ಕೋವಿಡ್ ಅವ್ಯವಹಾರಗಳ ಕುರಿತು ತನಿಖೆಗೆ ವಿಶೇಷ ತನಿಖಾ ತಂಡ

2 years ago

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸೋಂಕು ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ನಡೆದ ಉಪಕರಣ ಹಾಗೂ ಔಷಧಿ ಖರೀದಿ ಪ್ರಕ್ರಿಯೆಯಲ್ಲಿನ ಅವ್ಯವಹಾರಗಳ ಕುರಿತು ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ವ್ಯಾಪಕ ಪ್ರಮಾಣದ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತಂತೆ ತನಿಖೆ ನಡೆಸಲು ರಚಿಸಲಾಗಿದ್ದ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರ ಆಯೋಗದ ಶಿಫಾರಸ್ಸುಗಳ ಆಧಾರದಲ್ಲಿ ಈ ವಿಶೇಷ ತನಿಖಾ ತಂಡ ತನಿಖೆ ನಡೆಸಲಿದೆ.

ನ್ಯಾಯಾಂಗ ಆಯೋಗದ ಮಧ್ಯಂತರ ವರದಿ ಕುರಿತು ಸಂಪುಟ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ತನಿಖಾ ತಂಡ ರಚಿಸಲು ತೀರ್ಮಾನಿಸಲಾಯಿತು ಎಂದು ಸಭೆಯ ನಂತರ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.

ನ್ಯಾಯಮೂರ್ತಿ ಕುನ್ಹಾ ಆಯೋಗ ಅಕ್ರಮ ಆರೋಪಗಳ ಕುರಿತು 11 ಸಂಪುಟಗಳಲ್ಲಿ ವರದಿ ಸಲ್ಲಿಸಿದೆ. ಇದರಲ್ಲಿ 7223.64 ಕೋಟಿಗಳ ಮೊತ್ತದ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಅಂದು ಈ ಖರೀದಿ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿಗಳಿಂದ 500.00 ಕೋಟಿಗಳ ಮೊತ್ತದ ವಸೂಲಾತಿ ಶಿಫಾರಸ್ಸು ಮಾಡಿದೆ ಎಂದರು.

ಸಂಪುಟ ಸಭೆಯ ಇತರ ತೀರ್ಮಾನಗಳು:

ಧಾರವಾಡದ ಮೃಣಾಲ್ ಶುಗರ್ಸ್ ಲಿಮಿಟೆಡ್  ಸಕ್ಕರೆ ಕಾರ್ಖಾನೆಯಿಂದ 7.50 ಕಿ.ಮೀ ತ್ರಿಜ್ಯಾಕಾರದಲ್ಲಿರುವ ಗ್ರಾಮಗಳನ್ನು ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರಿಂದ ಹಿಂಪಡೆಯುವುದು ಮತ್ತು ಮರುಹಂಚಿಕೆ ಮಾಡುವುದು ಸಮಂಜಸವಾಗಿರುತ್ತದೆ ಎಂದು ಪರಿಗಣಿಸಿ ಧಾರವಾಡ ಜಿಲ್ಲೆಯ 19 ಗ್ರಾಮಗಳನ್ನು ಕಬ್ಬು ಖರೀದಿಗಾಗಿ ಮರು ಹಂಚಿಕೆ ಮಾಡಿದೆ. ಇದರಲ್ಲಿ 19 ಗ್ರಾಮಗಳನ್ನು ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಹಿಂಪಡೆದು  ಮೃಣಾಲ್ ಶುಗರ್ಸಗೆ ಮೀಸಲು ಕ್ಷೇತ್ರವನ್ನಾಗಿ ಹಂಚಿಕೆ ಮಾಡಲಾಗಿದೆ.

ಪುಡಕಲಕಟ್ಟೆ, ಉಪ್ಪಿನ ಬೆಟಗೇರಿ, ಹನುಮನಾಳ, ಕಲ್ಲೆ, ಕಬ್ಬೇನೂರ, ಕರಡಿಗುಡ್ಡ, ತಿಮ್ಮಾಪೂರ, ಮರೇವಾಡ, ಅಮ್ಮಿನಭಾವಿ, ಹಾರೋಬೆಳವಡಿ, ಕಲ್ಲೂರ, ಲೋಕೂರ, ಶಿಬಾರಗಟ್ಟಿ, ಯಾದವಾಡ, ಮುಳಮುತ್ತಲ, ಮಂಗಳಗಟ್ಟಿ, ಲಕಮಾಪೂರ, ದಾಸನಕೊಪ್ಪ ಮತ್ತು ಕುರುಬಗಟ್ಟೆ ಒಟ್ಟು 11 ಗ್ರಾಮಗಳನ್ನು ಈ ಸಕ್ಕರೆ ಕಾರ್ಖಾನೆಗೆ ಸೇರ್ಪಡೆ ಮಾಡಿದೆ

ಅಕ್ರಮ ಗಣಿಗಾರಿಕೆ  ತನಿಖೆಗಾಗಿ ಸೃಜಿಸಲಾಗಿರುವ ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡದ ಕಾರ್ಯಾವಧಿಯನ್ನು ಇನ್ನು ಒಂದು ವರ್ಷದ ಅವಧಿಗೆ ವಿಸ್ತರಣೆ.

ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 60 ಕ್ರಿಮಿನಲ್ ಮೊಕದ್ದಮೆಗಳನ್ನು ಅಭಿಯೋಜನೆಯಿಂದ ಹಿಂಪಡೆಯಲು ನಿರ್ಧಾರ.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹೆಸರಿನಲ್ಲಿ ಹೊಸ ಕಂಪನಿ ಸ್ಥಾಪಿಸಲು ನಿರ್ಣಯಿಸಲಾಗಿದೆ. ಈ ಕಂಪನಿಯು ರೂ.೫.೦೦ ಕೋಟಿ ಷೇರು ಬಂಡವಾಳ ಹೊಂದಿರುತ್ತದೆ.

ರಾಜ್ಯದ 69,919 ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 1,37,509 ಅಂಗನವಾಡಿ ಕಾರ್ಯಕರ್ತ ಮತ್ತು ಸಹಾಯಕಿಯರಿಗೆ ಐ.ಸಿ.ಡಿ.ಎಸ್ ಯೋಜನೆಯ ನಿಯಮಾನುಸಾರ ತಲಾ ಎರಡು ಸೀರೆಗಳಂತೆ ಒಟ್ಟು 2,75,018 ಸೀರೆಗಳನ್ನು ಕಟಿಪಿಪಿ ಪೋರ್ಟಲ್ (ಇ-ಟೆಂಡರ್ / ಜೆಮ್ ಪೋರ್ಟಲ್ ಮುಖಾಂತರ ಖರೀದಿಸಲು 2024-25 ನೇ ಸಾಲಿನ ಅನುದಾನದಿಂದ ರೂ. 13.75 ಕೋಟಿಗಳ ವೆಚ್ಚವನ್ನು ಭರಿಸಲು ಸಚಿವ ಸಂಪುಟ ತೀರ್ಮಾನಿಸಿದೆ.

ರಾಜ್ಯ ಕಾನೂನು ಆಯೋಗದ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಾನೂನು ಅಯೋಗದ ಹೊಸ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲು ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಸಚಿವ ಎಚ್.ಕೆ ಪಾಟೀಲ ಮಾಹಿತಿ ನೀಡಿದರು.

Leave a Reply