ಜುಲೈ 24ರಂದು ಚಾಮರಾಜನಗರದಲ್ಲಿ ವಿಚಾರ ಸಂಕಿರಣ
ಚಾಮರಾಜನಗರ: ಕನ್ನಡದ ಅನುಭಾವ ಪರಂಪರೆಗೆ ಮಹತ್ವಪೂರ್ಣವಾದ ಇತಿಹಾಸವಿದೆ. ಪ್ರಾಚೀನ ಕನ್ನಡ ಕಾವ್ಯದಿಂದ ಆಧುನಿಕ ಕನ್ನಡ ಸಾಹಿತ್ಯದವರೆಗೂ ಕೂಡ ಅನುಭಾವ ಪರಂಪರೆಯ ದಟ್ಟ ಹೆಜ್ಜೆಗಳನ್ನು ಗುರುತಿಸಬಹುದು. ಬಸವಣ್ಣ, ಕನಕದಾಸ, ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ ಇವರುಗಳ ಚಿಂತನೆ ಮತ್ತು ಅನುಭಾವದ ಅಭಿವ್ಯಕ್ತಿ ಕನ್ನಡದ ಸಾರಸ್ವತ ಲೋಕದಲ್ಲಿ ಅತ್ಯಂತ ವಿಶಿಷ್ಟವಾದುದು. ಬಹುತ್ವದ ನೆಲೆಯಲ್ಲಿ ಸಮುದಾಯಗಳನ್ನು ಎಚ್ಚರಗೊಳಿಸುವ ಹಾಗೂ ಸಾಮಾಜಿಕ ಮುಂಚೂಣಿಗೆ ಕರೆತರುವಲ್ಲಿ ಈ ನಾಲ್ವರ ಪಾತ್ರ ಮಹತ್ವದ್ದು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಜನಸಾಮಾನ್ಯರೆಡೆಗೆ ವಿಶಿಷ್ಟ ನಡಿಗೆಯೊಂದಿಗೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ದಾಸ್ಯದಿಂದ ತಳಸಮುದಾಯಗಳನ್ನು ಬಿಡುಗಡೆಗೊಳಿಸಿ ವೈಚಾರಿಕ ಜಾಗೃತಿಯನ್ನುಂಟು ಮಾಡಿದ ಈ ಮಹನೀಯರು ತಮ್ಮ ಚಿಂತನೆಗಳ ಮುಖಾಂತರವೇ ಜನರಿಗೆ ಹತ್ತಿರವಾದವರು. ಮಧ್ಯಕಾಲೀನ ಕರ್ನಾಟಕದ ಸಂದರ್ಭದಲ್ಲಿ ಸಾಮಾನ್ಯರನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕರೆದುಕೊಂಡು ಬಂದ ಈ ನಾಲ್ವರು ಎದುರಿಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ತಲ್ಲಣಗಳು ಪಟ್ಟಭದ್ರ ಹಿತಾಸಕ್ತಿಗೆ ಸವಾಲಾಗಿ ನಿಂತು ಎದುರಿಸಿದ ಸಂಘರ್ಷಗಳು ಹಾಗೂ ಅವುಗಳೆಲ್ಲವನ್ನ ಮೀರಿ ಇವರು ಜನರನ್ನು ತಲುಪಿದ ಬಗೆ ಅನನ್ಯವಾದುದು.
ಮಧ್ಯಕಾಲೀನ ಕನ್ನಡ ಸಾಹಿತ್ಯ ಕಾಲದಲ್ಲಿ ಬಸವ, ಕನಕರು ಸಮಾಜ ಪರವಾದ ಸಾಹಿತ್ಯವನ್ನು ನಿರ್ಮಿಸಿದರು. ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿಯರು ಸಮಾಜಪರವಾದ ಕಾರ್ಯಗಳಿಂದ ಸ್ವತಃ ತಾವೇ ಸಾಹಿತ್ಯವಾದರು. ಇವರ ಸಾಮಾಜಿಕ ವಿವೇಕ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಅರ್ಥಯಿಸಿಕೊಳ್ಳಬೇಕಾದುದು ಅಗತ್ಯ. ಈ ನೆಲೆಯಲ್ಲಿ ಬಸವಣ್ಣ, ಕನಕದಾಸ, ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿಯರನ್ನು ತೌಲನಿಕವಾಗಿ ಅವಲೋಕಿಸುವುದು ನಮ್ಮ ಅಧ್ಯಯಯನ ಕೇಂದ್ರದ ಉದ್ದೇಶ. ಈ ಸಲುವಾಗಿ “ಅನುಭಾವ ಪರಂಪರೆ – ತಾತ್ವಿಕ ಜಿಜ್ಞಾಸೆ” ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಜುಲೈ 24ರಂದು ಜೆ.ಎಸ್.ಎಸ್ ಮಹಿಳಾ ಕಾಲೇಜು, ಚಾಮರಾಜನಗರ ಮತ್ತು ರಂಗವಾಹಿನಿ (ರಿ), ಚಾಮರಾಜನಗರ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದೆ.
