ಸಿನಿಮಾ ನೋಡಿ, ಕನ್ನಡ ಸಿನಿಮಾರಂಗ ಬೆಳೆಸಿ ಮತ್ತು ಕಾಪಾಡಿ

2 years ago

ಥ್ರಿಲ್ಲರ್ ಸಿನಿಮಾ ಮಾಡುವಾಗ ಅನುಸರಿಸಬೇಕಾದ ಪ್ರಾಥಮಿಕ ಪಾಠಗಳೆಂದರೆ ‘ನಿರೂಪಣೆ ಆಮೆ ವೇಗದಲ್ಲಿ ತೆವಳಿದರೂ ಸಹ ಎಲ್ಲಿಯೂ ಹಳಿಬಿಟ್ಟು ಹೋಗದಂತಹ ಅಚ್ಚುಕಟ್ಟಾದ ಚಿತ್ರಕತೆ ಮತ್ತು ಬಿಗಿಯಾದ ಸಂಕಲನ’.

ಕತೆಯಲ್ಲಿ ತಿರುವುಗಳಿದ್ದಷ್ಟೂ ಕುತೂಹಲ ಜಾಸ್ತಿ ಎನ್ನುವುದು ನಿಜವಾದರೂ ಅದೇ ಹೆಚ್ಚಾದರೂ ದಾರಿ ತಪ್ಪುವ ಸಾಧ್ಯತೆಯಿದೆ. ದೂರದ ವಿದೇಶಿ, ಪಕ್ಕದ ತಮಿಳು, ಮಲೆಯಾಳಂ ಸಿನಿಮಾಗಳನ್ನು ಬಿಡಿ, ನಲವತ್ತೈದು ವರ್ಷಗಳ ಹಿಂದೆ ಬಿಡುಗಡೆಯಾದ ಕಾಶೀನಾಥ್ ನಿರ್ದೇಶನದ ‘ಅಪರಿಚಿತ’ ಇದಕ್ಕೆ ಒಂದು ಉದಾಹರಣೆ.

ತಂತ್ರಜ್ಞಾನದ ನೆರವಿಲ್ಲದ, ನಿರ್ದೇಶಕ, ಕಲಾವಿದರು ಎಲ್ಲರೂ ಹೊಸಬರು ಇರುವಂತಹ ಈ ಸಿನಿಮಾ ತಾನು ಹೇಳಬೇಕಾದ ಕತೆಯನ್ನು ಅಚ್ಚುಕಟ್ಟಾದ ಚಿತ್ರಕತೆ ಮೂಲಕ ಥ್ರಿಲ್ಲರ್ ಅಂಶವೂ ಸೊರಗದಂತೆ ನಿರೂಪಿಸಿದೆ.

ಸಂಕಲನ ಈ ಸಿನಿಮಾದ ಹೈಲೈಟ್. ಶೋಭಾರ ಅಭಿನಯ ಮತ್ತೊಂದು ಪ್ಲಸ್ ಪಾಯಿಂಟ್. ಇಲ್ಲಿನ ಥ್ರಿಲ್ಲರ್ ಕತೆಯಲ್ಲಿ ವಿಷಣ್ಣತೆ ಸ್ಥಾಯಿ ಭಾವವಾಗಿರುವುದು ಸಹ ಅಚ್ಚರಿಯ ಸಂಗತಿ. ಕನ್ನಡದ ಮಟ್ಟಿಗೆ ‘ಅಪರಿಚಿತ’ cult ಥ್ರಿಲ್ಲರ್.

ಈ ಪೀಠಿಕೆ ಯಾಕೆಂದರೆ ಇತ್ತೀಚಿನ ಕನ್ನಡ ಸಿನಿಮಾದ ಆರಂಭದ ಹತ್ತು ನಿಮಿಷ ಮತ್ತು ಅದನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವ ಕಡೆಯ ಅರ್ಧ ಗಂಟೆಯ ಕುತೂಹಲ ಘಟನೆಗಳು ಮತ್ತು ಅನಿರೀಕ್ಷಿತ ತಿರುವುಗಳು ಥ್ರಿಲ್ಲರ್ ಸಿನಿಮಾಗೆ ತಕ್ಕಂತಿದೆ. ಆದರೆ ಮಧ್ಯದ ಒಂದು ಗಂಟೆ ಹಳಿ ತಪ್ಪಿ ಎಲ್ಲಾ ಕಡೆ ಸುತ್ತಾಡಿ ಕಡೆಗೆ ತನ್ನ ಆರಂಭದ ದಾರಿಗೆ ಬರುತ್ತದೆ. ಈ ಕೊಂಕಣ ಸುತ್ತುವಿಕೆ ಸಣ್ಣ ಲೋಪವಲ್ಲ. ಇದು ಕನ್ನಡ ಸಿನಿಮಾಗಳ ಮಿತಿಯನ್ನು ತೋರಿಸುತ್ತದೆ.

ಇದನ್ನು ವಿಮರ್ಶಾತ್ಮಕವಾಗಿ ಬರೆದರೆ ‘ಅಪರೂಪಕ್ಕೆ ಕನ್ನಡದಲ್ಲಿ ಒಳ್ಳೆಯ ಥ್ರಿಲ್ಲರ್ ಬಂದಿದೆ, ಅದನ್ನೂ ಹಾಳು ಮಾಡಬೇಡಿ’ ಎನ್ನುವ ಟೀಕೆಗೆ ಗುರಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ಏನನ್ನೂ ಹೇಳದೆ ‘ಸಿನಿಮಾ ನೋಡಿ, ಕನ್ನಡ ಸಿನಿಮಾರಂಗ ಬೆಳೆಸಿ ಮತ್ತು ಕಾಪಾಡಿ’ ಎಂದು ಹೇಳುವುದು ಸಹ ತಪ್ಪಲ್ಲ.

  • ಬಿ.ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು

Leave a Reply