ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!

4 hours ago

ರಜನಿಕಾಂತ್, ಸೂರ್ಯ ಸಿನಿಮಾಗಳಿಗೆ ಗೌರವ

ಚೆನ್ನೈ: ತಮಿಳು ಚಿತ್ರರಂಗದ ಜನಪ್ರಿಯ ನಟ ಹಾಗೂ ನಿರ್ದೇಶಕ ಧನುಷ್ ತಮ್ಮ ಬಹುನಿರೀಕ್ಷಿತ ನೂತನ ಚಿತ್ರ ‘OM’ ಬಿಡುಗಡೆಯನ್ನು ಮುಂದೂಡುವುದಾಗಿ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಟ ಸೂರ್ಯ ಅವರ ಸಿನಿಮಾಗಳಿಗೆ ಗೌರವ ನೀಡಿ ಮತ್ತು ಚಿತ್ರರಂಗದ ಹಿತದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ರಜನಿಕಾಂತ್ ಮೇಲಿನ ಅಪಾರ ಗೌರವ: ತಮ್ಮ ಪತ್ರದಲ್ಲಿ ಈ ಬಗ್ಗೆ ವಿವರವಾಗಿ ಬರೆದುಕೊಂಡಿರುವ ಧನುಷ್, “ಇಂತಹ ಸಂದರ್ಭದಲ್ಲಿ ಚಿತ್ರದ ಬಿಡುಗಡೆಯನ್ನು ಮುಂದೂಡುವುದು ತನ್ನದೇ ಆದ ಸವಾಲುಗಳನ್ನು ತಂದೊಡ್ಡುತ್ತದೆ. ಆದರೂ, ನಾವೆಲ್ಲರೂ ಆರಾಧಿಸುವ ನಮ್ಮ ಸೂಪರ್‌ಸ್ಟಾರ್ ರಜನಿಕಾಂತ್ ಸರ್ ಅವರ ಚಿತ್ರ ಅಕ್ಟೋಬರ್ 15 ರಂದು ತೆರೆಕಾಣುತ್ತಿದೆ; ಅಂದರೆ ನಮ್ಮ ಚಿತ್ರ ನಿಗದಿಯಾಗಿದ್ದ ದಿನಕ್ಕಿಂತ ಕೇವಲ ಒಂದು ದಿನ ಮೊದಲು! ಅವರ ಮೇಲಿರುವ ಅಪಾರವಾದ ಗೌರವದಿಂದಾಗಿ, ನಾವು ‘OM’ ಚಿತ್ರದ ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿದ್ದೇವೆ”ಎಂದು ಘೋಷಿಸಿದ್ದಾರೆ.

ದೀಪಾವಳಿ ರೇಸ್‌ನಿಂದಲೂ ಹಿಂದೆ ಸರಿದ ಚಿತ್ರತಂಡ: ಅಕ್ಟೋಬರ್‌ನಿಂದ ಹಿಂದೆ ಸರಿದ ಮೇಲೆ ದೀಪಾವಳಿ ಹಬ್ಬಕ್ಕೆ ಸಿನಿಮಾ ಬರಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೆ ದೀಪಾವಳಿಗೂ ಸಿನಿಮಾ ಬಿಡುಗಡೆಯಾಗುವುದಿಲ್ಲ ಎಂದು ಧನುಷ್ ಸ್ಪಷ್ಟಪಡಿಸಿದ್ದಾರೆ.

“ದೀಪಾವಳಿ ಹಬ್ಬಕ್ಕೆ ನಟ ಸೂರ್ಯ ಸರ್ ಅವರ ಸಿನಿಮಾ ಮೊದಲೇ ದಿನಾಂಕ ಘೋಷಿಸಿಕೊಂಡಿದೆ. ನ್ಯಾಯಯುತವಾಗಿ ಹೇಳಬೇಕೆಂದರೆ, ಅವರು ಮೊದಲು ದಿನಾಂಕ ಪ್ರಕಟಿಸಿದ್ದರು. ಚಿತ್ರರಂಗ ಮತ್ತು ಸಿನಿಮಾದ ವಿಶಾಲ ಹಿತದೃಷ್ಟಿಯಿಂದ ದೊಡ್ಡ ಸಿನಿಮಾಗಳ ನಡುವೆ ಪರಸ್ಪರ ತಿಳುವಳಿಕೆ ಮತ್ತು ಗೌರವ ಇರಬೇಕು ಎಂದು ನಾವು ಬಲವಾಗಿ ನಂಬುತ್ತೇವೆ” ಎಂದು ಧನುಷ್ ಹೇಳಿದ್ದಾರೆ.

ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ: ಚಿತ್ರರಂಗದ ಆರೋಗ್ಯಕರ ಬೆಳವಣಿಗೆಗೆ ಮಾದರಿಯಾಗುವಂತಹ ಈ ನಿಲುವನ್ನು ಪ್ರಕಟಿಸಿರುವ ಧನುಷ್, ‘OM’ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸುವುದಾಗಿ ತಿಳಿಸಿ, ‘ಓಂ ನಮಃ ಶಿವಾಯ’ಎಂದು ಪತ್ರವನ್ನು ಮುಕ್ತಾಯಗೊಳಿಸಿದ್ದಾರೆ.

ಹಿರಿಯ ಮತ್ತು ಸಹ ಕಲಾವಿದರ ಚಿತ್ರಗಳಿಗೆ ಜಾಗ ಮಾಡಿಕೊಟ್ಟು, ಆರೋಗ್ಯಕರ ಪೈಪೋಟಿಗೆ ಕೈಜೋಡಿಸಿದ ಧನುಷ್ ಅವರ ಈ ನಡೆಯನ್ನು ಚಿತ್ರರಂಗ ಹಾಗೂ ಸಿನಿಪ್ರಿಯರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

Leave a Reply