ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಿ.ಆರ್‌.ಪಾಟೀಲರಿಗೆ ಉಜ್ವಲ ಭವಿಷ್ಯ: ಸಿದ್ದರಾಮಯ್ಯ

3 years ago

ಕಲಬುರ್ಗಿ: ಇಂದು ಬಿ.ಆರ್‌ ಪಾಟೀಲರ ನಾಯಕತ್ವವನ್ನು ಒಪ್ಪಿ ಸಾಕಷ್ಟು ಮಂದಿ ಬಿಜೆಪಿ, ಜೆಡಿಎಸ್‌ ಪಕ್ಷ ಬಿಟ್ಟು ಕಾಂಗ್ರೆಸ್‌ ಗೆ ಸೇರಿದ್ದೀರ, ನಿಮಗೆಲ್ಲರಿಗೂ ಹೃತ್ಪೂರ್ವಕ ಸ್ವಾಗತ. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶುಭ ಕೋರಿದರು.

ಕಲಬುರಗಿ ಜಿಲ್ಲೆಯ ಅಳಂದದಲ್ಲಿ ಇಂದು ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು, ಮಾತಾಡಿದ ಅವರು, ಬಿ.ಆರ್‌ ಪಾಟೀಲ್‌ ನನ್ನ ಆತ್ಮೀಯ ಗೆಳೆಯ, ಹೋರಾಟದ ಮೂಲಕ ರಾಜಕಾರಣ ಮಾಡಿಕೊಂಡು ಬಂದವರು, ಸಮಾಜದ ಯಾವುದೇ ವರ್ಗದ ಜನರಿಗೆ ಅನ್ಯಾಯವಾದರೂ ಅದರ ವಿರುದ್ಧ ಧ್ವನಿಯೆತ್ತುವ ಮನುಷ್ಯ. ಇಂಥವರನ್ನು ಆಳಂದದ ಪ್ರಬುದ್ಧ ಮತದಾರರು ಸೋಲಿಸಿದ್ದಾರಲ್ಲ ಎಂದು ಬೇಸರವಾಗುತ್ತಿದೆ ಎಂದರು.

ಇವರ ವಿರುದ್ಧ ಗೆದ್ದವರು ರಾಜಕೀಯ ಜ್ಞಾನವೇ ಇಲ್ಲದ, ವ್ಯಾಪಾರಿ ಮನೋಭಾವದವರು. ಜನರ ಕಷ್ಟ ಸುಖದ ಅರಿವು ಕೂಡ ಅವರಿಗೆ ಇಲ್ಲ. ಬಿ, ಆರ್‌ ಪಾಟೀಲ್‌ ಅವರ ಜೊತೆ ರಾಜಕಾರಣ ಪ್ರವೇಶ ಮಾಡಿದ ನಾನು ಮುಖ್ಯಮಂತ್ರಿ ಆದರೂ ಪಾಟೀಲರು ಮಂತ್ರಿ ಕೂಡ ಆಗಿಲ್ಲ. ಕೈ, ಬಾಯಿ ಸ್ವಚ್ಚ ಇರುವ ಪಾಟೀಲರು ಸೋಲಬೇಕ? ಎಂದು ಪ್ರಶ್ನಿಸಿದರು.

ಬಿ.ಆರ್‌ ಪಾಟೀಲರ ಸೋಲು ಇಡೀ ಕ್ಷೇತ್ರದ ಜನರ ಸೋಲಾಗುತ್ತದೆ. ಯಾವ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ಪಾಟೀಲರು ಸೋಲಬಾರದು. ಪಾಟೀಲರು ಒಬ್ಬ ಸರಳ, ಸಜ್ಜನ, ಪ್ರಾಮಾಣಿಕ, ಜನಪರ ಚಿಂತನೆಯ ವ್ಯಕ್ತಿ. ಇವರಿಗೆ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಇವರ ಎದುರಾಳಿ ಎಲ್ಲಾ ರೀತಿ ಅನೈತಿಕ ಚಟುವಟಿಕೆಗಳ ಮೂಲಕ ಹಣ ಸಂಪಾದನೆ ಮಾಡಿದ್ದಾರೆ. ಅದನ್ನು ಖರ್ಚು ಮಾಡುತ್ತಾರೆ. ಆದರೆ ಪ್ರಮಾಣಿಕರನ್ನು ಗುರುತಿಸಿ ಮತ ನೀಡಬೇಕಿರುವುದು ಜನರ ಕರ್ತವ್ಯ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಬಿ.ಆರ್‌ ಪಾಟೀಲರಿಗೆ ಉಜ್ವಲ ಭವಿಷ್ಯವಿದೆ ಎಂಬುದಂತು ನಿಜ ಎಂದರು.

Leave a Reply