೨೦೦೭ರ ಆಸುಪಾಸಿನಲ್ಲಿ ನಾನು ಈ ಕವಿಯನ್ನು ಸಂಧಿಸಿದೆ, ಟೌನ್‌ಹಾಲ್ ಬಳಿ ಕ್ಯಾಂಟೀನ್‌ನಲ್ಲಿ ಲೆಮನ್ ಟೀ ಹೀರುತ್ತಿರುವ ಸಂದರ್ಭದಲ್ಲಿ ಆ ಕವಿ ಎದುರುಗೊಂಡಿದ್ದು. ನನ್ನ ಪರಿಚಯ ಇವರಿಗೆ ಹೇಗಾಯಿತೋ ಗೊತ್ತಿಲ್ಲ, ನನ್ನ ಸಂಕಲನವನ್ನು ತೆಗೆದುಕೊಂಡರು. ಫೋರ್ಡ್ ಕಾರಿನಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಹೋಗುತ್ತಿರುವಾಗ ರಂಗಕರ್ಮಿ ಮತ್ತು ಕವಿ ಪಿ.ಮಂಜುನಾಥನ `ಅಳಬೇಕು…’ ಪದ್ಯವನ್ನು ಹಾಡತೊಡಗಿದರು, ಇಷ್ಟವಾಯಿತು. ಮಾತನಾಡಿದರು, ಬಹಳ ಹೊತ್ತು ಚರ್ಚೆ ಮಾಡಿದೆವು, ಸಾಹಿತ್ಯ, ರಂಗಭೂಮಿ, ರಾಜಕೀಯ ಹೀಗೆ… ಮೊದಲ ಭೇಟಿಯಲ್ಲೇ ಇಷ್ಟೆಲ್ಲ ಆದದ್ದು ನನ್ನಲ್ಲಿ ಇವೊತ್ತಿಗೂ ವಿಸ್ಮಯ, ಯಾಕೆಂದರೆ ಯಾರನ್ನೂ ಅಷ್ಟಾಗಿ ಒಳಗೊಳ್ಳದ ನನಗೆ ಇವರು ಆಕರ್ಷಣೀಯ ಎನಿಸಿದರು. ಬೆಂಗಳೂರಿನ ಕೊಶೀಸ್‌ನಲ್ಲಿ ಕುಳಿತುಕೊಂಡು ಮೂರು ಸಾವಿರದ ಒಂದು ರೂಪಾಯಿ ದುಡ್ಡನ್ನು ನನ್ನ ಕೈಗಿತ್ತು, `ಬದುಕು ಕಟ್ಟೋಣ’ ಅಂದರು, ನನಗಿದೆಲ್ಲ ವಿಚಿತ್ರ ಎನಿಸಿತು. ಅಲ್ಲಿಂದ ಆರಂಭಗೊಂಡಿದ್ದೇ ಕಾವ್ಯ ಕ್ರಾಂತಿ ಅಥವಾ ಕಾವ್ಯ ಯಾನ!
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಈ ಯಾನದಲ್ಲೇ `ಸಮುದ್ರ ಮತ್ತು ಮಳೆ’ ಧುತ್ತನೆ ಕನ್ನಡ ಕಾವ್ಯಕ್ಕೆ ಸೇರ್ಪಡೆಗೊಂಡಿದ್ದು! ಲಂಕೇಶರ `ಅವ್ವ’ ಪದ್ಯದ ನಂತರ ಒಂದು ಕಾವ್ಯಮಾರ್ಗ ಹುಟ್ಟಿಕೊಂಡಿತು. ಇಲ್ಲಿ ರಮೇಶ್ ಒಂದು ಕವಿತೆಯನ್ನಷ್ಟೇ ಬರೆಯಲಿಲ್ಲ, ಶಿಖರ ಪ್ರಾಯದ ಕವಿತೆಗಳನ್ನು ಹೊಲಬಯಲಿನ ಸಾಲಿನಂತೆ ನೀಡತೊಡಗಿದರು; ನಾವೂ ಇವರೊಂದಿಗೆ ಹೆಜ್ಜೆ ಹಾಕಿದೆವು, ಕಾಡುಮೇಡು, ಜನಪದ, ಸಂಸ್ಕೃತಿ, ಕೇರಿ ಕಥನ ಇವೆಲ್ಲವೂ ನಮಗೆ ದಕ್ಕತೊಡಗಿತು.
