ಬರಹ ಸ್ವಲ್ಪ ಉದ್ದ ಇದೆ, ಭಾನುವಾರದ ರಜೆಯನ್ನು ಸದುಪಯೋಗ ಪಡಿಸಿಕೊಂಡು ಓದಿ.
ಮುಝಪರ್ ಅಸ್ಸಾದಿ ಅವರು ತಮ್ಮ ಅನಾರೋಗ್ಯದ ನಡುವೆಯೂ ಕರೆದವರ ಒತ್ತಡಕ್ಕೆ ಮಣಿದು ಊರೂರು ತಿರುಗಾಡಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕಳೆದ ತಿಂಗಳು ಪುತ್ತೂರಿನ ಒಂದು ಸಣ್ಣ ಗ್ರಾಮದ ಕಾಲೇಜಿನ ವಿದ್ಯಾರ್ಥಿಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಮರುದಿನ ನಾನೂ ಹೋಗಿದ್ದೆ. ಹತ್ತು ದಿನಗಳ ಹಿಂದೆ ತುಮಕೂರಿನಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ನಾವಿಬ್ಬರೂ ಭಾಗವಹಿಸಿದ್ದೆವು. ನಾನು ಮಧ್ಯಾಹ್ನವೇ ವಾಪಸ್ ಬಂದಿದ್ದೆ. ಮುಝಪರ್ ಸಂಜೆವರೆಗೆ ಅಲ್ಲಿದ್ದು ವಾಪಸು ಮೈಸೂರಿಗೆ ಹೋಗಿದ್ದಾರೆ. ನಿಧಾನವಾಗಿ ನಡೆಯುತ್ತಿರುವ ಅವರನ್ನು ಕಂಡು ‘’ದಾದಯೆ, ಪರಬೆರೆಲ್ಲಕ್ಕ ನಡಪುವುರತಾ? ( ಏನ್ರಿ ಮುದುಕರ ರೀತಿ ನಡೆಯುತ್ತಿದ್ದೀರಲ್ಲಾ?) ಎಂದು ತಮಾಷೆ ಮಾಡಿದ್ದೆ, ಜೊತೆಗೆ ಆರೋಗ್ಯದ ಕಡೆ ಗಮನ ಕೊಡಿ ಎಂದು ಗದರಿಸಿಯೂ ಹೇಳಿದ್ದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಆದರೆ ನಿನ್ನೆ ಮೈಸೂರಿನಲ್ಲಿ ನಡೆದ ಅಸ್ಸಾದಿ ಅವರ ಅಂತಿಮ ದರ್ಶನಕ್ಕೆ ಬೇರೆ ಊರುಗಳಿಂದ ಬಂದವರು ಬೆರಳೆಣಿಕೆಯ ಮಂದಿ. ಹಾಗೆ ಬಂದವರಲ್ಲಿ ಕೂಡಾ ಹೆಚ್ಚಿನವರು ಅವರ ಸಹೋದ್ಯೋಗಿಗಳು ಮತ್ತು ಶಿಷ್ಯರು. ಮೈಸೂರಿನಲ್ಲಿಯೇ ಇರುವ ಬಹಳ ಲೇಖಕರು, ಚಿಂತಕರೇ ಬಂದಿರಲಿಲ್ಲ. ದೂರದ ಊರುಗಳಿಂದ ಅವರನ್ನು ಕಾಡಿ ಬೇಡಿ ಕರೆಸಿಕೊಂಡವರಲ್ಲಿ ಯಾರೂ ಬಂದಿಲ್ಲ. ನಿನ್ನೆಯಿಂದ ಫೇಸ್ ಬುಕ್ ನಲ್ಲಿ ಅಸ್ಸಾದಿ ಅವರಿಗೆ ಅನ್ಯಾಯವಾಗಿದೆ ಎಂದು ಗೋಳಾಡುತ್ತಿದ್ದವರಲ್ಲಿ ಒಬ್ಬರೂ ಬರಲಿಲ್ಲ.
ನಿನ್ನೆಯಿಂದ ಬಹಳಷ್ಟು ಮಂದಿ ಅಸ್ಸಾದಿ ಅವರಿಗೆ “ಸಿದ್ದರಾಮಯ್ಯ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇಂತಹವರ ದನಿಯಲ್ಲಿ ಅಸ್ಸಾದಿ ಅವರು ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಯಾಗಿದ್ದರೆ ಅವರ ವ್ಯಕ್ತಿತ್ವ ಪರಿಪೂರ್ಣವಾಗುತ್ತಿತ್ತು, ಅದಾಗದೆ ಅವರ ಬದುಕೇ ವ್ಯರ್ಥವಾಯಿತು’’ ಎನ್ನುವ ಅಭಿಪ್ರಾಯ ಇದೆ. ಇಂತಹವರಲ್ಲಿ ಎಷ್ಟು ಮಂದಿ ಅವರು ಬರೆದಿರುವ ಪುಸ್ತಕಗಳ ಪುಟ ಮಗುಚಿಹಾಕಿದ್ದಾರೋ ಗೊತ್ತಿಲ್ಲ. ಸುಮ್ಮನೆ ಗೂಗಲ್ ಗೆ ಹೋಗಿ ಅವರ ಹೆಸರು ಬರೆದು ಬೆರಳೊತ್ತಿದ್ದರೆ ಅವರ ನೂರಾರು ಉಪನ್ಯಾಸಗಳು ತೆರೆದುಕೊಳ್ಳುತ್ತವೆ. ನನ್ನ ಪ್ರಕಾರ ಅವರ ವಿದ್ವತ್ ಮತ್ತು ಸಾಧನೆಯ ಮುಂದೆ ಈ ಬ್ಯುರೊಕ್ರಾಟಿಕ್ ಉಪಕುಲಪತಿ ಹುದ್ದೆ ನಗಣ್ಯವಾದುದು.
ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಲ್ಲಿ ಎಷ್ಟು ಮಂದಿ ವಿದೇಶಿ ವಿವಿಗಳಲ್ಲಿ ಉಪನ್ಯಾಸ ನೀಡಿದ್ದಾರೆ? ಪ್ರಬಂದಗಳನ್ನು ಮಂಡಿಸಿದ್ದಾರೆ? ವಿದೇಶದ ಪ್ರಮುಖ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ, ಕನಿಷ್ಠ ಇಪಿಡಬ್ಲ್ಯು ವಿನಲ್ಲಿಯಾದರೂ ಯಾರಾದರೂ ಲೇಖನ ಬರೆದಿದ್ದಾರೆಯೇ? ಇಂತಹವರಲ್ಲಿ ಬಹಳ ಮಂದಿ ವಿವಿ ಕುಲಪತಿಗಳೂ ಆಗಿದ್ದಾರೆ. ಉಪಕುಲಪತಿಗಳಾಗಿದ್ದರೆ ಇಂತಹವರ ಸಾಲಿನಲ್ಲಿ ಅವರೂ ನಿಲ್ಲಬೇಕಾಗಿತ್ತು. ಒಬ್ಬ ದಿವಂಗತ ಸಾಹಿತಿಯ ಮಗ ವಿ.ಸಿ. ಮಾಡಲು ಮುಖ್ಯಮಂತ್ರಿಗೆ ಒಂದು ಮಾತು ಹೇಳಿ ಎಂದು ನನ್ನ ಬಳಿ ಬಂದಿದ್ದರು. ‘’ನಿಮ್ಮ ತಂದೆಯನ್ನು ನೋಡಿದ್ದೇನೆ, ನಿಮ್ಮನೆಂದೂ ಬೀದಿಗಳಲ್ಲಿ ನಡೆಯವ ಹೋರಾಟಗಳಲ್ಲಿ ನೋಡಿಲ್ಲವಲ್ಲಾ, ನಾನು ಬೀದಿಯಲ್ಲಿ ಕಾಣಿಸಿಕೊಂಡವರ ಬಗ್ಗೆ ಮಾತ್ರ ಒಂದು ಮಾತು ಹೇಳುವುದು’’ ಎಂದಿದ್ದೆ. ಅದಕ್ಕೆ ಕೋಪಿಸಿಕೊಂಡು ಹೋಗಿದ್ದರು.
