ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರಿಗೆ ಏಕೆ ಇಷ್ಟೊಂದು ಹೊಟ್ಟೆ ಕಿಚ್ಚು?

1 year ago

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿದಂತಹ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದು ಕೇವಲ 100 ದಿನದ ಒಳಗಾಗಿ ಜಾರಿಗೆ ತಂದಿರುವುದು ಭಾರತ ದೇಶದ ಇತಿಹಾಸದಲ್ಲಿ ಒಂದು ದೊಡ್ಡ ಸಾಧನೆಯ ಸರಿ.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ ಐದು ಗ್ಯಾರಂಟಿಗಳನ್ನು ಕೊಡಲು ಸಾಧ್ಯವಿಲ್ಲ ಎಂದು ಪದೇ ಪದೇ ಬಿಜೆಪಿಯವರು ಹೇಳುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ತನ್ನ ಮುಂಗಡಪತ್ರದಲ್ಲಿ ಇದಕ್ಕಾಗಿ 50,000 ಕೋಟಿಗೂ ಹೆಚ್ಚು ಹಣವನ್ನ ಮೀಸಲಿಟ್ಟು 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿತು. ಇದಕ್ಕೆ ಬೇಕಾದ ಸಂಪನ್ಮೂಲವನ್ನು ಸಹ ಕ್ರೂಡೀಕರಿಸಿ ಕೊಟ್ಟಿರುತ್ತದೆ.

ಐದು ಗ್ಯಾರಂಟಿಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಇದರ ಉಸ್ತುವಾರಿಗಾಗಿ ಗ್ಯಾರೆಂಟಿ ಅನುಷ್ಠಾನ ಸಮಿತಿಗಳನ್ನು, ರಚಿಸಿ ಇದರಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಲು ಮತ್ತು ಫಲಾನುಭವಿಗಳಿಗೆ ಅಗತ್ಯವಾದಂತಹ ನೆರವನ್ನ ಒದಗಿಸಲು ಈ ಸಮಿತಿಗಳಿಗೆ ಜವಾಬ್ದಾರಿಯನ್ನ ನೀಡಿರುತ್ತಾರೆ.

ಗ್ಯಾರಂಟಿಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿದ್ದಂತೆ ಬಿಜೆಪಿಯವರು ಮತ್ತೆ ಮತ್ತೆ ಲಘುವಾಗಿ ಮಾತನಾಡುವಂತಹ ಚಾಳಿಯನ್ನು ಆರಂಭಿಸಿರುತ್ತಾರೆ. ಈ ಮೊದಲು ಗ್ಯಾರಂಟಿಗಳು ಕೆಲವೇ ತಿಂಗಳಲ್ಲಿ ನಿಂತು ಹೋಗುತ್ತವೆ ಎಂದು ಜನರ ಮುಂದೆ ಸುಳ್ಳು ಹೇಳಿದರು. ತದನಂತರ ಲೋಕಸಭಾ ಚುನಾವಣೆಯ ನಂತರ ಗ್ಯಾರಂಟಿಗಳು ನಿಲ್ಲುತ್ತವೆ ಎಂದು ಪ್ರಧಾನಮಂತ್ರಿಗಳ ಬಾಯಲ್ಲೂ ಹೇಳಿಸಿದರು. ಈಗ ಲೋಕಸಭಾ ಚುನಾವಣೆ ನಡೆದು ಹಲವಾರು ತಿಂಗಳುಗಳಾದರೂ ಸಹ ಗ್ಯಾರಂಟಿಗಳು ಮತ್ತೆ ಮುಂದುವರೆದಿವೆ. ಈಗ ಮತ್ತೆ ಬಿಜೆಪಿಯವರು ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಗ್ಯಾರಂಟಿಗಳು ನಿಂತುಬಿಡುತ್ತವೆ ಎಂದು ಉಪಚುನಾವಣೆಗಳ ಹಿನ್ನೆಲೆಯಲ್ಲಿ ಅಬ್ಬರಿಸುತ್ತಿದ್ದಾರೆ.

ಗ್ಯಾರಂಟಿಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಇರುವಂತಹ ಲೋಪ ದೋಷಗಳ ಸಂಬಂಧದಲ್ಲಿ ನಾಯಕರುಗಳು ಹೇಳಿರುವ ಮಾತುಗಳನ್ನು ತಪ್ಪಾಗಿ ಅರ್ಥೈಸುತ್ತಾ ಗ್ಯಾರಂಟಿಗಳನ್ನು ರದ್ದು ಮಾಡುತ್ತಾರೆ ಎಂದು ಮತ್ತೆ ಮತ್ತೆ ಹೇಳುವುದರ ಜೊತೆಗೆ, ಪ್ರಧಾನಮಂತ್ರಿಗಳು ಸಹ ಈ ವಿಚಾರ ತಮ್ಮ ಚುನಾವಣಾ ಭಾಷಣಕ್ಕೆ ಬಳಸಿಕೊಳ್ಳುತ್ತಿರುವುದು ಅವರ ಘನತೆಗೆ ಒಪ್ಪುವಂಥದ್ದಲ್ಲ.

ಕೇಂದ್ರ ಸರ್ಕಾರ ನ್ಯಾಯ ಸಮ್ಮತವಾಗಿ ಕರ್ನಾಟಕಕ್ಕೆ ಕೊಡಬೇಕಾದಂತಹ ತೆರಿಗೆಯ ಪಾಲನ್ನು ಕೊಡದಿದ್ದರೂ ಸಹ, ಬರಗಾಲ ಬಂದು ಸಮಸ್ಯೆಗಳು ಬಂದರೂ ಸಹ, ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಪ್ರತಿ ತಿಂಗಳು ಜನರಿಗೆ ನೀಡುತ್ತಲೇ ಇದೆ. ಯಾವ ಬಿಜೆಪಿ ಪಕ್ಷ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಂದು ಬಾಯಿ ಬಾಯಿ ಬರೆದುಕೊಳ್ಳುತ್ತಿದ್ದರೋ ಅವರಿಗೆ ಇತ್ತೀಚಿಗೆ ದೇಶದಲ್ಲಿ ಆರ್ಥಿಕ ಸಮೀಕ್ಷೆಯ ವರದಿಯ ವಿಚಾರ ಕಣ್ಣಿಗೆ ಕಂಡಿಲ್ಲವೇನೋ?

ಭಾರತ ದೇಶದ ಜಿಡಿಪಿಯ ಬೆಳವಣಿಗೆಯಲ್ಲಿ ಕರ್ನಾಟಕದ ಗ್ಯಾರಂಟಿಗಳು ಹೆಚ್ಚಿನ ಪಾತ್ರ ವಹಿಸಿದೆ ಎನ್ನುವ ಆರ್ಥಿಕ ತಜ್ಞರ ಮಾತುಗಳು ಅವರಿಗೆ ಕೇಳಿಸಿದಷ್ಟು ಕಿವಿಗಳು ಕಿವುಡಾಗಿದೆ ಅಥವಾ ಇವುಗಳನ್ನು ಸಹಿಸಿಕೊಳ್ಳಲಾಗದೆ ಅಪಪ್ರಚಾರಗಳನ್ನು ಮಾಡುವುದರ ಮೂಲಕ ತಮ್ಮ ಸುಳ್ಳುಗಳನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಇದರ ಜೊತೆಗೆ ಇವರೇ ಸಾಕಿರುವ ಒಂದಷ್ಟು ಕನ್ನಡದ ಸುದ್ದಿ ಮಾಧ್ಯಮಗಳು ಗ್ಯಾರಂಟಿಯ ವಿಚಾರದಲ್ಲಿ ಪದೇ ಪದೇ ಮುಖ್ಯಮಂತ್ರಿಗಳು ಸ್ಪಷ್ಟೀಕರಣ ಕೊಟ್ಟರೂ ಸಹ ಬಿಜೆಪಿ ನಾಯಕರ ಮಾತುಗಳನ್ನೇ ಸತ್ಯ ಎನ್ನುವ ರೀತಿಯಲ್ಲಿ ಉಪಕಥೆಗಳೊಂದಿಗೆ ಬಿತ್ತರಿಸುವುದರ ಮೂಲಕ ಬಿಜೆಪಿಯವರಿಗೆ ತಮ್ಮ ಋಣವನ್ನು ತೀರಿಸುವೆ.

ಬಿಜೆಪಿಯವರು ಮತ್ತು ಪ್ರಧಾನಮಂತ್ರಿಗಳು ಕರ್ನಾಟಕದ ಗ್ಯಾರಂಟಿಗಳ ಬಗ್ಗೆ ಮಾತನಾಡುವುದಕ್ಕೆ ಮುನ್ನ ಕಳೆದ 11 ವರ್ಷದ ಅವಧಿಯಲ್ಲಿ ಬಿಜೆಪಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸಂದರ್ಭದಲ್ಲೇ ನೀಡಿದಂತಹ  ಭರವಸೆಗಳ ಈಡೇರಿಕೆಯ ವಿಚಾರದಲ್ಲಿ ಪ್ರಶ್ನೆ ಮಾಡಿಕೊಳ್ಳಲಿ.

ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಹಾಕುತ್ತೇವೆ ಎಂದು ನಾವು ಎಂದೂ ಸುಳ್ಳು ಹೇಳಿರಲಿಲ್ಲ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನ ಸೃಷ್ಟಿಸುತ್ತೇವೆ ಎಂದು ಅಂಗೈಯಲ್ಲಿ ಅರಮನೆಯನ್ನ ಕಟ್ಟಿರಲಿಲ್ಲ. ಆಹಾರ ಪದಾರ್ಥಗಳ ಬೆಲೆಯನ್ನ ಇಳಿಸಿ ಸುಖದ ದಿನಗಳನ್ನು ತರುತ್ತೇವೆ ಎಂದು ಸುಳ್ಳುಗಳನ್ನು ಎಂದು ಹೇಳಿರಲಿಲ್ಲ. ರಾಜ್ಯಗಳಿಗೆ ಅನುದಾನ ಹಂಚಿಕೆಯ ಸಂಬಂಧದಲ್ಲಿ ಮಲತಾಯಿ ಧೋರಣೆಯನ್ನ ಅನುಸರಿಸಿ ದ್ವೇಷದ ರಾಜಕಾರಣವನ್ನ ಕಾಂಗ್ರೆಸ್ ಸರ್ಕಾರಗಳು ಎಂದೂ ಮಾಡಿರಲಿಲ್ಲ. ಕೇಂದ್ರ ಸರ್ಕಾರದಿಂದ ಮನೆಗಳನ್ನು ನಿರ್ಮಿಸಿ ಕೊಡುತ್ತೇವೆ ಎಂದು ಪ್ರಚಾರ ಪಡೆಯುತ್ತಿದ್ದೀರಿ. ಆದರೆ ಇದರಲ್ಲಿ ರಾಜ್ಯ ಸರ್ಕಾರಗಳ ಪಾಲು ಶೇಕಡಾ 80ರಷ್ಟು ಇದೆ ಆದರೂ ಪ್ರಚಾರ ನಿಮ್ಮದೇ ಆಗಿದೆ.

ನೀವು ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಎಂಬ ಆರೋಗ್ಯ ಕಾರ್ಯಕ್ರಮ ಖಾಸಗಿ ಆಸ್ಪತ್ರೆಗಳಲ್ಲಿ ಒಪ್ಪಿಕೊಳ್ಳುತ್ತಿಲ್ಲ. ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಇದಕ್ಕೆ ಮನ್ನಣೆ ಇದೆ. ಇದರಲ್ಲೂ ಸಹ ರಾಜ್ಯ ಸರ್ಕಾರ ಶೇಕಡ 60ರಷ್ಟು ಹಣವನ್ನ ಪಾವತಿಸುತ್ತಿದೆ. ಇದನ್ನು ಯಾಕೆ ಹೇಳುವುದಿಲ್ಲ?

ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಮತ್ತು ಎಲ್ಲಾ ಕಾರ್ಯಕ್ರಮಗಳಲ್ಲೂ ರಾಜ್ಯ ಸರ್ಕಾರ ಕೇಂದ್ರಕ್ಕಿಂತ ಹೆಚ್ಚಿನ ಪಾಲನ್ನು ನೀಡುತ್ತಿದೆ. ಆದರೂ ಸಹ ಎಲ್ಲ ಕಾರ್ಯಕ್ರಮಗಳು ಕೇಂದ್ರ ಸರ್ಕಾರದ್ದೇ, ರಾಜ್ಯ ಸರ್ಕಾರಗಳು ಏನೂ ಮಾಡುತ್ತಿಲ್ಲ ಎನ್ನುವ ರೀತಿಯಲ್ಲಿ ಭಾಷಣವನ್ನು ಮಾಡುತ್ತಾರೆ. ರಾಜ್ಯ ಸರ್ಕಾರಗಳು ಕೊಡುವ ತೆರಿಗೆಯ ಪಾಲಿನಲ್ಲಿ ಮಾತ್ರವೇ ಕೇಂದ್ರ ಸರ್ಕಾರ ಅನುದಾನವನ್ನು ಕೊಡಲು ಸಾಧ್ಯವಿದೆ. ಈ ಮೊದಲು ರೈಲ್ವೆ ಇಲಾಖೆಯ ಅನುದಾನ ರೈಲ್ವೆ ಮುಂಗಡಪತ್ರದಲ್ಲಿ ಹಂಚಿಕೆಯಾಗುತ್ತಿತ್ತು. ಆದರೆ ಈಗ ಪ್ರಧಾನಿಯವರು ಯಾವ ಯಾವ ರಾಜ್ಯದಲ್ಲಿ ಚುನಾವಣೆಗಳು ನಡೆಯುತ್ತದೆಯೋ, ಅಂತಹ ರಾಜ್ಯಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಅನುದಾನದ ಯೋಜನೆಗಳನ್ನ ಶಂಕುಸ್ಥಾಪನೆ ಮಾಡಿ ಕೇಂದ್ರ ಸರ್ಕಾರ ಕೊಡುತ್ತಿದೆ ಎಂಬ ಮಾತುಗಳನ್ನಾಡುತ್ತಿದ್ದಾರೆ. ರೈಲ್ವೆ ಇಲಾಖೆ ಇರಬಹುದು ಯಾವುದೇ ಇರಬಹುದು ದೇಶದ ಪ್ರತಿಯೊಂದು ರಾಜ್ಯದ ಜನರ ಪಾಲುದಾರಿಕೆ ಕಾರಣದಿಂದಲೇ ಇಲಾಖೆಗಳಿಗೆ ಹಣ ತುಂಬುತ್ತಿರುವುದು. ಇವುಗಳಲ್ಲಿ ಕರ್ನಾಟಕದ ಪಾಲು ಹೆಚ್ಚಿದೆ.

ಬಿಜೆಪಿಯವರು ಒಂದು ಸ್ಪಷ್ಟನೆಯನ್ನು ಕೊಡಲಿ. ಗ್ಯಾರಂಟಿ ಯೋಜನೆಗಳನ್ನು ತಾವು ಒಪ್ಪುತ್ತಿರೋ ಅಥವಾ ಗ್ಯಾರಂಟಿ ಯೋಜನೆಗಳನ್ನ ಒಪ್ಪುವುದಿಲ್ಲವೋ. ಒಪ್ಪುವುದಿಲ್ಲ ಎನ್ನುವುದಾದರೆ ಜನರ ಮುಂದೆ ನೇರವಾಗಿ ಹೋಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಎಂದು ಹೋರಾಟವನ್ನು ಮಾಡಿ. ಆಗ ನಿಮ್ಮ ಬಂಡವಾಳ ಗೊತ್ತಾಗುತ್ತದೆ. ರಾಜ್ಯದ ಜನ ಅದರಲ್ಲೂ ವಿಶೇಷವಾಗಿ ಮಹಿಳೆಯರು ಗ್ಯಾರಂಟಿ ಯೋಜನೆಗಳಿಂದ ತಮ್ಮ ಆರ್ಥಿಕವಾದಂತಹ ಪರಿಸ್ಥಿತಿಯನ್ನ ಸುಧಾರಿಸಿಕೊಂಡು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಇವುಗಳಿಂದ ಅನುಕೂಲತೆಗಳನ್ನ ಸೃಷ್ಟಿಸಿಕೊಂಡು ಸಂಸಾರಗಳನ್ನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪದೇ ಪದೇ ಜನರ ಮನಸ್ಸಿನಲ್ಲಿ ಆತಂಕವನ್ನು ಉಂಟುಮಾಡುವಂತಹ ಸುಳ್ಳು ಸುದ್ದಿಗಳನ್ನು ಹರಡಬೇಡಿ. ನೀವು ಮುಂದೆ 2028ರಲ್ಲಿ ಚುನಾವಣೆಯ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಯ ಬಗ್ಗೆ ಮಾತನಾಡಿ. ಆಗ ಜನ ತೀರ್ಮಾನ ಮಾಡುತ್ತಾರೆ.

ನಮ್ಮ ಗ್ಯಾರಂಟಿಗಳನ್ನ ಟೀಕಿಸುವ ಪ್ರಧಾನ ಮಂತ್ರಿಗಳು ಮತ್ತು ಬಿಜೆಪಿ ನಾಯಕರು ಚುನಾವಣೆ ನಡೆಯುವ ಎಲ್ಲಾ ರಾಜ್ಯದಲ್ಲಿ ನಮ್ಮದೇ ಗ್ಯಾರಂಟಿಗಳನ್ನ ನಿಮ್ಮ ಭಾಷೆಯಲ್ಲಿ ಹೇಳುತ್ತಿದ್ದೀರಿ. ಮಧ್ಯಪ್ರದೇಶದಲ್ಲಿ, ರಾಜಸ್ಥಾನದಲ್ಲಿ, ಹರಿಯಾಣದಲ್ಲಿ ,ಛತ್ತೀಸ್ಗಡದಲ್ಲಿ ನೀವು ಕರ್ನಾಟಕದ ಗ್ಯಾರಂಟಿಗಳ ಬಗ್ಗೆ ಕೇವಲ ಮಾತನಾಡಿಲ್ಲ. ಬೇರೆ ಹೆಸರಿನಲ್ಲಿ ಅದನ್ನೇ ಅನುಷ್ಠಾನ ಮಾಡುತ್ತಿದ್ದೀರಿ. ಈಗ ಮಾತ್ರ ಕರ್ನಾಟಕದ ಗ್ಯಾರಂಟಿಗಳ ಬಗ್ಗೆ ಅಸೂಯೆಯಿಂದ ಸರ್ಕಾರಕ್ಕೆ ಸಿಗುತ್ತಿರುವ ಜನರ ವಿಶ್ವಾಸವನ್ನು ಕಂಡು ಸಹಿಸಿಕೊಳ್ಳಲಾಗದೆ  ಮಾತನಾಡುತ್ತಿದ್ದೀರಿ. ಇದು ನಿಮ್ಮ ರಾಜಕಾರಣದ ಮಾತುಗಳೇ ಹೊರತು, ಬೇರೆ ಏನೂ ಅಲ್ಲ ಎಂದು ಜನರು ತೀರ್ಮಾನಿಸಿರುತ್ತಾರೆ. ಭಾರತ ದೇಶದ ಇತಿಹಾಸದಲ್ಲಿ ನೆಹರುರವರು, ಇಂದಿರಾ ಗಾಂಧಿರವರು, ರಾಜೀವ್ ಗಾಂಧಿರವರು, ಡಾ. ಮನಮೋಹನ್ ಸಿಂಗ್ ರವರು ಜನರಿಗೆ ಕೊಟ್ಟಿರುವಷ್ಟು ಕಾರ್ಯಕ್ರಮಗಳನ್ನ ಬಿಜೆಪಿಯವರು ಇನ್ನೂ ಎಷ್ಟೇ ವರ್ಷ ಆಡಳಿತ ನಡೆಸಿದರು ಕೊಡಲು ಸಾಧ್ಯವಿಲ್ಲ.

ಇಂದಿರಾ ಗಾಂಧಿ ರವರು ಜಾರಿಗೆ ತಂದ 20 ಅಂಶದ ಕಾರ್ಯಕ್ರಮ, ಉಳುವವನಿಗೆ ಭೂಮಿ, ರಾಜೀವ್ ಗಾಂಧಿರವರ ಅಧಿಕಾರ ವಿಕೇಂದ್ರೀಕರಣದ ಬದ್ಧತೆ, ಡಾ. ಮನಮೋಹನ್ ಸಿಂಗ್ ರವರು ರೈತರ ಸಾಲ ಮನ್ನಾ ಮಾಡಿದ್ದು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದಿದ್ದು, ಇವುಗಳೆಲ್ಲವೂ ಸಾಮಾನ್ಯವಾಗಿದ್ದಲ್ಲ. ವಿಶೇಷವಾಗಿ, ನೆಹರುರವರು ಜಾರಿಗೆ ತಂದ ಕೈಗಾರಿಕಾ ನೀತಿ, ಆರ್ಥಿಕ ನೀತಿ, ವಿದೇಶಾಂಗ ನೀತಿ ಮತ್ತು ಶೈಕ್ಷಣಿಕವಾಗಿ ಸ್ಥಾಪಿಸಿದಂತಹ ಸಂಸ್ಥೆಗಳು, ಇಂದಿರಾ ಗಾಂಧಿರವರು ಜಾರಿಗೆ ತಂದ ಹಸಿರು ಕ್ರಾಂತಿ ಯೋಜನೆ, ಇವುಗಳೆಲ್ಲವೂ ದೇಶದ ಜನರ ಬದುಕ ಬದಲಾಯಿಸಿತು. ಆದರೆ ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರ್ಕಾರದಲ್ಲಿ ಜಾರಿಗೆ ಬಂದ ಮಸೂದೆಗಳು ಜನರ ಬದುಕಿಗೆ ಅನುಕೂಲತೆಗಳನ್ನು ಕಲ್ಪಿಸಲಿಲ್ಲ. ಬದಲಿಗೆ, ಕೇವಲ ಭಾವನಾತ್ಮಕವಾದಂತ ಸಂಗತಿಗಳಾಗಿದ್ದವೇ ಹೊರತು, ಜನರ ಬದುಕಿಗೆ ಸಂಬಂಧಪಟ್ಟ ಮಸೂದೆಗಳಾಗಿರಲಿಲ್ಲ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply