ಬೆಂಗಳೂರು: ಮಾರಣಾಂತಿಕ ಸಾಂಕ್ರಾಮಿಕ ಕೋವಿಡ್ ನಿಯಂತ್ರಣ ಸಮಯದಲ್ಲಿ ರಾಜ್ಯ ಸರ್ಕಾರದ ವತಿಯಿಂದ ನಡೆದ ಖರೀದಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು ಹಲವು ಜನಪ್ರತಿನಿಧಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಕೋವಿಡ್ ಸಮಯದಲ್ಲಿ ನಡೆದ ಖರೀದಿ ಪ್ರಕ್ರಿಯೆಯನ್ನು ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ಕುರಿತು ವಿಚಾರಣೆ ನಡೆಸಿ ವರದಿ ನೀಡಿರುವ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಆಯೋಗದ ಶಿಫಾರಸುಗಳನ್ನು ಆಧರಿಸಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಅಕ್ರಮ ಆರೋಪಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನ ಕೈಗೊಂಡಿದ್ದು, ಈ ಕುರಿತಾದ ಆದೇಶ ಹೊರಬೀಳುವುದು ಬಾಕಿ ಇದೆ.
ಕೋವಿಡ್ ಸಾಂಕ್ರಾಮಿಕ ನಿಯಂತ್ರಿಸಲು ಆರೋಗ್ಯ ಇಲಾಖೆ ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದ ಅಕ್ರಮ ಆರೋಪದ ಕುರಿತು ಎಸ್ಐಟಿ ತನಿಖೆ ನಡೆಸಲಿದೆ.
ಸದ್ಯ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್‌ನಲ್ಲಿ ಮಂಡ್ಯ ಹಾಗೂ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ನೀಡಿದ್ದ 80 ಸಾವಿರ ಪಿಪಿಇ ಕಿಟ್‌ಗಳನ್ನು ಬಳಸದೇ ಹಾಗೆಯೇ ಬಿಟ್ಟು 9.99 ಕೋಟಿ ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ. 13,784 ಪಿಪಿಇ ಕಿಟ್‌ಗಳನ್ನು ಯಾವುದೇ ಸರಬರಾಜು ಆದೇಶವಿಲ್ಲದೇ ಖರೀದಿ ಮಾಡಲಾಗಿದೆ. ಆ ಕಿಟ್ ಎಲ್ಲಿಗೆ ನೀಡಲಾಗಿದೆ ಎಂಬುದಕ್ಕೆ ದಾಖಲೆ ಇಲ್ಲ ಎಂದು ವಿವರಿಸಲಾಗಿದೆ.
ಈ ವಸ್ತುಗಳನ್ನು ಖರೀದಿಸಲು ಕರೆಯಲಾಗಿದ್ದ ಟೆಂಡರ್ ನಲ್ಲಿ ಲಾಜ್ ಎಕ್ಸ್‌ಪೋರ್ಟ್ ಹಾಗೂ ಪ್ರೂಡೆಂಟ್ ಮ್ಯಾನೇಜ್‌ಮೆಂಟ್ ಸಲ್ಯೂಷನ್ ಭಾಗವಹಿಸಿ ಕಾರ್ಯಾದೇಶ ಪಡೆದುಕೊಂಡಿವೆ. ಆದರೆ ಈ ಎರಡು ಸಂಸ್ಥೆಗಳು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಹೊಂದಿಲ್ಲ. ಹೀಗಿದ್ದರೂ ದೊಡ್ಡ ಪ್ರಮಾಣದಲ್ಲಿ ಟೆಂಡರ್ ನೀಡಲಾಗಿದೆ ಎಂದು ಹೇಳಿದೆ.
ಎನ್-95 ಮಾಸ್ಕ್ ಮತ್ತು ಪಿಪಿಇ ಕಿಟ್ ಅನ್ನೇ ಹೆಚ್ಚಾಗಿ ಖರೀದಿ ಮಾಡಿದ್ದು, ಈ ಖರೀದಿಯ ಪೂರ್ಣ ಮೊತ್ತವನ್ನು ಟೆಂಡರ್‌ನಲ್ಲಿ ಭಾಗವಹಿಸದೇ ಇರುವ ಸಂಸ್ಥೆೆಯಾದ ಪ್ರೂಡೆಂಟ್ ಮ್ಯಾನೇಜೆಮೆಂಟ್ ಸಲ್ಯೂಷನ್ಸ್ ಸಂಸ್ಥೆಗೆ ಹಣವನ್ನು ಪಾವತಿಸಲಾಗಿದೆ ಎಂದು ಉಲ್ಲೇಖಿಸಿದೆ.
ರಾಜ್ಯ ಸರ್ಕಾರ ಕಾನೂನಾತ್ಮಕ, ಆಡಳಿತಾತ್ಮಕ ಅನುಮೋದನೆ ನೀಡಿ 2,59,263 ಎನ್- 95 ಮಾಸ್ಕ್ ಮತ್ತು 2,59,263 ಪಿಪಿಇ ಕಿಟ್ ಒಟ್ಟು 41.35 ಕೋಟಿ ಮೊತ್ತದ ಸಾಮಾಗ್ರಿಗಳನ್ನು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹಾಗೂ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಳಸಲು ಅನುಮೋದನೆ ನೀಡಲಾಗಿತ್ತು. 41.35 ಕೋಟಿ ಮೌಲ್ಯದ ಮೇಲೆ ಹೋಗಬಾರದು ಎಂದು ಷರತ್ತು ವಿಧಿಸಲಾಗಿತ್ತು. ಆದರೆ, ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಡಾ.ಪಿ.ಗಿರೀಶ್, ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿದ್ದ ಜಿ.ಪಿ.ರಘು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸಲಕರಣೆ ಅಧಿಕಾರಿಯಾಗಿದ್ದ ಎನ್.ಮುನಿರಾಜು, ಲಾಜ್ ಎಕ್ಸ್‌ಪೋರ್ಟ್ಸ್, ಎಂಎಸ್ ಪ್ರೂಡೆಂಟ್ ಮ್ಯಾನೇಜ್‌ಮೆಂಟ್, ಕರ್ನಾಟಕ ಜನಪ್ರತಿನಿಧಿಗಳು, ಕರ್ನಾಟಕ ಸರ್ಕಾರದ ಅಧಿಕಾರಿಗಳು ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.




