ಹೊಸ ಅಲೆ ಸಿನಿಮಾ ನಿರ್ದೇಶಕ, ರುತ್ವಿಕ್ ಘಟಕ್ ರ ಶಿಷ್ಯ ಕುಮಾರ್ ಸಹಾನಿ 84ರ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
‘ಮಾಯಾ ದರ್ಪಣ್, ತರಂಗ್, ಖಯಾಲ್ ಗಾಥಾ, ಕಸ್ಬದಂತಹ ಪ್ರಯೋಗಾತ್ಮಕ ಸಿನಿಮಾಗಳನ್ನು, ಅನೇಕ ಕಿರು ಚಿತ್ರಗಳನ್ನು ನಿರ್ದೇಶಿಸಿದ ಸಹಾನಿ ತನ್ನ ವೃತ್ತಿಯನ್ನು ಮೊದಲ ಬೆಂಚಿನ ವಿದ್ಯಾರ್ಥಿಯಂತೆ ನಿರಂತರವಾಗಿ ಅಧ್ಯಯನ ಮಾಡಿದರು.
ಘಟಕ್ ಎಫ್ ಟಿಐಐನ ನಿರ್ದೇಶಕರಾಗಿದ್ದಾಗ ಅಲ್ಲಿ ಚಿತ್ರಕತೆ ರಚನೆ ಮತ್ತು advanced writing ನ ವಿದ್ಯಾರ್ಥಿಯಾಗಿದ್ದರು. ಘಟಕ್ ರ ಮತ್ತೊಬ್ಬ ನೆಚ್ಚಿನ ಶಿಷ್ಯ ಜಾನ್ ಅಬ್ರಹಾಂ ರೀತಿ ಕ್ರಿಯಾಶೀಲ ಅರಾಜಕತೆ ( creative anarchism) ಮತ್ತು ಸರ್ರಿಯಲಿಸಂನ್ನು ಆವಾಹಿಸಿಕೊಳ್ಳದ ಅಥವಾ ತನ್ನ ವ್ಯಕ್ತಿತ್ವಕ್ಕೂ ಒಗ್ಗದ ಕಾರಣ ಸಂಪೂರ್ಣವಾಗಿ ಭಿನ್ನ ಹಾದಿಯನ್ನು ತುಳಿದರು.
ಫ್ರೆಂಚ್ ನಿರ್ದೇಶಕ ರಾಬರ್ಟ್ ಬ್ರೆಸನ್ ನ ಮಿನಿಮಲಿಸಂ ಘರಾಣದಿಂದ ಪ್ರಭಾವಿತರಾದ ಸಹಾನಿ ಎಪ್ಪತ್ತು, ಎಂಬತ್ತರ ದಶಕದ ತಮ್ಮ ಚಿತ್ರಗಳಲ್ಲಿ ಅದನ್ನು ಅಳವಡಿಸಿಕೊಂಡರು. ಆದರೆ ಇದರ ಆಳ ಅಗಲದ ಕುರಿತು ಪ್ರೇಕ್ಷಕರಿಗೆ ಮತ್ತು ವಿಮರ್ಶಕರಿಗೆ ಪರಿಚಯವಿಲ್ಲದ ಕಾರಣ ಇವರ ಸಿನಿಮಾಗಳು ಟೀಕೆಗೂ ಒಳಗಾದವು. ಆದರೆ ಐವತ್ತು ವರ್ಷಗಳ ನಂತರ ಇಂದು ಅದರ ಮಹತ್ವ ಮತ್ತು ಕಲಾವಂತಿಕೆ ಅರಿವಾಗುತ್ತಿದೆ.
1972ರಲ್ಲಿ ಸಹಾನಿ ನಿರ್ದೇಶನದ ನಿರ್ಮಲ್ ವರ್ಮ ಸಣ್ಣ ಕತೆ ಆಧರಿಸಿದ ‘ಮಾಯಾ ದರ್ಪಣ್’ ಬಿಗಿಯಾದ ಚಿತ್ರಕತೆಗೆ ಒಂದು ಉದಾಹರಣೆ. ಕೈಗಾರೀಕರಣ ಮತ್ತು ಆಧುನಿಕತೆಯಿಂದ ಫ್ಯೂಡಲ್ ವ್ಯವಸ್ಥೆಯಲ್ಲಿ ಉಂಟಾದ ಪಲ್ಲಟಗಳ ಕುರಿತು ಮಾತನಾಡುವ ಈ ಸಿನಿಮಾದ ಕುರಿತು ಎಂಬತ್ತರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದ ನಾವು ಇದು ಜನಪ್ರಿಯ ಸಿನಿಮಾಗೆ ಹೇಳಿ ಮಾಡಿಸಿದ ಕತೆ ಎಂದು ವಾದಿಸಿದ್ದೆವು. ಈಗ ನೆನೆಸಿಕೊಂಡು ನಗು ಬರುತ್ತದೆ.
