ಬೆಂಗಳೂರು: ಕರ್ನಾಟಕ ಮೂಲದ ಅಕ್ಷಯ ಪಾತ್ರ ಫೌಂಡೇಶನ್ ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ ಸಂಕಷ್ಟಕ್ಕೆ ಈಡಾಗಿರುವ ಜನರಿಗೆ ಅಗತ್ಯ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಪರಿಹಾರ ಕಾರ್ಯಾಚರಣೆ ಆರಂಭಿಸಿದೆ. ಕರ್ನಾಟಕ ಸರ್ಕಾರದ ನೆರವಿನಿಂದ ನಡೆಯುತ್ತಿರುವ ಈ ಕಾರ್ಯಾಚಾರಣೆಯ ಮೂಲಕ ಸಂತ್ರಸ್ತರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗುತ್ತಿದೆ.
- ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪೋಸ್ಟ್ ಕುರಿತು ಯೋಗೇಶ್ ಮಾಸ್ಟರ್ ಸ್ಪಷ್ಟೀಕರಣ
- ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗಾಗಿ ದೀರ್ಘಾವಧಿ ಯೋಜನೆ: ಕೃಷ್ಣ ಬೈರೇಗೌಡ
- ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
ಅಕ್ಷಯ ಫೌಂಡೇಶನ್ ಭೂಕುಸಿತ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ 1,000 ದಿನಸಿ ಕಿಟ್‌ಗಳನ್ನು ವಿತರಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ 9,000 ಕಿಟ್‌ಗಳನ್ನು ತಲುಪಿಸಲು ಸಿದ್ಧತೆ ನಡೆಸಿದೆ. ಈ ದಿನಸಿ ಕಿಟ್‌ನಲ್ಲಿ ಅಕ್ಕಿ, ಗೋಧಿ ಹಿಟ್ಟು, ಕಡಲೆಕಾಯಿ, ಅಡುಗೆ ಎಣ್ಣೆ, ಸಾಂಬಾರ್ ಪುಡಿ, ಅರಿಶಿನ ಪುಡಿ, ಸಕ್ಕರೆ, ಉಪ್ಪು, ಬಿಸ್ಕತ್ತುಗಳು ಮತ್ತು ಓಆರ್‌ಎಸ್ ಪ್ಯಾಕೆಟ್‌ಗಳಂತಹ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ. ಈ ಒಂದು ದಿನಸಿ ಕಿಟ್ ಪೌಷ್ಠಿಕಾಂಶ ಭರಿತ 42 ಊಟಗಳನ್ನು ಒದಗಿಸಲಿದೆ ಎಂದು ಅಂದಾಜಿಸಲಾಗಿದ್ದು, ಮೂರು ಜನ ಇರುವ ಒಂದು ಕುಟುಂಬವು ಕನಿಷ್ಠ ಒಂದು ವಾರ ಈ ದಿನಸಿ ಕಿಟ್ ಬಳಸಿಕೊಂಡು ಊಟ ಮಾಡಬಹುದಾಗಿದೆ. ಆಗಸ್ಟ್ 8ರ ಹೊತ್ತಿಗೆ 4000 ಕಿಟ್ ಗಳನ್ನು ವಿತರಣೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಆ ಮೂಲಕ ಒಟ್ಟು 168,000 ಊಟ ಒದಗಿಸುವ ವ್ಯವಸ್ಥೆ ಮಾಡಲಿದ್ದೇವೆ. ಆಗಸ್ಟ್ 12ರ ವೇಳೆಗೆ ಮತ್ತೆ 5000 ದಿನಸಿ ಕಿಟ್ ಗಳನ್ನು ವಿತರಿಸಲಿದ್ದೇವೆ. ಹಾಗೆ ಮತ್ತೆ 2,10,000 ಊಟಗಳನ್ನು ನೀಡುವ ಮೂಲಕ ಕಷ್ಟದಲ್ಲಿರುವವರ ಜೊತೆ ನಿಲ್ಲಲಿದ್ದೇವೆ. ಒಟ್ಟಾರೆಯಾಗಿ, ಅಕ್ಷಯ ಪಾತ್ರ ಫೌಂಡೇಶನ್ 10,000 ದಿನಸಿ ಕಿಟ್ ಗಳನ್ನು ವಿತರಿಸುವ ಮೂಲಕ ಒಟ್ಟು 5,00,000 (5 ಲಕ್ಷ) ಊಟ ಒದಗಿಸಿ ಸಂತ್ರಸ್ತರ ನೋವಿಗೆ ಹೆಗಲು ಕೊಡುವ ಕೆಲಸ ಮಾಡಲಿದೆ.
ಕಲ್ಪೆಟ್ಟಾದ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಫೌಂಡೇಶನ್ ನ ತಂಡ ಬೀಡು ಬಿಟ್ಟಿದ್ದು, ಎಲ್ಲಾ ಕಾರ್ಯಾಚರಣೆಗಳನ್ನು ಅಲ್ಲಿಂದಲೇ ನಡೆಸುತ್ತಿದೆ. ದಿನಸಿ ಕಿಟ್ ಗಳ ಸಾಗಣೆಯಿಂದ ಹಿಡಿದು ವಿತರಣೆವರೆಗಿನ ಕೆಲಸಗಳು ಸುಗಮವಾಗಿ ಆಗಲು ಫೌಂಡೇಶನ್ ನ ತಂಡ ಶ್ರಮ ವಹಿಸುತ್ತಿದೆ. ಜಿಲ್ಲಾಧಿಕಾರಿಗಳನ್ನು ಒಳಗೊಂಡು ಸ್ಥಳೀಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಿಜವಾದ ಫಲಾನುಭವಿಗಳಿಗೆ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಕಷ್ಟದಲ್ಲಿರುವವರಿಗೆ ನೆರವಾಗಲು ಬೇಯಿಸಿದ ಊಟವನ್ನು ನೀಡುವ ಕುರಿತಾಗಿ ಅಕ್ಷಯ ಪಾತ್ರ ಫೌಂಡೇಶನ್ ದಾರಿ ಹುಡುಕುತ್ತಿದೆ.
ಈ ಕುರಿತು ಮಾತನಾಡಿರುವ ಅಕ್ಷಯ ಪಾತ್ರ ಫೌಂಡೇಶನ್‌ನ ಉಪಾಧ್ಯಕ್ಷ ಶ್ರೀ ಚಂಚಲಪತಿ ದಾಸ ಅವರು, “ಕಷ್ಟದ ಸಮಯದಲ್ಲಿ ನೊಂದ ಕಣ್ಣೀರು ಒರೆಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಈ ಪ್ರಯತ್ನಕ್ಕೆ ರಾಜ್ಯ ಸರ್ಕಾರದ ಮಹತ್ವದ ನೆರವು ದೊರೆತಿದೆ. ದಾನಿಗಳು ಮನಪೂರ್ವಕವಾಗಿ ಮಾಡಿರುವ ದಾನ ಸಹಾಯ ಮಾಡಿದೆ. ನಾವು ತಕ್ಷಣದ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ. ಆ ಮೂಲಕ ಕಷ್ಟದಲ್ಲಿರುವವರಿಗೆ ಭರವಸೆ ತುಂಬಲಿದ್ದೇವೆ” ಎಂದು ಹೇಳಿದರು.
ಅಕ್ಷಯ ಪಾತ್ರ ಫೌಂಡೇಶನ್ ತನ್ನ ಅಡುಗೆ ಸೌಲಭ್ಯಗಳು ಮತ್ತು ರಾಷ್ಟ್ರೀಯ ಸ್ವಯಂಸೇವಕ ಜಾಲವನ್ನು ಬಳಸಿಕೊಂಡು ಕಷ್ಟದಲ್ಲಿರುವ ಜೀವಗಳಿಗೆ ನೆರವಾಗಲು ಸದಾ ಸಿದ್ಧವಾಗಿರುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಿಂದ ಸಂತ್ರಸ್ತರ ತುರ್ತು ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಪ್ರತಿಷ್ಠಾನ ಬದ್ಧವಾಗಿದೆ.




