ಅಂಬೇಡ್ಕರ್-ಗಾಂಧಿ….
ಕಳೆದ 5-6 ವರ್ಷಗಳಲ್ಲಿ ನಾನು ಅಂಬೇಡ್ಕರ್ ಮತ್ತು ಗಾಂಧಿಯನ್ನು ಓದಿಕೊಂಡ ತಿಳಿವಿನ ಮಿತಿಯಲ್ಲಿ ಗಾಂಧಿ-ಅಂಬೇಡ್ಕರ್ ಬಗೆಗಿನ ನನ್ನ ಗ್ರಹಿಕೆ ಹೀಗಿದೆ
ಗಾಂಧಿಯನ್ನು ಗೌರವಿಸುವುದಕ್ಕೆ ಕಾರಣಗಳಿರುವಂತೆ, ತಿರಸ್ಕರಿಸುವುದಕ್ಕೆ ಸಾಕಷ್ಟು ಸಂಗತಿಗಳಿವೆ. ಆದರೆ ಅಂಬೇಡ್ಕರ್ ಅವರನ್ನು ಗೌರವಿಸುವದಕ್ಕೆ ಕಾರಣಗಳಿವೆಯೇ ಹೊರತು ತಿರಸ್ಕರಿಸುವುದಕ್ಕೆ ಕಾರಣಗಳಿಲ್ಲ. ಹಾಗಾಗಿ ಗಾಂಧಿಯನ್ನು ಅಂಬೇಡ್ಕರ್ ಜತೆಗಿಟ್ಟು ಅಥವಾ ಹೋಲಿಸಿ ನೋಡುವುದೇ ತಪ್ಪು. ಪರ-ವಿರೋಧಕ್ಕೆ ಈ ಇಬ್ಬರ ವಿದ್ಯಮಾನಗಳ ಆಯ್ದು ಕಟ್ಟುವ ವಿಧಾನ ಗಂಭೀರ ಮಿತಿಯುಳ್ಳದ್ದು.
ಇಬ್ಬರನ್ನು ಪ್ರತ್ಯೇಕವಾಗಿಯೇ ಗ್ರಹಿಸಲು-ಗುರುತಿಸಲು ಪ್ರಯತ್ನಿಸಿ. ಅಂಬೇಡ್ಕರ್ ಎಂಬ ಅಳತೆ ಮಾಪನವನ್ನಿಟ್ಟುಕೊಂಡು ಗಾಂಧಿಯನ್ನು ಅಳೆಯಬಹುದೇ ಹೊರತು ಗಾಂಧಿ ಎಂಬ ಅಳತೆಯ ಮಾಪನದಿಂದ ಅಂಬೇಡ್ಕರ್ ಅವರನ್ನು ಅಳೆಯಲಾಗದು. ಕಾರಣ ಅಂಬೇಡ್ಕರ್ ಅವರನ್ನು ಅಳೆಯುವ ‘ಮಾಪನ’ವಾಗುವ ಧಾರಣ ಶಕ್ತಿಯನ್ನು ಗಾಂಧೀಜಿ ಅವರಲ್ಲಿ ಹುಡುಕುವುದು ಸ್ವತಃ ನಾವು ಗಾಂಧೀಜಿಗೆ ಮಾಡುವ ಅಪಮಾನವಾಗುತ್ತದೆ.
ನಿಮಗೆ ಗಾಂಧಿಯ ಬಗ್ಗೆ ಪ್ರೀತಿಯಿದ್ದರೆ, ಆ ಪ್ರೀತಿ ಹಾಗೆಯೇ ಇರಬೇಕು ಎಂದು ನೀವು ಭಾವಿಸುವುದಾದರೆ ಖಂಡಿತಾ ಅಂಬೇಡ್ಕರ್ ಜತೆ ಹೋಲಿಸುವ ತಪ್ಪು ಮಾಡಬೇಡಿ. ಹಾಗೆ ಮಾಡಿದ್ದಾದರೆ ಗಾಂಧಿಯ ಬಗೆಗಿನ ನಿಮ್ಮ ಅಭಿಮಾನದ ಪೊಳ್ಳುತನ ಬಯಲಾಗತೊಡಗುತ್ತದೆ.
ಅಂಬೇಡ್ಕರ್ ಅವರ ಜತೆ ಗಾಂಧಿಯನ್ನು ಹೋಲಿಸುವುದು ಅಂಬೇಡ್ಕರ್ ಎತ್ತರಕ್ಕೆ ಗಾಂಧಿಯನ್ನು ಏರಿಸುವ ಅಥವಾ ಗಾಂಧಿಯನ್ನು ಮರೆಯದಂತೆ ಜೀವಂತವಾಗಿಡುವ ಪ್ರಯತ್ನದಂತೆ ನನಗೆ ಕಾಣುತ್ತದೆ.
ಅಂಬೇಡ್ಕರ್ ಅವರನ್ನು ನೀವು ನಿಕಟವಾಗಿ ಓದುತ್ತಾ ಹೋದಂತೆ ನಿಮ್ಮೊಳಗಿನ ‘ಗಾಂಧಿ’ ಕಿರಿದಾಗುತ್ತಾ ಹೋಗುತ್ತಾರೆ. ಗಾಂಧಿಯನ್ನು ನೀವು ಆಳವಾಗಿ ಓದುತ್ತಾ ಹೋದಂತೆ ‘ಅಂಬೇಡ್ಕರ್’ ನಿಮ್ಮ ಗ್ರಹಿಕೆಯ ಮಿತಿಯನ್ನು ಮೀರಿ ಎತ್ತರೆತ್ತರಕ್ಕೆ ಬೆಳೆಯತೊಡಗುತ್ತಾರೆ.
ಹಾಗಾಗಿ ನಿಮ್ಮಲ್ಲೊಂದು ವಿನಮ್ರ ಪ್ರಾರ್ಥನೆ.. ಅಂಬೇಡ್ಕರ್ ಅವರನ್ನು ಓದುತ್ತಾ ಹೋದಂತೆ ನಿಮ್ಮೊಳಗೆ ಕಳೆದುಹೋಗುವ ಗಾಂಧಿಯನ್ನು ಮತ್ತೆ ಹುಡುಕುವ ಪ್ರಯತ್ನ ಮಾಡಬೇಡಿ. ಅಂದರೆ ಗಾಂಧಿಯನ್ನು ವಿರೋಧಿಸಲು ಸಮಯ ವ್ಯರ್ಥಮಾಡಬೇಡಿ. ನೀವು ಗಾಂಧಿಯನ್ನು ವಿರೋಧಿಸುತ್ತಾ ಕೂರುತ್ತೀರಿ ಎಂದರೆ ಅಂಬೇಡ್ಕರ್ ಅವರನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದರ್ಥ.
ಇನ್ನು ಗಾಂಧಿಯನ್ನು ಓದಿದವರು ಸಾಮಾನ್ಯವಾಗಿ ಅಂಬೇಡ್ಕರ್ ಅವರನ್ನು ವಿರೋಧಿಸುವುದಿಲ್ಲ, ಯಾಕೆಂದರೆ ವಿರೋಧಿಸಲು ಅವರ ಬಳಿ ಏನೂ ಉಳಿದಿರುವುದಿಲ್ಲ.
ಕೊನೆಯದಾಗಿ ಗಾಂಧಿ-ಅಂಬೇಡ್ಕರ್ ಅವರನ್ನು ಪರ-ವಿರೋಧವಾಗಿ ನೋಡಬೇಡಿ ಎನ್ನುವವರು ಇಬ್ಬರನ್ನೂ ಓದಿರುವುದಿಲ್ಲ. ಅಂತವರನ್ನು ನಿರ್ಲಕ್ಷಿಸೋಣ.
ನನ್ನ ಕಲ್ಪನೆಯಲ್ಲಿ ಈಗ ಗಾಂಧಿ ಮತ್ತು ಅಂಬೇಡ್ಕರ್ ಮತ್ತೆ ಹುಟ್ಟಿಬಂದರೆ ಗಾಂಧಿ ಕಣ್ಣುಜ್ಜಿಕೊಂಡು ಕನ್ನಡಕ ಹಾಕಿ ಮುಗಿಲೆತ್ತರದ ಅಂಬೇಡ್ಕರ್ ಅವರನ್ನು ತಲೆ ಎತ್ತಿ ನೋಡಬೇಕಾಗಬಹುದು.
Finally ಗಾಂಧಿಯನ್ನು ಗೌರವಿಸಿ, ಆರಾಧಿಸಿ, ಪ್ರೀತಿಸಿ.. ಅದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ.. ಆದರೆ ಅಂಬೇಡ್ಕರ್ ಜತೆ ಹೋಲಿಸಬೇಡಿ.
- ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು



