ಬೀಚ್ ಗಳಲ್ಲಿ ಜೀವ ಹಾನಿಯಾಗದಂತೆ ಕಟ್ಟೆಚ್ಚರ ವಹಿಸಿ

5 months ago

ಕಾರವಾರ: ಜಿಲ್ಲೆಯಲ್ಲಿ ಪ್ರಸ್ತುತ ಪ್ರವಾಸಿ ಚಟುವಟಿಕೆಗಳು ಹೆಚ್ಚಾಗಿದ್ದು, ಅಧಿಕ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಜಿಲ್ಲೆಯ ಬೀಚ್ ಗಳಿಗೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಬೀಚ್ ನಲ್ಲಿ ಯಾವುದೇ ಜೀವಹಾನಿ ಸಂಭವಿಸದಂತೆ ಎಲ್ಲಾ ರೀತಿಯ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಗೋಕರ್ಣ ಮತ್ತು ಮುರುಡೇಶ್ವರ ಕಡಲ ತೀರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಆಗಮಿಸುತ್ತಿದ್ದು, ಇಲ್ಲಿನ ಸಮುದ್ರದ ತೀರದ ಅಪಾಯಗಳ ಕುರಿತು ಸೂಚನಾ ಫಲಕಗಳನ್ನು ಬೀಚ್ ನ ಪ್ರಮುಖ ಸ್ಥಳಗಳಲ್ಲಿ ಅಳವಡಿಸಬೇಕು, ಪ್ರವಾಸಿಗರಿಗೆ ಅಪಾಯದ ಬಗ್ಗೆ ಸೈರನ್ ಮತ್ತು ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲು ಕ್ರಮ ಕೈಗೊಳ್ಳಬೇಕು. ವಾಚ್ ಟವರ್ ಗಳ ಮೂಲಕ ಪ್ರವಾಸಿಗರು ಸಮುದ್ರದಲ್ಲಿನ ಅಪಾಯದ ಸ್ಥಳಗಳಿಗೆ ತೆರಳದಂತೆ ನಿರಂತರ ಗಮನಹರಿಸಬೇಕು, ಬೀಚ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೀವ ರಕ್ಷಕರನ್ನು ನೇಮಿಸುವಂತೆ ಮತ್ತು ಸಾಕಷ್ಟು ಸಂಖ್ಯೆಯ ಹೋಂ ಗಾರ್ಡ್ ಗಳನ್ನು ನಿಯೋಜಿಸುವಂತೆ ಸೂಚಿಸಿದರು.

ಎಲ್ಲಾ ಬೀಚ್ ಗಳಲ್ಲಿ ವಾಹನಗಳ ಪಾರ್ಕಿಂಗ್ ಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಮತ್ತು ಬೀಚ್ ಗಳಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕ ರೀತಿಯಲ್ಲಿ ಮಾಡಬೇಕು. ಪ್ರವಾಸಿಗರು ಬೋಟ್ ಗಳಲ್ಲಿ ತೆರಳುವಾಗ ಕಡ್ಡಾಯವಾಗಿ ಜೀವ ರಕ್ಷಕ ಜಾಕೆಟ್ ಗಳನ್ನು ಧರಿಸುವಂತೆ ನೋಡಿಕೊಳ್ಳಬೇಕು ಹಾಗೂ ಬೀಚ್ ನಲ್ಲಿನ ಜೀವ ರಕ್ಷಕರಿಗೆ ಪ್ರವಾಸಿಗರ ರಕ್ಷಣೆಗೆ ಅಗತ್ಯವಿರುವ ಎಲ್ಲಾ ಸುರಕ್ಷತಾ ಪರಿಕರಗಳನ್ನು ಪೂರೈಸುವುದರ ಜೊತೆಗೆ ಅವರಿಗೆ ಜೀವ ವಿಮೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಂಪೂರ್ಣವಾಗಿ ನೀಡಬೇಕು ಎಂದರು.

ಮುರುಡೇಶ್ವರ ಬೀಚ್ ನಲ್ಲಿ ಅಪಾಯವಲ್ಲದ ಸಮುದ್ರ ಪ್ರದೇಶದ ಕುರಿತು ಮಾರ್ಕಿಂಗ್ ಮಾಡಿಸುವಂತೆ ಹಾಗೂ ತುರ್ತು ಸಂದರ್ಭದಲ್ಲಿ ಪ್ರವಾಸಿಗರ ರಕ್ಷಣೆಗೆ ಜೆಟ್ ಸ್ಕೀ, ಪ್ರಥಮ ಚಿಕಿತ್ಸಾ ಕಿಟ್ ಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಪಾರ್ಕಿಂಗ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ನಿರಂತರವಾಗಿ ಎಚ್ಚರಿಕೆಯ ಸಂದೇಶಗಳನ್ನು ಪ್ರಸಾರ ಮಾಡಬೇಕು, ಸುರಕ್ಷತಾ ಪರಿಕರಗಳು ಸೇರಿದಂತೆ ಯಾವುದೇ ರೀತಿಯ ನೆರವುಗಳ ಅಗತ್ಯವಿದ್ದಲ್ಲಿ ಬೇಡಿಕೆ ಸಲ್ಲಿಸಿ, ಸಾಕಷ್ಟು ಮುಂಚಿತವಾಗಿ ಪಡೆದುಕೊಳ್ಳುವಂತೆ ಸೂಚನೆ ನೀಡಿದರು.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಗರಿಷ್ಠ ಸುರಕ್ಷತೆಗೆ ಜಿಲ್ಲಾಡಳಿತದ ಮೂಲಕ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿಯು ಪ್ರವಾಸೋದ್ಯಮ, ಪೊಲೀಸ್, ಕಂದಾಯ ಮತ್ತು ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳದ್ದಾಗಿದೆ. ಈ ಕಾರ್ಯದಲ್ಲಿ ಎಲ್ಲಾ ಅಧಿಕಾರಿಗಳು ಪರಸ್ಪರ ಸಹಕಾರ ಮತ್ತು ಸಮನ್ವಯದಿಂದ ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ, ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಜಿಲ್ಲೆಯಿಂದ ಸುರಕ್ಷಿತವಾಗಿ ತೆರಳುವಂತಾಗಬೇಕು, ಇದರಲ್ಲಿ ಯಾವುದೇ ಲೋಪಗಳಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದರು.

ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಜೂಫಿಶಾನ್ ಹಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಮಂಗಳಗೌರಿ ಭಟ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave a Reply