ಸುಗಮ ಆಡಳಿತ ವ್ಯವಸ್ಥೆಗೆ ಗ್ರೇಟರ್ ಬೆಂಗಳೂರು ಪರಿಹಾರ

1 year ago

ಎಲ್ಲ ಇಲಾಖೆಗಳ ಸಮನ್ವಯ ಮತ್ತು ಬೆಂಗಳೂರು ನಗರದ ಸುಗಮ ಆಡಳಿತ ವ್ಯವಸ್ಥೆಗೆ ಗ್ರೇಟರ್ ಬೆಂಗಳೂರು ಪರಿಹಾರ.

1948ರಲ್ಲಿ ಆರಂಭವಾದ ಅಂತಹ ಬೆಂಗಳೂರಿನ ಆಡಳಿತ ವ್ಯವಸ್ಥೆ 2004 ರ ತನಕ ಚೆನ್ನಾಗಿಯೇ ನಡೆಯುತ್ತಿತ್ತು. ಎಸ್ ಎಂ ಕೃಷ್ಣರವರು ಬೆಂಗಳೂರಿನ ಆಡಳಿತ ವ್ಯವಸ್ಥೆಗೆ, ಮಹಾನಗರ ಪಾಲಿಕೆಗೆ ಸಾಕಷ್ಟು ರೀತಿಯಲ್ಲಿ ಯೋಜನೆಗಳನ್ನು ರೂಪಿಸಿ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಬುನಾದಿಯನ್ನ ಹಾಕಿದ್ದಾರೆ.

ಅಂದು ನೂರು ಸದಸ್ಯರನ್ನು ಒಳಗೊಂಡ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ನಗರದ ನಾಗರಿಕರಿಗೆ ಎಲ್ಲ ರೀತಿಯ ಸೌಕರ್ಯ ಮತ್ತು ಸೌಲಭ್ಯವನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಆಡಳಿತಾತ್ಮಕವಾಗಿ ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸುತ್ತಿತ್ತು. ಆಯುಕ್ತರು ಮತ್ತು ಅಂದಿನ ಮಹಾಪೌರರು ತಮ್ಮ ಅಧಿಕಾರದ ಅವಧಿಯಲ್ಲಿ ಬೆಂಗಳೂರು ನಗರವನ್ನು ಸಾಕಷ್ಟು ಬಾರಿ ಸುತ್ತಿ ಸಮಸ್ಯೆಗಳನ್ನ ಅರಿತು ಪರಿಹಾರವನ್ನು ಕೊಡಲು ಸಾಧ್ಯವಿತ್ತು. ಕಾರಣ ಇದರ ವಿಸ್ತೀರ್ಣಕ್ಕೆ ಮಿತಿ ಇತ್ತು.

ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೆಂಗಳೂರು ನಗರದ ಹೊರವಲಯದಲ್ಲಿರುವ ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳನ್ನು ಒಳಗೊಂಡಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ನಾಮಕರಣ ಮಾಡಿ 198 ವಾರ್ಡ್ ಗಳಿಗೆ ಇದರ ವ್ಯಾಪ್ತಿಯನ್ನು ವಿಸ್ತರಿಸಿದ್ದು ಬೆಂಗಳೂರಿನ ಇಂದು ನಾಗರಿಕರು ಅನುಭವಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ.

ಅನೇಕ ಗ್ರಾಮೀಣ ಪ್ರದೇಶಗಳನ್ನು ಬೆಂಗಳೂರು ನಗರಕ್ಕೆ ಸೇರಿಸಿದ್ದರಿಂದ ಬೆಂಗಳೂರು ನಗರದ ಅಭಿವೃದ್ಧಿ ಕುಂಟಿತವಾಯಿತು. ಇದರ ವಿಸ್ತೀರ್ಣ ದೊಡ್ಡ ಪ್ರಮಾಣದಲ್ಲಿ ಇರುವ ಕಾರಣದಿಂದ ಯಾವುದೇ ಆಯುಕ್ತರು ಅಥವಾ ಮಹಾಪೌರರು ತಮ್ಮ ಅಧಿಕಾರದ ಅವಧಿಯಲ್ಲಿ 198 ವಾರ್ಡುಗಳನ್ನು ಒಂದು ಬಾರಿಯೂ ನೋಡಲು ಸಾಧ್ಯವಾಗಿಲ್ಲ.

ನಾಗರೀಕರು ಹಲವಾರು ಕಿಲೋಮೀಟರ್ ಗಳ ದೂರದಿಂದ ಬೆಂಗಳೂರಿನ ಕೇಂದ್ರ ಕಚೇರಿಗೆ ಬರುವುದು ದೊಡ್ಡ ಸಮಸ್ಯೆಯಾಯಿತು. ಕಸದ ಸಮಸ್ಯೆ, ರಸ್ತೆಗಳ ಅಭಿವೃದ್ಧಿಯ ಸಮಸ್ಯೆ ಕುಡಿಯುವ ನೀರಿನ ಪೂರೈಕೆಯ ಸಮಸ್ಯೆ, ವಾಹನ ಸಂಚಾರದ ನಿಯಂತ್ರಣದ ಸಮಸ್ಯೆ, ಹೀಗೆ ಸಮಸ್ಯೆಗಳ ಸರಮಾಲೆ ಆರಂಭವಾಯಿತು.

ಕೇಂದ್ರದಿಂದ ಯಾವ ವಿಶೇಷ ಅನುದಾನ ಮತ್ತು ನೆರವು ಸಹ ಕಳೆದ ಹತ್ತು ವರ್ಷದಲ್ಲಿ ಬಂದಿರುವುದಿಲ್ಲ. ಇಲ್ಲಿ ಉತ್ಪನ್ನವಾಗುವ ತೆರಿಗೆಯ ಮೂಲದ ಹಣದಿಂದಲೇ ಅಭಿವೃದ್ಧಿಯನ್ನು ಮಾಡಬೇಕು. ಜೊತೆಗೆ ರಾಜ್ಯ ಸರ್ಕಾರ ಕೊಡುವ ಅನುದಾನವನ್ನು ಅವಲಂಬಿಸಿದೆ.

ಇಷ್ಟು ದೊಡ್ಡ ಪ್ರಮಾಣದ ವ್ಯಾಪ್ತಿಯ ನಗರಕ್ಕೆ ಅಭಿವೃದ್ಧಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅಧಿಕಾರಿಗಳು ಸಹ ಇಷ್ಟು ದೊಡ್ಡ ವಿಸ್ತೀರ್ಣವನ್ನ ನಿಯಂತ್ರಿಸುವುದು ಸಮಸ್ಯೆಯಾಗಿದೆ.

ಬಿಡಿಎ, ಬೆಸ್ಕಾಂ, ಜಲ ಮಂಡಳಿ ಮತ್ತು ಬಿಬಿಎಂಪಿಗಳ ನಡುವೆ ಸಮನ್ವಯವೇ ಇಲ್ಲದೆ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಗೊಂದಲವಾಗಿದೆ. ಕಾಮಗಾರಿಗಳನ್ನು ನಡೆಸುವ ನಿಟ್ಟಿನಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಇದು ಸಹ ದೊಡ್ಡ ಸಮಸ್ಯೆಯಾಗಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಸಿದ್ದರಾಮಯ್ಯನವರು ಮತ್ತು ವಿಶೇಷವಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ಯೋಜನೆಯ ಮೂಲಕ ಇದಕ್ಕೆ ಪರಿಹಾರವನ್ನು ಹುಡುಕುವ ಪ್ರಯತ್ನವನ್ನು ನಡೆಸಿದ್ದಾರೆ.

ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬಂದರೆ ವಿವಿಧ ಇಲಾಖೆಗಳ ನಡುವೆ ಸಮನ್ವಯವೂ ಇರುತ್ತದೆ. ನಿಯಂತ್ರಣದಲ್ಲೂ ಇರುತ್ತದೆ ಗೊಂದಲಗಳು ಇರುವುದಿಲ್ಲ.

ಬೆಂಗಳೂರು ನಗರವನ್ನ ಕೆಂಪೇಗೌಡರು ಕಟ್ಟಿದ್ದಾರೆ ಎನ್ನುವ ಮಾತಿನಲ್ಲಿ ಯಾರದು ಸಹ ಎರಡನೇ ಅಭಿಪ್ರಾಯವಿಲ್ಲ. ನಿಜಕ್ಕೂ ಬೆಂಗಳೂರು ನಗರ ಇಂದು ವಿಶ್ವಮಟ್ಟದಲ್ಲಿ ಗಮನವನ್ನು ಸೆಳೆದಿದ್ದರೆ ಅದಕ್ಕೆ ಕೆಂಪೇಗೌಡರು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಕಾರಣ ಎನ್ನುವುದನ್ನು ಎಲ್ಲರೂ ಒಪ್ಪಬೇಕಾಗಿದೆ.

ಆಡಳಿತಾತ್ಮಕವಾದ ದೃಷ್ಟಿಕೋನದಿಂದ ನಾಲ್ಕು ಅಥವಾ ಒಂದಕ್ಕಿಂತ ಹೆಚ್ಚು ನಗರ ಪಾಲಿಕೆಗಳನ್ನ ಮಾಡಿದ ಮಾತ್ರಕ್ಕೆ ಬೆಂಗಳೂರು ವಿಭಜನೆಯಾಗುವುದಿಲ್ಲ. ಎಷ್ಟೇ ಪಾಲಿಕೆಗಳು ಆದರೂ ಸಹ ಅದರ ಹೆಸರುಗಳೆಲ್ಲವೂ ಬೆಂಗಳೂರನ್ನು ಹೊತ್ತಿರುತ್ತದೆ.

ಅನೇಕ ರಾಜ್ಯಗಳು ರಚನೆಯಾಗಿರುತ್ತದೆ, ರಾಜ್ಯಗಳು ವಿಭಜನೆಯಾಗಿ ಹೊಸ ರಾಜ್ಯಗಳಾಗಿವೆ. ಜಿಲ್ಲೆಗಳು ವಿಭಜನೆಯಾಗಿ ಹೊಸ ಜಿಲ್ಲೆಗಳಾಗಿವೆ. ಆದರೆ ಎಲ್ಲವೂ ಸಹ ಭಾರತ ದೇಶದಡಿಯಲ್ಲಿವೆ. ಕರ್ನಾಟಕ ರಾಜ್ಯದಲ್ಲಿದೆ ಮತ್ತು ಎಲ್ಲರೂ ಇಲ್ಲಿನವರೆ ಅದರಲ್ಲಿ ಇದ್ದೇವೆ.

ಆಡಳಿತಾತ್ಮಕವಾದ ದೃಷ್ಟಿಯಿಂದ ಪಾಲಿಕೆ ವ್ಯವಸ್ಥೆಯನ್ನ ವಿಭಜನೆ ಮಾಡಿದರೆ ಮೂಲ ಬೆಂಗಳೂರಿಗೆ ಯಾವ ಧಕ್ಕೆಯು ಆಗುವುದಿಲ್ಲ. ಹೊರ ರಾಜ್ಯದವರು ಮಹಾಪೌರಾಗುತ್ತಾರೆ ಎನ್ನುವ ಬಿಜೆಪಿಯವರು 2020ರಲ್ಲಿ ಯಾರನ್ನು ಮಹಾಪೌರನ್ನಾಗಿಸಿದರು ಎನ್ನುವುದನ್ನು ನೆನಪು ಮಾಡಿಕೊಳ್ಳಲಿ. ಕರ್ನಾಟಕದಿಂದ ಯಾರನ್ನು ರಾಜ್ಯಸಭೆಗೆ ಎಷ್ಟೆಷ್ಟು ಬಾರಿ ಕಳುಹಿಸಿಕೊಟ್ಟಿದ್ದೀರಿ ಎನ್ನುವುದನ್ನು ನೆನಪು ಮಾಡಿಕೊಳ್ಳಿ.

ಬೆಂಗಳೂರು ನಗರದಲ್ಲಿ ಕನ್ನಡ ಭಾಷೆಯನ್ನ ಉಳಿಸುವುದು ಮತ್ತು ಕನ್ನಡಿಗರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶಕ್ತಿಯುತವಾಗಿ ಬೆಳೆಸುವುದು ಸರ್ಕಾರಗಳ ಯೋಜನೆಗಳ ಅಡಿಯಲ್ಲಿದೆ. ಬೆಂಗಳೂರು ಆಡಳಿತ ವ್ಯವಸ್ಥೆ ಎಷ್ಟೇ ಭಾಗವಾದರೂ ಇದರ ಆಡಳಿತ ಭಾಷೆ ಕನ್ನಡವೇ ಆಗಿರುತ್ತದೆ.

ಬೆಂಗಳೂರು ಏನೇ ಆದರೂ ಯಾರಿಂದಲೂ ಕನ್ನಡದ ಪ್ರದೇಶ ಎನ್ನುವುದನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಇಲ್ಲಿ ಕನ್ನಡವೇ ಸಾರ್ವಭೌಮತ್ವ ಮತ್ತು ಕನ್ನಡಿಗರೇ ಇಲ್ಲಿ ಪ್ರಮುಖರಾಗಿರುತ್ತಾರೆ.

ಯಾವುದೇ ರಾಜ್ಯದವರು ಎಲ್ಲಿಂದಲೇ ಬರಲಿ ಅವರೆಲ್ಲರೂ ಸಹ ಕನ್ನಡವನ್ನ ಕಲಿತು ಬದುಕಬೇಕು ಎನ್ನುವಂತಹ ವಾತಾವರಣ ಅನೇಕ ಕನ್ನಡ ಪರ ಸಂಘಟನೆಗಳು ಮತ್ತು ಹೋರಾಟಗಾರರಿಂದ ನಿರ್ಮಾಣವಾಗಿದೆ. ಜೊತೆಗೆ ಸರ್ಕಾರದ ಕೆಲವು ಕಾನೂನುಗಳು ಸಹ ಹೋರಾಟಗಾರರಿಗೆ ಬಲವನ್ನ ತುಂಬಿದೆ.

ಬೆಂಗಳೂರು ನಗರ ವಿಶ್ವದ ಮಟ್ಟದಲ್ಲಿ ಅತ್ಯಂತ ಸುಂದರವಾಗಿ ಮತ್ತು ಸೌಲಭ್ಯಪೂರ್ಣವಾಗಿ ಗಮನವನ್ನು ಸೆಳೆಯಬೇಕಾದರೆ ಗ್ರೇಟರ್ ಬೆಂಗಳೂರು ಅನಿವಾರ್ಯ. ಇದಕ್ಕೆ ಬಿಜೆಪಿಯವರು ಇಲ್ಲಸಲ್ಲದ ನೆಪಗಳನ್ನು ಹೇಳಿ ವಿರೋಧ ಮಾಡಬಾರದು.

ಹಾಳಾದಂತಹ ಬೆಂಗಳೂರಿನ ವ್ಯವಸ್ಥೆಗೆ ಕಾಯಕಲ್ಪವನ್ನ ತರುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿಯವರು ತಾವು ಮಾಡಿರುವ ಹಿಂದಿನ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಈಗಿನ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಬೆಂಬಲವನ್ನ ನೀಡಿ ಹೊರತು ವಿರೋಧ ಮಾಡಬಾರದು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply