ತಪ್ಪು ಯಾರದು?

12 months ago

ಪಾಟೀಲರು ಎಂದಿನಂತೆ ರಾತ್ರಿಯ ವೇಳೆಯಲ್ಲಿ ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ವೀಕ್ಷಣೆಗಾಗಿ ಜೀಪಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಇವರ ದೃಷ್ಟಿ ರುದ್ರಭೂಮಿಯ ಮುಂಭಾಗದಲ್ಲಿ ನಡೆಯುತ್ತಿದ್ದ ಸಣ್ಣ ಪ್ರಮಾಣದ ತಿಕ್ಕಾಟದ ಬಗ್ಗೆ ಗಮನ ಸೆಳೆಯಿತು. ಡ್ರೈವರಿಗೆ ಹೇಳಿ ಜೀಪನ್ನು ಸ್ಮಶಾನದ ಮುಂಭಾಗದ ಗೇಟಿನ ಮುಂದೆ ನಿಲ್ಲಿಸಲು ಹೇಳಿದರು.

ಇವರ ಜೀಪು ಸ್ಮಶಾನದ ಮುಂದೆ ನಿಲ್ಲುತ್ತಿದ್ದಂತೆ ಸ್ಮಶಾನದ ಸಿಬ್ಬಂದಿ ಇವರ ಜೀಪಿನ ಬಳಿ ಓಡಿಬಂದು ಸರ್ ಈತ ಮಗು ಹೆಣ ತಂದಿದ್ದಾನೆ. ಇದಕ್ಕೆ ಡಾಕ್ಟರ್ ಸರ್ಟಿಫಿಕೇಟ್ ಇಲ್ಲ. ಹೆಣ ಮಣ್ಣಿಗೆ ಹಾಕಬೇಕು ಅಂತಾನೆ, ಸರ್ಟಿಫಿಕೇಟ್ ಇಲ್ದಲೇ ಹೆಣ ಮಣ್ಣು ಮಾಡಲು ಬಿಡಬಾರದು ಅಂತ ಕಾನೂನಿದೆ. ಎಷ್ಟು ಹೇಳಿದರು ಈತನಿಗೆ ಅರ್ಥವಾಗುತ್ತಿಲ್ಲ ಎಂದು ಅಲ್ಲಿನ ಘಟನೆಯನ್ನು ವಿವರಿಸಿದ.

ಜೀಪಿನಿಂದ ಕೆಳಗೆ ಇಳಿದ ಪಾಟೀಲರು ಸುಮಾರು 40 ವರ್ಷ ವಯಸ್ಸಿನ ಒಬ್ಬ ಕೂಲಿ ಮಾಡಿ ಬದುಕುವ ವ್ಯಕ್ತಿ, ಅವನ ಪಕ್ಕದಲ್ಲಿ ಅದೇ ಪರಿಸ್ಥಿತಿಯಲ್ಲಿರುವ ಅವನ ಹೆಂಡತಿ, ಕೈಯಲ್ಲಿ ಸುಮಾರು ಒಂದು ವರ್ಷವೂ ಆಗಿರದ ಪುಟ್ಟ ಮಗುವಿನ ಹೆಣ ಇದನ್ನು ನೋಡುತ್ತಿದ್ದಂತೆ ಇವರ ಕರುಳು ತಿರುಚಿದಂತಾಯಿತು. ಸತ್ತು ಎರಡು ದಿನ ಆಗಿರುವುದರಿಂದ ಮಗುವಿನ ಹೆಣದ ಪರಿಸ್ಥಿತಿ ಸಾಕಷ್ಟು ಭಿನ್ನವಾಗಿದೆ. ಒಂದು ಬಟ್ಟೆಯಲ್ಲಿ ಆ ಮಗುವಿನ ಹೆಣವನ್ನು ಸುತ್ತಿದ್ದಾರೆ. ಮುಖ ಮಾತ್ರ ಕಾಣುತ್ತಿದೆ, ಪುಟ್ಟ ಮಗು ನೋಡಿದರೆ ಅಯ್ಯೋ ಎಂದು ಅನಿಸುತ್ತದೆ.

ಹೆಣ ಕೈಯಲ್ಲಿ ಹಿಡಿದಿರುವ ಆತ, ಸ್ವಾಮಿ, ನನ್ನ ಮಗು ಜೀವ ಬಿಟ್ಟು ಎರಡು ದಿನವಾಗಿದೆ. ಯಾರೂ ಸ್ಮಶಾನದಲ್ಲಿ ಹೂಳಲು ಜಾಗ ಕೊಡುತ್ತಿಲ್ಲ ಎಂದು ಕಣ್ಣೀರು ಸುರಿಸುತ್ತಾ ದುಃಖವನ್ನು ತೋಡಿಕೊಳ್ಳುವ ಸಂದರ್ಭದಲ್ಲಿ ಪಾಟೀಲರ ಕಣ್ಣುಗಳಲ್ಲಿ ಅವರ ಅರಿವಿಗೆ ಬಾರದೆ ದುಃಖ ಉಕ್ಕಿ ಬಂದು ಕಣ್ಣಿನಿಂದ ನೀರು ಹರಿಯಿತು.

ಚಿಂತೆ ಮಾಡಬೇಡಿ ಯಜಮಾನರೇ, ಏನಾದರೂ ದಾರಿ ಹುಡುಕ್ತೀನಿ ಎಂದು ಆ ವ್ಯಕ್ತಿಯಿಂದ ವಿವರವಾದ ಮಾಹಿತಿಯನ್ನು ಕೇಳಿದರು.

ಉತ್ತರ ಭಾರತದ ಪ್ರದೇಶದಿಂದ ಕೂಲಿ ಕೆಲಸವನ್ನ ಹುಡುಕುತ್ತಾ ಬೆಂಗಳೂರಿಗೆ ಬರುವ ಸಂದರ್ಭದಲ್ಲಿ ರೈಲಿನಲ್ಲಿ ಎಂಟು ತಿಂಗಳ ಮಗುವಿಗೆ ಗಾಳಿ ಸರಿಯಾಗಿ ಸಿಗದೇ, ಒತ್ತಡದಲ್ಲಿ ಇದ್ದ ಮಗು ಉಸಿರಾಟದ ತೊಂದರೆಯಿಂದ ಪ್ರಾಣವನ್ನು ಬಿಟ್ಟಿದೆ. ಮಗು ಸತ್ತಿರುವುದು ತಿಳಿಯದ ಇವರು ಸರ್ಕಾರಿ ಆಸ್ಪತ್ರೆಗೆ ಮಗುವನ್ನ ಹೊತ್ತುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷೆ ಮಾಡಿದ ವೈದ್ಯ ಮಗು ಸತ್ತುಹೋಗಿದೆ ಎಂದು ಹೇಳಿದರು. ಮಗು ಸತ್ತ ವಿಚಾರ ಕೇಳಿ ಗಂಡ ಹೆಂಡತಿಗೆ ತುಂಬಾ ದುಃಖವಾಗಿ ಇನ್ನು ಬೇರೆ ದಾರಿಯೇ ಇಲ್ಲ ಮಗುವನ್ನ ಮಣ್ಣಿನಲ್ಲಿ ಮುಚ್ಚಬೇಕು ಎಂದು ನಿರ್ಧರಿಸಿ ಸ್ಮಶಾನಕ್ಕೆ ಬಂದರು. ಸ್ಮಶಾನದಲ್ಲಿ ವೈದ್ಯರ ಸರ್ಟಿಫಿಕೇಟ್ ಇಲ್ಲದೆ ಸಂಸ್ಕಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿ ಕಳಿಸಿದರು. ಮತ್ತೆ ಇವರು ಆಸ್ಪತ್ರೆಗೆ ಬಂದು ಸರ್ಟಿಫಿಕೇಟ್ ಕೊಡುವಂತೆ ಕೇಳಿದರು. ಅದಕ್ಕೆ ಅಲ್ಲಿನ ಡಾಕ್ಟರು ಮಗು ಎಲ್ಲಿ ಸತ್ತಿದೆ, ಹೇಗೆ ಸತ್ತಿದೆ ಎಂಬುದು ಗೊತ್ತಿಲ್ಲ. ಅದಕ್ಕೆ ಹೆಣ ಕೊಯ್ದು ಪರೀಕ್ಷೆ ಮಾಡಬೇಕು ಎಂದು ಹೇಳಿದರು. ಇದರ ಅರ್ಥ ಏನು ಎಂದು ಈತ ಮತ್ತೆ ಕೇಳಿದ, ಮಗುವಿನ ಹೆಣ ಕತ್ತರಿಸಿ ಪರೀಕ್ಷೆ ಮಾಡಬೇಕು ಎಂದರು, ಅಯ್ಯೋ, ಅವೆಲ್ಲ ಬೇಡ ಪುಟ್ಟ ಮಗು ಇದನ್ನು ಕತ್ತರಿಸಿ ಪರೀಕ್ಷೆ ಮಾಡಬೇಡಿ ಎಂದು ವೈದ್ಯರಲ್ಲಿ ಬೇಡಿಕೊಂಡ. ಆದರೆ ಕಾನೂನಿನ ಮುಂದೆ ಇವನ ಕಣ್ಣೀರು ಯಾರು ಕೇಳಲಿಲ್ಲ ಕೊನೆಗೆ ಮತ್ತೆ ಸ್ಮಶಾನಕ್ಕೆ ಬಂದು ಈಗ ಸ್ಮಶಾನದ ಸಿಬ್ಬಂದಿಯನ್ನು ಬೇಡಿಕೊಳ್ಳುತ್ತಿದ್ದಾನೆ.