ಅದೊಂದು ಚಲನೆ, ಬೀಜವೊಂದು ಬೃಹತ್ ಮರವೊಂದನ್ನು ಕಾಣಿಕೆಯಾಗಿ ಅರ್ಪಿಸಿದಂತಿತ್ತು. ಹೀಗೆ ಹೀಗೆಯೇ ಕಾವ್ಯ ರಚನೆ ಮಾಡಬೇಕಂತಿದ್ದ ಪದ್ಧತಿಯನ್ನು ಅಲ್ಲಲ್ಲೇ ಛಿದ್ರಗೊಳಿಸತೊಡಗಿದರು. ಅಲ್ಲಿ ತಾವೋ, ಝೆನ್, ಸೂಫಿ ತತ್ವ ಮೈದಾಳಿತು, ಗಿಬ್ರಾನ್ ಇವರ ಕೈಕುಲುಕಿದಂತೆಯೇ ಇತ್ತು.
ಕಾವ್ಯದ ಗುಣವೇ ಹೀಗೆ, ಅಲ್ಲಿಂದ ಸರಿಸುಮಾರು ಹದಿನೇಳು ವರ್ಷಗಳ ನಂತರ, ನಾಗತಿಹಳ್ಳಿ ರಮೇಶ್ ನನ್ನ ತಾಯಿಯ ಸಾವಿನ ಸಂದರ್ಭದಲ್ಲಿ ಮುಖಾಮುಖಿಯಾದರು. ಆ ಅವಧಿಯಲ್ಲಿ ಈ ಕವಿ ಎಲ್ಲಿ ಕಾಣೆಯಾಗಿದ್ದರೋ ಗೊತ್ತಿಲ್ಲ, ನನ್ನ ತಾಯಿ ಜೀವಂತವಾಗಿದ್ದಾಗ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದ, ಕನವರಿಸುತ್ತಿದ್ದ ಏಕೈಕ ಹೃದಯವಂತಿಕೆಯ ವ್ಯಕ್ತಿ ಇವರಾಗಿದ್ದರು. ಹೌದು, ಮತ್ತೊಂದು ಪದ್ಯಗುಚ್ಛ ಹಿಡಿದು, ಕಾಡುಗುಲಾಬಿಗಳನ್ನು ಎದೆಗೊತ್ತಿಕೊಂಡಂತೆ ಪದ್ಯಗಳನ್ನು ಒತ್ತಿಕೊಂಡು ನಿಂತಿದ್ದರು.
`ಬಯಲ ಕನ್ನಡಿ ಮತ್ತು ಮನದ ಮಿಂಚು’ ಎನ್ನುವ ಕವನಗಳನ್ನು ಆಕಾಶದ ಒಂದು ತುಣುಕು ಕಾಣದಂತಿರುವ ಮರದ ಕೆಳಗೆ ಕುಳಿತುಕೊಂಡು ಬಿತ್ತರಿಸತೊಡಗಿದರು. ವರ್ಡ್ಸ್ ವರ್ತ್, ಪುಷ್ಕಿನ್, ನೆರೂಡ, ಬರ‍್ಹೆಸ್, ಗಿಬ್ರಾನ್ ಒಬ್ಬೊಬ್ಬರಾಗಿ ಮೂಡಿಬರತೊಡಗಿದರು. `ಬಯಲ ಕನ್ನಡಿ’ ಎಂಬ ಮೊದಲರ್ಧದ ಕವಿತೆಗಳ ಧ್ಯಾನ `ಮನದ ಮಿಂಚು’ವಿನಲ್ಲಿ ವ್ಯಾಪಕವಾಗಿ ಜೀವನ ದರ್ಶನ ಮತ್ತು ಬದುಕಿನ ವಿರೋಧಾಭಾಸವನ್ನು ಸ್ಪಷ್ಟವಾಗಿ ವ್ಯಕ್ತಪಡಿಸತೊಡಗಿತು. ಇಲ್ಲಿ ಅವ್ವ ಯೆಹೂದಿ ಮೆನುಹಿನ್‌ನ ಸಂಗೀತದ ಎಳೆಗಳಂತೆ ಮೂಡಿಬರತೊಡಗಿದಳು. `ಹೀಗೊಂದು ಸಂಗೀತಗಾಥ’, `ದೈವದಾ ಕಂದನ ಉದಯ’, `ಬೆಳಕು ಹಾರಿದೆ ಕತ್ತಲೆಯ ಬೆನ್ನನೇರಿ’, `ಅವ್ವನ ಕಾಣ್ಕೆ,’ `ಇಳಿದು ಬಾ ತಂದೆಯೇ’, `ಮಾನಸ ಸರೋವರಕೆ ಹಂಸ ನೀನು ಮಹಾವತಾರಿ ಗುರುವೇ,’ ಎನ್ನುವ ದೀರ್ಘ ಪದ್ಯಗಳಲ್ಲೇ ಇವರ ಅಸಲಿ ಕಾವ್ಯದಾಟ ಚಿಮ್ಮುವುದು.
ಸ್ಪೇನ್‌ನ ಕವಿ ಗಾರ್ಸಿಯ ಲೋರ್ಕಾನನ್ನು ಲಂಕೇಶ್ ಮೇಷ್ಟ್ರು ‘ಮಾತಾಡುವವರ ನಡುವೆ ಹಾಡುವ ಕಬ್ಬಿಗ’ ಎಂದು ಕರೆದಿದ್ದರು. ತನ್ನ ತಾಯಿ ಹಾಡಿಕೊಳ್ಳುತ್ತಿದ್ದ ಲಾವಣಿಗಳಿಂದ ಪ್ರಭಾವಿತನಾದ ಲೋರ್ಕಾ ಕಡೆಗೆ ಜಗತ್ತಿನ ಕವಿಯಾದ. ಹೀಗೆ ನಾಗತಿಹಳ್ಳಿ ರಮೇಶ್‌ರ ನಡೆ ನುಡಿ ಮತ್ತು ವ್ಯಕ್ತಿತ್ವದಲ್ಲಿ ಕವಿತ್ವ ಅತ್ಯಂತ ಸಹಜವಾಗಿ ಬೆಳೆದುಕೊಂಡಿದೆ, ಕಾವ್ಯಭಾಷೆಯಲ್ಲಿ ಉಸಿರಾಡುವ ಈ ಕವಿಯೊಳಗೆ ಕವಿ ಹುಟ್ಟಿದ ಕತೆ ಕುತೂಹಲಕರವಾಗಿದೆ.
ನಿಜವಾದ ರೆಬೆಲ್‌ನ ಹುಟ್ಟು ಈ ಕಾವ್ಯ ಸಂಕಲನದಲ್ಲಿ, ಅದು ಸ್ವಾರ್ಥಿಗಳನ್ನು, ಸಮಯ ಸಾಧಕರನ್ನು, ನೀಚರನ್ನು ಕ್ಷಮಿಸುವುದರೊಂದಿಗೆ, ಅವರಿಗೊಂದೊಂದು ಹೂ ನೀಡಿ ತಡವುದರಲ್ಲಿದೆ. `ದೈವದಾ ಕಂದನ ಉದಯ’ ಅನ್ನುವ ಪದ್ಯದ ಈ ಸಾಲುಗಳನ್ನು ಗಮನಿಸಿ, ಇದೊಂದು ಮಹಾ ವಾಹಕ, ಇಲ್ಲಿ ಉದಯಿಸುವ ಕಂದ ಸಾಮಾನ್ಯವಾದವನಲ್ಲ; ಬುದ್ಧನಾಗಿರಬಹುದು, ಯೇಸು ಕ್ರಿಸ್ತನಾಗಿರಬಹುದು, ಬಸವಣ್ಣ ಆಗಿರಬಹುದು. ಲೋಕದ ಉದ್ಧಾರಕ್ಕೆ ದಾಂಗುಡಿಯಿಡುವುದನ್ನು ಇಲ್ಲಿ ಸೂಚ್ಯವಾಗಿ ಚಿತ್ರಿಸಿದ್ದಾರೆ.
ಕಣ್ಣು ತೆರೆಯಿತು ಒಮ್ಮೆ ಆದಿಶಕ್ತಿ ಪರಾಶಕ್ತಿ
ಅದರೊಳಗೆ ಕೋಟಿ ಕೋಟಿ ಮಿಂಚು ಗುಡುಗು
ಸಿಡಿಲುಗಳು ಚಿಮ್ಮಿ
ಹರಿಯಿತು ತೆರೆದ ಕಣ್ಣುಗಳ ಒಳಗಿಂದ ಬೆಳಕಿನ ಮಹಾ ಪ್ರವಾಹ
ಅಂತರಂಗದಿ ಆಸ್ಫೋಟಿಸಿತು ಆದಿಶಕ್ತಿ ಪರಾಶಕ್ತಿಯು
ಮಹಾ ಸ್ಫೋಟವಾಗಿ!
ಅದರೊಳಗೆ ಹುಟ್ಟಿಕೊಂಡಿತು ತೆರೆ ತೆರೆಯಾಗಿ ಅನಂತ ಆಕಾಶ
ಹುಟ್ಟಿಕೊಂಡವು ಸೂರ್ಯ, ಚಂದ್ರ ಗ್ರಹಾದಿಗಳು
ನಕ್ಷತ್ರಗಳು ಧೂಮಕೇತು-ಉಲ್ಕೆಗಳು!
ಆದಿ ಶಕ್ತಿ ಪರಾಶಕ್ತಿ ಹಡೆದ ಮಕ್ಕಳಂತೆ
ಜೋತು ಬಿದ್ದವು ಮೊಲೆ ಹಾಲಿಗೆ ಜೋತುಬಿದ್ದ ಮಕ್ಕಳಂತೆ.
`ಅವ್ವ’ ಅನ್ನೋದು ಕೇವಲ `ಅವ್ವ’ನ ಧ್ಯಾನವಷ್ಟೇ ಆಗಿರದೆ, ಜಗದ ಹೆಣ್ಣಿನ, ಭೂಮಿಯ ನಿರಂತರ ಹಾಡಿನಂತೆ ಕಟ್ಟಿಕೊಡುವರು. ನನ್ನ ತಾಯಿ ತೀರಿಕೊಂಡ ಈ ಸಂದರ್ಭದಲ್ಲಿ ಈ ಕವಿಯ ಈ ಕೆಳಗಿನ ಸಾಲುಗಳು ನನ್ನನ್ನು ಆವರಿಸಿಕೊಂಡಿದ್ದು ನಿಮ್ಮ ಓದಿಗೆ ಕೊಡುತ್ತಿದ್ದೇನೆ:
ಯಾವ ಕಾತುರವೂ ಇಲ್ಲದೆ
ಅರಳಿದ ಹೂವಂತೆ
ಮಣ್ಣಿನ ಹಣತೆಗಳಾಗಿ ಬೆಳಗುವ ಅವ್ವಂದಿರು
ಕೊನೆ ಕೊನೆಗೆ ತಿರು ತಿರುಗಿ
ನೆಲದಲ್ಲೇ ನೆಲವಾಗುವರು!
ಆಸೆ, ಮೋಹ ನಿರೀಕ್ಷೆಗಳಿರದ
ಸೋಲು ಗೆಲುವುಗಳಾಚೆಗಿನ
ನಿರಾಳತೆಯ ತಂಗುದಾಣಗಳಾಗಿ
ರೂಪಾಂತರವಾದರು.
ಇಂಥ ಅನನ್ಯ ಕವಿಗೆ ಶುಭಾಶಯ ಕೋರುತ್ತ
ಅವರ ಮತ್ತಷ್ಟು ಜನಪದ ಸೆಲೆಯ ಕವಿತೆಗಳಿಗಾಗಿ ಕಾಯೋಣ.
– ಮಂಜುನಾಥ ವಿ ಎಂ




