ನಾನು ಆಗಷ್ಟೇ ಕಾಲೇಜು ಮೆಟ್ಟಿಲೇರಿದ್ದ ದಿನಗಳವು. ಆಗಲೇ ವಿದ್ಯಾರ್ಥಿ ಸಂಘಟನೆಯ ಕಣಕ್ಕೂ ಕಾಲಿಟ್ಟಿದ್ದೆ. ಆ ತನಕ ಕೆಲವಷ್ಟೇ ಪುಸ್ತಕಗಳನ್ನು ಹೊರತುಪಡಿಸಿದರೆ ಪಠ್ಯ ಪುಸ್ತಕಗಳನ್ನಷ್ಟೇ ಓದಿದ್ದ ನಾನು ಸಾಹಿತ್ಯ ಕೃತಿಗಳ ಓದಿಗೆ ತೆರೆದುಕೊಂಡಿದ್ದೆ. ಅಂತಹ ಓದಿಗೆ ಮೊದಲಿಗೆ ದಕ್ಕಿದ್ದು ಎ.ಕೆ.ಗೋಪಾಲನ್ ಅವರ ಆತ್ಮಕತೆ “ನನ್ನ ಜೀವನ ಕಥೆ” ಮತ್ತು ನಿರಂಜನರ ಕಾದಂಬರಿ ” ಚಿರಸ್ಮರಣೆ”. ನಂತರದ್ದು ಮ್ಯಾಕ್ಸಿಂಗಾರ್ಕಿಯ “ತಾಯಿ”.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಚಿರಸ್ಮರಣೆ ಮತ್ತು ನನ್ನ ಜೀವನ ಕಥೆಗಳಲ್ಲಿದ್ದ ಸಾಮ್ಯತೆ ಎಂದರೆ ಅವೆರಡೂ ಕೇರಳ ನಾಡಿನಲ್ಲಿ ಸಂಭವಿಸಿದವು ಹಾಗೂ ರೈತ ಸಂಗ್ರಾಮದ ದಟ್ಟ ಅನುಭವ ಜಗತ್ತನ್ನು ಕಾಣಿಸಿದವುಗಳು.
ಚಿರಸ್ಮರಣೆ, ಕಾಸರಗೋಡು ಪ್ರಾಂತ್ಯದಲ್ಲಿ ನಡೆದ ಐತಿಹಾಸಿಕ ಭೂ ಹೋರಾಟದ ವಾಸ್ತವ ಚಿತ್ರಣವನ್ನು ಸಶಕ್ತವಾಗಿ ಚಿತ್ರಿಸಿದ ಕಾದಂಬರಿ. ಈ ಕಾದಂಬರಿಯ ಪಾತ್ರಗಳಾದ ಅಪ್ಪು, ಚಿರಕುಂಡ, ಕುಞಂಬು ನಮ್ಮ ಸ್ಮೃತಿ ಜಗತ್ತಿನಲ್ಲಿ ಶಾಶ್ವತ ಸ್ಥಾನ ಗಳಿಸಿ ಬಿಟ್ಟವು. ಈ ನಾಲ್ವರು ಕ್ರಾಂತಿಕಾರಿಗಳು ನಮಗೆ ಭಗತ್ ಸಿಂಗನಷ್ಟೇ ಗೌರವ ಆದರ್ಶಗಳ ಮಾದರಿಗಳಾಗಿ ಮನಸ್ಸಿನಲ್ಲಿ ಉಳಿದವು.
ನಿರಂಜನರು ಭಾರತದ ಸಾಹಿತ್ಯ ಚರಿತ್ರೆಯಲ್ಲಿ ಗುರುತಿಸಲ್ಪಡುವ ಬಹು ಮಹತ್ವದ ಲೇಖಕ. ಅಂತೆಯೇ ಕರ್ನಾಟಕದ ಸಾಹಿತ್ಯಕ ವರ್ತಮಾನದ ಬಹುತೇಕ ಗಮನಿಸಬೇಕಾದಷ್ಟು ಗಮನಿಸಲ್ಪಡದೇ ಬದಿಗೆ ಸರಿಸಲ್ಪಟ್ಟ ಕಾದಂಬರಿಕಾರ. ಬಹುಃಶ ಅವರು ಒಂದು ರಾಜಕೀಯ ಸಿದ್ಧಾಂತದೊಂದಿಗೆ ಗುರುತಿಸಿಕೊಂಡಿದ್ದರು ಎಂಬುದು ಆ ರಾಜಕೀಯ ಸಿದ್ಧಾಂತದೊಂದಿಗೆ ಸಹಮತ ಹೊಂದಿರದಿದ್ದ ಲೇಖಕ ವಿಮರ್ಶಕರ ಸದ್ದಿಲ್ಲದ ಅವಗಣನೆಯ ಪರಿಣಾಮ ಇದಾಗಿರಬಹುದು. ಹಿನ್ನೆಲೆಯಲ್ಲಿ ಇದ್ದಿರಬಹುದಾದ ರಾಜಕೀಯ ತಾತ್ವಿಕತೆಯ ಜೊತೆಗೆ ಭಿನ್ನಮತವನ್ನು ಇಟ್ಟುಕೊಂಡೂ ನಿರಂಜನರ ಒಟ್ಟು ಬರವಣಿಗೆಯ ಮೌಲ್ಯ ಮತ್ತು ಚೆಲುವನ್ನು ಅಳೆಯಲಾಗದ್ದು ಕನ್ನಡ ವಿಮರ್ಶಾ ಜಗತ್ತಿನ ಮಿತಿಯೂ ಆಗಿರಬಹುದು.
ಚಿರಸ್ಮರಣೆ, ಮೃತ್ಯುಂಜಯ, ಸ್ವಾಮಿ ಅಪರಂಪಾರ, ಕಲ್ಯಾಣಸ್ವಾಮಿ ಈ ನಾಲ್ಕೂ ಕಾದಂಬರಿಗಳು ಐತಿಹಾಸಿಕ ವಿದ್ಯಮಾನಗಳನ್ನು ಸೃಜನಶೀಲವಾಗಿ ಚಿತ್ರಿಸಲ್ಪಟ್ಟ ಚಾರಿತ್ರಿಕ ಕಥನಗಳೇ ಆಗಿವೆ. “ಮೃತ್ಯುಂಜಯ”ದ್ದು ಸುಮಾರು ನಾಲ್ಕು ಸಾವಿರ ವರ್ಷಗಳಷ್ಟು ಹಿಂದೆ ಈಜಿಪ್ಟಿನಲ್ಲಿ ನಡೆದ ಪ್ರಭುತ್ವ ವಿರೋಧಿ ರೈತ ಬಂಡಾಯವನ್ನೂ, ಚಿರಸ್ಮರಣೆಯು 1940 ರ ದಶಕದಲ್ಲಿ ಕೇರಳದ ಕಯ್ಯೂರಿನಲ್ಲಿ ನಡೆದ ರೈತ ಸಂಗ್ರಾಮವನ್ನೂ, ಕಲ್ಯಾಣಸ್ವಾಮಿ ಮತ್ತು ಸ್ವಾಮಿ ಅಪರಂಪಾರ ಕಾದಂಬರಿಗಳು 1836 ರಿಂದ 1839 ರವರೆಗೆ ನಡೆದ ಸುಳ್ಯ ರೈತ ಹೋರಾಟವನ್ನೂ ಕಥಾವಸ್ತವನ್ನಾಗಿ ಹೊಂದಿವೆ. ಈ ಆಯ್ಕೆಯೇ ಈ ಸಾಹಿತಿಯ ಸಾಹಿತ್ಯಕ ಆಶಯ ಮತ್ತು ಬದ್ಧತೆಗಳನ್ನು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ ನಿರಂಜನರು ಸಾಹಿತ್ಯಕ ಚರಿತ್ರೆ ಮತ್ತು ಜನ ಚಳುವಳಿಗಳ ಚರಿತ್ರೆಗಳೆರಡೂ ಏಕಕಾಲದಲ್ಲಿ ಗಮನಿಸಬೇಕಾದ ಮತ್ತು ಇವೆರಡಕ್ಕೂ ಇರಬೇಕಾದ ಸಾವಯವ ಸಂಬಂಧದ ಚೆಲುವು ಶಕ್ತಿಗಳೆರಡನ್ನೂ ಪ್ರತಿಪಾದಿಸುತ್ತದೆ.
ನಿರಂಜನರು ಅತ್ಯುತ್ತಮ ಕಥೆಗಾರರೂ ಹೌದು. ಅವರು ಬರೆದದ್ದು ಒಂದು ಪಾಲಾದರೆ ಅವರು ” ವಿಶ್ವ ಕಥಾ ಕೋಶ” ವನ್ನು ಸಂಪಾದಿಸಿ ಕೊಟ್ಟಿದ್ದು ಮಿಕ್ಕಿದ ಪಾಲು. ಕನ್ನಡದ ಕಥಾಜಗತ್ತನ್ನು ಹೀಗೆ ಈ ಎರಡೂ ಕ್ರಮದಲ್ಲಿ ವಿಸ್ತರಿಸಿದ ನಿರಂಜನರನ್ನು ಕನ್ನಡದ ಕಥಾ ವರ್ತಮಾನ ಎಷ್ಟರ ಮಟ್ಟಿಗೆ ನೆನಪಿಗೆ ತಂದುಕೊಂಡಿದೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು.
ನಿರಂಜನರು ಪತ್ರಿಕಾರಂಗದಲ್ಲಿ ಮಾಡಿದ ವ್ಯವಸಾಯವೂ ಸಣ್ಣದೇನಲ್ಲ. ಆದರೆ ಈ ಹೊತ್ತಿನ ಮಾಧ್ಯಮೋಧ್ಯಮದ ಯಂತ್ರಬೇಸಾಯದ ದೈತ್ಯರೂಪದೆದಿರು ನಿರಂಜನರ ಪತ್ರಿಕಾ ಬರೆಹಗಳು ಬಡ ರೈತನೊಬ್ಬನ ತುಂಡು ಭೂಮಿಯ ಒಣಬೇಸಾಯದಂತೆ ಕಂಡರೆ ಅಚ್ಚರಿಯೇನಲ್ಲ.
ನಿರಂಜನರು ಪೂರ್ಣ ಪ್ರಮಾಣದ ಲೇಖಕರಾಗಿದ್ದರು ನಿಜ. ಆದರೆ ಬರೀ ಬರೆಯುವುದಷ್ಟೇ ಅವರ ಆದ್ಯತೆಯಾಗಿರಲಿಲ್ಲ. ಅವರು ತಮ್ಮ ಬರೆಯುವಿಕೆಯನ್ನು ಭಾರತದ ಜನವಿಮೋಚನಾ – ಕ್ರಾಂತಿ ಪ್ರಕ್ರಿಯೆಯ ಪೂರಕ ಕ್ರಿಯೆ ಎಂದೇ ಅರಿತವರಾಗಿದ್ದರು. ಅವರ ಬರೆಹಕ್ಕೆ ಅತ್ಯಂತ ಖಚಿತವಾದ ಆಶಯ ಮತ್ತು ಉದ್ದೇಶಗಳಿದ್ದವು. ಮನಸ್ಸನ್ನು ಚೇತೋಹಾರಿಗೊಳಿಸುವ ಕಲಾತ್ಮಕ ಆನಂದವನ್ನು ಸೃಷ್ಟಿಸುವ “ಪಾರ್ಲರ್” ಕೃತಿಗಳು ಅವಾಗಿರಲಿಲ್ಲ. ( ಕ್ಷಮಿಸಿ ಈ ವಾಕ್ಯ ಇಲ್ಲಿ ಬೇಕಾಗಿರಲಿಲ್ಲವಾದರೂ ಬರೆಯುವಾಗ ಹಾಗೆ ಬಂದದ್ದನ್ನು ಹಾಗೆಯೇ ಉಳಿಸಿಕೊಳ್ಳುತ್ತಿದ್ದೇನೆ.)
ನಿರಂಜನರು ಹುಟ್ಟಿ ಶತಮಾನ ಕಳೆಯಿತು. ಈ ನೆನಪಿನಲ್ಲಿ ಅವರನ್ನು ನೆನಪಿಸಿಕೊಳ್ಳುವ ಕೆಲಸ ಅಲ್ಲಲ್ಲಿ ಆಗುತ್ತಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಈ ನಿಟ್ಟಿನಲ್ಲಿ ತನ್ನ ಪಾತ್ರ ನಿರ್ವಹಿಸಿದೆ. ಮುಖ್ಯವಾಗಿ ಕರ್ನಾಟಕದ ರೈತ ವಿದ್ಯಾರ್ಥಿ ಚಳುವಳಿಗಳ ಕಾರ್ಯಕರ್ತರು ನಿರಂಜನರ ಬದುಕು ಬರೆಹವನ್ನು ಚರ್ಚಿಸುವ ಕೆಲಸವನ್ನು ವರ್ಷೊಪ್ಪತ್ತಿನಿಂದ ಮಾಡುತ್ತಲೇ ಇದ್ದಾರೆ. ಅಭಿನಂದನಾರ್ಹವೆಂದರೆ ಕರ್ನಾಟಕದ ಎಡಚಳುವಳಿ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವುದು. ಅಂತೆಯೇ ಅದರ ಭಾಗವಾಗಿಯೇ ನಿರಂಜನರ ಸಾಹಿತ್ಯ ಕೃತಿಗಳನ್ನು ಪರಿಚಯಿಸಲಿಕ್ಕೆಂದೇ ಎಚ್.ಆರ್.ನವೀನ್ ಕುಮಾರ್ ” ರೈತರಿಗಾಗಿ ನಿರಂಜನ” ಎಂಬ ಪುಸ್ತಕವೊಂದನ್ನು ರೂಪಿಸಿದ್ದಾರೆ. “ಕ್ರಿಯಾ ಮಾಧ್ಯಮ” ಇದನ್ನು ಪ್ರಕಟಿಸಿದೆ. ಈ ಇಬ್ಬರಿಗೂ ಕನ್ನಡ ಸಾಹಿತ್ಯ ಕ್ಷೇತ್ರದ ಅಭಿನಂದನೆಗಳು ಸಲ್ಲುತ್ತವೆ.
ಈ ಪುಸ್ತಕದ ಮೂಲಕ ನವೀನ್ ಕುಮಾರ್ ಅವರದು ಆಗಲೇಬೇಕಿದ್ದ, ಅಭಿನಂದನೀಯ ಪುಟ್ಟ ಪ್ರಯತ್ನವೇ ಸರಿ. ಈ ಮೂಲಕ ಇವರು ಮಾಡಬಹುದಾದ ಕೆಲಸಗಳನ್ನು ನೆನಪಿಸಿಕೊಟ್ಟಿದ್ದಾರೆ. ಈ ಪುಸ್ತಕವು ನಿರಂಜನರ ಬದುಕು ಬರೆಹಗಳನ್ನು ಇನ್ನಷ್ಟು ಆಳವಾಗಿ ವಿಸ್ತಾರವಾಗಿ ಅಧ್ಯಯನ ಮಾಡುವ ಸಂಶೋಧನೆ ಕೈಗೆತ್ತಿಕೊಳ್ಳುವಂತಹ ನಿಟ್ಟಿನಲ್ಲಿ ಪ್ರೇರೇಪಿಸುವಂತಾಗಲಿ ಎಂದಷ್ಟೇ ಆಶಿಸಬಹುದಾಗಿದೆ.
– ಬಿ. ಪೀರ್ ಬಾಷ




