ಭಾರತೀಯ ಸಂವಿಧಾನ: ಸಂಸತ್ತಿನ ಸಚಿವಾಲಯ

2 years ago

98. ಸಂಸತ್ತಿನ ಸಚಿವಾಲಯ: (1) ಸಂಸತ್ತಿನ ಪ್ರತಿಯೊಂದು ಸನಕ್ಕೆ ಪ್ರತ್ಯೇಕ ಸಚಿವಾಲಯ ಸಿಬ್ಬಂದಿ ಇರತಕ್ಕದ್ದು: ಪರಂತು, ಈ ಖಂಡದಲ್ಲಿ ಇರುವುದು ಯಾವುದೂ, ಸಂಸತ್ತಿನ ಉಭಯ ಸದನಗಳಿಗೂ ಸಾಮಾನ್ಯವಾಗಿರುವ ಹುದ್ದೆಗಳನ್ನು ಸೃಜಿಸುವುದಕ್ಕೆ ಅಡ್ಡಿಯನ್ನುಂಟುಮಾಡುವುದಾಗಿ ಅರ್ಥೈಸತಕ್ಕದ್ದಲ್ಲ. (2) ಸಂಸತ್ತಿನ ಉಭಯ ಸದನಗಳ ಸಚಿವಾಲಯ ಸಿಬ್ಬಂದಿಯ ನೇಮಕಾತಿಯನ್ನು ಮತ್ತು ನೇಮಕಗೊಂಡ ವ್ಯಕ್ತಿಗಳ ಸೇವಾ ಷರತ್ತುಗಳನ್ನು ಸಂಸತ್ತು ಕಾನೂನಿನ ಮೂಲಕ ವಿನಿಯಮಿಸಬಹುದು. (3) (2)ನೆಯ ಖಂಡದ ಮೇರೆಗೆ ಸಂಸತ್ತು ಉಪಬಂಧವನ್ನು ಮಾಡುವವರೆಗೆ, ರಾಷ್ಟ್ರಪತಿಯು ಲೋಕಸಭೆಯ ಅಧ್ಯಕ್ಷನೊಡನೆ ಅಥವಾ ಸಂದರ್ಭಾನುಸಾರ ರಾಜ್ಯಸಭೆಯ ಸಭಾಪತಿಯೊಡನೆ ಸಮಾಲೋಚಿಸಿ, ಲೋಕಸಭೆಯ ಅಥವಾ ರಾಜ್ಯಸಭೆಯ ಸಚಿವಾಲಯ ಸಿಬ್ಬಂದಿಯ ನೇಮಕಾತಿಯನ್ನು ಮತ್ತು ನೇಮಕಗೊಂಡ ವ್ಯಕ್ತಿಗಳ ಸೇವಾ ಷರತ್ತುಗಳನ್ನು ವಿನಿಯಮಿಸುವ ನಿಯಮಗಳನ್ನು ರಚಿಸಬಹುದು ಮತ್ತು ಹಾಗೆ ರಚಿತವಾದ ಯಾವುವೇ ನಿಯಮಗಳು ಸದರಿ ಖಂಡದ ಮೇರೆಗೆ ರಚಿತವಾದ ಯಾವುದೇ ಕಾನೂನಿನ ಉಪಬಂಧಗಳಿಗೆ ಒಳಪಟ್ಟು ಪರಿಣಾಮಕಾರಿಯಾಗತಕ್ಕದ್ದು.

ಕಾರ್ಯಕಲಾಪ ನಿರ್ವಹಣೆ

99. ಸದಸ್ಯರಿಂದ ಪ್ರಮಾಣವಚನ ಅಥವಾ ಪ್ರತಿಜ್ಞಾ ವಚನ: ಸಂಸತ್ತಿನ ಉಭಯ ಸದನಗಳ ಪ್ರತಿಯೊಬ್ಬ ಸದಸ್ಯನು ತನ್ನ ಸ್ಥಾನವನ್ನು ವಹಿಸಿಕೊಳ್ಳುವುದಕ್ಕೆ ಮುನ್ನ, ರಾಷ್ಟ್ರಪತಿಯ ಸಮಕ್ಷಮ ಅಥವಾ ರಾಷ್ಟ್ರಪತಿಯಿಂದ ಆ ಬಗ್ಗೆ ನೇಮಕಗೊಂಡ ವ್ಯಕ್ತಿಯ ಸಮಕ್ಷಮ ಆ ಉದ್ದೇಶಕ್ಕಾಗಿ ಮೂರನೆಯ ಅನುಸೂಚಿಯಲ್ಲಿ ಕೊಡಲಾಗಿರುವ ನಮೂನೆಗೆ ಅನುಸಾರವಾಗಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ಅದಕ್ಕೆ ತನ್ನ ರುಜು ಹಾಕತಕ್ಕದ್ದು.

100. ಸದನಗಳಲ್ಲಿ ಮತದಾನ, ಖಾಲಿಸ್ಥಾನಗಳು ಏನೇ ಇದ್ದಾಗ್ಯೂ ಕಾರ್ಯನಿರ್ವಹಿಸಲು ಸದನಗಳ ಅಧಿಕಾರ ಮತ್ತು ಕೋರಂ:(1) ಈ ಸಂವಿಧಾನದಲ್ಲಿ ಅನ್ಯಥಾ ಉಪಬಂಧಿಸಿರುವುದನ್ನು ಹೊರತುಪಡಿಸಿ, ಪ್ರತಿಯೊಂದು ಸದನದ ಯಾವುದೇ ಉಪವೇಶನದಲ್ಲಿ ಅಥವಾ ಉಭಯ ಸದನಗಳ ಸಂಯುಕ್ತ ಉಪವೇಶನದಲ್ಲಿ, ಅಧ್ಯಕ್ಷನನ್ನು ಅಥವಾ ಸಭಾಪತಿಯಾಗಿ ಅಥವಾ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯನ್ನು ಹೊರತುಪಡಿಸಿ, ಹಾಜರಿರುವ ಹಾಗೂ ಮತ ನೀಡುವ ಸದಸ್ಯರ ಬಹುಮತದ ಮೂಲಕ ಎಲ್ಲ ಪ್ರಶ್ನೆಗಳನ್ನು ನಿರ್ಧರಿಸತಕ್ಕದ್ದು. ಸಭಾಪತಿಯು ಅಥವಾ ಅಧ್ಯಕ್ಷನು ಅಥವಾ ಸಭಾಪತಿಯಾಗಿ ಅಥವಾ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯು ಪ್ರಥಮತಃ ಮತ ನೀಡತಕ್ಕದ್ದಲ್ಲ, ಆದರೆ ಮತಗಳು ಸಮನಾಗಿರುವ ಸಂದರ್ಭದಲ್ಲಿ ನಿರ್ಣಾಯಕ ಮತ ನೀಡಲು ಅವನಿಗೆ ಅಧಿಕಾರವಿರತಕ್ಕದ್ದು ಮತ್ತು ಅದನ್ನು ಅವನು ಚಲಾಯಿಸತಕ್ಕದ್ದು. (2) ಸಂಸತ್ತಿನ ಯಾವುದೇ ಒಂದು ಸದನದಲ್ಲಿ ಯಾವುದೇ ಸದಸ್ಯ ಸ್ಥಾನವು ಖಾಲಿಯಾಗಿದ್ದಾಗ್ಯೂ, ಆ ಸದನವು ಕಾರ್ಯನಿರ್ವಹಿಸಲು ಅಧಿಕಾರ ಹೊಂದಿರತಕ್ಕದ್ದು ಮತ್ತು ಸಂಸತ್ತಿನಲ್ಲಿ ಯಾವುದೇ ಕಾರ್ಯಕಲಾಪಗಳು ನಡೆಯುತ್ತಿರುವಾಗ, ಅಲ್ಲಿ ಕುಳಿತಿರಲು, ಮತ ನೀಡಲು ಅಥವಾ ಅನ್ಯಥಾ ಆ ವ್ಯವಹರಣೆಗಳಲ್ಲಿ ಭಾಗವಹಿಸಲು ಹಕ್ಕಿಲ್ಲದ ಯಾರೇ ವ್ಯಕ್ತಿಯು ಹಾಗೆ ಮಾಡಿರುವುದು ಆ ತರುವಾಯ ಕಂಡುಬಂದಾಗ್ಯೂ, ಆ ವ್ಯವಹರಣೆಗಳು ಸಿಂಧುವಾಗತಕ್ಕದ್ದು. (3) ಸಂಸತ್ತು ಕಾನೂನಿನ ಮೂಲಕ ಅನ್ಯಥಾ ಉಪಬಂಧಿಸುವವರೆಗೆ, ಸಂಸತ್ತಿನ ಯಾವುದೇ ಸದನದ ಸಭೆಯು ನಡೆಯಲು ಆ ಸದನದ ಸದಸ್ಯರ ಒಟ್ಟು ಸಂಖ್ಯೆಯ ಹತ್ತನೆಯ ಒಂದು ಭಾಗವು ಆ ಸದನದ ಸಭೆಗೆ ಅಗತ್ಯವಾದ ಕೋರಂ ಆಗತಕ್ಕದ್ದು. (4) ಯಾವುದೇ ಸದನದ ಸಭೆಯು ನಡೆಯುತ್ತಿರುವ ಯಾವುದೇ ಕಾಲದಲ್ಲಿ ಕೋರಂ ಇಲ್ಲದಿದ್ದರೆ, ಕೋರಂ ಆಗುವವರೆಗೆ ಸದನವನ್ನು ಮುಂದೂಡುವುದು ಅಥವಾ ಸಭೆಯನ್ನು ಸ್ಥಗಿತಗೊಳಿಸುವುದು ಸಭಾಪತಿಯ ಅಥವಾ ಅಧ್ಯಕ್ಷನ ಅಥವಾ ಸಭಾಪತಿಯಾಗಿ ಅಥವಾ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯ ಕರ್ತವ್ಯವಾಗಿರತಕ್ಕದ್ದು.

ಸದಸ್ಯರ ಅನರ್ಹತೆಗಳು

101. ಸ್ಥಾನಗಳನ್ನು ಖಾಲಿ ಮಾಡುವುದು:(1) ಯಾರೇ ವ್ಯಕ್ತಿಯು ಸಂಸತ್ತಿನ ಉಭಯ ಸದನಗಳ ಸದಸ್ಯನಾಗಿರತಕ್ಕದ್ದಲ್ಲ ಮತ್ತು ಉಭಯ ಸದನಗಳ ಸದಸ್ಯನಾಗಿ ಆಯ್ಕೆಯಾಗಿರುವ ಯಾರೇ ವ್ಯಕ್ತಿಯು, ಅವುಗಳಲ್ಲಿ ಯಾವುದಾದರೂ ಒಂದು ಸದನದಲ್ಲಿನ ತನ್ನ ಸ್ಥಾನವನ್ನು ಖಾಲಿ ಮಾಡುವಂತೆ ಸಂಸತ್ತು ಕಾನೂನಿನ ಮೂಲಕ ಉಪಬಂಧವನ್ನು ಮಾಡತಕ್ಕದ್ದು. (2) ಯಾರೇ ವ್ಯಕ್ತಿಯು ಸಂಸತ್ತು ಮತ್ತು [1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 29ನೆಯ ಪ್ರಕರಣದ ಮೇರೆಗೆ ಹಾಗೂ ಅನುಸೂಚಿಯ ಮೂಲಕ “ಮೊದಲನೆಯ ಅನುಸೂಚಿಯ (ಎ) ಭಾಗದಲ್ಲಾಗಲಿ ಅಥವಾ (ಬಿ) ಭಾಗದಲ್ಲಾಗಲಿ ಉಲ್ಲೇಖಿತವಾಗಿರುವ” ಎಂಬ ಪದಗಳನ್ನೂ, ಅಕ್ಷರಗಳನ್ನೂ ಬಿಟ್ಟುಬಿಡಲಾಗಿದೆ.] ಒಂದು ರಾಜ್ಯದ ವಿಧಾನಮಂಡಲದ ಯಾವುದೇ ಸದನ – ಇವೆರಡರ ಸದಸ್ಯನಾಗಿರತಕ್ಕದ್ದಲ್ಲ ಮತ್ತು ಯಾರೇ ವ್ಯಕ್ತಿಯು ಸಂಸತ್ತು ಮತ್ತು [ಒಂದು ರಾಜ್ಯದ] (29ನೆಯ ಪ್ರಕರಣದ ಹಾಗೂ ಅನುಸೂಚಿಯ ಮೂಲಕ “ಅಂಥ ಒಂದು ರಾಜ್ಯ” ಎಂಬುದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) ವಿಧಾನಮಂಡಲದ ಯಾವುದೇ ಸದನ – ಈ ಎರಡರ ಸದಸ್ಯನಾಗಿ ಆಯ್ಕೆಯಾದಲ್ಲಿ, ಆಗ, ರಾಷ್ಟ್ರಪತಿಯು ರಚಿಸಿದ [ನಿಯಮಗಳಲ್ಲಿ] (ಎಫ್.46:50-ಸಿ ಕ್ರಮಾಂಕದ-1950ನೆಯ ಇಸವಿಯ ಜನವರಿ ತಿಂಗಳ 26ನೆಯ ದಿನಾಂಕದ ಕಾನೂನು ಸಚಿವಾಲಯದ ಅಧಿಸೂಚನೆಯೊಂದಿಗೆ, ಭಾರತದ ವಿಶೇಷ ರಾಜಪತ್ರದ 678ನೆಯ ಪುಟದಲ್ಲಿ ಪ್ರಕಟಿತವಾಗಿದೆ, 1950ನೆಯ ಇಸವಿಯ ಏಕಕಾಲೀನ ಸದಸ್ಯತ್ವ ನಿಷೇಧ ನಿಯಮಗಳನ್ನು ನೋಡಿ.) ನಿರ್ದಿಷ್ಟಪಡಿಸಬಹುದಾದಂಥ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚಿತವಾಗಿ ಅವನು ಆ ರಾಜ್ಯದ ವಿಧಾನಮಂಡಲದಲ್ಲಿನ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರದಿದ್ದರೆ, ಆ ಅವಧಿಯು ಮುಕ್ತಾಯವಾದ ಮೇಲೆ ಸಂಸತ್ತಿನಲ್ಲಿನ ಅವನ ಸ್ಥಾನವು ಖಾಲಿಯಾಗತಕ್ಕದ್ದು. (3) ಸಂಸತ್ತಿನ ಯಾವುದೇ ಸದನದ ಸದಸ್ಯನು,- (ಎ) [102ನೆಯ ಅನುಚ್ಫೇದದ (1)ನೆಯ ಖಂಡದಲ್ಲಿ ಅಥವಾ (2)ನೆಯ ಖಂಡದಲ್ಲಿ] (1985ನೆಯ ಇಸವಿಯ ಸಂವಿಧಾನ (ಐವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 2ನೇ ಪ್ರಕರಣದ ಮೂಲಕ ಪ್ರತ್ಯಾಯೋಜಿಸಲಾಗಿದೆ.) ನಮೂದಿಸಿರುವ ಯಾವುದೇ ಅನರ್ಹತೆಗಳಿಗೆ ಒಳಗಾದರೆ; ಅಥವಾ [(ಬಿ) ತಾನು ಸಹಿ ಮಾಡಿದ ಪತ್ರವನ್ನು ಸಭಾಪತಿಗೆ ಅಥವಾ ಸಂದರ್ಭಾನುಸಾರ ಅಧ್ಯಕ್ಷನಿಗೆ ಬರೆದು ಯಾವುದೇ ಕಾಲದಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಮತ್ತು ಅವನ ರಾಜೀನಾಮೆಯನ್ನು ಸಭಾಪತಿಯು ಅಥವಾ ಸಂದರ್ಭಾನುಸಾರ ಅಧ್ಯಕ್ಷನು ಅಂಗೀಕರಿಸಿದರೆ] (1974ನೆಯ ಇಸವಿಯ ಸಂವಿಧಾನ (ಮೂವತ್ತಮೂರನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಮೂಲ ಉಪಖಂಡಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) – ಆ ತರುವಾಯ ಅವನ ಸ್ಥಾನವು ಖಾಲಿಯಾಗತಕ್ಕದ್ದು: [ಪರಂತು, (ಬಿ) ಉಪಖಂಡದಲ್ಲಿ ಉಲ್ಲೇಖಿತವಾಗಿರುವ ಯಾವುದೇ ರಾಜೀನಾಮೆಯ ಸಂದರ್ಭದಲ್ಲಿ, ಸಭಾಪತಿಯು ಅಥವಾ ಸಂದರ್ಭಾನುಸಾರ ಅಧ್ಯಕ್ಷನು ತನಗೆ ದೊರೆತಿರುವ ಮಾಹಿತಿಯ ಮೇಲೆ ಅಥವಾ ಅನ್ಯಥಾ ಮತ್ತು ತನಗೆ ಸೂಕ್ತವೆಂದು ತೋರುವಂಥ ವಿಚಾರಣೆಯನ್ನು ನಡೆಸಿದ ಬಳಿಕ ಆ ರಾಜೀನಾಮೆಯು ಸ್ವಯಿಚ್ಫೆಯಿಂದ ಕೊಟ್ಟಿರುವಂಥದ್ದಲ್ಲ ಎಂದು ಅಥವಾ ನೈಜವಾದುದಲ್ಲ ಎಂದು ಮನಗಂಡರೆ, ಅವನು ಅಂಥ ರಾಜೀನಾಮೆಯನ್ನು ಅಂಗೀಕರಿಸತಕ್ಕದ್ದಲ್ಲ.] (1974ನೆಯ ಇಸವಿಯ ಸಂವಿಧಾನ (ಮೂವತ್ತಮೂರನೆಯ ತಿದ್ದುಪಡಿ) ಅಧಿನಿಯಮದ 2ನೇ ಪ್ರಕರಣದ ಮೂಲಕ ಸೇರಿಸಲಾಗಿದೆ.) (4) ಸಂಸತ್ತಿನ ಯಾವುದೇ ಸದನದ ಸದಸ್ಯನು ಆ ಸದನದ ಅನುಮತಿಯಿಲ್ಲದೆ ಅರವತ್ತು ದಿನಗಳವರೆಗೆ ಅದರ ಎಲ್ಲ ಸಭೆಗಳಿಗೂ ಗೈರುಹಾಜರಾದರೆ, ಅವನ ಸ್ಥಾನವು ಖಾಲಿಯಾಗಿದೆ ಎಂದು ಆ ಸದನವು ಘೋಷಿಸಬಹುದು: ಪರಂತು, ಸದರಿ ಅರವತ್ತು ದಿನಗಳ ಅವಧಿಯನ್ನು ಲೆಕ್ಕ ಹಾಕುವಲ್ಲಿ ಆ ಸದನದ ಅಧಿವೇಶನವನ್ನು ಮುಕ್ತಾಯಗೊಳಿಸಲಾದ ಅಥವಾ ನಿರಂತರ ನಾಲ್ಕು ದಿನಗಳಿಗಿಂತ ಹೆಚ್ಚು ಕಾಲ ಮುಂದೂಡಲಾದ ಯಾವುದೇ ಅವಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ.

Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 38 and 39

Leave a Reply