ಯಾರಾದರೂ ರಾಜ್ಯದಲ್ಲಿರುವ ಇಂದಿನ ವಿಶ್ವವಿದ್ಯಾಲಯಗಳ ಒಳಗೆ ಇಣುಕಿ ನೋಡಿದ್ದೀರಾ? ಅಸ್ಸಾದಿ ಅವರು ಯಾವುದಾದರೂ ವಿವಿಗೆ ಉಪಕುಲಪತಿಯಾಗಿದ್ದರೆ ಮೂರು ವರ್ಷದ ಅವಧಿಯಲ್ಲಿ ಅವರಿಗೆ ಒಂದು ಮಾಡೆಲ್ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಲು ಸಾಧ್ಯವಾಗುತ್ತಿತ್ತೇ? ಅಲ್ಲಿ ಅರ್ಧದಷ್ಟು ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ, ಇದ್ದವರಿಗೆ ಸಂಬಳ ಕೊಡಲು ದುಡ್ಡಿಲ್ಲ. ಅಸ್ಸಾದಿ ಅವರು ರಾಜಕೀಯ ವಿಶ್ಲೇಷಕರು ಅಷ್ಟೆ, ರಾಜಕಾರಣಿ ಅಲ್ಲ. ಅವರು ವಿ.ಸಿ.ಆಗಿದ್ದರೆ ವಿವಿಯೊಳಗಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ರಾಜಕೀಯ ಮತ್ತು ಹೊರಗಿನ ಈ ಕೋಮುವಾದಿ ಹುಚ್ಚರ ಸಹವಾಸದಲ್ಲಿ ಸುಸ್ತಾಗಿ ಹೋಗಿಬಿಡುತ್ತಿದ್ದರು. ಅದನ್ನು ಮೀರಿ ಸ್ವಲ್ಪ ಶಕ್ತಿ ಉಳಿಸಿಕೊಂಡಿದ್ದರೆ ಅದು ಫೈಲುಗಳನ್ನು ಹಿಡಿದುಕೊಂಡು ವಿಧಾನಸೌಧದಲ್ಲಿ ನಾಲ್ಕು ಸುತ್ತು ಸುತ್ತುವುದರಲ್ಲಿ ಕಳೆದುಹೋಗುತ್ತಿತ್ತು. ಹೀಗಿದ್ದರೂ ಅವರ ಬಹಳಷ್ಟು ಹಿತೈಷಿಗಳೆನಿಸಿಕೊಂಡವರು ವಿ.ಸಿ.ಹುದ್ದೆಯ ಕನಸನ್ನು ಅವರಲ್ಲಿ ತುಂಬಿಸಿದ್ದರು. ಇಂತಹ ಹಿತೈಷಿಗಳ ಅಭಿಮಾನಕ್ಕೆ ಅವರ ಸ್ವಾರ್ಥದ ಕಾರಣಗಳೂ ಇರಬಹುದು.
ನಾನು ಮಾಧ್ಯಮ ಸಲಹೆಗಾರನಾಗಿದ್ದಾಗ ನಾನೂ ಅವರನ್ನು ವಿ.ಸಿ.ಮಾಡಲು ನನ್ನ ಮಿತಿಯಲ್ಲಿ ಅಳಿಲ ಪ್ರಯತ್ನ ಮಾಡಿದ್ದೆ, ಸಾಧ್ಯವಾಗಲಿಲ್ಲ. ಈ ಬಾರಿಯಂತೂ ರಾಜ್ಯಪಾಲರು ‘’ಈ ಒಂದು ಹೆಸರು ಬಿಟ್ಟು ಬೇರೆ ಯಾರಾದ್ದಾದರೂ ಹೇಳಿ, ನನಗೆ ಮೇಲಿನಿಂದ ಒತ್ತಡ ಇದೆ’’ ಎಂದು ಬೇಡಿಕೊಂಡಿದ್ದರಂತೆ.
ಇವೆಲ್ಲದರ ನಂತರ ಒಮ್ಮೆ ನಾನೇ ಅಸ್ಸಾದಿ ಅವರಿಗೆ ನೇರವಾಗಿ ಹೇಳಿದ್ದೆ. ‘’ಈ ವೀಸಿಗೀಸಿ ಎಲ್ಲ ಬಿಟ್ಟು ಬಿಡಿ ಸ್ವಾಮಿ, ನಿಮ್ಮಂತಹವರಿಗಲ್ಲ ಅದು. ನೀವು ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಬೇಡಿಕೆ ಇರುವ ವಿದ್ವಾಂಸರು, ದೇಶ-ವಿದೇಶಗಳಲ್ಲಿ ಸುತ್ತಾಡಿ ಭಾಷಣ ಮಾಡ್ಕೊಂಡು, ಬರ್ಕೊಂಡು ಆರಾಮವಾಗಿರಿ’’ ಎಂದು ಹೇಳಿದ್ದೆ. ‘’ರಹಮತ್ ತರಿಕೆರೆ ಅವರನ್ನು ನೋಡಿ, ಎಷ್ಟು ಜಾಣರಿದ್ದಾರೆ! ನಿವೃತ್ತರಾದ ಮೇಲೆ ದೇಶ-ವಿದೇಶದಲ್ಲಿ ಹೆಂಡತಿ ಜೊತೆ ಬಿಲೇಟೆಡ್ ಹನಿಮೂನ್ ಟ್ರಿಪ್ ಮಾಡ್ಕೊಂಡು, ಬರ್ಕೊಂಡು, ಭಾಷಣ ಮಾಡ್ಕೊಂಡು ಆರಾಮವಾಗಿಲ್ವಾ!‘’ ಎಂದು ತಮಾಷೆಯಾಗಿಯೂ ಹೇಳಿದ್ದೆ. ಆದರೇನು ಮಾಡುವುದು, ಎಲ್ಲರೂ ಸೇರಿ ಅವರೊಳಗೆ ಅವರ ತಲೆಯೊಳಗೆ ಉಪಕುಲಪತಿಯ ಕನಸನ್ನು ತುರುಕಿಬಿಟ್ಟಿದ್ದರು. ಅವರಲ್ಲಿ ಒಂದು ಒಳ್ಳೆಯ ವಿಶ್ವವಿದ್ಯಾಲಯವನ್ನು ಕಟ್ಟಿ ತೋರಿಸಬೇಕು ಎನ್ನುವ ಕನಸಿತ್ತು. ಅದಕ್ಕೆ ಬೇಕಾಗಿರುವ ಎಲ್ಲ ಅರ್ಹತೆ ಮತ್ತು ಬದ್ಧತೆ ಎರಡೂ ಇತ್ತು. ಆ ಕನಸು ಕೈಗೂಡದೆ ಇದ್ದ ಕಾರಣ ಮಾನಸಿಕವಾಗಿ ಅವರು ನೊಂದಿದ್ದರು. ಇದು ಇತ್ತೀಚೆಗೆ ಅವರ ಆರೋಗ್ಯದ ಮೇಲೆಯೂ ಪರಿಣಾಮ ಬೀರಿದ ಹಾಗಿದೆ.
ನಾನು ಬಹಳ ಇಂತಹ ಪದವಿ ಆಕಾಂಕ್ಷಿಗಳನ್ನು ಸಮೀಪದಿಂದ ನೋಡಿದ್ದೇನೆ. ಸಿದ್ದರಾಮಯ್ಯನವರ ಸುತ್ತ ಹಗಲುರಾತ್ರಿ ಸುತ್ತಾಡಿ ಹತ್ತು ಕೆಲಸ ಮಾಡಿಸಿಕೊಂಡವರು ಹನ್ನೊಂದನೇ ಕೆಲಸ ಆಗದೆ ಇದ್ದಾಗ ಬಾಯಿಗೆ ಬಂದಂತೆ ಬೈಕೊಂಡು ಅಡ್ಡಾಡುತ್ತಿರುವವರನ್ನು ಕಂಡು ಕೇಳಿದ್ದೇನೆ. ಆದರೆ ಅಸ್ಸಾದಿ ಅವರು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ಅಖಂಡ ಅಭಿಮಾನಿ. ಅವರೆಂದೂ ಸಿದ್ದರಾಮಯ್ಯನವರ ವಿರುದ್ಧ ಸಣ್ಣ ಗೊಣಗಾಟ ಮಾಡಿದ್ದನ್ನೂ ಕೇಳಿರಲಿಲ್ಲ.
ಅಸ್ಸಾದಿ ಅವರ ಸಾವಿನಿಂದ ಕಲಿಯಬೇಕಾದವರು ಕಲಿಯಬೇಕಾದ ಪಾಠ ಇದೆ. ಇದನ್ನು ನಾನು ಬಹಳ ಬೇಗ ಕಲಿತಿದ್ದೇನೆ, ಅದಕ್ಕೆ ಆರಾಮಾಗಿದ್ದೇನೆ. ಐದು ವರ್ಷಗಳ ಅನುಭವದ ನಂತರ ಈ ಮಾಧ್ಯಮ ಸಲಹೆಗಾರನ ಹುದ್ದೆ ನನಗಲ್ಲ ಎಂದು ನನಗೆ ಪಕ್ಕಾ ಆಗಿತ್ತು. ಅದಕ್ಕೆ ಕೈಮುಗಿದು ಹೊರಗುಳಿದೆ. ಈಗಲೂ ಬಹಳಷ್ಟು ಮಂದಿ ‘’’ನೀವು ಅಲ್ಲಿರಬೇಕಿತ್ತು ಸಾರ್’’ ಎಂದು ಓಲೈಸಲು ನೋಡುತ್ತಾರೆ. ‘’’ಯಾಕೆ ನಿಮ್ಮನ್ನು ವಿಧಾನಸೌಧದ ಒಳಗೆ ಬಿಡಿಸಲಿಕ್ಕಾ? ಮುಖ್ಯಮಂತ್ರಿಗಳ ಭೇಟಿ ಮಾಡಿಸ್ಲಿಕ್ಕಾ? ಎಂದು ನೇರವಾಗಿ ಕೇಳುತ್ತೇನೆ. ಅವರು ಸುಮ್ಮನಾಗುತ್ತಾರೆ.
ಇನ್ನು ಕೆಲವರು ನೀವು ಎಂಎಲ್ ಎ ಆಗಬೇಕಿತ್ತು ಎಂದು ಹೇಳುತ್ತಿರುತ್ತಾರೆ. ‘’’ಚುನಾವಣಾ ಆಯೋಗ ನಿಗದಿಪಡಿಸಿದ ದುಡ್ಡಿನಲ್ಲಿ ಚುನಾವಣೆ ನಡೆಸಲಿಕ್ಕೆ ಸಾಧ್ಯವಾಗುವ ಮತ್ತು ಶಾಸಕರಿಗೆ ಕೊಡುವ ಸಂಬಳದಲ್ಲಿ ಬದುಕಲಿಕ್ಕೆ ಆಗುವ ದಿನ ನಾನು ಎಂಎಲ್ ಎ ಆಗಲು ಪ್ರಯತ್ನ ಪಡುತ್ತೇನೆ’’’ಎಂದು ಅವರಿಗೆ ಹೇಳುತ್ತಿರುತ್ತೇನೆ. ಹಾಗಿದ್ದರೆ ಎಂಎಲ್ ಸಿ ಆಗಿ ಎಂದು ಅವರು ಹೇಳುವುದುಂಟು. ‘’ನಾನು ರೆಡಿ ಇದ್ದೇನೆ. ಒಂದು ನಿಯೋಗ ಹೋಗಿ ಸಿದ್ದರಾಮಯ್ಯನವರಿಗೆ ಹೇಳಿ ಬಿಡಿ’’ ಎಂದು ಹೇಳುತ್ತೇನೆ. ಅವರು ನಕ್ಕು ಹೊರಟುಹೋಗುತ್ತಾರೆ.
ಕತ್ತೆ ವಯಸ್ಸಿನಿಂದಾಗಿ ದಕ್ಕಿಸಿಕೊಂಡಿರುವ ಅನುಭವದ ಬಲದಿಂದ ವಾಸ್ತವವನ್ನು ಅರ್ಥಮಾಡಿಕೊಂಡು ಇಂತಹದ್ದನ್ನೆಲ್ಲ ತಮಾಷೆಯಾಗಿ ಸ್ವೀಕರಿಸಲು ಕಲಿಯದೆ ಹೋದರೆ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕೆಟ್ಟುಹೋಗಿ ನಮ್ಮ ಸ್ಥಿತಿಯೂ ಗೆಳೆಯ ಮುಝಪರ್ ಅಸ್ಸಾದಿ ಅವರಂತಾಗುತ್ತದೆ.
ಅವರನ್ನು ವಿ.ಸಿ.ಮಾಡಲಾಗಲಿಲ್ಲ, ಉಳಿಸಿಕೊಳ್ಳಲೂ ಆಗಿಲ್ಲ. ಅವರ ಪುಸ್ತಕಗಳನ್ನಾದರೂ ಓದೋಣ, ಓದಿಸೋಣ ಮತ್ತು ಅವರನ್ನು ಅವರ ಚಿಂತನೆಗಳ ಮೂಲಕ ಉಳಿಸೋಣ.
– ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು




