ಅಯ್ಯೋ ನನ್ನ ಪ್ರಜಾವಾಣಿಯೇ… ನೀನು ಕೂಡಾ!

2 years ago

ಇವತ್ತು ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆ ನೋಡಿದಾಗಿನಿಂದ ಮನಸ್ಸೇಕೊ ಚಡಪಡಿಸುತ್ತಿದೆ. ಇದು ಧುತ್ತನೇ ಬಂದೆರಗಿರುವ ಚಡಪಡಿಕೆಯಲ್ಲ. ಕಳೆದ ಕೆಲ ದಿನಗಳಿಂದ ನನ್ನೊಳಗೇ ಕೊರೆಯುತ್ತಿದ್ದ ತಳಮಳ ಇವತ್ತು ತಡೆದುಕೊಳ್ಳಲಾರದಷ್ಟು ವಿಪರೀತವೆನಿಸತೊಡಗಿದೆ. ಹಾಗಾಗಿ ನನ್ನನ್ನು ನಾನು ಹಗುರ ಮಾಡಿಕೊಳ್ಳಲು ಬರೆಯುತ್ತಿದ್ದೇನೆ.

ಅಪ್ಪ ಪೊಲೀಸ್ ಇಲಾಖೆಯ ದಪೇದಾರ್ ಕೆಲಸದಲ್ಲಿದ್ದರು. ಪತ್ರಿಕೆ ಓದುವ ಹವ್ಯಾಸವಿತ್ತು. ಮನೆಗೆ ಪ್ರಜಾವಾಣಿ ತರಿಸುತ್ತಿದ್ದರು. ಹಾಗಾಗಿ ನನ್ನ ಹತ್ತನೇ ವಯಸ್ಸಿನಿಂದಲೇ ಪ್ರಜಾವಾಣಿ ಓದಿನ ನಂಟು ಬೆಳೆಸಿಕೊಂಡೆ. ಸತತ ಐವತ್ತು ವರ್ಷಗಳ ಆ ನಂಟಿಗೆ ಯಾವತ್ತೂ ವಿಘ್ನಗಳು ಎದುರಾಗಿಲ್ಲ. ಹಾಗೊಮ್ಮೆ, ಹೀಗೊಮ್ಮೆ ಕೆಲಸದ ಒತ್ತಡಗಳ ಕಾರಣದಿಂದ ಪತ್ರಿಕೆ ಓದೋದನ್ನು ಮಿಸ್ ಮಾಡಿಕೊಂಡಿದ್ದು ಬಿಟ್ಟರೆ,  ಪ್ರಜಾವಾಣಿ ನನ್ನ ನಿತ್ಯ ಸಂಗಾತಿ. ಅದರಲ್ಲೂ ಟಿಎಸ್ಸೆಆರ್ ಅವರ ‘ಛೂಬಾಣ’ ನನಗೆ ಪ್ರಜಾವಾಣಿಯ ಹುಚ್ಚುಹಿಡಿಸಿತು ಅಂತಲೇ ಅನ್ನಬಹುದು.

