ನ್ಯಾಯಾಂಗ ಸದಾ ಕಾಲ ಸಂವಿಧಾನದ ಶ್ರೇಷ್ಠತೆಯನ್ನು ರಕ್ಷಿಸುತ್ತದೆ
ಧಾರವಾಡ: ಇಂದಿನ ಜಾಗತಿಕ ಬದಲಾವಣೆ, ಬೇರೆ ದೇಶಗಳ ಆಡಳಿತ, ಅಲ್ಲಿನ ನಾಗರಿಕ ಹಕ್ಕು, ಸ್ವಾತಂತ್ರ್ಯಗಳನ್ನು ಅವಲೋಕಿಸಿದಾಗ ಭಾರತದ ಸಂವಿಧಾನದ ಶ್ರೇಷ್ಠತೆ ಎದ್ದು ಕಾಣುತ್ತದೆ. ನಮ್ಮ ಸಂವಿಧಾನ ವಿಶ್ವದ ಸುಂದರ ಸಂವಿಧಾನವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಹೇಳಿದರು.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಧಾರವಾಡ ವಕೀಲರ ಸಂಘ, ಅಭಿಯೋಜನೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ನಿಮಿತ್ತ ಅರೆ ಕಾಲಿಕ ಕಾನೂನು ಸ್ವಯಂ ಸೇವಕರಿಗೆ ಆಯೋಜಿಸಿದ್ದ ಒಂದು ದಿನದ ಪ್ರವೇಶ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.
ನಾವು ಪ್ರತಿನಿತ್ಯ ಜೀವನದಲ್ಲಿ ಸಂವಿಧಾನದ ಆಶಯಗಳನ್ನೇ ಅಳವಡಿಸಿಕೊಂಡು, ಆಚರಿಸುತ್ತೇವೆ. ಸಂವಿಧಾನ ಪೀಠಿಕೆಯ ಪ್ರತಿ ಪದವು ಮುಖ್ಯವಾಗಿದೆ. ಸಂವಿಧಾನ ಪ್ರಸ್ತಾವನೆಗೆ ಸೇರಿಸಿರುವ ಪದ ತೆಗೆಯದಿರುವ ಕುರಿತು ಸರ್ವೋಚ್ಛ ನ್ಯಾಯಾಲಯ ಈಚೆಗೆ ನೀಡಿರುವ ತೀರ್ಪು ಸಂವಿಧಾನದ ಮಹತ್ವ, ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದರು.
ವಿಶ್ವದ ಬೇರೆ ದೇಶಗಳ ಸಂವಿಧಾನಗಳನ್ನು ನೋಡಿದಾಗ, ನಮ್ಮ ಸಂವಿಧಾನ ಮೇಲ್ಪಂಕ್ತಿಯಾಗಿದೆ. ಸಂವಿಧಾನದ ಆಶಯಕ್ಕೆ ಧಕ್ಕೆ ಬಂದಾಗ ನ್ಯಾಯಾಂಗ ಅದರ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತದೆ. ಶ್ರೇಷ್ಠ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ ಅವರು ಸೇರಿದಂತೆ ಎಲ್ಲ ಮಹನೀಯರನ್ನು ನಾವು ಸ್ಮರಿಸಬೇಕು ಎಂದರು.
ಅರೆಕಾಲಿಕ ಕಾನೂನು ಸ್ವಯಂ ಸೇವಕರು ಕಾಳಜಿಯಿಂದ ಜನರಿಗೆ ನ್ಯಾಯಾಂಗದ ಸೇವೆಗಳನ್ನು ಮುಟ್ಟಿಸಬೇಕು. ಕಾನೂನು ಸೇವೆಗಳ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಮೇಲೆ ನ್ಯಾಯಾಂಗದ ಕಾರ್ಯಗಳಲ್ಲಿ ಸ್ವಯಂ ಸೇವಕರಿಗೆ, ಆಸಕ್ತರಿಗೆ ಅವಕಾಶವಾಗಿದೆ. ನಿರ್ಗತಿಕರಿಗೆ, ಬಡವರಿಗೆ, ಅರ್ಹರಿಗೆ ನ್ಯಾಯಾಂಗದ ಸೇವೆಗಳನ್ನು ತಲುಪಿಸಬೇಕು. ಮತ್ತು ಸಾರ್ವಜನಿಕರಲ್ಲಿ ಕಾನೂನುಗಳ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಎ.ಎ.ಮುಗದುಮ್, ಸದಸ್ಯರಾದ ವಿ.ಡಿ.ಕಾಮರೆಡ್ಡಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ, ಜಿಲ್ಲಾ ಸರ್ಕಾರಿ ವಕೀಲರಾದ ಜಿ.ಜಿ. ಅಮೋಘಿಮಠ, ಎಸ್.ಪಿ. ಕಚೇರಿ ಕಾನೂನು ಅಧಿಕಾರಿ ಸ್ಮಿತಾ ಆರ್.ಗಿರಗಾವಿ ಮಾತನಾಡಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಮಹಾನಗರ ಪೊಲೀಸ್ ಆಯುಕ್ತಾಲಯದ ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ ಟಿ. ವೇದಿಕೆಯಲ್ಲಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ಯಾನಲ್ ವಕೀಲರಾದ ಸೋಮಶೇಖರ ಜಾಡರ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅಪರಾಧ ಕಾನೂನು ಕುರಿತು ಪ್ರಧಾನ ಸರಕಾರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ, ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಅರೇ ಕಾನೂನು ಸ್ವಯಂ ಸೇವಕರ ಪಾತ್ರ ಹಾಗೂ ಕರ್ತವ್ಯಗಳ ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಮಧ್ಯಸ್ಥಿಕೆ ಮತ್ತು ಲೋಕ ಅದಾಲತ ಕುರಿತು ಸಹಾಯಕ ಪ್ರಾಧ್ಯಾಪಕಿ ಡಾ.ಶಶಿರೇಖಾ ಮಾಳಗಿ, 144- ಬಿ.ಎನ್.ಎಸ್.ಎಸ್ ಜೀವನಾಂಶ ಕಾಯ್ದೆ ಮತ್ತು 85- ಬಿ.ಎನ್.ಎಸ್-ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ನ್ಯಾಯಾವಾದಿ ರಾಜೇಶ ನಾವಲಗಿಮಠ, ಪೋಕ್ಸೊ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ಕುರಿತು ನೂರಜಹಾನ್ ಕಿಲ್ಲೇದಾರ ಮತ್ತು ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಕಾನೂನು ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ ಎಮ್.ಎ ವಿಶೇಷ ಉಪನ್ಯಾಸಗಳನ್ನು ನೀಡಿದರು.
ವಿವಿಧ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆ ಮತ್ತು ಸ್ವಯಂ ಪ್ರೇರಣೆಯಿಂದ ಅರೆ ಕಾಲಿಕ ಕಾನೂನು ಸ್ವಯಂ ಸೇವಕರಾಗಿ ಸೇವೆಗೆ ಸೇರಿರುವ 150 ಕ್ಕೂ ಹೆಚ್ಚು ಜನರಿಗೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಯಿತು.




