ಗಾಂಧೀಜಿಯವರ ಕೊನೆಯ ದಿನಗಳ ಕೃತಿ ಬರೆಯುವ ಉದ್ದೇಶದಿಂದ ಭಾರತದ ವಿಭಜನೆಯ ದುರಂತಗಾಥೆಯ ಕಥೆಗಳು, ಅನುಭವಗಳ ಕಥನ ಮತ್ತು ಕಾದಂಬರಿಗಳನ್ನು ನಿರಂತರವಾಗಿ ಓದಿದೆ. ಈಗ ಕವಿತೆಗಳತ್ತ ಹೊರಳಿದ್ದೀನಿ. ಈ ದೇಶ ಕಂಡ ಅತ್ಯುತ್ತಮ ಉರ್ದು ಕವಿಗಳಲ್ಲಿ ಒಬ್ಬರಾದ ಗುಲ್ಜಾರ್ ಅವರ ಕವಿತೆಗಳನ್ನು ಓದುತ್ತಿದ್ದರೆ, ಕಾವ್ಯವನ್ನು ಹೀಗೂ ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವೆ? ಎಂದು ನನಗೆ ಆಶ್ಚರ್ಯವಾಗುತ್ತದೆ.
1999 ರಲ್ಲಿ ಅವರ ಪುತ್ರಿ ಮೇಘನಾ ಗುಲ್ಜಾರ್ ( ಹಿಂದಿ ಚಿತ್ರನಟಿ ರಾಖಿ ಮತ್ತು ಗುಲ್ಜಾರ್ ಅವರ ಪುತ್ರಿ) ತನ್ನ ತಂದೆಯ ಅತ್ಯುತ್ತಮ ಕವಿತೆಗಳನ್ನು ಆಯ್ಕೆ ಮಾಡಿ ಅವುಗಳನ್ನು ಒರಿಯಾ ಕವಿ ಜೆ.ಪಿ.ದಾಸ್ ಅವರ ಮೂಲಕ ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿಸಿದ್ದಳು.
Autumn Moon ಹೆಸರಿನ ಈ ಸಂಕಲನದಲ್ಲಿ ಗುಲ್ಜಾರ್ ಅವರು ಈ ದೇಶದ ಕೋಮು ದಳ್ಳುರಿಯ ನೋವುಗಳನ್ನು ಹಿಡಿದಿಟ್ಟಿದ್ದಾರೆ. ಬಾಲ್ಯದಲ್ಲಿ ಭಾರತದ ವಿಭಜನೆಯ ದುರಂತಕ್ಕೆ ಸಾಕ್ಷಿಯಾಗಿದ್ದ ಗುಲ್ಜಾರ್ ಅವರ ಕವಿತೆಗಳಲ್ಲಿ ಮನುಷ್ಯ ಸಂಬಂಧ ಮತ್ತು ಮಾನವೀಯತೆಯ ಗುಣಗಳು ಇಂದಿಗೂ ಉಸಿರಾಡುತ್ತಿವೆ. ಅದಕ್ಕೆ ಸಾಕ್ಷಿಯಾಗಿ ಅವರ ಕವಿತೆಯೊಂದು ಹೀಗಿದೆ.
ಆ ಕೋಮು ದಳ್ಳುರಿಯಲ್ಲಿ
ತರಿದು ಹಾಕಿದ್ದು ತಲೆಗಳನ್ನಲ್ಲ
ಕೇವಲ ಟೊಪ್ಪಿಗೆಗಳನ್ನು ಮಾತ್ರ
ಅಕಸ್ಮತ್ತಾಗಿ ಟೊಪ್ಪಿಗೆಗಳಲ್ಲಿ
ತಲೆಗಳಿದ್ದವು ಅಷ್ಟೇ.
ಇಂದಿನ ದಿನಮಾನಗಳಲ್ಲಿ ರಕ್ತ ಚೆಂಡಾಡುವುದೇ ದೇಶಭಕ್ತಿ ಅಥವಾ ಧರ್ಮ ಭಕ್ತಿ ಎಂಬಂತಹ ನಂಬಿಕೆಗಳು ಬೆಳೆಯುತ್ತಿರುವಾಗ ಒಂದು ಅಮಾನುಷ ಕೃತ್ಯವನ್ನು ತಣ್ಣನೆಯ ಶಬ್ದಗಳಲ್ಲಿ ಹೀಗೂ ದಾಖಲಿಸಬಹುದು ಎಂದು ಗುಲ್ಜಾರ್ ಅವರು ಕಾವ್ಯ ಜಗತ್ತಿಗೆ ತೋರಿಸಿಕೊಟ್ಟರು.
1993 ರ ಜನವರಿಯಲ್ಲಿ ಮುಂಬೈ ನಗರದಲ್ಲಿ ನಡೆದ ಕೋಮುಗಲಭೆ ಕುರಿತಾಗಿ ಕವಿತೆ ಬರೆದಿದ್ದ ಅವರು ಪ್ರತಿದಿನ ಬೆಳಿಗ್ಗೆ ನನ್ನ ಮನೆ ಬಾಗಿಲಿಗೆ ಬಂದು ಬೀಳುವ ದಿನಪತ್ರಿಕೆಗಳು ಸುದ್ದಿಯನ್ನು ಮಾತ್ರ ಹೊತ್ತು ತರುವ ಪತ್ರಿಕೆಗಳಲ್ಲ, ಅವು ನನ್ನ ಪಾಲಿಗೆ ರಕ್ತದೋಕುಳಿಯಲ್ಲಿ ಅದ್ದಿ ಎತ್ತಿದ ಪತ್ರಿಕೆಗಳು. ಅವುಗಳಿಂದ ರಕ್ತ ತೊಟ್ಟಿಕ್ಕುತ್ತದೆ. ಪ್ರತಿದಿನ ನನ್ನ ಮನ ಹಾಗೂ ಮನೆಯನ್ನು ಈ ರಕ್ತದ ಕಲೆಗಳಿಂದ ಸ್ವಚ್ಛಗೊಳಿಸಬೇಕು ಎಂಬ ಕವಿತೆಯನ್ನು ಸಹ ಬರೆದಿದ್ದರು.
ಐದು ವರ್ಷದ ಹಿಂದೆ ಪ್ರಕಟವಾದ Zeero Line ಎಂಬ ಈ ಹೊಸ ಸಂಕಲನದಲ್ಲಿ ಭಾರತದ ವಿಭಜನೆಯ ಕುರಿತಾದ ಕವಿತೆಗಳಿವೆ. ರಕ್ಷಾನಂದ ಜಲೀಲ್ ಎಂಬುವರು ಉರ್ದು ಭಾಷೆಯಿಂದ ಇಂಗ್ಲೀಷ್ ಗೆ ಅನುವಾದಿಸಿದ್ದಾರೆ. ಭಾರತದ ವಿಭಜನೆಯ ದುರಂತವೂ ಲೇಖಕರು, ಕವಿಗಳು ಮತ್ತು ಕಲಾವಿದರ ಮೇಲೆ ಎಂತಹ ಪರಿಣಾಮ ಬೀರಿತು ಎಂಬುದಕ್ಕೆ ನಮಗೆ ಭೀಷ್ಮ ಸಹಾನಿ ಮತ್ತು ಸಾದತ್ ಹಸನ್ ಮಾಂಟೊ ಇವರುಗಳು ಕಾದಂಬರಿ ಮತ್ತು ಕಥೆಗಳ ಮೂಲಕ ಸಾಕ್ಷಿಯಾಗಿದ್ದರು. ಈಗ ಗುಲ್ಜಾರ್ ಕಾವ್ಯದ ಮೂಲಕ ಸಾಕ್ಷಿಯಾಗುವುದರೊಂದಿಗೆ ಅಂದಿನ ದುರಂತ ಇಂದಿಗೂ ಎಲ್ಲರನ್ನು ಕಾಡುತ್ತಿರುವ ಬಗೆಯನ್ನು ಹಿಡಿದಿಟ್ಟಿದ್ದಾರೆ.
ಕಾವ್ಯದ ಕಡುವ್ಯಾಮೋಹಿಯಾಗಿದ್ದ ನನ್ನನ್ನು ಹದಿಮೂರು ವರ್ಷಗಳ ಹಿಂದೆ ಫೇಸ್ ಬುಕ್ ಕವಿ ಪುಂಗಿಣಿಯರು ಹಾಗೂ ಪುಂಗವರು ಕಾವ್ಯದಿಂದ ದೂರ ಸರಿಯುವಂತೆ ಮಾಡಿದರು. ಹಾಗಾಗಿ ಒಳ್ಳೆಯ ಕಾವ್ಯವನ್ನು ನಾನು ಈಗಲೂ ಸಹ ನನ್ನ ಮೆಚ್ಚಿನ ಕವಿಗಳ ಕೃತಿಗಳನ್ನು ತೆಗೆದು ಓದಿಕೊಳ್ಳುವುದರ ಮೂಲಕ ಆನಂದಿಸುತ್ತೇನೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