ಪತ್ರಿಕೋದ್ಯಮ ಎನ್ನುವುದು ಕೇವಲ ಒಂದು ಹಣಕಾಸು ವ್ಯವಹಾರದ ಉದ್ಯಮವಷ್ಟೇ ಅಲ್ಲ. ಅದಕ್ಕೊಂದು ಸಾಮಾಜಿಕ ಹೊಣೆಗಾರಿಕೆ ಇರುತ್ತೆ. ಅದಕ್ಕೆಂದೇ ಪತ್ರಿಕೋದ್ಯಮವನ್ನು ಸಂವಿಧಾನದ ನಾಲ್ಕನೇ ಆಯಾಮ ಎಂದು ಕರೆಯುತ್ತಾರೆ. ಸುದ್ದಿ ಮತ್ತು ವಿಶ್ಲೇಷಣೆಗಳು ಸತ್ಯದ ಪಕ್ಷಪಾತಿಯಾಗಿ ಇರಬೇಕು ಎನ್ನುವುದು ಎಷ್ಟು ಅವಶ್ಯಕವೋ, ಅವು ಜನರ ಅರಿವನ್ನು ವಿಸ್ತರಿಸುವಂತಿರಬೇಕು, ಸಮಾಜದ ಆರೋಗ್ಯವನ್ನು ಉದ್ದೀಪಿಸುವಂತಿರಬೇಕು, ಜನರ- ಅದರಲ್ಲೂ, ಅಶಕ್ತರ ಧ್ವನಿಯನ್ನು ಪ್ರತಿಧ್ವನಿಸುವಂತಿರಬೇಕು ಅನ್ನೋ ವೃತ್ತಿಧರ್ಮಕ್ಕೆ ಪ್ರಜಾವಾಣಿ ಪತ್ರಿಕೆ ಆರಂಭದಿಂದಲೂ ಕಟ್ಟಿಬದ್ಧವಾಗಿಯೇ ನಡೆದುಕೊಂಡು ಬಂದಿತ್ತು. ಬಹುಶಃ, ಹಾಗಾಗಿಯೇ ನಮ್ಮಂತಹ ಲಕ್ಷಾಂತರ ಓದುಗರಿಗೆ ಇವತ್ತಿನವರೆಗೂ ಪ್ರಜಾವಾಣಿ ವಿಶ್ವಾಸಾರ್ಹ ಪತ್ರಿಕೆ ಅನ್ನಿಸಿಕೊಂಡಿದ್ದಿರಬಹುದು.

ಯಾವುದೇ ಪತ್ರಿಕೆಗೆ ಸುದ್ದಿಗಳ ಆಯ್ಕೆ ಮತ್ತು ಆದ್ಯತೆಯ ಕುರಿತಂತೆ ಅದರದ್ದೇ ಆದ ಅಭಿವ್ಯಕ್ತಿ ಸ್ವಾತಂತ್ಯ್ರವಿರುತ್ತದೆ. ಅದನ್ನು ನಾವು ಪ್ರಶ್ನೆ ಮಾಡಲಾಗುವುದಿಲ್ಲ. ಆದರೆ ಅಂತಹ ಸ್ವಾತಂತ್ಯ್ರಕ್ಕೆ ಮೇಲೆ ಹೇಳಲಾದ ಸಾಮಾಜಿಕ ಹೊಣೆಗಾರಿಕೆಗಳೂ ಇರಬೇಕಾಗುತ್ತದೆ. ಇವತ್ತು ಮಾಧ್ಯಮರಂಗ ಅಂತಹ ಎಲ್ಲಾ ಹೊಣೆಗಳನ್ನು ಕಳಚಿಕೊಂಡು ನಿರ್ದಿಷ್ಟ ರಾಜಕೀಯ ಪಕ್ಷಗಳ ತುತ್ತೂರಿಯಂತೆ ಕೆಲಸ ಮಾಡುತ್ತಿವೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ವಿಭಜಕ ರಾಜಕಾರಣದ ಅಸ್ತ್ರಗಳಾಗಿ ರೂಪಾಂತರಗೊಂಡಿವೆ. ವ್ಯಕ್ತಿ ಪೂಜೆಯಲ್ಲಿ ಗತಿಸಿಹೋಗುತ್ತಿವೆ. ಇದೇ ಕಾರಣಕ್ಕೆ ಜನ, ಮಾಧ್ಯಮಗಳನ್ನು ಲೇವಡಿ ಮಾಡಲು ಶುರು ಮಾಡಿದ್ದಾರೆ. ಅವುಗಳ ಮೇಲೆ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಕೊಂಚ ವಿಶ್ವಾಸ ಇಡಬಹುದಾದ ಪತ್ರಿಕೆಯಾಗಿ ಉಳಿದದ್ದು ಪ್ರಜಾವಾಣಿ.

