ಶವದ ಮೆರವಣಿಗೆ ವೇಳೆಯಲ್ಲಿ ಪಟಾಕಿ ಸಿಡಿಸುವುದು ಮತ್ತು ಹೂವು ಚೆಲ್ಲುವುದನ್ನು ನಿಷೇಧಿಸಿ

2 years ago

#Ban #bursting #firecrackers #throwing #flowers #funeral #processions

ಅನೇಕ ದಶಕಗಳ ಹಿಂದೆ ಬಂಧು, ಬಾಂಧವರಿಗೆ ಸ್ಮಶಾನದ ಜಾಗ ತಿಳಿಯಲೆಂದು ಹೆಣ ಹೊತ್ತು ಸಾಗಿದ ಮಾರ್ಗದ ಉದ್ದಕ್ಕೂ ಹೂವು ಚೆಲ್ಲಿ ದಾರಿಯನ್ನು ತೋರಿಸಿಕೊಡುತ್ತಿದ್ದರು. ಸ್ಮಶಾನಗಳೆಲ್ಲವೂ ಊರಿನ ಆಚೆ ಇರುತ್ತಿದ್ದ ಕಾರಣ ಪ್ರಾಣಿಗಳ ಬೆದರಿಕೆಗೆ ಪಟಾಕಿಗಳನ್ನೂ ಸಿಡಿಸುತ್ತಿದ್ದರು ಎಂಬ ಅಭಿಪ್ರಾಯವಿದೆ.

ಕಾಲ ಬದಲಾಗಿದೆ ಎಲ್ಲರಿಗೂ ಎಲ್ಲಾ ಊರಿನ ಸ್ಮಶಾನದ ಮಾರ್ಗಗಳು ತಿಳಿದೇ ಇದೆ. ಇನ್ನು ಸ್ಮಶಾನಗಳೆಲ್ಲವೂ ನಗರದ ಮಧ್ಯದಲ್ಲಿಯೇ ಇವೆ. ಪರಿಸ್ಥಿತಿ ಹೀಗಿರಬೇಕಾದರೆ ಈಗಲೂ ಸಹ ಶವದ ಮೆರವಣಿಗೆ ವೇಳೆಯಲ್ಲಿ ಪಟಾಕಿ ಸಿಡಿಸುವುದು ಮತ್ತು ದಾರಿಯ ಉದ್ದಕ್ಕೂ ಹೆಣಕ್ಕೆ ಹಾಕಿದ್ದ ಹೂವನ್ನು ಚೆಲ್ಲುತ್ತಾ ಸಾಗುವ ಅವಶ್ಯಕತೆ ಇಲ್ಲ.

ನಾಗರಿಕರಿಗೆ ಇಂತಹ ಘಟನೆಗಳು ಬೇಸರವನ್ನುಂಟು ಮಾಡುತ್ತಿವೆ. ದುಃಖ ಸತ್ತವರ ಮನೆಯವರಿಗೆ ಮತ್ತು ಅವರ ಹತ್ತಿರದವರಿಗೆ ಮಾತ್ರವೇ ಇರುತ್ತದೆ. ಹೆಣದ ಮೇಲೆ ಹಾಕಿದ ಹೂವುಗಳನ್ನು ದಾರಿ ಉದ್ದಕ್ಕೂ ಹಾಕುವುದರಿಂದ ರಸ್ತೆಗಳು ಕಸಮಯವಾಗುತ್ತದೆ.

ಮಳೆ ಬಂದ ಸಂದರ್ಭದಲ್ಲಿ ಆ ಹೂವಿನ ಪುಡಿಗಳು ಕೊಳೆತು, ನಾರಿ ಓಡಾಡುವ ನಾಗರಿಕರಿಗೆ ಅಪಾಯವನ್ನುಂಟು ಮಾಡುತ್ತವೆ. ಅನೇಕ ರೀತಿಯ ಕಾಯಿಲೆಗಳಿಂದ ನರಳುವ ವ್ಯಕ್ತಿಗಳು ಸಹ ಸತ್ತಿರುತ್ತಾರೆ. ಅವರ ಹೆಣದ ಮೇಲಿನ ಹೂವನ್ನು ಓಡಾಡುವ ಎಲ್ಲರೂ ತುಳಿದುಕೊಂಡು ಹೋಗಬೇಕಾಗಿಲ್ಲ.

ಶವದ ಮೆರವಣಿಗೆ ಅತ್ಯಂತ ಗೌರವಯುತವಾಗಿ ಶಾಂತಿಯಿಂದ ಸಾಗಬೇಕೆ ಹೊರತು ಸದ್ದುಗದ್ದಲದ ನಡುವೆ ಅಲ್ಲ. ಈ ಕಾರಣಕ್ಕಾಗಿ ಪಟಾಕಿ ಸಿಡಿಸುವುದನ್ನು ಮತ್ತು ಹೂವಿನ ರಾಶಿಯನ್ನು ಚೆಲ್ಲುವುದನ್ನು ಸರ್ಕಾರ ನಿಷೇಧ ಮಾಡಿ ಆದೇಶ ಹೊರಡಿಸಬೇಕೆಂದು ಕೋರಿಕೊಳ್ಳುತ್ತೇನೆ.

ಜೊತೆಗೆ ಶವ ಸಾಗಿಸುವ ವಾಹನಗಳ ಮೇಲೆ ಪಟಾಕಿ ಸಿಡಿಸಬೇಡಿ, ಹೂವು ಚೆಲ್ಲಬೇಡಿ. ಶವ ಸಂಸ್ಕಾರದ ಮೆರವಣಿಗೆ ಶಾಂತಿಯಿಂದ ಸಾಗಲಿ ಎಂಬ ಎಚ್ಚರಿಕೆಯ ಫಲಗಳನ್ನು ಅಳವಡಿಸಿದರೆ ಒಳ್ಳೆಯದು.

  • ಕೆ.ಎಸ್. ನಾಗರಾಜ್, ಬೆಂಗಳೂರು

Leave a Reply