ಬೆಂಗಳೂರು: ಇಡೀ ದೇಶವನ್ನೇ ತಲ್ಲಣಕ್ಕೀಡುಮಾಡಿದ್ದ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತಂಡಕ್ಕೆ ಹಲವು ಸ್ಪೋಟಕ ಮಾಹಿತಿಗಳು ಸಿಕ್ಕಿವೆ. ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ನೇತೃತ್ವದ ಅಕ್ರಮದಲ್ಲಿ ಪ್ರಭಾವಿಗಳೇ ಶಾಮೀಲಾಗಿದ್ದಾರೆ ಎಂಬ ಸಂಗತಿ ಬಯಲಾಗಿದೆ.
ದೇಶದ ಅರ್ಥ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರುವ ರೀತಿಯಲ್ಲಿ ನಡೆದಿರುವ ಬಿಟ್ ಕಾಯಿನ್ ಹಗರಣದಲ್ಲಿ ಕೆಲವು ಹಿರಿಯ ಐಪಿಎಸ್ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಸಂಗತಿ ವಿಶೇಷ ತನಿಖಾ ತಂಡಕ್ಕೆ ಸಿಕ್ಕಿದೆ.
ಈ ಅಕ್ರಮದ ರೂವಾರಿಗಳು ಮತ್ತು ಅದಕ್ಕೆ ಸಹಕಾರ, ನೆರವು ನೀಡಿದ ಎಲ್ಲರನ್ನೂ ಬಂಧಿಸಿ ಹೆಡೆಮುರಿ ಕಟ್ಟುವಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ ಸೂಚಿಸಿರುವ ಹಿನ್ನೆಲೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಸಾಕ್ಷಿ ಸಂಗ್ರಹದಲ್ಲಿ ತನಿಖೆ ತಂಡ ಮಂದಡಿ ಇಟ್ಟಿದೆ.
ಹಗರಣದ ಪ್ರಮುಖ ಆರೋಪಿ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಪೊಲೀಸರು ಮಾದಕ ವಸ್ತು ನಿಗ್ರಹ ಕಾಯ್ದೆ ಅಡಿಯಲ್ಲಿ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಈ ವೇಳೆ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆರ್ಥಿಕತೆಯನ್ನು ಅಲ್ಲೋಲಕಲ್ಲೋಲ ಮಾಡುವಂತಹ ಬಿಟ್ ಕಾಯಿನ್ ಹಗರಣದ ಮಾಹಿತಿ ಬಹಿರಂಗವಾಗಿತ್ತು.
ನಂತರ ಈ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಶ್ರೀಕಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹಲವು ಮಾಹಿತಿ ನೀಡಿದ್ದಾನೆ. ನನ್ನನ್ನು ಬೆದರಿಸಿದ್ದ ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳು, ನೂರಾರು ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ
ಈ ಮಾಹಿತಿ ಆಧರಿಸಿ ಅಕ್ರಮಕ್ಕೆ ಸಹಕರಿಸಿರುವ ಅಧಿಕಾರಿಗಳು ಸಮಾಜದ ವಿವಿಧ ವಲಯದ ಗಣ್ಯ ವ್ಯಕ್ತಿಗಳು, ಅಪರಾಧ ಜಗತ್ತಿನ ನಂಟು ಹೊಂದಿರುವವರ ಮಾಹಿತಿ ಸಂಗ್ರಹಣೆಯಲ್ಲಿ ವಿಶೇಷ ತನಿಖಾ ತಂಡ ನಿರತವಾಗಿದೆ.
ಶ್ರೀಕಿಯೊಂದಿಗೆ ಅನೇಕರು ಸಂಪರ್ಕದಲ್ಲಿದ್ದು, ಈ ಆಕ್ರಮದಲ್ಲಿ ಶಾಮೀಲಾಗಿರುವ ಕುರಿತ ಕೆಲವು ಖಚಿತ ಮಾಹಿತಿಗಳು ವಿಶೇಷ ತನಿಕಾ ತಂಡಕ್ಕೆ ಲಭ್ಯವಾಗಿವೆ. ಆದರೆ ಈ ಮಾಹಿತಿಗಳನ್ನು ಮುಂದಿಟ್ಟುಕೊಂಡು ಅಗತ್ಯ ಕಾನೂನು ಕ್ರಮ ಜರುಗಿಸಲು ಬೇಕಾದಷ್ಟು ಪ್ರಮಾಣದಲ್ಲಿ ಸಾಕ್ಷಿಗಳು ಇಲ್ಲ. ಈ ಹಿನ್ನೆಲೆಯಲ್ಲಿ ಪೂರಕ ಸಾಕ್ಷಿ ಸಂಗ್ರಹಿಸುವ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡ ಸಕ್ರಿಕಯವಾಗಿದೆ.
ಶ್ರೀಕಿ ಜೈಲಿನಲ್ಲಿದ್ದ ವೇಳೆ ಆತನನ್ನು ಯಾರು ಯಾರು ಭೇಟಿ ಮಾಡುತ್ತಿದ್ದರು, ಆತನೊಂದಿಗೆ ಯಾರು ಸಂಪರ್ಕದಲ್ಲಿದ್ದರು, ವಿಚಾರಣೆಯ ನೆಪದಲ್ಲಿ ಯಾವ ಯಾವ ಅಧಿಕಾರಿಗಳು ಆತನನ್ನು ಜೈಲಿನಲ್ಲಿ ಭೇಟಿಯಾಗಿದ್ದರು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಮಯದಲ್ಲಿ ಸಂಪರ್ಕಿಸಲು ಯಾರೆಲ್ಲ ಯತ್ನಿಸಿದ್ದರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ತನಿಖಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಈ ಕುರಿತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಜೈಲು ಅಧೀಕ್ಷಕರಿಗೆ ಪತ್ರ ಬರೆದಿರುವ ವಿಶೇಷ ತನಿಖಾ ತಂಡ ಶ್ರೀಕಿಯನ್ನು ಭೇಟಿ ಮಾಡಿದ ಎಲ್ಲರ ವಿವರ ಸಿಸಿ ಕ್ಯಾಮರಾಗಳ ದೃಶ್ಯಾವಳಿ ನೀಡುವಂತೆ ಕೇಳಿದೆ. ಈ ಹಿನ್ನೆಲೆಯಲ್ಲಿ ಇಡಿ ಪ್ರಕರಣ ರೋಚಕ ಹಂತದತ್ತ ಚಲಿಸುತ್ತಿದೆ.