ಅಂತಹ ಪ್ರಜಾವಾಣಿ, ಇತ್ತೀಚೆಗೆ ಅದೇಕೋ ಲಯ ತಪ್ಪುತ್ತಿರುವಂತೆ ಭಾಸವಾಗುತ್ತಿದೆ. ಆ ಪ್ರಜಾವಾಣಿ ಕೂಡಾ ನಿರ್ದಿಷ್ಟ ರಾಜಕೀಯ ಸಿದ್ದಾಂತದತ್ತ ಹೆಚ್ಚು ವಾಲುತ್ತಿದೆಯೇನೊ ಅನ್ನಿಸಲಾರಂಭಿಸಿದೆ. ಇವತ್ತಿನ ಮುಖಪುಟ ಅದಕ್ಕೊಂದು ನಿದರ್ಶನ. ಬಾಂಗ್ಲಾದಲ್ಲಿ, ಆ ದೇಶದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಇಸ್ಕಾನ್ ಸಂಸ್ಥೆಯ ಮುಖ್ಯಸ್ಥ ಚಿನ್ಮಯ ಕೃಷ್ಣದಾಸ್ ಅವರನ್ನು ಬಂಧಿಸಲಾಗಿದೆ. ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನ ವಿರೋಧಿಸಿ ಕೃಷ್ಣದಾಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹೀಗೆ ಅವಮಾನಿಸಲಾಗಿತ್ತು ಎಂಬುದು ಆರೋಪ. ಆ ಆರೋಪಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದ್ದರಿಂದ ಪೊಲೀಸರು ಬಂಧಿಸಿದ್ದಾರೆ. ಈ ಸುದ್ದಿಯನ್ನು ಮುಖಪುಟದಲ್ಲಿ, ಮುಖ್ಯಸುದ್ದಿಗೆ ಪರ್ಯಾಯವಾಗಿ ಪ್ರಕಟಿಸಲು ಪ್ರಜಾವಾಣಿ ಆಯ್ಕೆ ಮಾಡಿಕೊಂಡಿದೆ. ಅದು ಅದರ ಪತ್ರಿಕಾ ಸ್ವಾತಂತ್ಯ್ರ. ಆ ಆಯ್ಕೆ ನಮಗೆಷ್ಟು ಸಮಂಜಸವೋ, ಅಸಮಂಜಸವೋ; ನಾವು ಪತ್ರಿಕೆಯ ಆಯ್ಕೆ ಸ್ವಾತಂತ್ಯ್ರವನ್ನು ಗೌರವಿಸಬೇಕು. ಆದರೆ ಹಾಗೆ ಪ್ರಕಟಿಸುವಾಗ, ಅದು ಬಳಸಿದ ಪದಗಳಿವೆಯಲ್ಲ, ಅವುಗಳನ್ನು ನೋಡಿಯೇ ನಾನು ದಂಗಾಗಿ ಹೋದದ್ದು. “ಬಾಂಗ್ಲಾ ರಾಷ್ಟ್ರಧ್ವಜಕ್ಕೆ ಅಗೌರವ, ಹಿಂದೂ ಮುಖಂಡ ಜೈಲಿಗೆ” ಇದು ಪ್ರಜಾವಾಣಿ ನೀಡಿರುವ ಹೆಡ್ಲೈನ್. ವಾಕ್ಯ ರಚನೆಯಲ್ಲಿ ಹುಸಿ ಇಲ್ಲವಾದರೂ, ಅದರ ಹಿಂದಿರುವ ಉದ್ದೇಶ ಎಷ್ಟು ಹಸಿಯಾಗಿದೆ ಅನ್ನೋದನ್ನು ಗಮನಿಸಬೇಕು. ಕೋಮುಧ್ರುವೀಕೃತ ರಾಜಕಾರಣದಿಂದಾಗಿ ಇವತ್ತು ನಮ್ಮ ಭಾರತ ಸಮಾಜದಲ್ಲಿರುವ ಪ್ರಕ್ಷುಬ್ಧತೆಯನ್ನು ಪರಿಗಣಿಸಿದಾಗ, ಬಾಂಗ್ಲಾದಲ್ಲಿ ನಡೆದ ಒಂದು ವಿದ್ಯಮಾನವನ್ನು, ಮುಖಪುಟದ ಪರ್ಯಾಯ-ಪ್ರಧಾನ ಸುದ್ದಿಯಾಗಿ ತೆಗೆದುಕೊಂಡು ಅದರಲ್ಲಿ ‘ಹಿಂದೂ ಮುಖಂಡ ಜೈಲಿಗೆ’ ಎಂಬ ಧರ್ಮಾಧಾರಿತ ಸಂಗತಿಯನ್ನು ಪ್ರಚೋದನಕಾರಿಯಾಗಿ ಪ್ರಕಟಿಸುವಷ್ಟು ನನ್ನ ಪ್ರಜಾವಾಣಿ ಅಸೂಕ್ಷ್ಮಗೊಂಡಿತೇ? ಯಾವುದೋ ಒಂದು ನಿರ್ದಿಷ್ಟ ಕೇಡಿನ ಉದ್ದೇಶ ಹೊತ್ತಂತೆ ಆ ಶೀರ್ಷಿಕೆ ಭಾಸವಾಗುತ್ತಿದೆ.

ಅದನ್ನು ಓದಿದ ಕೂಡಲೇ, ನಾನು ಪ್ರಜಾವಾಣಿ ಪತ್ರಿಕೆಯನ್ನು ಕೈಲಿ ಹಿಡಿದಿದ್ದೇನೊ ಅಥವಾ ಕೋಮುವಾದಿಗಳ ಮುಖವಾಣಿಯಂತೆ ಕೆಲಸ ಮಾಡುವ `ಹೊಸ ದಿಂಗತ’ ಪತ್ರಿಕೆಯನ್ನು ಅಚಾತುರ್ಯದಿಂದ ಓದುತ್ತಿದ್ದೇನೋ ಎಂಬ ಗೊಂದಲವಾಯ್ತು. ಇಲ್ಲ ಅದು ಪ್ರಜಾವಾಣಿಯೇ. ಕುತೂಹಲಕ್ಕೆ ಹೊಸ ದಿಗಂತವನ್ನು ಕೊಂಡುತಂದು ನೋಡಿದೆ. ಸಹಜವಾಗಿಯೇ ಅದರಲ್ಲೂ ಅದೇ ಸುದ್ದಿ ಮುಖಪುಟದ ಪರ್ಯಾಯ-ಪ್ರಧಾನ ಸುದ್ದಿಯಾಗಿತ್ತು. ಆದರೆ ಶೀರ್ಷಿಕೆ ‘ಚಿನ್ಮಯ ಬಂಧನಕ್ಕೆ ಭಾರತ ಕಳವಳ: ಹಿಂದೂಗಳ ರಕ್ಷಿಸಿ ಬಾಂಗ್ಲಾಕ್ಕೆ ಆಗ್ರಹ’ ಎಂದಿತ್ತು. ಹೋಲಿಕೆ ಮಾಡಿ ನೋಡಿದರೆ, ಪ್ರಜಾವಾಣಿಗಿಂತಲೂ ಸೌಮ್ಯವಾದ ಶೀರ್ಷಿಕೆ ಹೊಸ ದಿಗಂತದ್ದು ಅನ್ನಿಸಿತು. ‘ಭಾರತ ಕಳವಳ’ ಮತ್ತು ‘ಆಗ್ರಹ’ ಎಂಬ ಪದಗಳು ಇದೊಂದು ಅಂತಾರಾಷ್ಟ್ರೀಯ ವಿದ್ಯಮಾನ ಮತ್ತು ರಾಜತಾಂತ್ರಿಕ ಪ್ರತಿಕ್ರಿಯೆಗೆ ಸೀಮಿತವಾದದ್ದು ಎಂಬುದನ್ನು ಸೂಚಿಸುತ್ತಿವೆ. ಆದರೆ ಪ್ರಜಾವಾಣಿಯ ಶೀರ್ಷಿಕೆಯಲ್ಲಾಗಲಿ, ಅಥವಾ ಸುದ್ದಿಯ ನಿರೂಪಣೆಯಲ್ಲಾಗಲಿ ಕಡೇಪಕ್ಷ ಹೊಸದಿಂಗತ ತೋರಿದ ಸಂಯಮವೂ ಕಾಣುತ್ತಿಲ್ಲ. ವಿಪರ್ಯಾಸ ಇಷ್ಟಕ್ಕೇ ಮುಗಿಯೋದಿಲ್ಲ. ಕನ್ನಡದ ಬೇರೆಬೇರೆ ಪತ್ರಿಕೆಗಳನ್ನೂ ತಿರುವಿಹಾಕಿದೆ. ಬೇರೆ ಯಾವ ಪತ್ರಿಕೆಗಳೂ ಈ ಸುದ್ದಿಗೆ ಇಷ್ಟು ಪ್ರಾಮುಖ್ಯತೆ ಕೊಟ್ಟು ಪರ್ಯಾಯ-ಪ್ರಧಾನ ಸುದ್ದಿಯಾಗಿ ಪ್ರಕಟಿಸಿಲ್ಲ. ಮುಖಪುಟದ ತಳಭಾಗದಲ್ಲೆಲ್ಲೋ ಪುಟ್ಟ ಬಾಕ್ಸ್ ಕಲಂ ಐಟಮ್ಮಾಗಿ ಪ್ರಕಟಿಸಿದ್ದವು.

ಯಾವುದೇ ದೇಶವೊಂದರಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳಾಗುತ್ತಿದ್ದರೆ, ಅದರ ವಿರುದ್ಧ ಪ್ರತಿಭಟಿಸಬೇಕಾದದ್ದು ಮಾನವಹಕ್ಕುಗಳನ್ನು ಗೌರವಿಸುವ ಎಲ್ಲರ ಕರ್ತವ್ಯ. ಯಾಕೆಂದರೆ ಅಲ್ಪಸಂಖ್ಯಾತರು ಬಹುಸಂಖ್ಯಾತರ ನಡುವೆ ಅಭದ್ರತೆಯಲ್ಲಿ ಬದುಕುತ್ತಿರುತ್ತಾರೆ. ಆ ನಿಟ್ಟಿನಲ್ಲಿ, ವಸ್ತುಸ್ಥಿತಿಯನ್ನು ತಿಳಿದುಕೊಂಡು, ಚಿನ್ಮಯ ಕೃಷ್ಣದಾಸ್ ಅವರ ಹೋರಾಟಕ್ಕೆ ನಮ್ಮ ಬೆಂಬಲವಿರಬೇಕು. ಆದರೆ ಅದನ್ನು ಪ್ರಕಟಿಸುವಾಗ ಇಲ್ಲಿನ ಅಲ್ಪಸಂಖ್ಯಾತರ ಆತಂಕಕ್ಕೆ ಕಾರಣವಾಗುವಷ್ಟು ಉದ್ರೇಕಕಾರಿಯಾಗಿ ಇರಬಾರದಲ್ಲವೇ? ಆ ಎಚ್ಚರಿಕೆ ಪ್ರಜಾವಾಣಿಗೆ ಇಲ್ಲವಾಯಿತೇ?

ಮತ್ತೊಂದು ಸಂಗತಿಯೆಂದರೆ, ಬಾಂಗ್ಲಾದಲ್ಲಿ ಆ ಘಟನೆ ನಡೆದ ಅದೇ ದಿನ, ನಮ್ಮದೇ ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಭದ್ರತೆಗೆ ಸಂಬಂಧಿಸಿದ ಇನ್ನೊಂದು ಘಟನೆ ನಡೆದಿತ್ತು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರ ಸ್ವಾಮಿ, ‘ಮುಸ್ಲಿಮರಿಗೆ ಮತದಾನದ ಹಕ್ಕು ರದ್ದು ಮಾಡಬೇಕು’ ಎಂಬ ಆತಂಕಕಾರಿ ಹೇಳಿಕೆ ನೀಡಿದ್ದರು. ಈ ನೆಲದ ಸೌಹಾರ್ದತೆ ಮತ್ತು ಸಂವಿಧಾನದ ಸಾರ್ವಭೌಮತೆಯನ್ನೆ ಅಣಕಿಸುವಂತಹ ಆ ಹೇಳಿಕೆ ಅಪಾಯಕಾರಿಯಾದದ್ದು. ಅಂತಹ ಹೇಳಿಕೆಗಳ ವಿರುದ್ಧ ಜಾಗೃತಿ ಮೂಡಿಸಬೇಕಾದ್ದು ಪತ್ರಿಕೋದ್ಯಮದ ಕರ್ತವ್ಯ. ಆದರೆ ಬಾಂಗ್ಲಾ ಸಂತನ ಬಂಧನವನ್ನು ‘ಹಿಂದೂ ಮುಖಂಡನ ಬಂಧನ’ ಎಂದು ಮುಖಪುಟದಲ್ಲಿ ಪ್ರಕಟಿಸಿದ್ದ ಪ್ರಜಾವಾಣಿ, ನಮ್ಮದೇ ನೆಲದ ಸ್ವಾಮಿಯೊಬ್ಬರ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯನ್ನು ಒಳಪುಟದಲ್ಲಿ ಚಿಕ್ಕದಾಗಿ ಪ್ರಕಟಿಸಿ ಕೈತೊಳೆದುಕೊಂಡಿದೆ. ಈ ನೆಲದ ಪತ್ರಿಕೆಯಾಗಿ, ಪ್ರಜಾಪ್ರಭುತ್ವದ ನಾಲ್ಕನೇ ರಕ್ಷಕನಾಗಿ ಪ್ರಜಾವಾಣಿ ಪತ್ರಿಕೆಗೆ ಇವೆರಡರಲ್ಲಿ ಯಾವುದು ಮೊದಲ ಆದ್ಯತೆಯಾಗಬೇಕಿತ್ತು? ಯಾವುದು ಆದ್ಯತೆಯಾಗಿದೆ!

ಅಲ್ಲೆಲ್ಲೊ ಬಾಂಗ್ಲಾದ ಅಲ್ಪಸಂಖ್ಯಾತರ ವಿದ್ಯಮಾನಕ್ಕೆ ಅಷ್ಟೆಲ್ಲ ಒತ್ತುಕೊಟ್ಟು ಅಸೂಕ್ಷ್ಮವೆನಿಸುವ ಶೀರ್ಷಿಕೆಯೊಂದಿಗೆ ಪ್ರಕಟಿಸಿ; ನಮ್ಮದೇ ನೆಲದ ಇಲ್ಲಿನ ಅಲ್ಪಸಂಖ್ಯಾತರ ಅಸ್ತಿತ್ವದ ಮೇಲೆ ಹಲ್ಲೆ ಮಾಡುವಂತಹ ವಿದ್ಯಮಾನವನ್ನು ತೆಳುವಾಗಿ ತೇಲಿಸಿದ ಪ್ರಜಾವಾಣಿ ಪತ್ರಿಕೆಯನ್ನು ನೋಡಿದಾಗ ನನಗನ್ನಿಸಿದ್ದು, “ಅಯ್ಯೋ ನನ್ನ ಪ್ರಜಾವಾಣಿಯೇ…. ನೀನು ಕೂಡಾ!”

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply