102. ಸದಸ್ಯತ್ವಕ್ಕೆ ಅನರ್ಹತೆಗಳು:– (1) ಯಾರೇ ವ್ಯಕ್ತಿಯು,- (ಎ) ಭಾರತ ಸರ್ಕಾರದ ಅಥವಾ ಯಾವುದೇ ರಾಜ್ಯ ಸರ್ಕಾರದ ಅಧೀನದಲ್ಲಿರುವ ಯಾವ ಪದವನ್ನು ಧಾರಣ ಮಾಡಿದವನು ಅನರ್ಹನಾಗುವುದಿಲ್ಲವೆಂದು ಸಂಸತ್ತು ಕಾನೂನಿನ ಮೂಲಕ ಘೋಷಿಸಿದೆಯೋ ಅಂಥ ಪದವನ್ನು ಹೊರತುಪಡಿಸಿ, ಇತರ ಯಾವುದೇ ಲಾಭದಾಯಕ ಪದವನ್ನು ಅವನು ಧಾರಣ ಮಾಡಿದ್ದರೆ; (ಬಿ)ಅಸ್ವಸ್ಥಚಿತ್ತನಾಗಿದ್ದರೆ ಮತ್ತು ಸಕ್ಷಮ ನ್ಯಾಯಾಲಯವು ಹಾಗೆಂದು ಘೋಷಿಸಿದ್ದರೆ; (ಸಿ)ಅವಿಮುಕ್ತ ದಿವಾಳಿಯಾಗಿದ್ದರೆ; (ಡಿ)ಭಾರತದ ನಾಗರಿಕನಾಗಿಲ್ಲದಿದ್ದರೆ ಅಥವಾ ಯಾವುದೇ ವಿದೇಶಿ ರಾಜ್ಯದ ನಾಗರಿಕತ್ವವನ್ನು ಸ್ವಇಚ್ಫೆಯಿಂದ ಆರ್ಜಿಸಿದ್ದರೆ ಅಥವಾ ಒಂದು ವಿದೇಶಿ ರಾಜ್ಯಕ್ಕೆ ನಿಷ್ಠೆ ಅಥವಾ ಅನುಸಕ್ತಿ ಹೊಂದಿರುವುದನ್ನು ಒಪ್ಪಿಕೊಂಡಿದ್ದರೆ; (ಇ)ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ಅವನನ್ನು ಹಾಗೆ ಅನರ್ಹಗೊಳಿಸಿದ್ದರೆ – ಅವನು ಸಂಸತ್ತಿನ ಯಾವುದೇ ಸದನದ ಸದಸ್ಯನಾಗಿ ಆಯ್ಕೆಯಾಗಲು ಮತ್ತು ಅದರ ಸದಸ್ಯನಾಗಿರಲು ಅನರ್ಹನಾಗಿರತಕ್ಕದ್ದು.
[ವಿವರಣೆ:– ಈ ಖಂಡದ ಉದ್ದೇಶಗಳಿಗಾಗಿ] ಯಾರೇ ವ್ಯಕ್ತಿಯು ಒಕ್ಕೂಟದ ಅಥವಾ ಯಾವುದೇ ರಾಜ್ಯದ ಮಂತ್ರಿಯಾಗಿ ಇರುವ ಕಾರಣ ಮಾತ್ರದಿಂದಲೇ ಅವನು ಭಾರತ ಸರ್ಕಾರದ ಅಥವಾ ಅಂಥ ರಾಜ್ಯ ಸರ್ಕಾರದ ಅಧೀನದಲ್ಲಿ ಒಂದು ಲಾಭದಾಯಕ ಪದವನ್ನು ಧಾರಣ ಮಾಡಿರುವುದಾಗಿ ಭಾವಿಸತಕ್ಕದ್ದಲ್ಲ. (1985ನೆಯ ಇಸವಿಯ ಸಂವಿಧಾನ (ಐವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 3ನೇ ಪ್ರಕರಣದ ಮೂಲಕ “(2) ಈ ಅನುಚ್ಛೇದದ ಉದ್ದೇಶಗಳಿಗಾಗಿ’’ ಎಂಬುದಕ್ಕೆ ಬದಲಾಗಿ (1.3.1985ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.)
[(2) ಯಾರೇ ವ್ಯಕ್ತಿಯನ್ನು ಹತ್ತನೆಯ ಅನುಸೂಚಿಯ ಮೇರೆಗೆ ಹಾಗೆ ಅನರ್ಹಗೊಳಿಸಲಾಗಿದ್ದರೆ ಅವನು ಸಂಸತ್ತಿನ ಯಾವುದೇ ಸದನದ ಸದಸ್ಯನಾಗಿರಲು ಅನರ್ಹನಾಗತಕ್ಕದ್ದು.] (ಅದೇ ಅಧಿನಿಯಮದ 3ನೇ ಪ್ರಕರಣದ ಮೂಲಕ (1.3.1985ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.)
[103. ಸದಸ್ಯರ ಅನರ್ಹತೆಗಳನ್ನು ಕುರಿತ ಪ್ರಶ್ನೆಗಳ ತೀರ್ಮಾನ:– (1) ಸಂಸತ್ತಿನ ಯಾವುದೇ ಸದನದ ಸದಸ್ಯನು 102ನೇ ಅನುಚ್ಫೇದದ (1)ನೇ ಖಂಡದಲ್ಲಿ ನಮೂದಾಗಿರುವ ಯಾವುದೇ ಅನರ್ಹತೆಗಳಿಗೆ ಒಳಪಟ್ಟಿದ್ದಾನೆಯೇ ಹೇಗೆ ಎಂಬ ಬಗ್ಗೆ ಯಾವುದೇ ಪ್ರಶ್ನೆಯು ಉದ್ಭವಿಸಿದರೆ, ಆ ಪ್ರಶ್ನೆಯನ್ನು ರಾಷ್ಟ್ರಪತಿಯ ತೀರ್ಮಾನಕ್ಕೆ ಒಪ್ಪಿಸತಕ್ಕದ್ದು ಮತ್ತು ಆ ಬಗ್ಗೆ ಅವನ ತೀರ್ಮಾನವೇ ಅಂತಿಮವಾಗಿರತಕ್ಕದ್ದು. (103ನೇ ಅನುಚ್ಫೇದವನ್ನು ಅನುಕ್ರಮವಾಗಿ 1976ನೇ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ)ಅಧಿನಿಯಮದ 20ನೇ ಪ್ರಕರಣದ ಮೂಲಕ (3-1-77ರಿಂದ ಜಾರಿಗೆ ಬರುವಂತೆ) ಹಾಗೂ 1978ನೇ ಇಸವಿಯ ಸಂವಿಧಾನದ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 14ನೇ ಪ್ರಕರಣದ ಮೂಲಕ (20-6-79ರಿಂದ ಜಾರಿಗೆ ಬರುವಂತೆ) ತಿದ್ದುಪಡಿ ಮಾಡಲಾಗಿದೆ. ಮೇಲ್ಕಂಡಂತೆ ಓದಿಕೊಳ್ಳಬೇಕು.)(2) ಅಂಥ ಯಾವುದೇ ಪ್ರಶ್ನೆಯ ಮೇಲೆ ಯಾವುದೇ ತೀರ್ಮಾನವನ್ನು ಕೊಡುವುದಕ್ಕೆ ಮುಂಚಿತವಾಗಿ, ರಾಷ್ಟ್ರಪತಿಯು ಚುನಾವಣಾ ಆಯೋಗದ ಅಭಿಪ್ರಾಯವನ್ನು ಪಡೆಯತಕ್ಕದ್ದು ಮತ್ತು ಆ ಅಭಿಪ್ರಾಯಕ್ಕನುಸಾರ ಕಾರ್ಯ ಪ್ರವೃತ್ತನಾಗತಕ್ಕದ್ದು.]
104. 99ನೆಯ ಅನುಚ್ಫೇದದ ಮೇರೆಗೆ ಪ್ರಮಾಣ ಅಥವಾ ಪ್ರತಿಜ್ಞೆ ಮಾಡುವುದಕ್ಕೆ ಮುಂಚೆ ಅಥವಾ ಅರ್ಹನಾಗಿಲ್ಲದಿರುವಾಗ ಅಥವಾ ಅನರ್ಹಗೊಳಿಸಿರುವಾಗ ಸದಸ್ಯನಾಗಿ ಕುಳಿತರೆ ಮತ್ತು ಮತ ಕೊಟ್ಟರೆ ದಂಡ:- ಯಾರೇ ವ್ಯಕ್ತಿಯು ಸಂಸತ್ತಿನ ಯಾವುದೇ ಸದನದ ಸದಸ್ಯನಾಗಿ 99ನೆಯ ಅನುಚ್ಫೇದದ ಅಗತ್ಯತೆಗಳನ್ನು ಪಾಲಿಸುವುದಕ್ಕೆ ಮುಂಚೆ ಅಥವಾ ಅದರ ಸದಸ್ಯತ್ವಕ್ಕೆ ತಾನು ಅರ್ಹನಾಗಿಲ್ಲವೆಂದು ತಿಳಿದೂ ಅಥವಾ ಸದಸ್ಯತ್ವಕ್ಕೆ ತಾನು ಅನರ್ಹನಾಗಿರುವೆನೆಂದು ತಿಳಿದೂ ಅಥವಾ ಸಂಸತ್ತು ಮಾಡಿದ ಯಾವುದೇ ಕಾನೂನಿನ ಉಪಬಂಧಗಳು ತಾನು ಸದನದಲ್ಲಿ ಕುಳಿತುಕೊಳ್ಳುವುದನ್ನು ಅಥವಾ ಮತ ಕೊಡುವುದನ್ನು ನಿಷೇಧಿಸಿರುವುದು ತನಗೆ ತಿಳಿದಿದ್ದೂ, ಅವನು ಸದನದಲ್ಲಿ ಕುಳಿತರೆ ಅಥವಾ ಮತ ಕೊಟ್ಟರೆ, ಅವನು ಹಾಗೆ ಕುಳಿತ ಅಥವಾ ಮತ ಕೊಟ್ಟ ಪ್ರತಿ ದಿನಕ್ಕೂ ಐನೂರು ರೂಪಾಯಿಗಳ ದಂಡವನ್ನು ಕೊಡಲು ಬದ್ಧನಾಗಿರತಕ್ಕದ್ದು ಮತ್ತು ಆ ದಂಡವನ್ನು ಒಕ್ಕೂಟಕ್ಕೆ ಬರಬೇಕಾದ ಸಾಲದಂತೆ ವಸೂಲು ಮಾಡತಕ್ಕದ್ದು.
Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 40




