ಸುಳ್ಳು ಹೇಳಿ ಬಿ.ಪಿ.ಎಲ್ ಕಾರ್ಡ್ ಪಡೆದವರಿಗೆ ಬಿಗ್ ಶಾಕ್

5 years ago

ಬೆಂಗಳೂರು: ನಕಲಿ ದಾಖಲೆ ನೀಡಿ, ಸುಳ್ಳು ಹೇಳಿ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಬಿಸಿಮುಟ್ಟಿಸಲು ಮುಂದಾಗಿದೆ. ಈ ಸಂಬಂಧ ಅನರ್ಹರ ಪಟ್ಟಿ ಅಭಿಯಾನಕ್ಕೆ ಚಾಲನೆ ನೀಡಿದೆ.

ಬಡತನ ರೇಖೆಯಿಂದ ಕೆಳಗಿರುವ ಅಶಕ್ತರು, ಶೋಷಿತರು, ದಮನಿತರು, ಬಡವರಿಗೆ ಆಹಾರ ಪದಾರ್ಥಗಳನ್ನು ನೀಡಲು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ, ಸರ್ಕಾರಿ ನೌಕರರು, ಜಮೀನು ಉಳ್ಳವರು, ಸಾಕಷ್ಟು ಅನುಕೂಲಸ್ಥರು ಕೂಡ ಬಿ.ಪಿ.ಎಲ್ ಕಾರ್ಡ್ ಹೊಂದಿದ್ದಾರೆ.

ಈ ಕಾರಣದಿಂದಾಗಿ ಅರ್ಹ ಫಲಾನುಭವಿಗಳಿಗೆ ಸಲ್ಲಬೇಕಾದ ಪಡಿತರ ಸೋರಿಕೆಯಾಗುತ್ತಿರುವುದರ ಜೊತೆಗೆ, ಸರ್ಕಾರಿ ನೌಕರರು, ಅನುಕೂಲಸ್ಥರು ಕೂಡ ಪಡಿತರ ಪಡೆಯುತ್ತಿರುವುದರಿಂದ ಸರ್ಕಾರಕ್ಕೆ ಅನವಶ್ಯಕವಾಗಿ ಹೊರೆಯಾಗಿದೆ.

ಈ ಹಿನ್ನೆಲೆಯಲ್ಲಿ ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಅನೇಕ ದಶಕಗಳಿಂದ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದೀಗ ಮತ್ತೊಂದು ಹಂತದ ಕಸರತ್ತಿಗೆ ಚಾಲನೆ ಸಿಕ್ಕಿದೆ.

ಸುಳ್ಳು ದಾಖಲೆ ನೀಡಿ ಪಡಿತರ ಚೀಟಿ ಪಡೆದಿರುವ ಸರ್ಕಾರಿ ನೌಕರರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಲು ಮುಂದಾಗಿದ್ದು, ಡಿಜಿಟಲ್ ಹೋರಾಟಕ್ಕೆ ಧುಮುಕಿದೆ. ಆಧಾರ್ ಕಾರ್ಡ್ ಪಡಿತರ ಮತ್ತು ಇನ್ನಿತರ ವ್ಯವಸ್ಥೆಗೆ ಲಿಂಕ್ ಆಗಿರುವುದರ ಆಧಾರದ ಮೇಲೆ ಅನರ್ಹರ ಪಟ್ಟಿಯನ್ನು ಗುರುತಿಸಲು ಸರ್ಕಾರ ಕ್ರಮಕ್ಕೆ ಮುಂದಾಗಿದೆ.

ಸದ್ಯಕ್ಕೆ ಬಿಪಿಎಲ್ ಬಡತನ ರೇಖೆಗಿಂತ ಕೆಳಗಿರುವವರು ಮತ್ತು ಎಪಿಎಲ್ ಬಡತನ ರೇಖೆಯಿಂದ ಮೇಲಿರುವವರು ಎಂಬ ವಿಭಾಗದಲ್ಲಿ ಕಾರ್ಡ್ ಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಉಳ್ಳವರು ಕೂಡ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಹೀಗೆ ಖೊಟ್ಟಿ ದಾಖಲೆ ಸೃಷ್ಟಿಸಿ ಬಿಪಿಎಲ್ ಕಾರ್ಡ್ ಪಡೆದವರನ್ನು ಗುರುತಿಸಿ, ಅಂತಹ ಕಾರ್ಡ್ ಗಳನ್ನು ಎಪಿಎಲ್ ಪಟ್ಟಿಗೆ ಸೇರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ.

ಆರ್.ಟಿ.ಒ ಸರ್ಕಾರಿ ಇಲಾಖೆಯ ಮುಖ್ಯಸ್ಥರಿಂದ ಮಾಹಿತಿ ಪಡೆದು ಕಾರ್ಡ್ ದಾರರ ಎಲ್ಲ ಮಾಹಿತಿ ಕಲೆಹಾಕಿ, ಅನರ್ಹ ಕಾರ್ಡ್ ಗಳ ಪಟ್ಟಿ ಸಿದ್ಧವಾಗಲಿದೆ.  ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದಿದ್ದರೆ ಹಿಂದಿರುಗಿಸಿ ಎಂದು ಆಹಾರ ಇಲಾಖೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದೆ. ಇನ್ನಾದರೂ ಕಾರ್ಡ್ ಹಿಂದಿರುಗಿಸದಿದ್ದಲ್ಲಿ ಇಲಾಖೆ ಗುರುತಿಸಿ ರದ್ದು ಮಾಡಲಿದೆ.

ಇದರೊಂದಿಗೆ ಬಿಪಿಎಲ್ ಕಾರ್ಡ್ ನಿಂದ ಎಷ್ಟು ವರ್ಷಗಳ ಪಡಿತರ  ಪಡೆದಿರುವಷ್ಟೂ ವರ್ಷಗಳ ಆಹಾರ ಸಾಮಾಗ್ರಿಯ ಮೌಲ್ಯದಷ್ಟು ದಂಡ ಕಟ್ಟಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ರವಾನಿಸಿದೆ.

Leave a Reply