ಇಂದಿಗೆ ಅಂಬೇಡ್ಕರ್ ಓದು ಸರಣಿ ಓದುಗರ ಸಂಖ್ಯೆ 400 ಕ್ಕೆ ತಲುಪಿದೆ..
________________
ಪ್ರಿಯರೆ,
ಇಂದಿಗೆ ಅಂಬೇಡ್ಕರ್ ಓದುಸರಣಿಯಲ್ಲಿ ಸಹಭಾಗಿಗಳಾದವರ ಸಂಖ್ಯೆ 400 ಜನರನ್ನು ಮುಟ್ಟಿದೆ. ನಾನು ನೆಪಮಾತ್ರ..ಇದು ಸಹಭಾಗಿತ್ವದ ಪಯಣ. ಕೆಲವರು ಆಸಕ್ತಿಯಿಂದ 2-3 ಬಾರಿ ಮತ್ತು ಅದಕ್ಕಿಂತ ಹೆಚ್ಚು ಓದಿರುವುದಿದೆ ಹಾಗಾಗಿ ಒಟ್ಟು ಸಂಚಿಕೆ ಇಂದಿಗೆ 596 ತಲುಪಿದೆ. ಇಲ್ಲಿ ಓದಿದವರಲ್ಲಿ ರೈತರಿಂದಿಡಿದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯನವರವರೆಗೂ ವೈವಿಧ್ಯಮಯ ಜನರಿದ್ದಾರೆ. ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಓದಿದ್ದಾರೆ. ಬಹುಸಂಖ್ಯಾತರು ಅಂಬೇಡ್ಕರ್ ಬರಹವನ್ನು ಮೊದಲ ಬಾರಿಗೆ ಓದಿದ್ದಾರೆ. ಅಥವಾ ಬಾಬಾಸಾಹೇಬರ ಅರಿವಿನ ಲೋಕವನ್ನು ಮುಟ್ಟಿದ್ದಾರೆ.
ಈ ಸರಣಿಯಲ್ಲಿ ಸ್ಪಷ್ಟವಾದ ಉಚ್ಚಾರ ಮತ್ತು ಚೆನ್ನಾಗಿ ಓದು ಬಲ್ಲವರನ್ನು ಮಾತ್ರ ಓದಿಸಿಲ್ಲ, ಇಂತಹ ಓದಿಗೆ ತೆರೆದುಕೊಳ್ಳದ ಅನೇಕರನ್ನು ಮತ್ತೆ ಮತ್ತೆ ಓದಿಸಿ ಈ ಓದಿಗೆ ಅಣಿಗೊಳಿಸಲಾಗಿದೆ.
ಹಾಗಾಗಿ ಕೆಲವು ಓದುಗಳಲ್ಲಿ ಮಿತಿಗಳಿವೆ. ಈ ಕಾರಣಕ್ಕೆ ಈ ಸಹಭಾಗಿತ್ವ ಡೆಮಾಕ್ರಟಿಕ್ ಆಗಿದೆ. ಕೆಲವರು ಓದಿಗೆ ಆಸಕ್ತಿ ತೋರಿದವರನ್ನು ಅಕಸ್ಮಾತ್ ಫಾಲೋಅಪ್ ಮಾಡದೆ ಇರಬಹುದು. ಅದು ನನ್ನ ಇತರೆ ಕೆಲಸದ ಒತ್ತಡದ ನಡುವಿನ ಮರೆವೇ ಹೊರತು ನಿರ್ಲಕ್ಷ್ಯವಲ್ಲ.

ಗೆಳೆಯರೊಬ್ಬರು ಹಾಸ್ಯಕ್ಕೆ ನಿನಗೇನು ಅಂಬೇಡ್ಕರ್ ಹುಚ್ಚು ಹಿಡಿದಿದೆಯೇನು? ಎಂದು ಕಿಚಾಯಿಸಿದ್ದರು, ನಾನು ‘ಹೌದು ಇದೊಂತರ ಹುಚ್ಚೇ..ಯಾವುದರ ಬಗ್ಗೆಯಾದರೂ ಹುಚ್ಚು ಹಿಡಿಯದೆ ಘನವಾದದ್ದನ್ನು ಮಾಡೋಕಾಗಲ್ಲ..’ಅಂದಿದ್ದೆ. ದಿನ ಸಾವಿಗೆ ಅಳೋರ್ಯಾರು ಎನ್ನುವಂತೆ ದಿನಾ ಅಂಬೇಡ್ಕರ್ ಓದು ಕಳಿಸಿದರೆ ಕೇಳೋಕಾಗುತ್ತಾ? ಎನ್ನುವುದು ಕೆಲವರ ಅಭಿಪ್ರಾಯ ಇರಬಹುದು. ಅದು ನಿಜ ಕೂಡ. ಆದರೆ ಕನಿಷ್ಟ ಕಳಿಸಿದ ವಿಷಯ ನೋಡಿಯೂ ಅಂಬೇಡ್ಕರ್ ಅರಿವಿನ ವೈವಿಧ್ಯತೆಯ ಪರಿಚಯವಾಗುತ್ತದೆ. ನಿಮ್ಮ ಕುತೂಹಲ ಕೆರಳಿಸಿದ ಆಯ್ದ ಓದುಗಳನ್ನಾದರೂ ಕೇಳುತ್ತೀರಿ ಎಂದು ನನಗೆ ವಿಶ್ವಾಸವಿದೆ. ಅಷ್ಟಕ್ಕೂ ಆ ದಿನವೇ ಕೇಳಬೇಕಂತಿಲ್ಲ. ಆಯಾ ದಿನದ ಓದು ಖಾಯಂ ಆಗಿ ಯೂಟೂಬಲ್ಲಿ ಉಳಿವ ಕಾರಣಕ್ಕೆ ಯಾವಾಗಲಾದರೂ ಕೇಳಿಸಿಕೊಳ್ಳಬಹುದು. ಹಾಗಾಗಿ ವಾಟ್ಸಪ್ ಲ್ಲಿ ದಿನಾಲು ಕಳಿಸುವುದು ಕಿರಿಕಿರಿಯಾದರೆ ಸಹಿಸಿಕೊಳ್ಳಿ.
ಈತನಕ ನನ್ನ ಮನವಿಯನ್ನು ಮನ್ನಿಸಿ ಓದಿನಲ್ಲಿ ಸಹಭಾಗಿಗಳಾದ ಎಲ್ಲರಿಗೂ ಜೈಭೀಮ್ ನಮನಗಳು.
ಸರಣಿಯನ್ನು ಕನಿಷ್ಟ 1000 ಕ್ಕೆ ಮುಟ್ಟಿಸಬೇಕು. ಇಡೀ ಇಂಡಿಯಾದಲ್ಲಿ ಪ್ರಾದೇಶಿಕ ಭಾಷೆಯೊಂದರಲ್ಲಿ ಅಂಬೇಡ್ಕರ್ ಅರಿವಿನ ಬಹುದೊಡ್ಡ ಆಡಿಯೋ ಆರ್ಖೈವ್ ‘ಕನ್ನಡ’ ದಲ್ಲಿದೆ ಎನ್ನುವುದು ದಾಖಲಾಗಬೇಕು, ಇಂಥಹದ್ದೊಂದು ಅಂಬೇಡ್ಕರ್ ಅರಿವನ್ನು ವಿಸ್ತರಿಸುವ ಡಿಜಿಟಲ್ ಮಾದರಿಯನ್ನು ದೇಶದ ಇತರೆ ಭಾಷಿಕರಿಗೆ ಪರಿಚಯಿಸಬೇಕು ಎನ್ನುವ ಕನಸಿದೆ.ಈ ಕನಸಿಗೆ ನಿಮ್ಮೆಲ್ಲರ ಸಹಭಾಗಿತ್ವವೇ ಶಕ್ತಿ.
ಬಾಬಾ ಸಾಹೇಬರ ಅರಿವಿನ ಸಹಭಾಗಿತ್ವದ ಈ ಪಯಣ ಮುಂದುವರಿಯುತ್ತದೆ, ನೀವು ಜೊತೆಗಿರುತ್ತೀರಿ ಎನ್ನುವ ಭೀಮ ಬಲ ನನಗಿದೆ.
ಎದೆಗೆ ಬಿದ್ದ ಅಂಬೇಡ್ಕರ್ ಅರಿವಿನ ಅಕ್ಷರ ಇಂದಲ್ಲಾ ನಾಳೆ ಮೊಳೆಯುತ್ತದೆ ಎನ್ನುವ ದೃಢ ವಿಶ್ವಾಸವಿದೆ.
#ಜೈಭೀಮ್
– ಅರುಣ್ ಜೋಳದಕೂಡ್ಲಿಗಿ, ಸಾಮಾಜಿಕ ಹೋರಾಟಗಾರರು




