ಶೇ. 40 ಕಮಿಷನ್ ಆರೋಪಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ

1 year ago

ಬೆಂಗಳೂರು: ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸರ್ಕಾರದ ಕಾಮಗಾರಿಗಳ ಗುತ್ತಿಗೆಗೆ ಶೇಕಡ 40ರಷ್ಟು ಕಮಿಷನ್ ಕೊಡಬೇಕಿತ್ತು ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಲು ತೀರ್ಮಾನಿಸಿದೆ.

ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲು ನ್ಯಾಯಮೂರ್ತಿ ನಾಗ ಮೋಹನ್ ದಾಸ್ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗ ಸರ್ಕಾರಕ್ಕೆ ವರದಿ ನೀಡಿದ್ದು ಅದರ ಬಗ್ಗೆ ಇಂದು ನಡೆದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್, ಗುತ್ತಿಗೆದಾರರು ಮಾಡಿದ ಶೇಕಡ 40ರಷ್ಟು ಕಮಿಷನ್ ಆರೋಪ ಕುರಿತು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿರುವ ವರದಿಯ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲು ತೀರ್ಮಾನಿಸಲಾಗಿದೆ ಎಂದರು.

ಗುತ್ತಿಗೆದಾರರು ಮಾಡಿದ ಆರೋಪದ ಬಗ್ಗೆ ಪರಿಶೀಲಿಸಲು ರಚಿಸಲಾಗಿದ್ದ ನ್ಯಾಯಮೂರ್ತಿ ನಾಗ ಮೋಹನ್ ದಾಸ್ ನೇತೃತ್ವದ ಆಯೋಗವು, ಆಯೋಗವು ಒಟ್ಟು ಮೂರು ಲಕ್ಷ ಕಾಮಗಾರಿಗಳ ಪೈಕಿ 1729 ಕಾಮಗಾರಿಗಳನ್ನು ಸ್ಯಾಂಪಲ್ ಆಗಿ ತೆಗೆದುಕೊಂಡು ಪರಿಶೀಲನೆ ನಡೆಸಿದೆ. ಇವುಗಳಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿವೆ ಪ್ರಮುಖವಾಗಿ ಅನುದಾನ ಮೀರಿ ಕೆಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ ಅನುಮೋದನೆ ಇಲ್ಲದೆ ಕೆಲವು ಕಾಮಗಾರಿ ಮಾಡಲಾಗಿದೆ ಹಣ ಬಿಡುಗಡೆ ಸಮಯದಲ್ಲಿ ನಿಯಮಾವಳಿ ಪಾಲಿಸಲಾಗಿಲ್ಲ ಎಲ್ ಓ ಸಿ ಸೇರಿದಂತೆ ಹಲವು ವಿಷಯಗಳಲ್ಲಿ ಸಾಕಷ್ಟು ವ್ಯತ್ಯಾಸ ಇರುವುದನ್ನು ಆಯೋಗ ಪತ್ತೆ ಹಚ್ಚಿದೆ ಹೀಗಾಗಿ ಆಯೋಗ ಪಟ್ಟಿ ಮಾಡಿರುವ ಲೋಪಗಳ ಕುರಿತು ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲು ನಿರ್ಧರಿಸಲಾಗಿದೆ ಎಂದರು.

ಬೆಂಗಳೂರು ಮೈಸೂರು ನಡುವೆ ನಿರ್ಮಿಸಲು ಉದ್ದೇಶಿಸಲಾಗಿದ್ದ ನೈಸ್ ಯೋಜನೆ ಮುಂದುವರಿಸಬೇಕೆ ಬೇಡವೇ ಎಂಬ ಕುರಿತು ಹಿಂದಿನ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ್ದು ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು ಎಂದರು.

ನೈಸ್ ರಸ್ತೆ ವಿಚಾರಕ್ಕೆ ಸುಪ್ರೀಂ ಮತ್ತು ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ನೈಸ್ ರಸ್ತೆ ನಿರ್ಮಾಣ ಮುಂದೆ ಆಗಬೇಕಾ? ಬೇಡ್ವಾ ಎಂಬ ಬಗ್ಗೆ ಸಂಪೂರ್ಣವಾಗಿ ಚರ್ಚೆ ಮಾಡುವುದು ಒಂದು ಸಭೆಯಲ್ಲಿ ಸಾಧ್ಯವಿಲ್ಲ. ಕಾನೂನಾತ್ಮಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಸಂಪುಟ ಉಪ ಸಮಿತಿ ನೇಮಕ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. ಯೋಜನೆಗಾಗಿ ಸ್ವಾಧೀನ ಪಡೆಸಿಕೊಂಡ ಭೂಮಿಯಲ್ಲಿ 1699 ಎಕರೆಯನ್ನು ನೈಸ್ ಸಂಸ್ಥೆಯವರು ಬೇರೆಯವರಿಗೆ ಶುದ್ಧ ಕ್ರಯ ಮಾಡಿಕೊಡಲು ಮುಂದಾಗಿದ್ದಾರೆ. ಈ ಬಗ್ಗೆಯೂ ಸಂಪುಟ ಉಪ ಸಮಿತಿ ಕಮಿಟಿ ತೀರ್ಮಾನ ಕೈಗೊಳ್ಳುತ್ತದೆ.ಉಪ ಸಮಿತಿ ರಚನೆಯನ್ನು ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ ಎಂದರು.

Leave a Reply