ವಿದ್ಯಾರ್ಥಿಗಳು, ಶಿಕ್ಷಕರು, ವಿದ್ವಾಂಸರು, ಕಲಾವಿದರು ಮತ್ತು ಇತರ ಸಾಹಿತ್ಯಾಸಕ್ತರು ಭಾಗವಹಿಸುತ್ತಾರೆ. ಈ ಸಂಕಿರಣವನ್ನು ಜೆ.ಎಸ್.ಎಸ್ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ವಿಚಾರ ಸಂಕಿರಣದಲ್ಲಿ 1) ಮಧ್ಯಕಾಲೀನ ಕರ್ನಾಟಕದ ಅನುಭಾವ ಪರಂಪರೆ ವಿಷಯ ಕುರಿತು ಪ್ರೊ. ಮೊರಬದ ಮಲ್ಲಿಕಾರ್ಜುನ, 2) ಕನಕದಾಸ, ಬಸವಣ್ಣ ಮತ್ತು ಮಲೆಮಹದೇಶ್ವರ ಅವೈದಿಕ ಚಿಂತನೆ ವಿಷಯ ಕುರಿತು ಡಾ. ಉಷಾರಾಣಿ, 3) ಕನಕದಾಸ, ಬಸವಣ್ಣ, ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ – ಸಾಮಾಜಿಕ ಸಂಘರ್ಷ ವಿಷಯ ಕುರಿತು ಡಾ. ರಾಜಪ್ಪ ದಳವಾಯಿ, 4) ಕನಕದಾಸ, ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ – ಅನುಭಾವ ಚಿಂತನೆ ವಿಷಯ ಕುರಿತು ಡಾ. ಗಿರೀಶ್ ಕೆ.ಎನ್, 5) ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ – ಸಾಂಸ್ಕೃತಿಕ ನಾಯಕರು ವಿಷಯ ಕುರಿತು ಮಹದೇವ ಶಂಕನಪುರ, ಅವರು ವಿಷಯ ಮಂಡನೆ ಮಾಡಲಿದ್ದಾರೆ. ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ನೀಲಗಾರ ಕಲಾವಿದ ದೊಡ್ಡಗವಿ ಬಸಪ್ಪ ಮತ್ತು ತಂಡ, ಚಾಮರಾಜನಗರ ಇವರಿಂದ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಿಷಯ ಮಂಡನೆಯ ನಂತರ ಮುಕ್ತ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ. ದಿನಾಂಕ 24-07-2025 ರಂದು ಬೆಳಗ್ಗೆ 10.00 ಗಂಟೆಗೆ ಶಿಲ್ಪಾನಾಗ್ ಸಿ.ಟಿ, ಜಿಲ್ಲಾಧಿಕಾರಿಗಳು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸಂಸ್ಕೃತಿ ಚಿಂತಕ ಪ್ರೊ. ಜಿ.ಎಸ್ ಜಯದೇವ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ ತ ಚಿಕ್ಕಣ್ಣ ಕಾರ್ಯಕ್ರಮ ಕುರಿತು ಮಾತನಾಡಲಿದ್ದಾರೆ. ಜೆ.ಎಸ್.ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಎನ್ ಮಹದೇವಸ್ವಾಮಿ ಮತ್ತು ಆರ್ ನಂಜುಂಡಯ್ಯ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಾಮರಾಜನಗರ ಇವರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.




