ಚಾಮರಾಜನಗರದಲ್ಲಿ ಸಿ.ಎಸ್.ಕೃಷ್ಣಮೂರ್ತಿ ಅವರಿಗೆ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ
ಚಾಮರಾಜನಗರ: ಕನ್ನಡ ಸಾಂಸ್ಕೃತಿಕ ಲೋಕವನ್ನು ರಂಗಬದ್ಧತೆಯೊಂದಿಗೆ ದಿಟ್ಟತನ ಮೆರೆದ ಸಿಜಿಕೆ ಕನ್ನಡ ರಂಗಭೂಮಿಯ ಒಡನಾಡಿ ಬಂಧು ಎಂದು ಖ್ಯಾತ ಚಲನಚಿತ್ರ ನಟ ರಂಗಕರ್ಮಿ ಮಂಡ್ಯ ರಮೇಶ್ ಬಣ್ಣಿಸಿದರು.
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯಲ್ಲಿ ಕರ್ನಾಟಕ ರಂಗ ಪರಿಷತ್ತು, ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಕರ್ನಾಟಕ ಜಾನಪದ ಪರಿಷತ್ತು, ರಂಗವಾಹಿನಿ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಹಿರಿಯ ರಂಗಕರ್ಮಿ ಸಿ.ಎಸ್.ಕೃಷ್ಣಮೂರ್ತಿ ಅವರಿಗೆ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸಿಜಿಕೆ ಅವರು ತನ್ನ ಸುತ್ತಲಿನಲ್ಲಿರುವ ಒಟ್ಟು ಸಮಾಜವನ್ನು ಸಾಂಸ್ಕೃತಿಕ ಪ್ರಜ್ಞೆ ಮತ್ತು ಹೋರಾಟದ ಮನೋಭಾವನೆಯ ಮೂಲಕ ರಂಗ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದರು.
ಎಲ್ಲ ವೃತ್ತಿಗಳಿಗೂ ನಿವೃತ್ತಿ ಇದೆ. ಆದರೆ ಕಲಾವಿದರಿಗೆ ನಿವೃತ್ತಿ ಇಲ್ಲ. ದೇಹದಲ್ಲಿ ಚೈತನ್ಯ ಇರುವವರೆಗೂ ಕಲಾಸೇವೆ ಮಾಡುತ್ತಲೇ ಬರುತ್ತಾರೆ. ಸಿ.ಎಸ್.ಕೃಷ್ಣಮೂರ್ತಿಯವರ ಕಲಾಸೇವೆ ಇಂದು ಅವರ ಮನೆಯನ್ನು ಹುಡುಕಿಕೊಂಡು ಬರುವಂತೆ ಮಾಡಿದೆ. ಸಿಜಿಕೆ ಪ್ರಶಸ್ತಿಯನ್ನು ರಂಗಭೂಮಿಯವರೇ ರಂಗಭೂಮಿಯವರನ್ನು ಗುರುತಿಸಿ ಕೊಡುವ ಪ್ರಶಸ್ತಿ. ಸಂಘಟನೆಗೆ ಸಿಜಿಕೆ ಹೆಸರು ವಾಸಿ ಇವರ ಹೆಸರಿನ ಪ್ರಶಸ್ತಿಯನ್ನು ಸಿ.ಎಸ್.ಕೃಷ್ಣಮೂರ್ತಿಯವರಿಗೆ ಕೊಡುತ್ತಿರುವುದು ಸಂತೋಷದ ಸಂಗತಿ ಎಂದರು.
ಕರ್ನಾಟಕ ರಂಗ ಪರಿಷತ್ತಿನ ರಾಜ್ಯ ಸಂಚಾಲಕ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಕರ್ನಾಟಕ ರಂಗ ಪರಿಷತ್ತು ಮೈಸೂರಿನಲ್ಲಿ ಜೂನ್ ತಿಂಗಳಿನಲ್ಲಿ ಕರ್ನಾಟಕ ರಂಗ ಸಂಘಟಕರ ಸಮಾವೇಶವನ್ನು ನಡೆಸಲು ನಿರ್ಧರಿಸಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ರಂಗಕರ್ಮಿ ಸಂಘಟಕ ರಾಜಶೇಖರ ಕದಂಬ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು.
ಈ ಹಿಂದೆ ಶ್ರೀನಿವಾಸ ಜಿ ಕಪ್ಪಣ್ಣ ಅವರ ಸರ್ವಾಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಮತ್ತು ಪ್ರಸಾದ್ ರಕ್ಷಿದಿ ಅವರ ಸರ್ವಾಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ಸಮಾವೇಶವನ್ನು ನಡೆಸಲಾಗಿತ್ತು. ಇದು ಮೂರನೇ ಕರ್ನಾಟಕ ರಂಗ ಸಂಘಟಕರ ಸಮಾವೇಶವಾಗಿದೆ ಎಂದರು.
ಕರ್ನಾಟಕ ರಂಗ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಸ ಸುರೇಶ್ ಮಾತನಾಡಿ, ಚಾಮರಾಜನಗರ ಗಡಿ ಜಿಲ್ಲೆಯಲ್ಲಿ ಸಿ.ಎಸ್.ಕೃಷ್ಣಮೂರ್ತಿ ಅವರಿಗೆ ಸಿಜಿಕೆ ರಂಗ ಪ್ರಶಸ್ತಿ ನೀಡುತ್ತಿರುವುದು ಕರ್ನಾಟಕ ರಂಗ ಪರಿಷತ್ತಿಗೆ ಹೆಮ್ಮೆ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಕಲೆ ನಟರಾಜ್, ಎಸ್.ಪಿ ಬಾಲಸುಬ್ರಮಣ್ಯಂ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಹೆಚ್.ಎಂ.ಶಿವಣ್ಣ, ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿವೃತ್ತ ಜಿಲ್ಲಾಧ್ಯಕ್ಷೆ ನೇತ್ರಾವತಿ, ಮಹೇಶ್ ಕುದರ್, ದಿಲೀಪ್ ಕುದರ್, ಶ್ರೀನಿಧಿ ಕುದರ್, ಸಮಾಜ ಕಲ್ಯಾಣ ಇಲಾಖೆಯ ಹೆಚ್.ಎನ್.ಸೋಮಣ್ಣ ಹಾಗೂ ಹಲವಾರು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.




