ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ

8 hours ago

ನಕಲಿ ಔಷಧಿ ತಯಾರಕರು ಮತ್ತು ಮಾರಾಟಗಾರರನ್ನು ದೇಶದ್ರೋಹಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಿ

ಲಕ್ಷಾಂತರ ಜನರ ಬದುಕಿನೊಂದಿಗೆ ತಮ್ಮ ಹಣದ ದಾಹವನ್ನ ತೀರಿಸಿಕೊಳ್ಳುತ್ತಿರುವ ನಕಲಿ ಔಷಧಿ ತಯಾರಕರು ಮತ್ತು ಮಾರಾಟಗಾರರನ್ನು ದೇಶದ್ರೋಹಿ ಕಾನೂನಿನ ಅಡಿಯಲ್ಲಿ ಬಂಧಿಸಿ ಶಿಕ್ಷಿಸಬೇಕು. ಇವರು ಮಾಡಿರುವ ಹೀನ ಕೃತ್ಯದಿಂದ ಲಕ್ಷಾಂತರ ರೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಜನರ ಜೀವಗಳ ಜೊತೆಯಲ್ಲಿ ತಮ್ಮ ಸ್ವಾರ್ಥಕ್ಕಾಗಿ ಮೋಸದ ವ್ಯಾಪಾರವನ್ನು ಮಾಡಿರುವ ಇವರ ಅಪರಾಧ ಅಂತಿಂತಹ ಅಪರಾಧವಲ್ಲ. ನಿಜಕ್ಕೂ ಇವರಿಗೆ ಕಠಿಣ ಶಿಕ್ಷೆಗಳಾಗಬೇಕು.

ಹಲವಾರು ಆಸ್ಪತ್ರೆಗಳಲ್ಲಿ ಇರುವ ಮೆಡಿಕಲ್ ಸ್ಟೋರ್ ಗಳಲ್ಲಿ ಪೈಪೋಟಿಯ ಮೇಲೆ 40 ರಿಂದ ಶೇಕಡ 60ರಷ್ಟು ರಿಯಾಯಿತಿಯನ್ನು ಕೊಡುತ್ತಾರೆ. ಇದನ್ನು ಗಮನಿಸಿದರೆ ಇದು ಪಟಾಕಿ ವ್ಯಾಪಾರಕ್ಕಿಂತ ದೊಡ್ಡದಾದಂತಹ ಮೋಸದ ವ್ಯಾಪಾರವಾಗಿದೆ.

ನಕಲಿ ಔಷಧಿ ತಯಾರಿಸಿ ಮಾರಾಟ ಮಾಡಿರುವ ವ್ಯಕ್ತಿಗಳು ಇಂತಹ ದಂಧೆಯನ್ನು ಹಲವಾರು ವರ್ಷಗಳಿಂದ ಈ ಮೊದಲೇ ಮಾಡಿಕೊಂಡು ಬಂದಿದ್ದಾರೆ. ಈಗಲಾದರೂ ಇವರ ಪಾಪ ಕೃತ್ಯಗಳು ಬಯಲಾಗುತ್ತಿವೆ. ಇದರ ಹಿಂದೆ ದೇಶದಲ್ಲಿ ಅನೇಕ ರಾಜ್ಯಗಳ ಪ್ರಮುಖರ ಕೈವಾಡವಿದೆ.

ಉತ್ತರ ಭಾರತದಲ್ಲಿ ಇಂತಹ ನಕಲಿ ಔಷಧಿಗಳ ತಯಾರಿಕೆಯ ಕೇಂದ್ರಗಳು ಹೆಚ್ಚಾಗಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ವಿಚಾರವನ್ನು ರಾಷ್ಟ್ರಮಟ್ಟದಲ್ಲಿಯೇ ತನಿಖೆ ಮಾಡುವ ರೀತಿಯಲ್ಲಿ ವಿಸ್ತರಿಸಬೇಕು. ಕೇವಲ ಕರ್ನಾಟಕದಲ್ಲಿ ನಕಲಿ ಔಷಧಿಯ ತಯಾರಕರು ಮತ್ತು ಮಾರಾಟಗಾರರನ್ನು ಗುರುತಿಸಿ ಬಂಧಿಸಿದರೆ ಸಾಲದು. ಇದರ ಹಿಂದೆ ದೊಡ್ಡ ದೊಡ್ಡ ಉದ್ಯಮಿಗಳು ಇರುವುದು ಸಾಧ್ಯತೆಗಳಿರುತ್ತದೆ.

ಈಗಾಗಲೇ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಅವರು ವಿಧಿಸುವ ಶುಲ್ಕಗಳು, ಅವರು ಚಿಕಿತ್ಸೆಗೆ ಹೇಳುವ ದರಗಳು ಎಲ್ಲವೂ ದುಬಾರಿಯಾಗಿದೆ. ಇಷ್ಟೊಂದು ದುಬಾರಿ ಹಣವನ್ನು ಪಾವತಿಸಿಯೂ ಸಹ ಹಲವಾರು ರೋಗಿಗಳು ಉಳಿಯುತ್ತಿಲ್ಲ, ಉಳಿದರು ರೋಗಗಳು ವಾಸಿಯಾಗಿಲ್ಲ, ಕಾರಣ ನಕಲಿ ಔಷಧಿಗಳು ಅವರ ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಇಲ್ಲವೇ ಯಾವುದೇ ಪರಿಣಾಮವನ್ನು ಮಾಡಿರುವುದಿಲ್ಲ .

ಒಂದು ಕಡೆಯಲ್ಲಿ ನಕಲಿ ಔಷಧಿಗಳ ತಯಾರಕರು ಮತ್ತೊಂದು ಕಡೆಯಲ್ಲಿ ನಕಲಿ ಆಹಾರ ಪದಾರ್ಥಗಳ ತಯಾರಕರು ಹೆಚ್ಚಾಗುತ್ತಿದ್ದಾರೆ. ಆಹಾರ ಪದಾರ್ಥಗಳನ್ನ ತಯಾರಿಸಲು ಕಳೆಪೆ ಗುಣಮಟ್ಟದ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿರುವ ಸಂಗತಿಗಳು ಹೆಚ್ಚಾಗಿದೆ.

ಒಟ್ಟಾರೆಯಾಗಿ ಜನರ ಜೀವನದ ಜೊತೆಗೆ, ಜನರ ಜೀವಗಳೊಂದಿಗೆ ತಮ್ಮ ಸ್ವಾರ್ಥಗಳಿಗಾಗಿ ಆಟವಾಡುತ್ತಿರುವ ಇಂತಹ ಜನರಿಗೆ ದೇಶದ್ರೋಹದ ಕಾಯ್ದೆಯ ಅಡಿಯಲ್ಲಿ ಶಿಕ್ಷೆಯನ್ನ ನೀಡಿದಾಗ ಮಾತ್ರವೇ ಭಯ ಬರುತ್ತದೆ. ಇಲ್ಲದಿದ್ದರೆ ಸುಲಭವಾಗಿ ಜಾಮೀನು ಪಡೆದುಕೊಂಡು ಮತ್ತೆ ಇಂತಹ ದಂಧೆಗಳನ್ನು ಬೇರೆಬೇರೆ ಸ್ವರೂಪದಲ್ಲಿ ಮಾಡುತ್ತಾರೆ.

ದೇಶದ್ರೋಹದ ವಿಚಾರದಲ್ಲಿ ನಾವು ಕೇವಲ ಕೆಲವು ಭಾವನಾತ್ಮಕವಾದ ಸಂಗತಿಗಳನ್ನು ಮಾತ್ರವೇ ಹೆಚ್ಚಿನ ರೀತಿಯಲ್ಲಿ ಪರಿಗಣಿಸುತ್ತೇವೆ ಮತ್ತು ಪ್ರಚಾರ ನೀಡುತ್ತೇವೆ. ಆದರೆ ನಕಲಿ ಔಷಧಿ ನಕಲಿ ಆಹಾರ ಪದಾರ್ಥಗಳು, ದುಬಾರಿ ಶುಲ್ಕದ ಆಸ್ಪತ್ರೆ, ಕೋಚಿಂಗ್ ಸೆಂಟರ್ ಹೆಸರಿನಲ್ಲಿ ನಡೆಯುವಂತಹ ಶಿಕ್ಷಣ ಇಲಾಖೆಯ ಅನೇಕ ಅವ್ಯವಹಾರಗಳು ಸಹ ದೇಶದ್ರೋಹದ ಕೃತ್ಯವೇ ಆಗಿರುತ್ತದೆ. ಇವರನ್ನು ಸಹ ಕಠಿಣವಾಗಿ ಶಿಕ್ಷಿಸಬೇಕಾಗಿದೆ. ಇಲ್ಲದಿದ್ದರೆ ಸಮಾಜದಲ್ಲಿ ಜನರು ನೆಮ್ಮದಿಯಿಂದ ವಿಶ್ವಾಸದಿಂದ ಬದುಕಲು ಸಾಧ್ಯವೇ ಆಗುವುದಿಲ್ಲ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply