ಬಿಪಿಎಲ್ ಕಾರ್ಡ್ ಇಲ್ಲದವರು ದೇಶದ ನಾಗರಿಕರಲ್ಲವೇ?

2 years ago

ಬಿ.ಪಿ.ಎಲ್. ಕಾರ್ಡ್ ಇಲ್ಲದವರು ಅನಾರೋಗ್ಯ ಪೀಡಿತರಾಗುವಂತಿಲ್ಲ, ವಿಧವೆಯವರಾಗುವಂತಿಲ್ಲ, ಹಿರಿಯ ನಾಗರಿಕರಾಗುವಂತಿಲ್ಲ, ಅಂಗವಿಕಲರಾಗುವಂತಿಲ್ಲ, ಬುದ್ಧಿಮಾಂಧ್ಯರು ಆಗುವಂತಿಲ್ಲ

ಅಧಿಕಾರಿಗಳು ಯಾವುದೇ ಸರ್ಕಾರದ ಯೋಜನೆಗಳ ನೆರವಿಗೆ ಹೋದಾಗ ಬಿ.ಪಿ.ಎಲ್. ಕಾರ್ಡ್ ದಾರರಾಗಿದ್ದರೆ ಮಾತ್ರ ಸೌಲಭ್ಯವನ್ನು ಕಲ್ಪಿಸಿಕೊಡುತ್ತಾರೆ. ಇಲ್ಲದಿದ್ದರೆ ಯಾವುದೇ ರೀತಿಯ ನೆರವು ದೊರೆಯುವುದಿಲ್ಲ. ಹೀಗಾಗಿ ಬಿ.ಪಿ.ಎಲ್. ಕಾರ್ಡ್ ಇಲ್ಲದವರು ಅನಾರೋಗ್ಯ ಪೀಡಿತರಾದರೆ ಸರ್ಕಾರಿ ಆಸ್ಪತ್ರೆಯಲ್ಲೂ ಹಣವನ್ನು ನೀಡಬೇಕು. ಖಾಸಗಿ ಆಸ್ಪತ್ರೆಯಲ್ಲೂ ಇನ್ಶೂರೆನ್ಸ್ ಇಲ್ಲದವರು ಅವರು ವಿಧಿಸುವ ದರವನ್ನು ಪಾವತಿಸಬೇಕು.

ಇವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ಬಿಡಿಗಾಸು ದೊರೆಯುವುದಿಲ್ಲ. ಅದೇ ರೀತಿಯಲ್ಲಿ ಬಿ.ಪಿ.ಎಲ್. ಕಾರ್ಡ್ ಇಲ್ಲದ ಮಹಿಳೆಯರು ತಮ್ಮ ಪತಿಯನ್ನು ಕಳೆದುಕೊಂಡು ವಿಧವೆಯರಾದರೆ ಅವರು ವಿಧವಾ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇವರಿಗೂ ಬಿ.ಪಿ.ಎಲ್. ಕಾರ್ಡ್ ಮಾನದಂಡವಿದೆ.

ಇನ್ನು 65 ವರ್ಷ ದಾಟಿದ ಆರ್ಥಿಕವಾಗಿ ದುರ್ಬಲರಾಗಿರುವ ದೇಹದಲ್ಲಿ ಶಕ್ತಿಯನ್ನೂ ಕಳೆದುಕೊಂಡಿರುವ ಹಿರಿಯ ನಾಗರಿಕರು ಪಿಂಚಣಿ ಪಡೆದುಕೊಳ್ಳಲು ಬಿ.ಪಿ.ಎಲ್. ಕಾರ್ಡ್ ಇಲ್ಲವೆಂದರೆ ಅಧಿಕಾರಿಗಳು ಮನೆಗೆ ಹೋಗಿ ಎನ್ನುತ್ತಾರೆ.

ಅದೇ ರೀತಿಯಲ್ಲಿ ಬಿ.ಪಿ.ಎಲ್. ಕಾರ್ಡ್ ಇಲ್ಲದ ಪೋಷಕರು ಅಂಗವಿಕಲರು ಅಥವಾ ಬುದ್ಧಿಮಾಂಧ್ಯ ಮಕ್ಕಳು ಹುಟ್ಟಿಬಿಟ್ಟರೆ ಅವರಿಗೂ ಸಹ ಇಂತಹ ಪಿಂಚಣಿಗಳು ದೊರೆಯುವುದಿಲ್ಲ. ಹೀಗಾಗಿ ಬಿ.ಪಿ.ಎಲ್. ಕಾರ್ಡ್ ಇಲ್ಲದವರು ವಯಸ್ಸಾಗುವ ಹಾಗಿಲ್ಲ, ಅನಾರೋಗ್ಯ ಪೀಡಿತರಾಗುವ ಹಾಗಿಲ್ಲ. ವಿಧವೆಯರಂತೂ ಆಗುವ ಹಾಗಿಲ್ಲ, ಬುದ್ಧಿಮಾಂಧ್ಯರು, ಅಂಗವಿಕಲ ಮಕ್ಕಳು ಬಿ.ಪಿ.ಎಲ್. ಕಾರ್ಡ್ ಇಲ್ಲದ ಕುಟುಂಬದವರ ಮನೆಯಲ್ಲಿ ಹುಟ್ಟುವ ಹಾಗಿಲ್ಲ.

ಬಿ.ಪಿ.ಎಲ್. ಕಾರ್ಡ್ ಇರುವವರು ಮಾತ್ರ ಬಡವರು, ಬಿ.ಪಿ.ಎಲ್. ಕಾರ್ಡ್ ಇಲ್ಲದವರು ಆಗರ್ಭ ಶ್ರೀಮಂತರು ಎನ್ನುವ ಮನಸ್ಥಿತಿಯಲ್ಲಿ ಯೋಜನೆಗಳನ್ನು ರೂಪಿಸುವವರಿದ್ದಾರೆ. ಬಿ.ಪಿ.ಎಲ್. ಕಾರ್ಡ್ ದಾರರಿಗೆ ಸಾಮಾಜಿಕ ವ್ಯವಸ್ಥೆಯಡಿಯಲ್ಲಿ ಸೌಲಭ್ಯ ದೊರೆಯುತ್ತದೆ. ಹಣ ಇರುವವರು ಬದುಕನ್ನು ನಡೆಸಿಕೊಂಡು ಹೋಗುತ್ತಾರೆ. ಇನ್ನು ಮಧ್ಯಮ ವರ್ಗದವರ ಪಾಡು ಹೇಳತೀರದಂತಾಗಿದೆ.

ಆದುದರಿಂದ ಸರ್ಕಾರಗಳು ಈ ವರ್ಗದವರ ಪಾಲಿಗೆ ಕೇವಲ ಮತ ಪಡೆದುಕೊಳ್ಳುವ ಕಾರಣಕ್ಕೆ ಮಾತ್ರ ಉಳಿಸಿಕೊಂಡಿದ್ದಾರೇನೋ ಎನ್ನುವ ಅನುಮಾನ ಬರುತ್ತಿದೆ. ವಯಸ್ಸಾದ ಮೇಲೆ ಆದಾಯವಿರುವುದಿಲ್ಲ. ಆರೋಗ್ಯವೂ ಇರುವುದಿಲ್ಲ, ಅವರಿಗೊಂದಷ್ಟು ನೆರವು ದೊರೆತರೆ ಕಡೆಯಪಕ್ಷ ಅವರ ಔಷಧಿ ಮಾತ್ರೆಗಳಿಗೆ ಅನುಕೂಲವಾಗುತ್ತದೆ. ಇದಕ್ಕೂ ಅವರು ಬೇರೆಯವರನ್ನು ಅವಲಂಬಿಸಿದರೆ ತಿರಸ್ಕಾರಕ್ಕೆ ಗುರಿಯಾಗುತ್ತಾರೆ.

ಅದೇ ರೀತಿಯಲ್ಲಿ ಎಲ್ಲಾ ವಿಧವೆಯವರಿಗೂ ಸಹ ಆರ್ಥಿಕ ಭದ್ರತೆ ಇರುವುದಿಲ್ಲ. ಒಂದಷ್ಟು ಪಿಂಚಣಿ ನೆರವು ದೊರೆತರೆ ಸಣ್ಣಪುಟ್ಟ ಸಮಸ್ಯೆಗಳಿಗೆ ಸಹಾಯವಾಗುತ್ತದೆ. ಅದೇ ರೀತಿಯಲ್ಲಿ ಬುದ್ಧಿಮಾಂಧ್ಯ ಮತ್ತು ಅಂಗವಿಕಲ ಮಕ್ಕಳನ್ನು ಸಾಕುವ ಕಷ್ಟ ಆ ಹೆತ್ತವರಿಗೆ ಗೊತ್ತಿರುತ್ತದೆ. ಅವರಿಗೂ ನೀವು ಈ ಮಾನದಂಡಗಳನ್ನು ವಿಧಿಸಿದರೆ ಸರ್ಕಾರಗಳು ಮನುಷ್ಯತ್ವವನ್ನೇ ಕಳೆದುಕೊಂಡಿದೆ ಎಂದು ಭಾವಿಸಬೇಕಾಗುತ್ತದೆ.

ಯಾವುದೇ ಯೋಜನೆಯನ್ನು ಕೊಡುವ ಮುನ್ನ ಅವರ ಆಧಾರ್ ಕಾರ್ಡ್‌ಗಳಿಗೆ ಪ್ಯಾನ್ ಕಾರ್ಡ್‌ಗಳು ಬಹುತೇಕ ಜೋಡಣೆಯಾಗಿರುತ್ತದೆ. ಅರ್ಜಿದಾರರ ವಿವರವನ್ನು ಅವರ ಆರ್ಥಿಕ ಪರಿಸ್ಥಿತಿಯನ್ನು, ಅವರು ಶ್ರೀಮಂತರೋ, ಬಡವರೋ ಎನ್ನುವುದನ್ನು ಕ್ಷಣ ಮಾತ್ರದಲ್ಲಿ ಅಧಿಕಾರಿಗಳು ಮಾಹಿತಿಯನ್ನು ಪಡೆಯಬಹುದು.

ಅನೇಕ ತಾಂತ್ರಿಕ ಕಾರಣಗಳಿಂದ ಕಡುಬಡವರು, ನಿರ್ಗತಿಕರು, ಅಸಹಾಯಕರು, ಒಬ್ಬಂಟಿಯಾಗಿ ಬದುಕುವವರು, ಬಿ.ಪಿ.ಎಲ್. ಕಾರ್ಡ್ ದಾರರಾಗಿರಲೂ ಸಾಧ್ಯವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲದಕ್ಕೂ ಬಿ.ಪಿ.ಎಲ್. ಕಾರ್ಡ್ ಮಾನದಂಡ ಎನ್ನುವ ಬದಲಿಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ಗಳಲ್ಲಿ ಇರುವ ಮಾಹಿತಿಯನ್ನು ಪಡೆದು ಅವರು ಆರ್ಥಿಕವಾಗಿ ಸಫಲರಾಗಿದ್ದರೆ ಅಂತವರ ಅರ್ಜಿಗಳನ್ನು ತಿರಸ್ಕರಿಸಿ. ಸ್ವಂತ ಮನೆ ಇಲ್ಲದ, ಆದಾಯವಿಲ್ಲದ, ಸರ್ಕಾರಿ ನೌಕರರು ಅಲ್ಲದ ವ್ಯಕ್ತಿಗಳಿಗೆ ಯೋಜನೆಗಳನ್ನು ತಲುಪಿಸಿ.

ಚುನಾಯಿತ ಪ್ರತಿನಿಧಿಗಳು, ಜನಪ್ರಿಯರು, ಅತಿಪ್ರಮುಖ ವ್ಯಕ್ತಿಗಳು, ಆಸ್ಪತ್ರೆಗಳಿಗೆ ಸೇರಿದಾಗ ಅವರ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಂದರ್ಭದಲ್ಲಿ ಇಂತಹ ಯಾವ ಮಾನದಂಡವೂ ಇರುವುದಿಲ್ಲ. ಮೇಲಿನ ಬಹಳಷ್ಟು ಮಂದಿ ಆರ್ಥಿಕವಾಗೇನೋ ಬಡವರಾಗಿರುವುದಿಲ್ಲ. ಅದೇ ರೀತಿಯಲ್ಲಿ ಸರ್ಕಾರಿ ನೌಕರರಿಗೂ ಅನುಕೂಲಗಳಿವೆ. ಆದರೆ ಮಧ್ಯಮ ವರ್ಗದ ಜನಸಾಮಾನ್ಯರಿಗೆ ಮಾತ್ರ ಪ್ರತಿಯೊಂದಕ್ಕೂ ಷರತ್ತುಗಳನ್ನು ವಿಧಿಸುತ್ತೀರಿ. ಪುಣ್ಯಕ್ಕೆ ಅವರ ಜನನಕ್ಕೆ ಮತ್ತು ಮರಣಕ್ಕೆ ಷರತ್ತುಗಳನ್ನು ವಿಧಿಸಿಲ್ಲ!

– ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply