ಇತಿಹಾಸ ತಿರುಚಿ ಸುಳ್ಳುಗಳನ್ನು ಸೃಷ್ಟಿಸಿ, ಮೂಢನಂಬಿಕೆ ವೈಭವೀಕರಿಸುವವರ ವಿರುದ್ಧ ಪ್ರಬಲ ಧ್ವನಿ ಮೊಳಗಿಸಬೇಕು

11 months ago

ಮಕ್ಕಳಲ್ಲಿರುವ ಅಪಾರ ಶಕ್ತಿಯನ್ನು ಸಮಾಜದ ಉನ್ನತಿಗೆ ಬಳಸಿಕೊಳ್ಳಬೇಕು: ಡಾ.ನಿಕೇತನಾ

ಮಂಗಳೂರು: ಪ್ರತಿಯೊಬ್ಬ ಮಕ್ಕಳಲ್ಲೂ ಹಲವಾರು ರೀತಿಯ ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸಿ ನೀರೆರೆದು ಪೋಷಿಸಿ ಹೆಮ್ಮರವಾಗಿ ಬೆಳೆಸುವಲ್ಲಿ ಹಿರಿಯರ ಪಾತ್ರ ಮಹತ್ವದ್ದಾಗಿದೆ ಎಂದು ಉಡುಪಿ ಅಜ್ಜರಕಾಡು ಡಾ.ಜಿ ಶಂಕರ್ ಸರಕಾರಿ ಹೆಣ್ಮಕ್ಕಳ ಪ್ರಥಮ ದರ್ಜೆ ಕಾಲೇಜ್ ನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನಿಕೇತನಾ ಹೇಳಿದರು.

ಚಿಣ್ಣರ ಚಾವಡಿ ಮಂಗಳೂರು ಹಾಗೂ ಸಂತ ಮದರ್ ತೆರೇಸಾ ವಿಚಾರ ವೇದಿಕೆ ಇವುಗಳ ಜಂಟಿ ಆಶ್ರಯದಲ್ಲಿ ನಗರದ ಸಂತ ಅಲೋಶಿಯಸ್ ಹೈಸ್ಕೂಲ್ ಸಭಾಂಗಣದಲ್ಲಿ ಇಂದಿನಿಂದ 4 ದಿನಗಳ ಕಾಲ ನಡೆಯಲಿರುವ ಚಿಣ್ಣರ ಕಲರವ – 2025 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಭವಿಷ್ಯತ್ತಿನ ಹರಿಕಾರರಾದ ಮಕ್ಕಳ ಮೇಲೆ ನಡೆಯುತ್ತಿರುವ ಪ್ರಜ್ಞಾಪೂರ್ವಕ ದಾಳಿಯಿಂದಾಗಿ ಮಕ್ಕಳ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕುವಂತಾಗಿದೆ. ಅಂತಹ ಮಕ್ಕಳಿಗೆ ಪ್ರೀತಿಯ ಧಾರೆ ಎರೆಯುವ ಮೂಲಕ ಅವರಲ್ಲಿರುವ ಅಪಾರ ಶಕ್ತಿಯನ್ನು ಸಮಾಜದ ಉನ್ನತಿಗೆ ಬಳಸಿಕೊಳ್ಳುವಂತಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೇರಳ ಬಾಲಸಂಘದ ರಾಜ್ಯ ಸಮಿತಿ ಸದಸ್ಯರಾದ ಭಾರತಿ ಎಸ್, ಇತಿಹಾಸಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ವಾಸ್ತವ ಜಗತ್ತಿನಲ್ಲಿ ಕಾರ್ಯಾಚರಿಸಿ ಭವಿಷ್ಯದ ಬದುಕನ್ನು ಕಟ್ಟಬೇಕಾದ ಎಳೆಯ ಮಕ್ಕಳಲ್ಲಿ ಪ್ರಜ್ಞಾಪೂರ್ವಕವಾಗಿ ಇತಿಹಾಸವನ್ನು ತಿರುಚಿ ಸುಳ್ಳುಗಳನ್ನು ಸೃಷ್ಟಿಸಿ, ಮೂಢನಂಬಿಕೆಗಳನ್ನು ವೈಭವೀಕರಿಸಿ ಅರಾಜಕತೆಯನ್ನುಂಟು ಮಾಡುವ ದುಷ್ಟ ಶಕ್ತಿಗಳ ವಿರುದ್ಧ ಪ್ರಬಲ ಧ್ವನಿಯನ್ನು ಮೊಳಗಿಸಬೇಕು. ಆ ಮೂಲಕ ಚರಿತ್ರೆಯನ್ನು ಅರಿತು ವೈಜ್ಞಾನಿಕ ಮನೋಭಾವವನ್ನು ಎಳೆಯ ಪ್ರಾಯದ ಮಕ್ಕಳಲ್ಲಿ  ಮೂಡಿಸಬೇಕಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ಮಾತನಾಡಿ, ಏನೂ ತಿಳಿಯದ ಮುಗ್ಧ ಮನಸುಗಳಿಗೆ ಪ್ರೀತಿ ನೀಡುವ ಮೂಲಕ ಅವರು ಮತ್ತೆ ಸಮಾಜಕ್ಕೆ ಪ್ರೀತಿಯನ್ನು ನೀಡುವಲ್ಲಿ ಸಮಾಜದ ಎಲ್ಲಾ ವರ್ಗದ ಜನತೆ ಒಂದಾಗಬೇಕಾಗಿದೆ ಹಾಗೂ ಮಕ್ಕಳ ಮನಸನ್ನು ಅರಿಯುವ ವಿಶಾಲ ಹ್ರದಯ ಪ್ರತಿಯೊಬ್ಬರಲ್ಲಿ ಇರಬೇಕಾಗಿದೆ ಎಂದರು.

ವಿಮಾ ನೌಕರರ ಸಂಘಟನೆಯ ಮುಖಂಡ ಅಲ್ಬನ್ ಮಸ್ಕರೇನಸ್ ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡಿದರು. ಚಿಣ್ಣರ ಚಾವಡಿ ಸಂಚಾಲಕ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಸಾಮಾಜಿಕ ಚಿಂತಕರಾದ ಡಾ.ಲಯನ್ ಓಸ್ವಾಲ್ಡ್ ಪುರ್ತಾಡೋ, ವಿದ್ಯಾ ಶೆಣೈ, ನೀನಾಸಂ ಪದವೀಧರರಾದ ಮೈಟಿ ಗಿಬ್ಸನ್,ಯುವ ಉದ್ಯಮಿಗಳಾದ ಸಿರಾಜ್ ಮಂಜೇಶ್ವರ, ಶಿಬಿರದ ನಿರ್ದೇಶಕ ಪ್ರವೀಣ್ ವಿಸ್ಮಯ ಹಾಜರಿದ್ದರು.

Leave a Reply