ವಿವರವನ್ನು ತಿಳಿದ ಪಾಟೀಲರು ಕೂಡಲೇ ತಮ್ಮ ಪರಿಚಯವಿದ್ದ ವೈದ್ಯರೊಬ್ಬರಿಗೆ ಕರೆ ಮಾಡಿ ಸ್ಮಶಾನದ ಹತ್ತಿರ ಬರುವಂತೆ ತಿಳಿಸಿದರು. ಜೊತೆಗೆ ಅವರ ಡಾಕ್ಟರ್ ಲೆಟರ್ ತರುವಂತೆಯೂ ಹೇಳಿದರು. ಸ್ಮಶಾನದ ಹತ್ತಿರ ಬಂದ ವೈದ್ಯರು ಪಾಟೀಲರಿಂದ ವಿವರವನ್ನು ಕೇಳಿ ಪಡೆದುಕೊಂಡರು.

ಮಗು ಹೇಗೆ ಸತ್ತಿದೆಯೋ ಏನೋ ಎನ್ನುವುದು ನನಗೆ ಗೊತ್ತಿಲ್ಲ. ನಾನು ಇದಕ್ಕೆ ಸರ್ಟಿಫಿಕೇಟ್ ಕೊಟ್ಟು ನನಗೆ ಏನಾದರೂ ತೊಂದರೆಯಾದರೆ ಎಂದು ಆ ವೈದ್ಯನು ಸ್ವಲ್ಪ ಹಿಂದೇಟು ಹಾಕಿದ. ಅದಕ್ಕೆ ಪಾಟೀಲರು ಧೈರ್ಯವಾಗಿ ಕೊಡ್ರಿ ನಾನು ಇದ್ದೀನಿ ನಿಮಗೆ ಏನು ತೊಂದರೆ ಆಗದ ರೀತಿಯಲ್ಲಿ ನೋಡ್ಕೋತೀನಿ, ಎರಡು ದಿನ ಆಗಿದೆ ಮಗು ಸತ್ತು ಪಾಪ ಅದಕ್ಕೆ ಸಂಸ್ಕಾರ ಮಾಡಿಸದೆ ಹೋದ್ರೆ ಏನ್ ಅರ್ಥ ಇರುತ್ತೆ, ಈ ತಂದೆ ತಾಯಿಯ ಕಣ್ಣೀರಿನ ಮುಂದೆ ಕಾನೂನು ಏನು ಅಲ್ಲ. ನೀವು ಧೈರ್ಯವಾಗಿ ಮಗು ಸಹಜವಾಗಿ ಸತ್ತಿದೆ ಅಂತ ದೃಢೀಕರಣ ಪತ್ರ ಕೊಡಿ ಎಂದು ಒತ್ತಾಯದ ರೀತಿಯಲ್ಲಿ ಹೇಳಿದರು.

ಪಾಟೀಲರ ಧೈರ್ಯದ ಮೇಲೆ ವೈದ್ಯರು ಕೂಡಲೇ ಮಗು ಸಹಜವಾಗಿ ಸತ್ತಿದೆ ಎಂದು ಪತ್ರವನ್ನು ಬರೆದುಕೊಟ್ಟರು. ಸ್ಮಶಾನದ ಸಿಬ್ಬಂದಿ ಈ ಪತ್ರವನ್ನು ಪಡೆದು ಬೇಕಾದ ಮುಂದಿನ ವ್ಯವಸ್ಥೆಗೆ ಮುಂದಾದರು ಪಾಟೀಲರೇ   ಹಣವನ್ನು ನೀಡಿದರು. ಹಣ ಪಡೆದುಕೊಂಡು  ರಸೀದಿಯನ್ನು ಹಾಕಿದರು, ಮಗುವಿನ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು. ಪಾಟೀಲರಿಗೆ ಮನಸ್ಸು ತಡೆಯಲಿಲ್ಲ. ತಾವೇ ಸ್ಮಶಾನದ ಒಳಗಡೆ ಹೋಗಿ ಹಳ್ಳವನ್ನ ತೋಡಿ ಮಗುವನ್ನ ಮಣ್ಣಿನಲ್ಲಿ ಹಾಕಿ ಮುಚ್ಚಿ ಕೆಲಸ ಮುಗಿಯುವ ತನಕ ಅಲ್ಲಿಯೇ ಇದ್ದು, ಜೊತೆಗೆ ಸ್ಮಶಾನದ ಸಿಬ್ಬಂದಿಗೆ ಹೇಳಿ ಒಂದಷ್ಟು ಹೂವು, ಊದುಬತ್ತಿ, ಕರ್ಪೂರ, ಎಲ್ಲವನ್ನ ತರಿಸಿ ಹೆಣಕ್ಕೆ ಸಂಸ್ಕಾರದ ಗೌರವವನ್ನು ಸಲ್ಲಿಸುವಂತೆ ಕುಟುಂಬದವರಿಗೆ ನೆರವನ್ನ ನೀಡಿ, ಮಗು ಸಂಸ್ಕಾರವಾಗಿ ಅವರ ಅಪ್ಪ-ಅಮ್ಮ ಹೊರಡುವ ತನಕ ಅಲ್ಲಿಯೇ ಇದ್ದರು. ಪಾಟೀಲರಿಗೆ ಏನು ಅನಿಸಿತು ಏನು ಆ ಮಗುವಿನ ತಂದೆ ತಾಯಿಯನ್ನು ಕರೆದು ಅವರ ಕೈಗೆ ಐದುಸಾವಿರ ರೂಪಾಯಿಗಳನ್ನು ಕೊಟ್ಟು ಕೆಲಸ ಸಿಗುವ ತನಕ ಎಲ್ಲಿಯಾದರೂ ಜೀವನ ಮಾಡಿಕೊಂಡಿರಿ ಎಂದು ಸಮಾಧಾನ ಮಾಡಿ ಕಳುಹಿಸಿಕೊಟ್ಟರು.

ಪಾಟೀಲರ ಈ ನಡವಳಿಕೆಯನ್ನು ಕಂಡ ಸಿಬ್ಬಂದಿಯವರು ಮತ್ತು ಈ ದಂಪತಿ ಕೃತಜ್ಞತೆಯಿಂದ ಕೈ ಮುಗಿಯುತ್ತಾ ನಿಂತರು. ಮಗುವಿನ ತಂದೆಯ ಬೆನ್ನು ಸವರಿ ಸಮಾಧಾನ ಮಾಡಿ ಎಲ್ಲವೂ ದೇವರ ಆಟ ಎಂದು ಸಮಾಧಾನದ ಮಾತು ಹೇಳಿ ಕಳುಹಿಸಿಕೊಟ್ಟರು.

ಪಾಟೀಲರಿಗೆ ಈ ಘಟನೆಯನ್ನ ನೋಡಿದ ನಂತರ ಈ ವ್ಯವಸ್ಥೆಯಲ್ಲಿ ತಪ್ಪು ಯಾರದು, ಕಾನೂನು ರಚಿಸುವವರು ಅನೇಕ ಸೂಕ್ಷ್ಮತೆಗಳನ್ನ ಗ್ರಹಿಸಿ ಇರುವುದಿಲ್ಲ ಎಂಬ ಅಭಿಪ್ರಾಯ ಮೂಡಿತು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply