ಸಾಮಾನ್ಯತಃ ಪ್ರಕ್ರಿಯೆ
118. ಪ್ರಕ್ರಿಯಾ ನಿಯಮಗಳು:- (1) ಸಂಸತ್ತಿನ ಪ್ರತಿಯೊಂದು ಸದನವು ತನ್ನ ಪ್ರಕ್ರಿಯೆಯನ್ನು ಮತ್ತು ತನ್ನ ಕಾರ್ಯಕಲಾಪ ನಡೆಸುವುದನ್ನು ವಿನಿಯಮಗೊಳಿಸುವುದಕ್ಕಾಗಿ ಈ ಸಂವಿಧಾನದ ಉಪಬಂಧಗಳಿಗೊಳಪಟ್ಟು ನಿಯಮಗಳನ್ನು ರಚಿಸಬಹುದು. (2) (1)ನೆಯ ಖಂಡದ ಮೇರೆಗೆ ನಿಯಮಗಳನ್ನು ರಚಿಸುವವರೆಗೆ, ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ನಿಕಟಪೂರ್ವದಲ್ಲಿ ಡೊಮಿನಿಯನ್ ಆಫ್ ಇಂಡಿಯಾದ ವಿಧಾನಮಂಡಲದ ಸಂಬಂಧದಲ್ಲಿ ಯಾವ ಪ್ರಕ್ರಿಯಾ ನಿಯಮಗಳು ಮತ್ತು ಸ್ಥಾಯೀ ಆದೇಶಗಳು ಜಾರಿಯಲ್ಲಿದ್ದುವೋ ಅವೇ ನಿಯಮಗಳು ಮತ್ತು ಸ್ಥಾಯೀ ಆದೇಶಗಳು, ರಾಜ್ಯಸಭೆಯ ಸಭಾಪತಿಯು ಅಥವಾ ಸಂದರ್ಭಾನುಸಾರ, ಲೋಕಸಭೆಯ ಅಧ್ಯಕ್ಷನು ಅವುಗಳಲ್ಲಿ ಮಾಡಬಹುದಾದಂಥ ಮಾರ್ಪಾಡುಗಳಿಗೆ ಮತ್ತು ಅಳವಡಿಕೆಗಳಿಗೆ ಒಳಪಟ್ಟು, ಸಂಸತ್ತಿಗೆ ಸಂಬಂಧಪಟ್ಟಂತೆ ಪರಿಣಾಮಕಾರಿಯಾಗತಕ್ಕದ್ದು. (3) ರಾಷ್ಟ್ರಪತಿಯು ರಾಜ್ಯಸಭೆಯ ಸಭಾಪತಿಯೊಡನೆ ಮತ್ತು ಲೋಕಸಭೆಯ ಅಧ್ಯಕ್ಷನೊಡನೆ ಸಮಾಲೋಚನೆ ಮಾಡಿದ ತರುವಾಯ, ಆ ಉಭಯ ಸದನಗಳ ಜಂಟಿ ಉಪವೇಶನಗಳಿಗೆ ಮತ್ತು ಅವುಗಳ ನಡುವಣ ಸಂಪರ್ಕದ ಪ್ರಕ್ರಿಯೆಗೆ ಸಂಬಂಧಪಟ್ಟ ನಿಯಮಗಳನ್ನು ರಚಿಸಬಹುದು. (4) ಉಭಯ ಸದನಗಳ ಜಂಟಿ ಉಪವೇಶನದಲ್ಲಿ, ಲೋಕಸಭೆಯ ಅಧ್ಯಕ್ಷನು ಅಥವಾ ಅವನ ಗೈರುಹಾಜರಿಯಲ್ಲಿ (3)ನೆಯ ಖಂಡದ ಮೇರೆಗೆ ರಚಿತವಾದ ಪ್ರಕ್ರಿಯಾ ನಿಯಮಗಳ ಮೂಲಕ ನಿರ್ಧರಿಸಬಹುದಾದಂಥ ವ್ಯಕ್ತಿಯು ಅಧ್ಯಕ್ಷತೆ ವಹಿಸತಕ್ಕದ್ದು.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
119. ಸಂಸತ್ತಿನಲ್ಲಿ ಹಣಕಾಸು ಕಾರ್ಯಕಲಾಪಗಳಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕಾನೂನಿನ ಮೂಲಕ ವಿನಿಯಮಗೊಳಿಸುವುದು:- ಹಣಕಾಸು ಕಾರ್ಯಕಲಾಪಗಳನ್ನು ಸಕಾಲದಲ್ಲಿ ಸಮಾಪ್ತಗೊಳಿಸುವ ಉದ್ದೇಶಕ್ಕಾಗಿ, ಸಂಸತ್ತು ಯಾವುದೇ ಹಣಕಾಸು ಕಾರ್ಯಕಲಾಪಗಳ ಬಗೆಗಿನ ಅಥವಾ ಭಾರತದ ಸಂಚಿತ ನಿಧಿಯಿಂದ ಹಣವನ್ನು ವಿನಿಯೋಗಿಸುವುದರ ಬಗೆಗಿನ ಯಾವುದೇ ವಿಧೇಯಕಕ್ಕೆ ಸಂಬಂಧಪಟ್ಟಂತೆ ಸಂಸತ್ತಿನ ಪ್ರತಿಯೊಂದು ಸದನದ ಕಾರ್ಯವಿಧಾನವನ್ನು ಮತ್ತು ಸದನದ ಕಾರ್ಯಕಲಾಪ ನಡೆಸುವುದನ್ನು ಕಾನೂನಿನ ಮೂಲಕ ವಿನಿಯಮಗೊಳಿಸಬಹುದು ಮತ್ತು ಹಾಗೆ ಮಾಡಿದ ಯಾವುದೇ ಕಾನೂನಿನ ಯಾವುದೇ ಉಪಬಂಧವು, 118ನೆಯ ಅನುಚ್ಛೇದದ (1)ನೆಯ ಖಂಡದ ಮೇರೆಗೆ ಸಂಸತ್ತಿನ ಸದನದಿಂದ ರಚಿತವಾದ ಯಾವುದೇ ನಿಯಮಕ್ಕೆ ಅಥವಾ ಆ ಅನುಚ್ಛೇದದ (2)ನೆಯ ಖಂಡದ ಮೇರೆಗೆ ಸಂಸತ್ತಿಗೆ ಸಂಬಂಧಪಟ್ಟಂತೆ ಪರಿಣಾಮವುಳ್ಳ ಯಾವುದೇ ನಿಯಮಕ್ಕೆ ಅಥವಾ ಸ್ಥಾಯಿ ಆದೇಶಕ್ಕೆ ಅಸಂಗತವಾಗಿದ್ದರೆ ಮತ್ತು ಹಾಗೆ ಅಸಂಗತವಾಗಿರುವಷ್ಟರ ಮಟ್ಟಿಗೆ ಅದು ಪ್ರಭಾವವುಳ್ಳದ್ದಾಗಿರತಕ್ಕದ್ದು.
120. ಸಂಸತ್ತಿನಲ್ಲಿ ಬಳಸಬೇಕಾದ ಭಾಷೆ:- (1) ಭಾಗ- XVII ರಲ್ಲಿ ಏನೇ ಇದ್ದಾಗ್ಯೂ, 348ನೆಯ ಅನುಚ್ಛೇದದ ಉಪಬಂಧಗಳಿಗೆ ಒಳಪಟ್ಟು, ಸಂಸತ್ತಿನಲ್ಲಿ ಕಾರ್ಯಕಲಾಪವು ಹಿಂದಿಯಲ್ಲಿ ಅಥವಾ ಇಂಗ್ಲೀಷ್ ನಲ್ಲಿ ನಡೆಯತಕ್ಕದ್ದು: ಪರಂತು, ಯಾರೇ ಸದಸ್ಯನಿಗೆ ಹಿಂದಿಯಲ್ಲಿ ಅಥವಾ ಇಂಗ್ಲೀಷ್‌ನಲ್ಲಿ ತನ್ನ ವಿಚಾರಗಳನ್ನು ಸಮರ್ಪಕವಾಗಿ ವ್ಯಕ್ತಗೊಳಿಸಲು ಆಗದಿರುವ ಪಕ್ಷದಲ್ಲಿ ಆ ವ್ಯಕ್ತಿಗೆ ಅವನ ಮಾತೃಭಾಷೆಯಲ್ಲಿ ಮಾತನಾಡಲು ರಾಜ್ಯಸಭೆಯ ಸಭಾಪತಿಯು ಅಥವಾ ಸಂದರ್ಭಾನುಸಾರ ಲೋಕಸಭೆಯ ಅಧ್ಯಕ್ಷನು ಅಥವಾ ಸಭಾಪತಿಯಾಗಿ ಅಥವಾ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯು ಅನುಮತಿ ಕೊಡಬಹುದು. (2) ಸಂಸತ್ತು, ಕಾನೂನಿನ ಮೂಲಕ ಅನ್ಯಥಾ ಉಪಬಂಧಿಸಿದ ಹೊರತು, ಸಂವಿಧಾನವು ಪ್ರಾರಂಭವಾದಾಗಿನಿಂದ ಹದಿನೈದು ವರ್ಷಗಳ ಅವಧಿಯು ಮುಕ್ತಾಯವಾದ ತರುವಾಯ, ಈ ಅನುಚ್ಛೇದದಲ್ಲಿರುವ “ಅಥವಾ ಇಂಗ್ಲಿಷ್‌ನಲ್ಲಿ” ಎಂಬ ಪದಗಳನ್ನು ಅದರಿಂದ ಬಿಟ್ಟುಬಿಡಲಾಗಿದ್ದರೆ ಹೇಗೋ ಹಾಗೆ ಈ ಅನುಚ್ಛೇದವು ಪರಿಣಾಮವುಳ್ಳದ್ದಾಗಿರತಕ್ಕದ್ದು.