1984ರಲ್ಲಿ ಬಿಡುಗಡೆಯಾದ ಉದ್ಯಮದ ಮಾಲೀಕರು ಮತ್ತು ದುಡಿಯುವ ವರ್ಗಗಳ ನಡುವಿನ ಸಂಘರ್ಷದ ‘ತರಂಗ್’ ಸಿನಿಮಾ ಸಾಕಷ್ಟು ಚರ್ಚೆಗೆ ಒಳಗಾಯಿತು. ಅಲ್ಲಿ ಸ್ಮಿತಾ ಪಾಟೀಲ್ ಅವರ ಮೆಥಡ್ ಆಕ್ಟಿಂಗ್ ಇಂದಿಗೂ ಒಂದು ಪಾಠದಂತಿದೆ.
ಇಂಡಿಯಾದ ಅವಂತ್ ಗರೇಡ್ ಘರಾಣದ ನಿರ್ದೇಶಕರಾದ ಸಹಾನಿ ಅದನ್ನು ಒಂದು ಬದ್ಧತೆಯುಳ್ಳ ಶಿಷ್ಯನಂತೆ ಪಾಲಿಸಿದರು. ಮುಖ್ಯವಾಹಿನಿಯ ಎಲ್ಲಾ ನಿಯಮಗಳನ್ನೂ ಮುರಿಯುತ್ತಾ ಕತೆ ಹೇಳುವ ತಂತ್ರವನ್ನೇ ಬದಲಿಸಿಕೊಂಡರು. ಇವರ ಶೈಲಿ ಘಟಕ್ ಗಿಂತ ಭಿನ್ನವಾಗಿದ್ದರೆ ಮತ್ತೊಬ್ಬ ಶಿಷ್ಯ ಜಾನ್ ಅಬ್ರಾಹಂ ವ್ಯಕ್ತಿತ್ವ ಮತ್ತು ಕಥನದಲ್ಲಿ ಘಟಕ್ ರ ಲೆಗಸಿ ಮುಂದುವರಿಸಿದರು.
ಸಾಮಾಜಿಕ ಸಂಘರ್ಷಗಳನ್ನು ಪ್ರತಿಬಿಂಬಿಸುವಾಗ ಸಹಾನಿ ನೇರವಾದ ಮತ್ತು ಆಳವಾದ ಚಿತ್ರಕತೆಯನ್ನು ಆರಿಸಿಕೊಂಡರೆ ಜಾನ್ ಅನೇಕ ಪದರುಗಳುಳ್ಳ, ಎಲ್ಲಾ ಕಡೆ ಹರಿದಾಡುವ ಕಡೆಗೂ ಒಂದು ಗಮ್ಯಕ್ಕೆ ಸೇರದ, ಹಿಡಿತಕ್ಕೂ ಸಿಗದ ಸರ್ರಿಯಲಿಸಂ ಮಾದರಿಯನ್ನು ಕಟ್ಟಿದರು. ನಮಗೆ ಜಾನ್ ನ ಈ eccentricity esthetic ಅಪ್ತವಾಗಿತ್ತು. ಆದರೆ ಕುಮಾರ್ ಸಹಾನಿಯವರ ಕಲಾ ಮೀಮಾಂಸೆ ಪ್ರತಿಯೊಬ್ಬ ಬಡ್ಡಿಂಗ್ ನಿರ್ದೇಶಕರಿಗೆ ಮುಖ್ಯ ಪಠ್ಯವಾಗಿದೆ.
ರುತ್ವಿಕ್ ಘಟಕ್ ಲೆಗಸಿಯ ಕೊನೆಯ ಕೊಂಡಿ ಸಹಾನಿ ಇಂದು ನಮ್ಮನ್ನು ಅಗಲಿದ್ದಾರೆ
ನಮನಗಳು
– ಬಿ.ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು



