ಬೆಂಗಳೂರಿನ ಇಂದಿನ ಸಮಸ್ಯೆಗೆ ಬಿಜೆಪಿ ಸರ್ಕಾರದ ಅವೈಜ್ಞಾನಿಕ ನಿಲುವುಗಳೇ ಕಾರಣ

11 months ago

ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಕಟ್ಟಿದಂತಹ ಬೆಂಗಳೂರಿನ ನೂರು ವಾರ್ಡ್ ಗಳಲ್ಲಿ ಬಹುತೇಕ ಎಲ್ಲಾ ಕಡೆಯಲ್ಲಿ ಎಂತಹ ಮಳೆ ಬಂದರೂ ಸಹ ಯಾವುದೇ ರೀತಿಯ ತೊಂದರೆ ಸಾರ್ವಜನಿಕರಿಗೆ ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಮತ್ತು ಮನೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಚರಂಡಿ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ಕಾಣಿಸಿಕೊಳ್ಳಬಹುದಷ್ಟೇ. ಆದರೆ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ಸರ್ಕಾರ ಬೆಂಗಳೂರಿನ ಹೊರವಲಯದಲ್ಲಿರುವ 110 ಹಳ್ಳಿಗಳನ್ನು ಸೇರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ತಮ್ಮ ಸ್ವಾರ್ಥಕ್ಕಾಗಿ ಮಾಡಿದ ಕಾರಣದಿಂದ ಇಂದು ಬೆಂಗಳೂರು ಸಮಸ್ಯೆಗಳನ್ನ ಎದುರಿಸುತ್ತಿದೆ.

ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಸಮಸ್ಯೆ ಇಲ್ಲ. ಆದರೆ ಬಿಜೆಪಿ ಮತ್ತು ಜೆಡಿಎಸ್ ವಿಸ್ತರಿಸಿದ ಬೆಂಗಳೂರಿನ ಭಾಗದಲ್ಲಿ ಮಾತ್ರ ಮಳೆ ಬಂದಾಗ ಸಮಸ್ಯೆಗಳು ಕಂಡುಬರುತ್ತಿವೆ. ಆ ಪ್ರದೇಶಗಳು ಯಾವುದೇ ರೀತಿಯಲ್ಲೂ ಮೂಲಭೂತ ಸೌಕರ್ಯ ಸೌಲಭ್ಯವನ್ನು ಹೊಂದಿರಲಿಲ್ಲ. ವಿಶೇಷವಾಗಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಒಳಚರಂಡಿ ವ್ಯವಸ್ಥೆಯು ಇರಲಿಲ್ಲ ಇವರುಗಳು ಅಧಿಕಾರದಲ್ಲಿದ್ದಾಗ ಆ ಪ್ರದೇಶಗಳ ಅಭಿವೃದ್ಧಿಗೆ ಯಾವ ಗಮನವನ್ನು ನೀಡಲಿಲ್ಲ.

ಇಂದು ಮಾಧ್ಯಮಗಳ ಮುಂದೆ ಒಂದು ಅಬ್ಬರಿಸುವ ಬಿಜೆಪಿ ನಾಯಕರುಗಳು ತಾವು ಅಧಿಕಾರದಲ್ಲಿದ್ದಾಗ ಎಷ್ಟು ರಾಜ ಕಾಲುವೆಗಳನ್ನ ತೆರವುಗೊಳಿಸಿದ್ದೀರಿ ಎಂಬುದನ್ನ ಬಹಿರಂಗಪಡಿಸಿ, ಅದೇ ರೀತಿಯಲ್ಲಿ ಎಷ್ಟು ಕಿಲೋಮೀಟರ್ ಒಳ ಚರಂಡಿ ವ್ಯವಸ್ಥೆಯನ್ನು ನೂತನವಾಗಿ ಅಳವಡಿಸಿದ್ದೀರಿ ಅದನ್ನು ಹೇಳಿ.

ಈಗ ಕಾಂಗ್ರೆಸ್ ಸರ್ಕಾರ 110 ಹಳ್ಳಿಗಳಿಗೆ ಕಾವೇರಿ ನೀರನ್ನು ಒದಗಿಸುವಂತಹ ಕಾವೇರಿ ಐದನೇ ಹಂತವನ್ನು ಪೂರ್ಣಗೊಳಿಸಿ ಸಮರ್ಪಣೆಗೊಳಿಸಿದೆ. ಆದರೆ ಬಿಜೆಪಿಯವರು ಈ ಹಳ್ಳಿಗಳಿಗೆ ಕುಡಿಯುವ ನೀರನ್ನು ಕೊಟ್ಟಿರಲಿಲ್ಲ.

ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಾಗೂ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ 2019 ರಿಂದ 23ರ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಒಳಗೊಂಡಂತೆ ಎಲ್ಲ ಸರ್ಕಾರಗಳು ಇದ್ದ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದಾಗ ಸಮಸ್ಯೆಗಳು ಆಗಿದೆ. ಬಿಜೆಪಿಯವರ ಕಾಲದಲ್ಲಿ ಬೆಂಗಳೂರು ನಗರದಲ್ಲಿ ಮಳೆ ಬಂದಾಗ ಜನಗಳೇನು ಸ್ವರ್ಗದಲ್ಲಿ ತೇಲುತ್ತಿರಲಿಲ್ಲ ಅಥವಾ ಸಮಸ್ಯೆಗಳಿಲ್ಲದೆ ಆನಂದದಿಂದ ಕುಣಿದಾಡುತ್ತಿರಲಿಲ್ಲ. ಬಿಜೆಪಿ ನಾಯಕರು ಎಷ್ಟೇ ಅಬ್ಬರಿಸಲಿ ದಾಖಲೆಗಳು ಈಗಲೂ ಇದೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಎಷ್ಟು ಸಮಸ್ಯೆಗಳಾಯಿತು ಎನ್ನುವುದು ಗೊತ್ತಿದೆ.

ಸಿದ್ದರಾಮಯ್ಯನವರು ಮತ್ತು ಡಿ ಕೆ ಶಿವಕುಮಾರ್ ಅವರು ಸಮಸ್ಯೆಗಳು ಬಂದ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಪರಿಹರಿಸುವಂತಹ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಮತ್ತು ರಾಜ್ಯ ಸರ್ಕಾರ ಅತಿಹೆಚ್ಚಿನ ಅನುದಾನವನ್ನ ಬೆಂಗಳೂರಿನ ಮೂಲಭೂತ ಸೌಕರ್ಯ ಮತ್ತು ಸೌಲಭ್ಯಗಳಿಗೆ ತನ್ನ ಮುಂಗಡಪತ್ರದಲ್ಲಿ ನೀಡಿದೆ. ವಿಶೇಷವಾಗಿ ಡಿ ಕೆ ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿಯ ನಾಯಕರು ಗ್ರೇಟರ್ ಬೆಂಗಳೂರು ಎಂಬ ಕಲ್ಪನೆಯನ್ನು ಹಾಸ್ಯ ಮಾಡುತ್ತಿದ್ದೀರಿ. ಬಹುಷಃ ಬಿಜೆಪಿ ನಾಯಕರಿಗೆ ಅರಿವಿನ ಕೊರತೆ ಇದೆ. ಗ್ರೇಟರ್ ಬೆಂಗಳೂರು ಮಸೂದೆ ಅಂಗೀಕಾರವಾಗಿ ಅನುಷ್ಠಾನಕ್ಕೆ ಬಂದು ಇನ್ನೂ ಎರಡು ದಿನವೂ ಆಗಿಲ್ಲ. ಅಷ್ಟರಲ್ಲಿ ಗ್ರೇಟರ್ ಬೆಂಗಳೂರಿನ ಕನಸಿನ ಯೋಜನೆಯ ಬಗ್ಗೆ ಮಾತನಾಡುವುದು ಅವರ ಪ್ರಬುದ್ಧತೆಯನ್ನು ತೋರಿಸುತ್ತದೆ.

ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವಂತಹ ಎಲ್ಲ ಯೋಜನೆಗಳು ಪೂರ್ಣವಾದರೆ ಬೆಂಗಳೂರು ನಗರದ ಜನರಿಗೆ ಸಮಸ್ಯೆಗಳು ತಕ್ಕಮಟ್ಟಿಗೆ ಪರಿಹಾರವಾಗುತ್ತದೆ.

ಚುನಾಯಿತ ಪ್ರತಿನಿಧಿಗಳು ಇಲ್ಲದಿರುವುದೇ ಸಮಸ್ಯೆಗಳಿಗೆ ಸಾಕಷ್ಟು ಕಾರಣವಾಗಿದೆ. ಇಂಜಿನಿಯರ್ಗಳಾಗಲಿ ಅಥವಾ ಬಿಬಿಎಂಪಿ ಅಧಿಕಾರಿಗಳಾಗಲಿ, ಸ್ಥಳೀಯರಾಗಿರುವುದಿಲ್ಲ. ಅವರಿಗೆ ವಾರ್ಡ್ ಮಟ್ಟದಲ್ಲಿ ಇರುವಂತಹ ಸಮಸ್ಯೆಗಳ ಆಳದ ಅರಿವಿರುವುದಿಲ್ಲ. ಇದೇ ಸಂದರ್ಭದಲ್ಲಿ ಅವರಿಗೆ ಆ ಪ್ರದೇಶದ ಬಗ್ಗೆ ಸಾಕಷ್ಟು ತಿಳುವಳಿಕೆ ಇರುವ ಕಾರಣದಿಂದ ಮಳೆಯ ನೀರಿನ ಹರಿವ ಸಮಸ್ಯೆ ಚರಂಡಿ ನೀರಿನ ಸಮಸ್ಯೆ ರಸ್ತೆಗಳ ಸಮಸ್ಯೆ ಎಲ್ಲವನ್ನು ಸೂಕ್ತವಾದ ರೀತಿಯಲ್ಲಿ ವಿವರಿಸಿ ಅವರೇ ಪರಿಹಾರವನ್ನು ಸೂಚಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿಯವರು ತಾವು ಸರ್ಕಾರವಿದ್ದ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ನಡೆಸಲಿಲ್ಲ. ಬೆಂಗಳೂರು ನಗರದ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದಿದ್ದರೂ ಸಹ ಮೂರು ವರ್ಷ ಚುನಾವಣೆ ನಡೆಸಲಿಲ್ಲ.

ಈಗ ಕಾಂಗ್ರೆಸ್ ಸರ್ಕಾರ ಬೆಂಗಳೂರು ನಗರದ ಆಡಳಿತದ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸ ಬೇಕಾಗಿರುವ ಕಾರಣದಿಂದ ಹೊಸ ಕಾಯ್ದೆಗಳು ರೂಪಿಸಿ ಅವುಗಳನ್ನ ಅನುಮೋದನೆಯನ್ನು ಪಡೆದು ಕಾನೂನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸಾಕಷ್ಟು ಸಮಯ ತೆಗೆದುಕೊಂಡ ಕಾರಣದಿಂದ ಚುನಾವಣೆ ವಿಳಂಬವಾಗಿದೆ. ಉಪ ಮುಖ್ಯಮಂತ್ರಿಗಳು ಈಗಾಗಲೇ ಘೋಷಣೆಯನ್ನ ಮಾಡಿ ಕೆಲವೇ ದಿನಗಳಲ್ಲಿ  ಬಿಬಿಎಂಪಿಗೆ ಚುನಾವಣೆ ನಡೆಸಿ, ಬೆಂಗಳೂರು ನಗರದ ಜನತೆ ಚುನಾವಣಾ ಪ್ರತಿನಿಧಿಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ.

ಮಳೆ ಬಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮರ್ಯಾದೆ ಹಾಳಾಗುತ್ತಿದೆ ಎಂದು ಬಿಜೆಪಿಯವರು ಹಾಸ್ಯಸ್ಪದವಾಗಿ ಮಾತನಾಡುತ್ತಾರೆ. ನಿಜಕ್ಕೂ ಬೆಂಗಳೂರಿನ ಮರ್ಯಾದೆ ಹಾಳಾದದ್ದು ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ. ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿ ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿ ಎಂದು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಸುದ್ದಿಯಾದ ದಿನ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply