ಸಂಸತ್ತಿನ ಮತ್ತು ಅದರ ಸದಸ್ಯರ ಅಧಿಕಾರಗಳು, ವಿಶೇಷಾಧಿಕಾರಗಳು ಮತ್ತು ಉನ್ಮುಕ್ತಿಗಳು

8 months ago

ಸಂಸತ್ತಿನ ಮತ್ತು ಅದರ ಸದಸ್ಯರ ಅಧಿಕಾರಗಳು, ವಿಶೇಷಾಧಿಕಾರಗಳು ಮತ್ತು ಉನ್ಮುಕ್ತಿಗಳು

೧೦೫. ಸಂಸತ್ತಿನ ಸದನಗಳ ಮತ್ತು ಅವುಗಳ ಸದಸ್ಯರ ಮತ್ತು ಸಮಿತಿಗಳ ಅಧಿಕಾರಗಳು, ವಿಶೇಷಾಧಿಕಾರಗಳು, ಇತ್ಯಾದಿ:– (೧) ಈ ಸಂವಿಧಾನದ ಉಪಬಂಧಗಳಿಗೆ ಮತ್ತು ಸಂಸತ್ತಿನ ಪ್ರಕ್ರಿಯೆಯನ್ನು ವಿನಿಯಮಗೊಳಿಸುವ ನಿಯಮಗಳಿಗೆ ಮತ್ತು ಸ್ಥಾಯಿ ಆದೇಶಗಳಿಗೆ ಒಳಪಟ್ಟು, ಸಂಸತ್ತಿನಲ್ಲಿ ವಾಕ್ ಸ್ವಾತಂತ್ರ‍್ಯವಿರತಕ್ಕದ್ದು. (೨) ಸಂಸತ್ತಿನ ಯಾರೇ ಸದಸ್ಯನು ಸಂಸತ್ತಿನಲ್ಲಿ ಅಥವಾ ಅದರ ಯಾವುದೇ ಸಮಿತಿಯಲ್ಲಿ ತಾನು ಹೇಳಿದ ಯಾವುದೇ ವಿಚಾರಕ್ಕೆ ಅಥವಾ ತಾನು ಕೊಟ್ಟ ಯಾವುದೇ ಮತಕ್ಕೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದಲ್ಲಿ ಯಾವುವೇ ವ್ಯವಹರಣೆಗಳಿಗೆ ಗುರಿಯಾಗತಕ್ಕದ್ದಲ್ಲ ಮತ್ತು ಯಾರೇ ವ್ಯಕ್ತಿಯು ಸಂಸತ್ತಿನ ಯಾವುದೇ ಸದನದ ಅಧಿಕಾರದ ಮೂಲಕ ಅಥವಾ ಅದರ ಮೇರೆಗೆ ಪ್ರಕಟವಾದ ಯಾವುದೇ ವರದಿಗೆ, ಪತ್ರಕ್ಕೆ, ಮತಗಳಿಗೆ ಅಥವಾ ನಡೆವಳಿಗಳಿಗೆ ಸಂಬಂಧಿಸಿದಂತೆ ಹಾಗೆ ಗುರಿಯಾಗತಕ್ಕದ್ದಲ್ಲ. (೩) ಇತರ ವಿಚಾರಗಳಿಗೆ ಸಂಬಂಧಪಟ್ಟಂತೆ, ಸಂಸತ್ತಿನ ಪ್ರತಿಯೊಂದು ಸದನದ ಮತ್ತು ಆ ಪ್ರತಿಯೊಂದು ಸದನದ ಸದಸ್ಯರ ಮತ್ತು ಸಮಿತಿಗಳ ಅಧಿಕಾರಗಳು, ವಿಶೇಷಾಧಿಕಾರಗಳು ಮತ್ತು ಉನ್ಮುಕ್ತಿಗಳು ಸಂಸತ್ತು ಕಾನೂನಿನ ಮೂಲಕ ಕಾಲಕಾಲಕ್ಕೆ ಪರಿಭಾಷಿಸಬಹುದಾದಂತೆ ಇರತಕ್ಕದ್ದು ಮತ್ತು ಹಾಗೆ ಪರಿಭಾಷಿಸುವವರೆಗೆ [ಸಂವಿಧಾನದ (ನಲವತ್ತನಾಲ್ಕನೇ ತಿದ್ದುಪಡಿ) ಅಧಿನಿಯಮ, ೧೯೭೮ರ ೧೫ನೇ ಪ್ರಕರಣವು ಜಾರಿಗೆ ಬರುವುದಕ್ಕೆ ನಿಕಟಪೂರ್ವದಲ್ಲಿ ಆ ಸದನಕ್ಕೆ, ಅದರ ಸದಸ್ಯರಿಗೆ ಮತ್ತು ಸಮಿತಿಗಳಿಗೆ ಇದ್ದಂತಹ ಅವೇ ಅಧಿಕಾರಗಳು, ವಿಶೇಷಾಧಿಕಾರಗಳು ಮತ್ತು ಉನ್ಮುಕ್ತಿಗಳು ಇರತಕ್ಕದ್ದು.] (೧೯೭೮ನೇ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ ೧೫ನೇ ಪ್ರಕರಣದ ಮೂಲಕ ಕೆಲವು ಪದಗಳಿಗೆ ಬದಲಾಗಿ (೨೦-೬-೭೯ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.) (೪) (೧), (೨) ಮತ್ತು (೩)ನೆಯ ಖಂಡಗಳ ಉಪಬಂಧಗಳು, ಸಂಸತ್ತಿನ ಸದಸ್ಯರ ಸಂಬಂಧದಲ್ಲಿ ಅನ್ವಯವಾಗುವಂತೆಯೇ ಈ ಸಂವಿಧಾನದ ಕಾರಣದಿಂದಾಗಿ ಸಂಸತ್ತಿನ ಸದನದಲ್ಲಿ ಅಥವಾ ಅದರ ಯಾವುದೇ ಸಮಿತಿಯಲ್ಲಿ ಮಾತನಾಡಲು ಮತ್ತು ಅದರ ವ್ಯವಹರಣೆಗಳಲ್ಲಿ ಅನ್ಯಥಾ ಭಾಗವಹಿಸಲು ಹಕ್ಕು ಹೊಂದಿರುವ ವ್ಯಕ್ತಿಗಳ ಸಂಬಂಧದಲ್ಲಿಯೂ ಅನ್ವಯವಾಗತಕ್ಕದ್ದು.

೧೦೬. ಸದಸ್ಯರ ಸಂಬಳಗಳು ಮತ್ತು ಭತ್ಯೆಗಳು: ಸಂಸತ್ತಿನ ಯಾವುದೇ ಸದನದ ಸದಸ್ಯರು, ಸಂಸತ್ತು ಕಾನೂನಿನ ಮೂಲಕ ಕಾಲಕಾಲಕ್ಕೆ ನಿರ್ಧರಿಸಬಹುದಾದಂಥ ಸಂಬಳಗಳನ್ನು ಮತ್ತು ಭತ್ಯೆಗಳನ್ನು ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು ಮತ್ತು ಆ ಬಗ್ಗೆ ಉಪಬಂಧವನ್ನು ಮಾಡುವವರೆಗೆ, ಈ ಸಂವಿಧಾನದ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ ಡೊಮಿನಿಯನ್ ಆಫ್ ಇಂಡಿಯಾದ ಸಂವಿಧಾನ ಸಭೆಯ ಸದಸ್ಯರ ಸಂಬಂಧದಲ್ಲಿ ಅನ್ವಯಿಸುತ್ತಿದ್ದಂಥ ದರಗಳಲ್ಲಿ ಮತ್ತು ಷರತ್ತುಗಳ ಮೇಲೆ ಭತ್ಯೆಗಳನ್ನು ಪಡೆಯಲು ಅವರು ಹಕ್ಕುಳ್ಳವರಾಗಿರತಕ್ಕದ್ದು.

ವಿಧಾಯೀ ಪ್ರಕ್ರಿಯೆ

೧೦೭. ವಿಧೇಯಕಗಳ ಮಂಡನೆಗೆ ಮತ್ತು ಅಂಗೀಕಾರಕ್ಕೆ ಸಂಬಂಧಿಸಿದ ಉಪಬಂಧಗಳು: (೧) ಧನವಿಧೇಯಕಗಳಿಗೆ ಮತ್ತು ಇತರ ಹಣಕಾಸು ವಿಧೇಯಕಗಳಿಗೆ ಸಂಬಂಧಪಟ್ಟಂತೆ ೧೦೯ನೆಯ ಮತ್ತು ೧೧೭ನೆಯ ಅನುಚ್ಫೇದಗಳ ಉಪಬಂಧಗಳಿಗೆ ಒಳಪಟ್ಟು, ಯಾವುದೇ ವಿಧೇಯಕವನ್ನು ಸಂಸತ್ತಿನ ಯಾವುದೇ ಸದನದಲ್ಲಿ ಪ್ರಥಮತಃ ಮಂಡಿಸಬಹುದು. (೨) ೧೦೮ನೆಯ ಮತ್ತು ೧೦೯ನೆಯ ಅನುಚ್ಛೇದಗಳ ಉಪಬಂಧಗಳಿಗೊಳಪಟ್ಟು, ಉಭಯ ಸದನಗಳು ಒಂದು ವಿಧೇಯಕವನ್ನು ತಿದ್ದುಪಡಿಯಿಲ್ಲದೆ ಅಥವಾ ಸಂಸತ್ತಿನ ಉಭಯ ಸದನಗಳು ಒಪ್ಪಿರುವಂಥ ತಿದ್ದುಪಡಿಗಳ ಸಹಿತವಾಗಿ ಮಾತ್ರವೇ ಒಪ್ಪಿಕೊಂಡಿರುವ ಹೊರತು, ಅದನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿರುವುದಾಗಿ ಭಾವಿಸತಕ್ಕದ್ದಲ್ಲ. (೩) ಸಂಸತ್ತಿನಲ್ಲಿ ಇತ್ಯರ್ಥದಲ್ಲಿರುವ ಯಾವುದೇ ವಿಧೇಯಕವು, ಸದನಗಳ ಅಧಿವೇಶನಗಳನ್ನು ಮುಕ್ತಾಯಗೊಳಿಸಿದ ಕಾರಣದಿಂದ ಅಂತ್ಯಗೊಳ್ಳತಕ್ಕದ್ದಲ್ಲ. (೪) ಲೋಕಸಭೆಯಿಂದ ಅಂಗೀಕೃತವಾಗಿಲ್ಲದ, ಆದರೆ ರಾಜ್ಯಸಭೆಯಲ್ಲಿ ಇತ್ಯರ್ಥದಲ್ಲಿರುವ ವಿಧೇಯಕವು ಲೋಕಸಭೆಯ ವಿಸರ್ಜನೆಯಿಂದಾಗಿ ಅಂತ್ಯಗೊಳ್ಳತಕ್ಕದ್ದಲ್ಲ. (೫) ಲೋಕಸಭೆಯಲ್ಲಿ ಇತ್ಯರ್ಥದಲ್ಲಿರುವ ಅಥವಾ ಲೋಕಸಭೆಯಿಂದ ಅಂಗೀಕೃತವಾಗಿ ರಾಜ್ಯಸಭೆಯಲ್ಲಿ ಇತ್ಯರ್ಥದಲ್ಲಿರುವ ವಿಧೇಯಕವು ಲೋಕಸಭೆಯ ವಿಸರ್ಜನೆಯಿಂದಾಗಿ ೧೦೮ನೆಯ ಅನುಚ್ಫೇದದ ಉಪಬಂಧಕ್ಕೊಳಪಟ್ಟು ಅಂತ್ಯಗೊಳ್ಳತಕ್ಕದ್ದು.

೧೦೮. ಕೆಲವು ಸಂದರ್ಭಗಳಲ್ಲಿ ಉಭಯ ಸದನಗಳ ಜಂಟಿ ಉಪವೇಶನ: (೧) ಒಂದು ವಿಧೇಯಕವು ಒಂದು ಸದನದಲ್ಲಿ ಅಂಗೀಕೃತವಾಗಿ ಅದನ್ನು ಮತ್ತೊಂದು ಸದನಕ್ಕೆ ಕಳುಹಿಸಿದ ತರುವಾಯ,- (ಎ) ಆ ವಿಧೇಯಕವನ್ನು ಆ ಮತ್ತೊಂದು ಸದನವು ತಿರಸ್ಕರಿಸಿದರೆ; ಅಥವಾ (ಬಿ) ಆ ವಿಧೇಯಕದಲ್ಲಿ ಮಾಡಬೇಕಾದ ತಿದ್ದುಪಡಿಗಳ ಬಗ್ಗೆ ಸದನಗಳು ಅಂತಿಮವಾಗಿ ಒಪ್ಪದಿದ್ದರೆ; ಅಥವಾ (ಸಿ) ಆ ವಿಧೇಯಕವನ್ನು ಯಾವ ಸದನಕ್ಕೆ ಕಳುಹಿಸಲಾಗಿದೆಯೋ ಆ ಸದನಕ್ಕೆ ಅದು ತಲುಪಿದ ದಿನಾಂಕದಿಂದ ಆ ವಿಧೇಯಕವು ಅಂಗೀಕಾರವಾಗದೇ ಆರು ತಿಂಗಳುಗಳಿಗಿಂತಲೂ ಹೆಚ್ಚುಕಾಲವು ಗತಿಸಿದ್ದರೆ; – ರಾಷ್ಟ್ರಪತಿಯು, ಲೋಕಸಭೆಯ ವಿಸರ್ಜನೆಯ ಕಾರಣದಿಂದ ಆ ವಿಧೇಯಕವು ಅಂತ್ಯಗೊಂಡಿದ್ದ ಹೊರತು, ಸದನಗಳ ಉಪವೇಶನವು ನಡೆಯುತ್ತಿದ್ದರೆ ಸಂದೇಶದ ಮೂಲಕ ಮತ್ತು ಅವುಗಳು ಉಪವೇಶನದಲ್ಲಿ ಇಲ್ಲದಿದ್ದರೆ ಸಾರ್ವಜನಿಕ ಅಧಿಸೂಚನೆಯ ಮೂಲಕ, ಆ ವಿಧೇಯಕವನ್ನು ಚರ್ಚಿಸುವ ಮತ್ತು ಅದರ ಮೇಲೆ ಮತ ಕೊಡುವ ಉದ್ದೇಶಕ್ಕಾಗಿ ಜಂಟಿ ಉಪವೇಶನದಲ್ಲಿ ಸಭೆ ಸೇರಬೇಕೆಂದು ಉಭಯ ಸದನಗಳಿಗೆ ಕರೆನೀಡುವ ತನ್ನ ಆಶಯವನ್ನು ಅಧಿಸೂಚಿಸಬಹುದು: ಪರಂತು, ಈ ಖಂಡದಲ್ಲಿ ಇರುವುದು ಯಾವುದೂ ಧನವಿಧೇಯಕಕ್ಕೆ ಅನ್ವಯವಾಗತಕ್ಕದ್ದಲ್ಲ. (೨) (೧)ನೆಯ ಖಂಡದಲ್ಲಿ ಉಲ್ಲೇಖಿಸಿರುವ ಆರು ತಿಂಗಳ ಯಾವುದೇ ಅವಧಿಯನ್ನು ಲೆಕ್ಕ ಹಾಕುವಲ್ಲಿ, ಅದೇ ಖಂಡದ (ಸಿ) ಉಪಖಂಡದಲ್ಲಿ ಉಲ್ಲೇಖಿಸಿರುವ ಸದನದ ಅಧಿವೇಶನವನ್ನು ಮುಕ್ತಾಯಗೊಳಿಸಲಾದ ಅಥವಾ ನಿರಂತರ ನಾಲ್ಕು ದಿನಗಳಿಗಿಂತಲೂ ಹೆಚ್ಚುಕಾಲ ಮುಂದೂಡಲಾದ ಯಾವುದೇ ಅವಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ. (೩) ರಾಷ್ಟ್ರಪತಿಯು (೧)ನೆಯ ಖಂಡದ ಮೇರೆಗೆ ಜಂಟಿ ಉಪವೇಶನದಲ್ಲಿ ಸಭೆ ಸೇರಲು ಸದನಗಳಿಗೆ ಕರೆ ನೀಡುವ ತನ್ನ ಆಶಯವನ್ನು ಅಧಿಸೂಚಿಸಿದ್ದರೆ, ಯಾವುದೇ ಸದನವು ಆ ವಿಧೇಯಕದ ಸಂಬಂಧದಲ್ಲಿ ಮುಂದುವರಿಯತಕ್ಕದ್ದಲ್ಲ. ಆದರೆ ರಾಷ್ಟ್ರಪತಿಯು ತನ್ನ ಅಧಿಸೂಚನೆಯ ದಿನಾಂಕದ ತರುವಾಯ ಯಾವುದೇ ಕಾಲದಲ್ಲಿ ಆ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ಜಂಟಿ ಉಪವೇಶನದಲ್ಲಿ ಸಭೆ ಸೇರುವಂತೆ ಆ ಸದನಗಳಿಗೆ ಕರೆ ನೀಡಬಹುದು ಮತ್ತು ಅವನು ಹಾಗೆ ಕರೆನೀಡಿದಲ್ಲಿ, ತದನುಸಾರ ಆ ಸದನಗಳು ಸಭೆ ಸೇರತಕ್ಕದ್ದು. (೪) ಜಂಟಿ ಉಪವೇಶನದಲ್ಲಿ ಒಪ್ಪಿಕೊಳ್ಳಲಾದಂಥ ತಿದ್ದುಪಡಿಗಳೇನಾದರೂ ಇದ್ದರೆ, ಆ ತಿದ್ದುಪಡಿಗಳ ಸಹಿತ ಆ ವಿಧೇಯಕವು ಉಭಯ ಸದನಗಳ ಜಂಟಿ ಉಪವೇಶನದಲ್ಲಿ ಅವುಗಳ ಒಟ್ಟು ಸದಸ್ಯರ ಪೈಕಿ ಹಾಜರಿದ್ದು ಮತ ನೀಡುವ ಸದಸ್ಯರ ಬಹುಮತದಿಂದ ಅಂಗೀಕೃತವಾಗಿದ್ದರೆ ಅದನ್ನು ಈ ಸಂವಿಧಾನದ ಉದ್ದೇಶಗಳಿಗಾಗಿ ಉಭಯ ಸದನಗಳು ಅಂಗೀಕರಿಸಿವೆ ಎಂದು ಭಾವಿಸತಕ್ಕದ್ದು: ಪರಂತು, ಜಂಟಿ ಉಪವೇಶನದಲ್ಲಿ,- (ಎ) ಆ ವಿಧೇಯಕವು ಒಂದು ಸದನದಿಂದ ಅಂಗೀಕೃತವಾಗಿದ್ದು ತಿದ್ದುಪಡಿಗಳೊಡನೆ ಮತ್ತೊಂದು ಸದನದಿಂದ ಅಂಗೀಕೃತವಾಗದಿದ್ದರೆ ಮತ್ತು ಯಾವ ಸದನದಲ್ಲಿ ಅದನ್ನು ಪ್ರಥಮತಃ ಮಂಡಿಸಲಾಗಿತ್ತೋ ಆ ಸದನಕ್ಕೆ ಅದನ್ನು ಹಿಂದಕ್ಕೆ ಕಳುಹಿಸಿದ್ದರೆ, ಆ ವಿಧೇಯಕದ ಅಂಗೀಕಾರದಲ್ಲಿ ಉಂಟಾದ ವಿಳಂಬದಿಂದಾಗಿ ಅವಶ್ಯವಾಗಿ ಮಾಡಲೇಬೇಕಾದ ತಿದ್ದುಪಡಿಗಳು ಯಾವುದಾದರೂ ಇದ್ದರೆ, ಅವುಗಳನ್ನು ಹೊರತುಪಡಿಸಿ ಆ ವಿಧೇಯಕಕ್ಕೆ ಇತರ ಯಾವುದೇ ತಿದ್ದುಪಡಿಯನ್ನು ಸೂಚಿಸತಕ್ಕದ್ದಲ್ಲ; (ಬಿ) ವಿಧೇಯಕವನ್ನು ಹಾಗೆ ಅಂಗೀಕರಿಸಿ ಹಿಂದಕ್ಕೆ ಕಳುಹಿಸಿದ್ದರೆ, ಮೇಲೆ ಹೇಳಿದಂಥ ತಿದ್ದುಪಡಿಗಳನ್ನು ಮತ್ತು ಯಾವ ವಿಷಯಗಳನ್ನು ಸದನಗಳು ಒಪ್ಪಿಕೊಂಡಿಲ್ಲವೋ ಆ ವಿಷಯಗಳಿಗೆ ಸುಸಂಗತವಾಗಿರುವಂಥ ಇತರ ತಿದ್ದುಪಡಿಗಳನ್ನು ಮಾತ್ರ ಆ ವಿಧೇಯಕಕ್ಕೆ ಸೂಚಿಸತಕ್ಕದ್ದು; ಮತ್ತು ಈ ಖಂಡದ ಮೇರೆಗೆ ಯಾವ ತಿದ್ದುಪಡಿಗಳು ಅಂಗೀಕಾರಾರ್ಹ ಎಂಬ ಬಗ್ಗೆ ಸಭೆಯ ಅಧ್ಯಕ್ಷತೆ ವಹಿಸಿರುವ ವ್ಯಕ್ತಿಯ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು. (೫) ರಾಷ್ಟ್ರಪತಿಯು ಜಂಟಿ ಉಪವೇಶನದಲ್ಲಿ ಸಭೆ ಸೇರಬೇಕೆಂದು ಉಭಯ ಸದನಗಳಿಗೆ ಕರೆನೀಡುವ ತನ್ನ ಆಶಯವನ್ನು ಅಧಿಸೂಚಿಸಿದ ತರುವಾಯ ಲೋಕಸಭೆಯು ವಿಸರ್ಜನೆಗೊಂಡಿದ್ದರೂ, ಈ ಅನುಚ್ಫೇದದ ಮೇರೆಗೆ ಜಂಟಿ ಉಪವೇಶನವು ನಡೆಯಬಹುದು ಮತ್ತು ಆ ಉಪವೇಶನದಲ್ಲಿ ವಿಧೇಯಕವನ್ನು ಅಂಗೀಕರಿಸಬಹುದು.

೧೦೯. ಧನ ವಿಧೇಯಕಗಳಿಗೆ ಸಂಬಂಧಿಸಿದಂತೆ ವಿಶೇಷ ಪ್ರಕ್ರಿಯೆ: (೧) ಧನವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸತಕ್ಕದ್ದಲ್ಲ. (೨) ಧನವಿಧೇಯಕವನ್ನು ಲೋಕಸಭೆಯು ಅಂಗೀಕರಿಸಿದ ತರುವಾಯ ಶಿಫಾರಸ್ಸು ಕೋರಿ ಅದನ್ನು ರಾಜ್ಯಸಭೆಗೆ ಕಳುಹಿಸತಕ್ಕದ್ದು ಮತ್ತು ರಾಜ್ಯಸಭೆಯು ಆ ವಿಧೇಯಕವು ತನಗೆ ತಲುಪಿದ ದಿನಾಂಕದಿಂದ ಹದಿನಾಲ್ಕು ದಿನಗಳ ಅವಧಿಯೊಳಗಾಗಿ ತನ್ನ ಶಿಫಾರಸ್ಸುಗಳ ಸಹಿತ ಅದನ್ನು ಲೋಕಸಭೆಗೆ ಹಿಂದಕ್ಕೆ ಕಳುಹಿಸತಕ್ಕದ್ದು ಮತ್ತು ಲೋಕಸಭೆಯು ಆ ತರುವಾಯ ರಾಜ್ಯಸಭೆಯ ಎಲ್ಲ ಶಿಫಾರಸ್ಸುಗಳನ್ನು ಅಥವಾ ಅವುಗಳಲ್ಲಿ ಯಾವುದೇ ಶಿಫಾರಸನ್ನು ಒಪ್ಪಬಹುದು ಅಥವಾ ತಿರಸ್ಕರಿಸಬಹುದು. (೩) ರಾಜ್ಯಸಭೆಯ ಯಾವುದೇ ಶಿಫಾರಸನ್ನು ಲೋಕಸಭೆಯು ಒಪ್ಪಿಕೊಂಡರೆ, ಆ ಧನವಿಧೇಯಕವು ರಾಜ್ಯಸಭೆಯು ಶಿಫಾರಸ್ಸು ಮಾಡಿದ ಮತ್ತು ಲೋಕಸಭೆಯು ಒಪ್ಪಿಕೊಂಡ ತಿದ್ದುಪಡಿಗಳ ಸಹಿತ, ಉಭಯ ಸದನಗಳಿಂದಲೂ ಅಂಗೀಕೃತವಾಗಿರುವುದಾಗಿ ಭಾವಿಸತಕ್ಕದ್ದು. (೪) ರಾಜ್ಯಸಭೆಯ ಯಾವ ಶಿಫಾರಸ್ಸುಗಳನ್ನೂ ಲೋಕಸಭೆಯು ಒಪ್ಪದಿದ್ದರೆ, ಆ ಧನವಿಧೇಯಕವು, ರಾಜ್ಯಸಭೆಯು ಶಿಫಾರಸ್ಸು ಮಾಡಿದ ಯಾವುದೇ ತಿದ್ದುಪಡಿಗಳೂ ಇಲ್ಲದೆಯೇ, ಲೋಕಸಭೆಯಿಂದ ಅಂಗೀಕೃತವಾದ ರೂಪದಲ್ಲಿಯೇ ಉಭಯ ಸದನಗಳಿಂದಲೂ ಅಂಗೀಕೃತವಾಗಿರುವುದಾಗಿ ಭಾವಿಸತಕ್ಕದ್ದು. (೫) ಲೋಕಸಬೆsಯಿಂದ ಅಂಗೀಕೃತವಾಗಿ ರಾಜ್ಯಸಭೆ ಅದರ ಶಿಫಾರಸ್ಸುಗಳಿಗಾಗಿ ಕಳುಹಿಸಿಕೊಟ್ಟ ಧನವಿಧೇಯಕವನ್ನು ಮೇಲೆ ಹೇಳಿದ ಹದಿನಾಲ್ಕು ದಿನಗಳ ಅವಧಿಯೊಳಗಾಗಿ ಲೋಕಸಭೆಗೆ ಹಿಂದಕ್ಕೆ ಕಳುಹಿಸದಿದ್ದರೆ, ಆ ಅವಧಿಯು ಮುಕ್ತಾಯವಾದ ಮೇಲೆ, ಅದು ಲೋಕಸಭೆಯಿಂದ ಅಂಗೀಕೃತವಾದ ರೂಪದಲ್ಲಿಯೇ ಉಭಯ ಸದನಗಳಿಂದಲೂ ಅಂಗೀಕೃತವಾಗಿರುವುದಾಗಿ ಭಾವಿಸತಕ್ಕದ್ದು.

೧೧೦. ಧನ ವಿಧೇಯಕಗಳುಎಂಬುದರ ಪರಿಭಾಷೆ:(೧) ಈ ಅಧ್ಯಾಯದ ಉದ್ದೇಶಗಳಿಗಾಗಿ, ಒಂದು ವಿಧೇಯಕವು ಈ ಕೆಳಕಂಡ ಎಲ್ಲ ವಿಷಯಗಳಿಗೆ ಅಥವಾ ಅವುಗಳಲ್ಲಿ ಯಾವುದೇ ಒಂದು ವಿಷಯಕ್ಕೆ ಸಂಬಂಧಪಟ್ಟ ಉಪಬಂಧಗಳನ್ನು ಮಾತ್ರ ಒಳಗೊಂಡಿದ್ದರೆ ಅದನ್ನು ಧನವಿಧೇಯಕವೆಂದು ಭಾವಿಸತಕ್ಕದ್ದು, ಎಂದರೆ: – (ಎ) ಯಾವುದೇ ತೆರಿಗೆಯನ್ನು ವಿಧಿಸುವುದು, ರದ್ದು ಮಾಡುವುದು, ಮಾಫಿ ಮಾಡುವುದು, ಬದಲಾಯಿಸುವುದು ಅಥವಾ ವಿನಿಯಮಗೊಳಿಸುವುದು; (ಬಿ) ಭಾರತ ಸರ್ಕಾರವು ಹಣವನ್ನು ಸಾಲವಾಗಿ ತೆಗೆದುಕೊಳ್ಳುವುದನ್ನು ಅಥವಾ ಯಾವುದೇ ಖಾತ್ರಿ ಕೊಡುವುದನ್ನು ವಿನಿಯಮಗೊಳಿಸುವುದು ಅಥವಾ ಭಾರತ ಸರ್ಕಾರವು ವಹಿಸಿಕೊಂಡಿರುವ ಅಥವಾ ವಹಿಸಿಕೊಳ್ಳಬೇಕಾಗಿರುವ ಯಾವುದೇ ಹಣಕಾಸಿನ ಬಾಧ್ಯತೆಗಳಿಗೆ ಸಂಬಂಧಪಟ್ಟ ಕಾನೂನನ್ನು ತಿದ್ದುಪಡಿ ಮಾಡುವುದು; (ಸಿ) ಭಾರತದ ಸಂಚಿತ ನಿಧಿಯ ಅಥವಾ ಸಾದಿಲ್ವಾರು ನಿಧಿಯ ಅಭಿರಕ್ಷೆ ಮತ್ತು ಅಂಥ ಯಾವುದೇ ನಿಧಿಗೆ ಹಣವನ್ನು ಸಂದಾಯ ಮಾಡುವುದು ಅಥವಾ ಅದರಿಂದ ಹಣವನ್ನು ತೆಗೆದುಕೊಳ್ಳುವುದು; (ಡಿ) ಭಾರತದ ಸಂಚಿತ ನಿಧಿಯಿಂದ ಹಣವನ್ನು ವಿನಿಯೋಗಿಸುವುದು; (ಇ) ಯಾವುದೇ ವೆಚ್ಚವನ್ನು ಭಾರತದ ಸಂಚಿತ ನಿಧಿಯ ಮೇಲೆ ಹೊರಿಸಲಾದ ವೆಚ್ಚವೆಂದು ಘೋಷಿಸುವುದು ಅಥವಾ ಅಂಥ ಯಾವುದೇ ವೆಚ್ಚದ ಮೊಬಲಗನ್ನು ಹೆಚ್ಚಿಸುವುದು; (ಎಫ್) ಭಾರತದ ಸಂಚಿತ ನಿಧಿಯ ಲೆಕ್ಕಕ್ಕೆ ಅಥವಾ ಭಾರತದ ಸರ್ಕಾರಿ ಲೆಕ್ಕಕ್ಕೆ ಹಣವನ್ನು ಜಮೆ ಮಾಡುವುದು ಅಥವಾ ಅಂಥ ಹಣವನ್ನು ಅಭಿರಕ್ಷಿಸುವುದು ಅಥವಾ ಕೊಡುವುದು ಅಥವಾ ಒಕ್ಕೂಟದ ಅಥವಾ ರಾಜ್ಯದ ಲೆಕ್ಕಗಳ ಲೆಕ್ಕಪರಿಶೋಧನೆ ಮಾಡುವುದು; ಅಥವಾ (ಜಿ) (ಎ) ಯಿಂದ (ಎಫ್) ವರೆಗಿನ ಉಪಖಂಡಗಳಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳಲ್ಲಿ ಯಾವುದೇ ವಿಷಯಕ್ಕೆ ಪ್ರಾಸಂಗಿಕವಾಗಿರುವ ಯಾವುದೇ ವಿಷಯ. (೨) ವಿಧೇಯಕವು, ಜುಲ್ಮಾನೆಗಳನ್ನು ಅಥವಾ ಇತರ ಆರ್ಥಿಕ ದಂಡಗಳನ್ನು ವಿಧಿಸುವುದಕ್ಕೆ ಅಥವಾ ಲೈಸೆನ್ಸ್ಗಳಿಗೆ ಅಥವಾ ಸಲ್ಲಿಸಿದ ಸೇವೆಗಳಿಗೆ ಫೀಜನ್ನು ಕೇಳುವುದಕ್ಕೆ ಅಥವಾ ಸಂದಾಯ ಮಾಡುವುದಕ್ಕೆ ಉಪಬಂಧ ಕಲ್ಪಿಸುತ್ತದೆ ಎಂಬ ಕಾರಣಮಾತ್ರದಿಂದ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರ ಅಥವಾ ನಿಕಾಯವು ಸ್ಥಳೀಯ ಉದ್ದೇಶಗಳಿಗಾಗಿ ಯಾವುದೇ ತೆರಿಗೆಯನ್ನು ವಿಧಿಸುವುದಕ್ಕೆ, ರದ್ದುಪಡಿಸುವುದಕ್ಕೆ, ಮಾಫಿ ಮಾಡುವುದಕ್ಕೆ, ಬದಲಾವಣೆ ಮಾಡುವುದಕ್ಕೆ ಅಥವಾ ವಿನಿಯಮಗೊಳಿಸುವುದಕ್ಕೆ ಉಪಬಂಧ ಕಲ್ಪಿಸುತ್ತದೆ ಎಂಬ ಕಾರಣಮಾತ್ರದಿಂದ ಅದನ್ನು ಧನವಿಧೇಯಕವಾಗಿರುವುದಾಗಿ ಭಾವಿಸತಕ್ಕದ್ದಲ್ಲ. (೩) ಒಂದು ವಿಧೇಯಕವು ಧನವಿಧೇಯಕವೇ ಅಥವಾ ಅಲ್ಲವೇ ಎಂಬ ಯಾವುದೇ ಪ್ರಶ್ನೆ ಉದ್ಭವಿಸಿದರೆ ಆ ಬಗ್ಗೆ ಲೋಕಸಭೆಯ ಅಧ್ಯಕ್ಷನ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು. (೪) ಪ್ರತಿಯೊಂದು ಧನವಿಧೇಯಕವನ್ನು ೧೦೯ನೆಯ ಅನುಚ್ಫೇದದ ಮೇರೆಗೆ ರಾಜ್ಯಸಭೆಗೆ ಕಳುಹಿಸುವಾಗ ಮತ್ತು ೧೧೧ನೆಯ ಅನುಚ್ಫೇದದ ಮೇರೆಗೆ ರಾಷ್ಟ್ರಪತಿಯ ಅನುಮತಿಗಾಗಿ ಒಪ್ಪಿಸುವಾಗ, ಅದನ್ನು ಧನವಿಧೇಯಕವೆಂಬುದಾಗಿ ಲೋಕಸಭೆಯ ಅಧ್ಯಕ್ಷನು ಪ್ರಮಾಣೀಕರಿಸಿ, ತನ್ನ ಸಹಿ ಹಾಕತಕ್ಕದ್ದು.

೧೧೧. ವಿಧೇಯಕಗಳಿಗೆ ಅನುಮತಿ: ಒಂದು ವಿಧೇಯಕವು ಸಂಸತ್ತಿನ ಸದನಗಳಿಂದ ಅಂಗೀಕೃತವಾದಾಗ ಅದನ್ನು ರಾಷ್ಟ್ರಪತಿಗೆ ಒಪ್ಪಿಸತಕ್ಕದ್ದು ಮತ್ತು ರಾಷ್ಟ್ರಪತಿಯು ಆ ವಿಧೇಯಕಕ್ಕೆ ತನ್ನ ಅನುಮತಿಯನ್ನು ಕೊಟ್ಟಿರುವುದಾಗಿ ಅಥವಾ ಅದಕ್ಕೆ ತನ್ನ ಅನುಮತಿಯನ್ನು ತಡೆಹಿಡಿದಿರುವುದಾಗಿ ಘೋಷಿಸತಕ್ಕದ್ದು: ಪರಂತು, ವಿಧೇಯಕವನ್ನು ಅನುಮತಿಗಾಗಿ ರಾಷ್ಟ್ರಪತಿಗೆ ಒಪ್ಪಿಸಿದ ತರುವಾಯ, ಅವನು ಸಾಧ್ಯವಾದಷ್ಟು ಬೇಗನೆ, ಅದು ಧನವಿಧೇಯಕವಾಗಿಲ್ಲದಿದ್ದರೆ, ಸಂಸತ್ತಿನ ಸದನಗಳು ಆ ವಿಧೇಯಕವನ್ನು ಅಥವಾ ಅದರ ಯಾವುದೇ ನಿರ್ದಿಷ್ಟವಾದ ಉಪಬಂಧಗಳನ್ನು ಮತ್ತೊಮ್ಮೆ ಪರ್ಯಾಲೋಚಿಸಬೇಕೆಂದು ಮತ್ತು ವಿಶೇಷವಾಗಿ ಅವನು ತನ್ನ ಸಂದೇಶದಲ್ಲಿ ಶಿಫಾರಸ್ಸು ಮಾಡಬಹುದಾದಂಥ ಯಾವುದೇ ತಿದ್ದುಪಡಿಗಳನ್ನು ಮಂಡಿಸುವುದರ ಅಪೇಕ್ಷಣೀಯತೆಯನ್ನು ಪರ್ಯಾಲೋಚಿಸಬೇಕೆಂದು ಕೋರುವ ಸಂದೇಶದೊಡನೆ ಆ ವಿಧೇಯಕವನ್ನು ಆ ಸದನಗಳಿಗೆ ವಾಪಸು ಕಳಿಸಬಹುದು ಮತ್ತು ವಿಧೇಯಕವನ್ನು ಹಾಗೆ ವಾಪಸು ಕಳುಹಿಸಿದಾಗ ಸದನಗಳು ಆ ವಿಧೇಯಕವನ್ನು ತದನುಸಾರವಾಗಿ ಪುನಃ ಪರ್ಯಾಲೋಚಿಸತಕ್ಕದ್ದು ಮತ್ತು ಆ ವಿಧೇಯಕವನ್ನು ಸದನಗಳು ತಿದ್ದುಪಡಿ ಸಹಿತವಾಗಿ ಅಥವಾ ತಿದ್ದುಪಡಿ ಇಲ್ಲದೆ ಪುನಃ ಅಂಗೀಕರಿಸಿ ರಾಷ್ಟ್ರಪತಿಯ ಅನುಮತಿಗಾಗಿ ಒಪ್ಪಿಸಿದರೆ ರಾಷ್ಟ್ರಪತಿಯು ಅದಕ್ಕೆ ಅನುಮತಿಯನ್ನು ತಡೆಹಿಡಿಯತಕ್ಕದ್ದಲ್ಲ.

Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 41 – 44

Leave a Reply