121. ಸಂಸತ್ತಿನಲ್ಲಿ ಚರ್ಚೆಯ ಮೇಲೆ ನಿರ್ಬಂಧ:- ಸರ್ವೋಚ್ಚ ನ್ಯಾಯಾಲಯದ ಅಥವಾ ಉಚ್ಚ ನ್ಯಾಯಾಲಯದ ಯಾರೇ ನ್ಯಾಯಾಧೀಶನನ್ನು ತೆಗೆದುಹಾಕಬೇಕಾಗಿ ಪ್ರಾರ್ಥಿಸುವ ಕೋರಿಕೆಯನ್ನು ಇದರಲ್ಲಿ ಇನ್ನು ಮುಂದೆ ಉಪಬಂಧಿಸಲಾದಂತೆ ರಾಷ್ಟ್ರಪತಿಗೆ ಸಲ್ಲಿಸುವ ಸೂಚನೆಯ ಮೇಲಲ್ಲದೆ, ಅಂಥ ನ್ಯಾಯಾಧೀಶನ ಕರ್ತವ್ಯ ನಿರ್ವಹಣೆಯಲ್ಲಿ ಅವನ ವರ್ತನೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಯಾವ ಚರ್ಚೆಯೂ ನಡೆಯತಕ್ಕದ್ದಲ್ಲ.122. ನ್ಯಾಯಾಲಯಗಳು ಸಂಸತ್ತಿನ ವ್ಯವಹರಣೆಗಳ ಬಗ್ಗೆ ವಿಚಾರಣೆ ನಡೆಸದಿರುವುದು:- (1) ಸಂಸತ್ತಿನಲ್ಲಿನ ಯಾವುದೇ ವ್ಯವಹರಣೆಗಳ ಸಿಂಧುತ್ವವನ್ನು, ಪ್ರಕ್ರಿಯೆಯಲ್ಲಿನ ಆಪಾದಿಸಲಾದ ಯಾವುದೇ ಕ್ರಮದೋಷದ ಆಧಾರದ ಮೇಲೆ ಪ್ರಶ್ನಿಸತಕ್ಕದ್ದಲ್ಲ. (2) ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ಸಂಸತ್ತಿನ ಪ್ರಕ್ರಿಯೆಯನ್ನು ಅಥವಾ ಕಾರ್ಯಕಲಾಪ ನಡೆಸುವುದನ್ನು ವಿನಿಯಮಿಸುವ ಅಥವಾ ಸಂಸತ್ತಿನಲ್ಲಿ ಸುವ್ಯವಸ್ಥೆಯನ್ನು ಕಾಪಾಡುವ ಅಧಿಕಾರಗಳು ಸಂಸತ್ತಿನ ಯಾವ ಅಧಿಕಾರಿಯಲ್ಲಿ ಅಥವಾ ಸದಸ್ಯನಲ್ಲಿ ನಿಹಿತವಾಗಿರುವವೋ, ಆ ಯಾರೇ ಅಧಿಕಾರಿಯು ಅಥವಾ ಸದಸ್ಯನು, ಆ ಅಧಿಕಾರಗಳನ್ನು ತಾನು ಚಲಾಯಿಸುವುದಕ್ಕೆ ಸಂಬಂಧಿಸಿದಂತೆ, ಯಾವುದೇ ನ್ಯಾಯಾಲಯದ ಅಧಿಕಾರವ್ಯಾಪ್ತಿಗೆ ಒಳಪಡತಕ್ಕದ್ದಲ್ಲ.
Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 47 – 49



