ಎಚ್.ಡಿ.ಕುಮಾರಸ್ವಾಮಿಗೆ 68,000 ದಂಡ ವಿಧಿಸಿದ ಬೆಸ್ಕಾಂ

2 years ago

#Bescom #fined #HDKumaraswamy #electricity

ಬೆಂಗಳೂರು: ದೀಪಾವಳಿ ಹಬ್ಬದ ದಿನದಂದು ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಮನೆಗೆ ವಿದ್ಯುತ್ ದೀಪಾಲಂಕಾರ ಮಾಡಲು ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳು ಬರೋಬ್ಬರಿ 68,000 ರೂ. ದಂಡ ವಿಧಿಸಿದ್ದಾರೆ. ಈ ಮೂಲಕ ಮಾಜಿ ಸಿಎಂ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಚುರುಕು ಮುಟ್ಟಿಸಿದ್ದಾರೆ.

ದೀಪವಾಳಿ ದಿನದಂದು ವಿದ್ಯುತ್ ಕಳ್ಳತನ ಮಾಡಿದ ಆರೋಪ ಎದುರಾಗಿತ್ತು. ಈ ಸಂಬಂಧ ಕೆಪಿಸಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿತ್ತು. ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಇಂಜಿನಿಯರ್ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಜಾಗೃತದಳ ಎಫ್ ಐ ಆರ್ ದಾಖಲು ಮಾಡಿತ್ತು.

ಈ ಸಂಬಂಧ ತನಿಖೆ ನಡೆಸಿದ ಅಧಿಕಾರಿಗಳು ಎಚ್.ಡಿ.ಕುಮಾರಸ್ವಾಮಿ ಅವರ ಮನೆಯನ್ನು ಪರಿಶೀಲಲನೆ ನಡೆಸಿದ್ದರು. ನಂತರ ಕುಮಾರಸ್ವಾಮಿ ಅವರಿಗೆ ಏಳು ದಿನಗಳೊಳಗೆ 68 ಸಾವಿರ ರೂ. ದಂಡ ಪಾವತಿಸುವಂತೆ ಸೂಚನೆ ನೀಡಿದ್ದಾರೆ. ಇನ್ನು ಈ ಕುರಿತು ಒಂದೆರಡು ದಿನಗಳಲ್ಲಿ ದಂಡ ಪಾವತಿಸುವುದಾಗಿ ಕುಮಾರಸ್ವಾಮಿಯವರು ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಜಯನಗರದಲ್ಲಿರುವ ಬೆಸ್ಕಾಂ ವಿಚಕ್ಷಣ ಕಚೇರಿಯಲ್ಲಿ ಮಂಗಳವಾರ ಕರ್ನಾಟಕ ವಿದ್ಯುತ್ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ವೈರಲ್ ಆಗಿರುವ ವಿಡಿಯೋ ಕ್ಲಿಪ್ ಆಧರಿಸಿ ದೂರನ್ನು ದಾಖಲಿಸಲಾಗಿದೆ ಎಂದು ಇಂಧನ ಇಲಾಖೆ ಹೇಳಿಕೆ ತಿಳಿಸಿದೆ. ಸದರಿ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ ‘ತನಗೆ ತಿಳಿಯದಂತೆ ಕಂಬದಿಂದ  ವಿದ್ಯುತ್ ಪಡೆಯಲಾಗಿದೆ’ ಎಂದು ಹೇಳಿಕೆ ನೀಡಿದ್ದರು. 

ಮನೆಗೆ ವಿದ್ಯುತ್ ದೀಪಗಳನ್ನು ಅಲಂಕರಿಸುವ ಕೆಲಸವನ್ನು ಗುತ್ತಿಗೆದಾರನಿಗೆ ನೀಡಲಾಗಿತ್ತು, ಅವರು ತಮ್ಮ ಅಥವಾ ಅವರ ಕುಟುಂಬ ಸದಸ್ಯರಿಗೆ ತಿಳಿಸದೆ ಕಂಬದಿಂದ ವಿದ್ಯುತ್ ಪಡೆದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು. ಈ ವಿಷಯ ಗಮನಕ್ಕೆ ಬಂದ ತಕ್ಷಣ ವಿದ್ಯುತ್ ಸಂಪರ್ಕವನ್ನು ತೆಗೆದುಹಾಕಲಾಯಿತು. ಈ ಘಟನೆ ನಡೆದಾಗ ತಾವು ನಗರದಲ್ಲಿರಲಿಲ್ಲ ಎಂದಿದ್ದರು.

Leave a Reply