ಬೆಂಗಳೂರು: ಅತ್ಯಂತ ಪ್ರತಿಷ್ಟಿತ ಚಲನಚಿತ್ರೋತ್ಸವವಾದ ಇನ್ನೋವೇಟಿವ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ 2022ರ 5ನೇ ಆವೃತ್ತಿಯನ್ನು ಇಂದು ಉದ್ಘಾಟನೆಯಾಯಿತು. ಇದರೊಂದಿಗೆ ನಾಲ್ಕು ದಿನಗಳ ಚಲನಚಿತ್ರೋತ್ಸವ ಆರಂಭವಾಗಿದ್ದು, ಇದರಲ್ಲಿ 40 ಪ್ರತ್ಯೇಕ ದೇಶಗಳಿಂದ ಆಯ್ದ 150 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಇವುಗಳಲ್ಲಿ 30 ಬೇರೆ ಬೇರೆ ಭಾಷೆಗಳ ವೈವಿಧ್ಯಪೂರ್ಣ ಪ್ರಕಾರಗಳ ಚಲನಚಿತ್ರಗಳು ಸೇರಿವೆ.
ಮಾರತ್‌ಹಳ್ಳಿಯ ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ನಲ್ಲಿ ರೆಡ್ ಕಾರ್ಪೆಟ್ ಕಾರ್ಯಕ್ರಮದೊಂದಿಗೆ ಈ ಉತ್ಸವ ಆರಂಭವಾಗಿದೆ. ಈ ಸಂದರ್ಭದಲ್ಲಿ ಅಬುದಾಬಿ, ಇಸ್ರೇಲ್, ಕೆನಡಾ ಮತ್ತು ಫ್ರಾನ್ಸ್ ದೇಶಗಳ ನಿಯೋಗಿಗಳು ಹಾಜರಿದ್ದರು. ನೂರಾರು ಆಕಾಂಕ್ಷಿತ ಚಲನಚಿತ್ರ ತಯಾರಕರು ಮತ್ತು ವಿದ್ಯಾರ್ಥಿಗಳಿಗೆ ಅವಕಾಶ ನೀಡುವ ಹಾಗೂ ಟಿಎಎನ್‌ಟಿಐಎಸ್-ತಮಿಳುನಾಡು ಚಲನಚಿತ್ರ ನಿರ್ದೇಶಕರ ಸಂಘದ ಸಹಯೋಗದೊಂದಿಗೆ ಐಎಫ್‌ಎ ನಡೆಸುತ್ತಿರುವ ಕಿರುಚಿತ್ರ ಸ್ಪರ್ಧೆ ಈ ಕಾರ್ಯಕ್ರಮದ ಪ್ರಮುಖ ಅಂಶವಾಗಿದೆ.
ಈ ಸ್ಪರ್ಧೆಗೆ 600ಕ್ಕೂ ಹೆಚ್ಚಿನ ಕಿರು ಚಿತ್ರಗಳ ಪ್ರವೇಶಗಳನ್ನು ಸ್ವೀಕರಿಸಲಾಗಿದೆ. ತೀರ್ಪುಗಾರರ ಸಮಿತಿಯು 50 ಚಲನಚಿತ್ರಗಳ ಅಂತಿಮಪಟ್ಟಿ ಮಾಡಿದ್ದು, ಇವುಗಳನ್ನು ಟಿಎಎನ್‌ಟಿಐಎಸ್ ನಿರ್ದೇಶಕರ ಮಾರ್ಗದರ್ಶನ ಮತ್ತು ಸೂಚನೆಗಳ ಅಡಿಯಲ್ಲಿ ಪುನರ್ ಸೃಷ್ಟಿಸಲಾಗಿದೆ. ಉತ್ಸವಕ್ಕಾಗಿ ನೋಂದಣಿ ಮಾಡಿಕೊಂಡಿರುವ 40,000ಕ್ಕೂ ಹೆಚ್ಚಿನ ಚಲನಚಿತ್ರ ವೀಕ್ಷಕರು, ವಿದೇಶಿಯರು, ಚಲನಚಿತ್ರ ತಯಾರಕರು ಮತ್ತು ಉತ್ಸವಕ್ಕಾಗಿ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಪ್ರದರ್ಶನ ನೀಡುವ ಭಾಗ್ಯವನ್ನು ಈ ಚಿತ್ರಗಳು ಹೊಂದಿವೆ. ಈ ಚಿತ್ರಗಳನ್ನು ಇನ್ನೋವೇಟಿವ್‌ನ ಐ-ಸ್ಟುಡಿಯೋದಲ್ಲಿ ಮರುಸೃಷ್ಟಿಸಲಾಗಿದೆ. ನಾಲ್ಕನೇ ದಿನ ಪ್ರಶಸ್ತಿಗಳ ಪ್ರಕಟಣೆಯೊಂದಿಗೆ ಈ ಉತ್ಸವ ಮುಕ್ತಾಯವಾಗಲಿದೆ.
ಅಂತಾರಾಷ್ಟ್ರೀಯ ಮತ್ತು ದಕ್ಷಿಣ ಭಾರತದ ಚಲನಚಿತ್ರ ಸಮುದಾಯಗಳಿಗೆ ಪರಸ್ಪರ ಜಾಲ ಸೃಷ್ಟಿಸಿಕೊಳ್ಳಲು ಅನನ್ಯತೆಯುಳ್ಳ ಮತ್ತು ಭರವಸೆಯ ಉತ್ಸವ ಇದಾಗಿದೆ. ಈ ಸಮುದಾಯದಲ್ಲಿ ಮುಂಚೂಣಿಯ ನಿರ್ಮಾಪಕರು, ನಿರ್ದೇಶಕರು, ಛಾಯಾಗ್ರಾಹಕರು, ತಂತ್ರಜ್ಞರು, ಶೈಕ್ಷಣಿಕ ತಜ್ಞರು, ವಿದ್ಯಾರ್ಥಿಗಳು, ಅಂತಾರಾಷ್ಟ್ರೀಯವಾಗಿ ಭಾಗವಹಿಸುವವರು, ರಾಯಭಾರಿಗಳು, ಕಾನ್ಸೂಲ್ ಜನರಲ್‌ಗಳು, ಮಾರಾಟ ಮತ್ತು ಚಲನಚಿತ್ರ ಆಯುಕ್ತರು ಮುಂತಾದವರು ಭಾಗವಹಿಸಲಿದ್ದಾರೆ.
ಅನೇಕ ಭಾರತೀಯ ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳ ನಡುವೆ ಹಲವಾರು ಸಹ ನಿರ್ಮಾಣ, ಸಹಭಾಗಿತ್ವ ಒಪ್ಪಂದಗಳಿಗೆ ಸಹಿ ಹಾಕಲು ಈ ಕಾರ್ಯಕ್ರಮ ಪ್ರೋತ್ಸಾಹ ನೀಡಲಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಸೇರಿದಂತೆ ಎಲ್ಲಾ ನಾಲ್ಕು ರಾಜ್ಯಗಳ ಚಲನಚಿತ್ರ ಉದ್ಯಮದ ಪ್ರಮುಖರು ಅಲ್ಲದೆ, ಎವಿಜಿಸಿ ಕ್ಷೇತ್ರದ ಮುಂಚೂಣಿಯ ವ್ಯಕ್ತಿಗಳೊಂದಿಗೆ ಅಧಿವೇಶನಗಳು ನಡೆಯಲಿವೆ.
ಚಲನಚಿತ್ರಗಳ ಪ್ರದರ್ಶನಗಳ ಜೊತೆಗೆ ಭಾರತದ ಮೊದಲ ವರ್ಚುವಲ್ ಪೊಡಕ್ಷನ್ ಸ್ಟುಡಿಯೋ, ಇಸಿಎಸ್‌ಸಿ(ಎಂಟರ್‌ಟೈನ್‌ಮೆಂಟ್-ಕಲ್ಚರ್-ಸ್ಪೋರ್ಟ್ ಅಂಡ್ ವೆಲ್‌ನೆಸ್ ಸೆಂಟರ್ಸ್)ಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜೊತೆಗೆ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಗಣ್ಯ ಪ್ರತಿನಿಧಿಗಳಿಂದ ಆಕಾಂಕ್ಷಿತ ಚಲನಚಿತ್ರ ತಯಾರಿಕರಿಗೆ ಚಲನಚಿತ್ರ ತಯಾರಿಕೆ ಕಲೆಯ ಮಾರ್ಗದರ್ಶನ ನೀಡುವುದು ಇದರ ಉದ್ದೇಶವಾಗಿತ್ತು.




