172. ರಾಜ್ಯ ವಿಧಾನಮಂಡಲಗಳ ಅವಧಿ:- (1) ಪ್ರತಿಯೊಂದು ರಾಜ್ಯದ ಪ್ರತಿಯೊಂದು ವಿಧಾನಸಭೆಯು ಮುಂಚಿತವಾಗಿಯೇ ವಿಸರ್ಜನೆಯಾದ ಹೊರತು ಅದು ತನ್ನ ಮೊದಲ ಸಭೆಗೆ ಗೊತ್ತುಪಡಿಸಿದ ದಿನಾಂಕದಿಂದ [ಐದು ವರ್ಷಗಳ] (1978ನೆಯ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 24ನೆಯ ಪ್ರಕರಣದ ಮೂಲಕ (6-9-79ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.) ಅವಧಿಯವರೆಗೆ ಮುಂದುವರಿಯತಕ್ಕದ್ದು. ಆದರೆ ಅದಕ್ಕಿಂತ ಹೆಚ್ಚು ಕಾಲ ಮುಂದುವರಿಯತಕ್ಕದ್ದಲ್ಲ ಮತ್ತು ಸದರಿ [ಐದು ವರ್ಷಗಳ] (1976ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 30ನೇ ಪ್ರಕರಣದ ಮೂಲಕ “ಐದು ವರ್ಷಗಳ” ಎಂಬ ಮೂಲ ಪದಗಳಿಗೆ ಬದಲಾಗಿ “ಆರು ವರ್ಷಗಳ” ಎಂಬ ಪದಗಳನ್ನು (3-1-77 ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿತ್ತು.) ಅವಧಿಯ ಮುಕ್ತಾಯವು ಆ ಸದನದ ವಿಸರ್ಜನೆಯು ಪರಿಣಾಮವುಳ್ಳದ್ದಾಗಿರತಕ್ಕದ್ದು:
ಪರಂತು, ಸದರಿ ಅವಧಿಯನ್ನು ತುರ್ತು ಪರಿಸ್ಥಿತಿಯ ಉದ್ಘೋಷಣೆಯು ಜಾರಿಯಲ್ಲಿರುವಾಗ, ಸಂಸತ್ತು ಕಾನೂನಿನ ಮೂಲಕ ಒಂದು ಸಲಕ್ಕೆ ಒಂದು ವರ್ಷಕ್ಕೆ ಮೀರದ ಅವಧಿಯವರೆಗೆ ವಿಸ್ತರಿಸಬಹುದು ಮತ್ತು ಆ ಉದ್ಘೋಷಣೆಯು ಜಾರಿಯಲ್ಲಿರುವುದು ನಿಂತುಹೋದ ತರುವಾಯ ಯಾವುದೇ ಸಂದರ್ಭದಲ್ಲಿ ಆರು ತಿಂಗಳ ಅವಧಿಗೆ ಮೀರಿ ವಿಸ್ತರಿಸತಕ್ಕದ್ದಲ್ಲ.
(2) ಒಂದು ರಾಜ್ಯದ ವಿಧಾನಪರಿಷತ್ತು ವಿಸರ್ಜನೆಗೊಳಪಡತಕ್ಕದ್ದಲ್ಲ, ಆದರೆ ಅದರ ಸದಸ್ಯರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮೂರನೆಯ ಒಂದು ಭಾಗದಷ್ಟು ಸದಸ್ಯರು ಸಂಸತ್ತು ಕಾನೂನಿನ ಮೂಲಕ ಆ ಬಗ್ಗೆ ಮಾಡಿದ ಉಪಬಂಧಗಳಿಗನುಸಾರವಾಗಿ ಪ್ರತಿ ಎರಡನೇ ವರ್ಷ ಮುಕ್ತಾಯವಾದ ಮೇಲೆ ಆದಷ್ಟು ಬೇಗನೆ ನಿವೃತ್ತರಾಗತಕ್ಕದ್ದು.
Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 68




