್ದ ಬಿಜೆಪಿಯ ಆಟವೆಲ್ಲ ಹೊಳೆಯಲ್ಲಿ ಹುಣಿಸೇಹಣ್ಣು ಕಿವುಚಿದಂತೆ ವ್ಯರ್ಥವಾಯ್ತಾ? ಬಿಜೆಪಿ ನಾಯಕರು ಮುಡಾ ವಿವಾದದಿಂದ ನಿಧಾನಕ್ಕೆ ಹಿಂದೆ ಸರಿಯುತ್ತಿದ್ದಾರಾ? ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪಕ್ಷ ಸದ್ದಿಲ್ಲದೇ ಈ ವಿಚಾರದಲ್ಲಿ ಮೇಲುಗೈ ಸಾಧಿಸಿತಾ?…. ದಸರಾ ಹಬ್ಬದಿಂದೀಚೆಗೆ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಪ್ರಶ್ನೆಗಳಿಗೆ ಉತ್ತರ ತೆರೆದುಕೊಳ್ಳುತ್ತಾ ಸಾಗುತ್ತೆ.

ಮೊದಲನೆಯದಾಗಿ, ತಮ್ಮ ಅವಧಿಯಲ್ಲಿ ತಾವೇ ಸೈಟು ಹಂಚಿಕೆ ಮಾಡಿದ್ದ ಮುಡಾ ವಿವಾದವನ್ನು ದೊಡ್ಡ ಹಗರಣವೆಂದು ಬಿಂಬಿಸಲು ಬಿಜೆಪಿ ನಾಯಕರು ಮುಂದಾದಾಗಲೇ ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು, ಇದನ್ನು ತಾವು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ ಅನ್ನೋದು. ಯಾಕಂದ್ರೆ ಸಿದ್ದರಾಮಯ್ಯನವರ ಯಾವ ಲೋಪವೂ ಅಲ್ಲಿರಲಿಲ್ಲ. ಆದಾಗ್ಯೂ ಸಿದ್ದರಾಮಯ್ಯನವರನ್ನು ಟಾರ್ಗೆಟ್‌ ಮಾಡಿಕೊಳ್ಳಲೇಬೇಕು ಅನ್ನೋ ಜಿದ್ದಿಗೆ ಬಿದ್ದು ಆ ವಿವಾದವನ್ನು ಬಿಜೆಪಿ ಕೈಗೆತ್ತಿಕೊಂಡಿತ್ತು.

ಹೀಗೆ ಸಿದ್ದರಾಮಯ್ಯನವರನ್ನು ಟಾರ್ಗೆಟ್‌ ಮಾಡಿಕೊಳ್ಳಲು ಮುಖ್ಯವಾಗಿ ಮೂರು ಕಾರಣಗಳಿದ್ದವು. ಮೊದಲನೆಯದು, ಕೋಮುವಾದವನ್ನು ಖಂಡತುಂಡವಾಗಿ ವಿರೋಧಿಸುವ ಅವರ ಸೈದ್ಧಾಂತಿಕ ಬದ್ಧತೆ. ಎರಡನೆಯದು ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ. ಇದರಿಂದ ಸಿದ್ರಾಮಯ್ಯನವರು ವರ್ಚಸ್ಸು ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಕೂಡಾ ಸಣ್ಣದಾಗಿ ಚೇತರಿಸಿಕೊಳ್ಳಲು ಶುರುವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಜನ ಬಿಜೆಪಿಯ ಭಾವನಾತ್ಮಕ ವಿಚಾರಗಳಿಂದ ಬದುಕಿನ ಅನಿವಾರ್ಯತೆಗಳತ್ತ ಯೋಚಿಸುವಂತೆ ಮಾಡುವಲ್ಲಿ ಈ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿದ್ದವು. ಇನ್ನು, ಮೂರನೆಯ ಮತ್ತು ಅತಿ ಪ್ರಮುಖ ಕಾರಣವೆಂದರೆ, ಮೋದಿ ಮತ್ತು ಮೋದಿ ಸರ್ಕಾರದ ಆಡಳಿತ ವೈಖರಿಯನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸಿದ್ರಾಮಯ್ಯನವರ ದಿಟ್ಟತನ.

ಅದರಲ್ಲೂ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆದ ಅನ್ಯಾಯವನ್ನು ಸಿದ್ದರಾಮಯ್ಯನವರ ಸರ್ಕಾರ ಎದುರಿಸಿದ ರೀತಿ ಇದೆಯಲ್ಲ, ಅದು ಸ್ವತಃ ಮೋದಿಯನ್ನೂ ಕಂಗೆಡಿಸುವಂತೆ ಮಾಡಿತ್ತು. ಯಾಕೆಂದ್ರೆ ಕರ್ನಾಟಕದಿಂದ ಶುರುವಾದ ಈ ದಿಟ್ಟ ಪ್ರತಿರೋಧ ನಿಧಾನಕ್ಕೆ ದೇಶದ ನಾನಾ ರಾಜ್ಯಗಳಿಗೂ ವ್ಯಾಪಿಸಿತು. ಮುಖ್ಯವಾಗಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಕೇರಳ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳದಂತಹ ರಾಜ್ಯಗಳು ಕೂಡಾ ಕರ್ನಾಟಕದ ಕೂಗಿಗೆ ದನಿಗೂಡಿಸಿದವು. ಯಾವಾಗ ಸಿದ್ದರಾಮಯ್ಯನವರು ತಮ್ಮ ಇಡೀ ಸಂಪುಟವನ್ನು ದಿಲ್ಲಿಗೆ ಕೊಂಡೊಯ್ದು ಜಂತರ್‍‌ಮಂತರ್‍‌ನಲ್ಲಿ `ನಮ್ಮ ತೆರಿಗೆ ನಮ್ಮ ಹಕ್ಕು’ ಅಂತ ಪ್ರತಿಭಟನೆ ನಡೆಸಿದರೋ ಆಗ ಈ ತೆರಿಗೆ ಅಸಮಾನತೆಯ ವಿಚಾರ ರಾಷ್ಟ್ರೀಯ ಚರ್ಚೆಯಾಗಿ ಮಾರ್ಪಾಟಾಯ್ತು. ನಿಜ ಹೇಳಬೇಕೆಂದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಆದ ಹಿನ್ನಡೆಯಲ್ಲಿ ಈ ನೆರೇಟಿವಿಟಿಯ ಪಾತ್ರವೂ ಇದೆ.

ಒಟ್ಟಾರೆಯಾಗಿ ಇದು, ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟದ ಇನ್ನಿತರೆ ಪಕ್ಷಗಳ ಸಂಯೋಜಿತ ಸ್ಟ್ರಾಟಜಿಯಾಗಿದ್ದರೂ, ಅದನ್ನು ಲೀಡ್ ಮಾಡುತ್ತಾ ಬಂದದ್ದು ಕರ್ನಾಟಕದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು. ಹೀಗೆ ಮೋದಿಯನ್ನು ಹೆಡ್‌-ಆನ್‌ ತೆಗೆದುಕೊಳ್ಳಲು ಸಿದ್ರಾಮಯ್ಯನವರಿಗೆ ಸಾಧ್ಯವಾದದ್ದು ಅಥವಾ ಈ ಲೀಡ್‌ ರೋಲ್‌ಗೆ ಸಿದ್ರಾಮಯ್ಯನವರನ್ನೇ ಕಾಂಗ್ರೆಸ್‌ ಹೈಕಮಾಂಡ್‌ ಆಯ್ಕೆ ಮಾಡಿಕೊಂಡದ್ದು, ಅವರು ಬಜೆಟ್‌ ಪ್ರವೀಣರು ಅನ್ನೋ ಕಾರಣಕ್ಕೆ ಮಾತ್ರವಲ್ಲ; ಅವರಿಗಿದ್ದ ಕ್ಲೀನ್‌ ಇಮೇಜ್‌, ಪ್ರಾಮಾಣಿಕ ವ್ಯಕ್ತಿತ್ವದ ಹಿನ್ನೆಲೆ ಕೂಡಾ ಕಾರಣ. ಬಹುಶಃ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್‌ ನಂತರ ಮೋದಿಗೆ ಈ ಪರಿ ಸೆಡ್ಡು ಹೊಡೆದ ನಾಯಕನೆಂದರೆ ಸಿದ್ರಾಮಯ್ಯನವರೇ ಆಗಿದ್ದರು.

ತೆರಿಗೆ ವಿಚಾರವನ್ನು ನೆಪ ಮಾಡಿಕೊಂಡು ಮೋದಿ ಸರ್ಕಾರದ ಹುಳುಕುಗಳನ್ನು ಜನರ ಮುಂದಿಡುತ್ತಾ ಬಂದ ಸಿದ್ರಾಮಯ್ಯನ ಬಾಯಿ ಮುಚ್ಚಿಸದಿದ್ದರೆ ಮೋದಿಯ ವರ್ಚಸ್ಸು ಮಾತ್ರವಲ್ಲ, ಬಿಜೆಪಿಯ ಪೊಲಿಟಿಕಲ್ ಗ್ರಾಫ್‌ ಕೂಡಾ ಮತ್ತಷ್ಟು ಕುಸಿಯಬಹುದು ಅಂತಲೇ ಸಿದ್ರಾಮಯ್ಯನವರನ್ನ ಟಾರ್ಗೆಟ್ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿತು. ಆಗ ಅವರಿಗೆ ಗೋಚರಿಸಿದ್ದೇ ಈ ಮುಡಾ ಎಂಬ ಸವಕಲು ಅಸ್ತ್ರ. ಇದರಲ್ಲಿ ಸಿದ್ರಾಮಯ್ಯನವರನ್ನು ತಪ್ಪಿತಸ್ಥರೆಂದು ಸಾಬೀತು ಮಾಡುವ ಯಾವ ತಿರುಳೂ ಇಲ್ಲವೆನ್ನುವುದು ಗೊತ್ತಿದ್ದರು ಕೂಡಾ, ಸಾಧ್ಯವಾದಷ್ಟು ಸಿದ್ರಾಮಯ್ಯನವರನ್ನು ಪರ್ಸನಲ್‌ ಆಗಿ ಎಂಗೇಜ್‌ ಮಾಡಿ, ಅವರನ್ನು ಮೋದಿ-ಟೀಕೆಯಿಂದ ಡೈವರ್ಟ್‌ ಮಾಡಬೇಕೆಂದು ಬಿಜೆಪಿ ಮುಡಾವನ್ನು ದೊಡ್ಡ ವಿವಾದವೆಂಬಂತೆ ಬಿಂಬಿಸಿತು. ಅದಕ್ಕೋಸ್ಕರ ರಾಜ್ಯಪಾಲರ ಕಚೇರಿಯನ್ನೂ ದುರ್ಬಳಕೆ ಮಾಡಿಕೊಂಡಿತು. ಕೊನೆಗೆ ಇಡಿವರೆಗೆ ಕೊಂಡೊಯ್ದಿತು.

ತಮಗಿರುವ ಮೀಡಿಯಾ ಬಲವನ್ನು ಬಳಸಿಕೊಂಡು ಸಿದ್ರಾಮಯ್ಯ ಇದರಲ್ಲಿ ಏನೋ ತಪ್ಪು ಮಾಡಿದ್ದಾರೆ ಎಂಬಂತೆ ಬಿಂಬಿಸಲಾಯ್ತು. ಸೂಕ್ತ ತನಿಖಾ ವರದಿಗಳಿಲ್ಲದಿದ್ದರೂ `ವಿವೇಚನಾಧಿಕಾರ’ವನ್ನು ಬಳಸಿಕೊಂಡು ರಾಜ್ಯಪಾಲರ ಮೂಲಕ ಪ್ರಾಸಿಕ್ಯೂಷನ್‌ಗೂ ಅನುಮತಿ ಕೊಡಿಸಲಾಯ್ತು. ಈ ಬೆಳವಣಿಗೆಗಳನ್ನೆ ನೆಪ ಮಾಡಿಕೊಂಡು ಸಿದ್ರಾಮಯ್ಯನವರ ರಾಜೀನಾಮೆಗೂ ಬಿಜೆಪಿ ಒತ್ತಾಯಿಸುತ್ತಾ ಬಂತು. ತನಗಾಗುವ ಮುಖಭಂಗವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಪಕ್ಷ ಸಿದ್ರಾಮಯ್ಯನವರ ರಾಜೀನಾಮೆ ಪಡೆದುಬಿಡುತ್ತೆ, ಆನಂತರ ಪಕ್ಷದೊಳಗೆ ಭಿನ್ನಮತ ಭುಗಿಲೆದ್ದು ಸರ್ಕಾರ ಪತನವಾಗುತ್ತೆ ಅನ್ನೋದು ಬಿಜೆಪಿಯ ಎಣಿಕೆಯಾಗಿತ್ತು.  ಆದರೆ ಈ ರಾಜಕೀಯ ಷಡ್ಯಂತ್ರವನ್ನು ಎದುರಿಸಲೇಬೇಕು ಅಂತ ನಿರ್ಧರಿಸಿದ ಕಾಂಗ್ರೆಸ್‌ ಹೈಕಮಾಂಡ್‌ನ ಬಲದಿಂದಾಗಿ ಸಿದ್ರಾಮಯ್ಯನವರು ರಾಜೀನಾಮೆ ಕೊಡುವ ಪ್ರಸಂಗವೇ ಎದುರಾಗಲಿಲ್ಲ. ಕೊನೇ ಪ್ರಯತ್ನ ಎಂಬಂತೆ ಇ.ಡಿ ಯನ್ನು ದುರ್ಬಳಕೆ ಮಾಡಿಕೊಳ್ಳುವ ಆಲೋಚನೆಗೂ ಬಿಜೆಪಿ ಮುಂದಾಯ್ತು. ಅದಕ್ಕೆ ಎದುರಾದ ಜನವಿರೋಧವನ್ನು ಕಂಡ ಸದ್ಯದ ಮಟ್ಟಿಗೆ ಅದರಿಂದಲೂ ಬಿಜೆಪಿ ಹಿಂದೆ ಸರಿದಿದೆ. ಅಂತಿಮವಾಗಿ, ಈಗ ಮುಡಾ ವಿವಾದ ರಾಜಕೀಯ ಅಂಗಳದಿಂದ ನ್ಯಾಯಾಂಗಣ ಪ್ರವೇಶಿಸಿದೆ. ಲೋಕಾಯುಕ್ತ ತನಿಖೆಗೆ ಆದೇಶವಾಗಿದೆ. ತನಿಖೆಯಾದರೆ, ಸಿದ್ರಾಮಯ್ಯನವರು ನಿಷ್ಕಳಂಕಿತರಾಗಿ ಹೊರಬರುತ್ತಾರೆನ್ನುವುದು ಬಿಜೆಪಿಗೂ ಗೊತ್ತು. ಹಾಗಾಗಿ ಬಿಜೆಪಿ ನಾಯಕರು ನಿಧಾನಕ್ಕೆ ಮುಡಾದಿಂದ ಹಿಂದೆ ಸರಿಯಲಾರಂಭಿಸಿದ್ದಾರೆ. ಇದನ್ನು ಸಾಬೀತು ಪಡಿಸುವಂತಹ ನಾನಾ ಲಕ್ಷಣಗಳು ನಮಗೆ ಗೋಚರಿಸುತ್ತಿವೆ.

ಇನ್‌ಫ್ಯಾಕ್ಟ್‌, ಆರಂಭದಲ್ಲಿ ಬಿಜೆಪಿಯ ಈ ಮುಡಾ ಪ್ಲ್ಯಾನ್‌ ತಕ್ಕಮಟ್ಟಿಗೆ ವರ್ಕ್‌ಔಟ್‌ ಆಗಿದ್ದು ನಿಜ. ಯಾವ ತೆರಿಗೆ ಹೋರಾಟದಿಂದ ಸಿದ್ರಾಮಯ್ಯನವರನ್ನು ಹಿಂದೆ ಸರಿಸಬೇಕೆಂದು ಬಿಜೆಪಿ ಈ ವಿವಾದವನ್ನು ಮುನ್ನೆಲೆಗೆ ತಂದಿತ್ತೋ, ಆ ತೆರಿಗೆ ಹೋರಾಟದಿಂದ ಸಿದ್ರಾಮಯ್ಯ ಸ್ವಲ್ಪಕಾಲ ಹಿಂದೆ ಸರಿದಿದ್ದು ನಿಜ. ತನ್ನ ರಾಜಕೀಯ ಅಸ್ತಿತ್ವದ ಸುತ್ತಲೇ ಗಂಭೀರ ಷಡ್ಯಂತ್ರಗಳು ಘಟಿಸಲಾರಂಭಿಸಿದಾಗ ಯಾವ ನಾಯಕ ತಾನೇ, ಬೇರೆಡೆ ಗಮನ ಕೇಂದ್ರೀಕರಿಸಲು ಸಾಧ್ಯ. ಬಿಜೆಪಿ ಬಯಸಿದಂತೆ ಸಿದ್ರಾಮಯ್ಯ ಮುಡಾ ಚರ್ಚೆಯಲ್ಲಿ ಎಂಗೇಜ್‌ ಆಗುತ್ತಾ ಬಂದರು. ತೆರಿಗೆ ಹೋರಾಟ ಹಿನ್ನೆಲೆಗೆ ಸರಿದಿತ್ತು. ಆದರೆ, ಯಾವಾಗ ಮುಡಾ ವಿವಾದದಲ್ಲಿ ತಮ್ಮ ಕೈ ಮೇಲಾಗುತ್ತಿದೆ ಮತ್ತು ಬಿಜೆಪಿ ನಾಯಕರು ಈ ವಿವಾದವನ್ನು ಕೈಚೆಲ್ಲಿ ಹಿಂದೆ ಸರಿಯುತ್ತಿದ್ದಾರೆ ಎನ್ನುವುದು ಸಿದ್ರಾಮಯ್ಯನವರಿಗೆ ಖಾತ್ರಿಯಾಯಿತೊ ಆಗ ಅವರು ಪೊಲಿಟಿಕಲಿ ರಿಲ್ಯಾಕ್ಸ್‌ ಆಗಲಾರಂಭಿಸಿದರು. ತಮ್ಮ ಹಳೆಯ ಅಟ್ಯಾಕಿಂಗ್‌, ಅಗ್ರೆಸಿವ್‌ ಶೈಲಿಗೆ ಮರಳುವ ತೀರ್ಮಾನಕ್ಕೆ ಬಂದಿದ್ದಾರೆ. ವಿಜಯದಶಮಿಯ ದಿನದಂದೇ ಮೋದಿ ಸರ್ಕಾರದ ತೆರಿಗೆ ಅನ್ಯಾಯದ ವಿರುದ್ಧದ ತಮ್ಮ ಹೋರಾಟಕ್ಕೆ ಮತ್ತೆ ರಣಕಹಳೆ ಮೊಳಗಿಸಿದ್ದಾರೆ. ಸಿದ್ರಾಮಯ್ಯನವರಿಗೆ ಮಾತ್ರವಲ್ಲ, ಸ್ವತಃ ಕಾಂಗ್ರೆಸ್‌ ಹೈಕಮಾಂಡ್‌ಗು ಕೂಡಾ ಮುಡಾ ವಿವಾದದಲ್ಲಿ ಬಿಜೆಪಿ ಸ್ಟೆಪ್‌ ಬ್ಯಾಕ್‌ ಆಗ್ತಾ ಇರೋದು ಮನದಟ್ಟಾಗಿದೆ. ಹಾಗಾಗಿ, ಸಿದ್ರಾಮಯ್ಯನವರ ತೆರಿಗೆ ಹೋರಾಟಕ್ಕೆ ಹೈಕಮಾಂಡ್ ಗ್ರೀನ್‌ ಸಿಗ್ನಲ್‌ ನೀಡಿದೆ.

ಇದೊಂದೇ ವಿದ್ಯಮಾನ ಆಧರಿಸಿ ಈ ತೀರ್ಮಾನಕ್ಕೆ ಬರಲಾಗದು. ವಿವಾದದ ಆರಂಭದಿಂದಲೂ ಮುಡಾ ವಿಚಾರದಲ್ಲಿ ಜೆಡಿಎಸ್‌ ಪಕ್ಷಕ್ಕೆ ಅಂತಹ ಆಸಕ್ತಿ ಇರಲಿಲ್ಲ. ಯಾಕೆಂದರೆ, ಸ್ವತಃ ದೇವೇಗೌಡರ ಕುಟುಂಬವೂ ಸೇರಿದಂತೆ ಮಂಡ್ಯ-ಮೈಸೂರು ಭಾಗದ ಜೆಡಿಎಸ್‌ ಪಕ್ಷದ ಹಲವು ನಾಯಕರು ಅಕ್ರಮವಾಗಿ ಮುಡಾ ಸೈಟುಗಳನ್ನು ಲಪಟಾಯಿಸಿದ್ದಾರೆ. ಈ ವಿವಾದ ದೊಡ್ಡದಾಗಿ ಬೆಳೆದರೆ ಎಲ್ಲಿ ತಮ್ಮ ಬಂಡವಾಳವೂ ಬಯಲಾಗುತ್ತೋ ಎಂಬ ಅಳುಕೇ ಆ ಅನಾಸಕ್ತಿಗೆ ಕಾರಣ ಎನ್ನಲಾಗುತ್ತದೆ. ಆದರೆ ಸಿದ್ರಾಮಯ್ಯನವರ ಮೇಲಿನ ವೈಯಕ್ತಿಕ ಜಿದ್ದು ಮತ್ತು ಮೋದಿಯನ್ನು ಓಲೈಸಬೇಕಾದ ಅನಿವಾರ್ಯತೆಗೆ ಸಿಕ್ಕಿದ್ದ ಕುಮಾರಸ್ವಾಮಿಯವರ ಒತ್ತಡದಿಂದಾಗಿ ಜೆಡಿಎಸ್‌ ಈ ವಿಚಾರದಲ್ಲಿ ಅರೆಮನಸಿನ ದನಿಗೂಡಿಸುತ್ತಾ ಬಂದಿತ್ತು. ಕುಮಾರಸ್ವಾಮಿ ಮೇಲಿನ ಮರ್ಜಿಯಿಂದಾಗಿ ಅಂತಹ ನಾಯಕರು ತಮ್ಮ ಅಸಮಾಧಾನ ಹೊರಹಾಕದೆ ಸಹಿಸಿಕೊಳ್ಳುತ್ತಾ ಬಂದಿದ್ದರು. ಯಾವಾಗ ವಿವಾದ ನ್ಯಾಯಾಂಗಣ ಪ್ರವೇಶಿಸಿ, ಬಿಜೆಪಿ ನಾಯಕರೇ ಆ ಪ್ರಕರಣದ ಬಗ್ಗೆ ವಿಶ್ವಾಸ ಕಳೆದುಕೊಳ್ಳಲಾರಂಭಿಸಿದರೋ, ಆಗ ಅಂತಹ ಜೆಡಿಎಸ್‌ ನಾಯಕರ ಅಸಮಾಧಾನವೂ ಹೆಚ್ಚಾಗುತ್ತಾ ಬಂತು. ದಸರಾ ವೇದಿಕೆಯಲ್ಲಿ ಜೆಡಿಎಸ್‌ನ ಪ್ರಭಾವಿ ನಾಯಕರಾದ ಜಿ ಟಿ ದೇವೇಗೌಡ ಸಿದ್ರಾಮಯ್ಯನವರನ್ನು ಹಾಡಿಹೊಗಳಿದ್ದಲ್ಲದೆ ಮುಡಾ ವಿವಾದದಲ್ಲಿ ಅವರ ಪಾತ್ರವೇನೂ ಇಲ್ಲ ಅಂತ ಗ್ರೀನ್‌ಚಿಟ್‌ ಕೊಟ್ಟಿದ್ದಾಗಲಿ, ಸಿದ್ರಾಮಯ್ಯನವರ ರಾಜೀನಾಮೆಯ ಅಗತ್ಯವೇ ಇಲ್ಲ ಅಂತ ಅವರ ಬೆಂಬಲಕ್ಕೆ ನಿಂತಿದ್ದಾಗಲಿ ಎಲ್ಲವೂ ಬಿಜೆಪಿಯ ಹಿನ್ನಡೆಯನ್ನು ಸಾಬೀತು ಮಾಡುತ್ತೆ.

ಒಂದುಕಡೆ, ಮುಡಾ ವಿವಾದವನ್ನು ಕೆದಕಲು ಹೋಗಿ ತಮ್ಮದೇ ಹೊಸಹೊಸ ಹಗರಣಗಳು ಬಯಲಿಗೆ ಬೀಳುತ್ತಿರುವುದರಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು, ಮತ್ತೊಂದೆಡೆ ವಿವಾದ ನ್ಯಾಯಾಲಯದ ಆವರಣ ಪ್ರವೇಶಿಸಿರುವುದರಿಂದ ತಮ್ಮ ಯೋಜನೆ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ ದಸರಾ ನಂತರದಲ್ಲಿ ಅವರು ಮುಡಾ ಹೋರಾಟವನ್ನು ಸಂಪೂರ್ಣವಾಗಿ ಕೈಚೆಲ್ಲಿ ಹುಬ್ಬಳ್ಳಿ ಕೇಸು ವಾಪಾಸು ಪಡೆದ ಪ್ರಕರಣಕ್ಕೆ ಕೋಮುಬಣ್ಣ ಬಳಿಯುವ ತಮ್ಮ ಹಳೆಯ ಧಾಟಿಗೆ ಶಿಫ್ಟ್‌ ಆಗಿದ್ದಾರೆ. ಆಗೊಮ್ಮೆ ಈಗೊಮ್ಮೆ ವಿಜಯೇಂದ್ರ-ಅಶೋಕ್‌ರಂತವರು ತಮ್ಮ ಇರುವಿಕೆಯನ್ನು ಸಾಬೀತುಪಡಿಸುವಂತೆ ಮುಡಾವನ್ನು ಸವಕಲು ದನಿಯಲ್ಲಿ ಪ್ರಸ್ತಾಪಿರೋದು ಬಿಟ್ಟರೆ, ಮೊದಲಿದ್ದ ಹುಮ್ಮಸ್ಸು ಬಿಜೆಪಿಯಲ್ಲಿ ಕಾಣುತ್ತಿಲ್ಲ.

ಹಾಗಂತ, ಮೋದಿ ಸರ್ಕಾರ ಮುಡಾ ಪ್ರಕರಣವನ್ನು ಸಂಪೂರ್ಣ ಕೈಚೆಲ್ಲಿ ಕೂತಿದೆ ಎನ್ನಲಾಗದು. ಎದುರಾಳಿಗಳನ್ನು ಮಟ್ಟಹಾಕಲು ಬಿಜೆಪಿ ಹೈಕಮಾಂಡ್ ಯಾವ ಮಟ್ಟಕ್ಕೆ ಬೇಕಾದರೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತೆ ಅನ್ನೋದನ್ನು ಅರವಿಂದ್ ಕೇಜ್ರಿವಾಲ್, ಹೇಮಂತ್ ಸೊರೇನ್ ಮತ್ತು ಮಮತಾ ಬ್ಯಾನರ್ಜಿ ವಿಚಾರದಲ್ಲಿ ಕಂಡಿದ್ದೇವೆ. ಇ ಡಿ ಎಂಬ ಅಂತಿಮ ಅಸ್ತ್ರಕ್ಕೆ ಸದ್ಯದಮಟ್ಟಿಗೆ ಜನವಿರೋಧ ವ್ಯಕ್ತವಾಗಿರೋದ್ರಿಂದ ಸುಮ್ಮನಾಗಿದ್ದಾರೆ. ಹಣಿಯಲೇಬೇಕೆಂಬ ಜಿದ್ದಿಗೆ ಬಿದ್ದರೆ ಕೇವಲ ಇ ಡಿ ಮಾತ್ರವಲ್ಲ, ಯಾವುದನ್ನು ಬೇಕಾದರು ಮೂಗಿನ ನೇರಕ್ಕೆ ಬಗ್ಗಿಸಿ ಬಳಸಿಕೊಳ್ಳುವ ಗುಣ ಮೋದಿ ಸರ್ಕಾರಕ್ಕೆ ಹೊಸದೇನೂ ಅಲ್ಲ.

ಆದರೆ ಸದ್ಯಕ್ಕೆ ಒಂದು ಸಂಗತಿಯಂತೂ ಕನ್ಫರ್ಮ್. ಮುಡಾ ವಿವಾದದ ಸುತ್ತ ಬಿಜೆಪಿ ವಿಶ್ವಾಸ ಕಳೆದುಕೊಳ್ಳುತ್ತಾ ಬರುತ್ತಿದೆ. ಸಿದ್ರಾಮಯ್ಯನವರ ಕೈ ಬಲವಾಗುತ್ತಾ ಸಾಗುತ್ತಿದೆ.

– ಮಾಚಯ್ಯ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply