ಗಾಂಧಿ-ಅಂಬೇಡ್ಕರ್ ಕುರಿತು ದೊರೆಸ್ವಾಮಿ ತಾತನ ಜೊತೆ ನಡೆದಿದ್ದ ಒಂದು ಪುಟಾಣಿ ಸಂವಾದ

2 years ago

(ಹಳೆಯ ಬರಹ ಈ ಸಂದರ್ಭದ ಮರುಓದಿಗಾಗಿ)

ಗೌರಿ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗಿನಿಂದಲೂ ನನಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರ ಪರಿಚಯವಿತ್ತು. ಆಗಾಗ್ಗೆ ಅವರ ಮನೆಗೆ ಹೋಗಿ ಬರುತ್ತಿದ್ದೆ. ಅದೊಂದು ಸಲ, ಸ್ನೇಹಿತರೊಬ್ಬರ ಪುಸ್ತಕಕ್ಕೆ ಅವರಿಂದ ಮುನ್ನುಡಿ ಬರೆಸುವ ಸಲುವಾಗಿ ಅವರ ಮನೆಗೆ ಹೋದೆ. ಆ ಕೆಲಸವಲ್ಲದೆ, ನನ್ನ ತಲೆತಿನ್ನುತ್ತಿದ್ದ ಇನ್ನೂ ಒಂದು ವಿಚಾರವನ್ನು ಅವರ ಬಳಿ ಚರ್ಚಿಸಲು ಬಯಸಿದ್ದೆ. ಗೆಳೆಯರೊಬ್ಬರು ಗಾಂಧಿ ಮತ್ತು ಅಂಬೇಡ್ಕರ್‌ರನ್ನು ತುಲನೆ ಮಾಡಿ ಬರೆದಿದ್ದ ಕವನವೊಂದು ನನ್ನನ್ನು ಬಹಳ ಕಾಡುತ್ತಿತ್ತು. ಅಂಬೇಡ್ಕರ್ ಮತ್ತು ಗಾಂಧಿ ಇಬ್ಬರೂ ತಮ್ಮದೇ ತೀವ್ರತೆಯಲ್ಲಿ ವಿರೋಧಿಸಿದ ಕೋಮುವಾದ, ಇಡೀ ದೇಶವನ್ನು ಆವರಿಸಿ ದಳ್ಳುರಿಯಲ್ಲಿ ಬದುಕುಗಳನ್ನು ಬೇಯಿಸುತ್ತಿರುವ ಕಾಲಘಟ್ಟದಲ್ಲಿ ಇಂಥಾ ಚರ್ಚೆಯ ಅಗತ್ಯವಿದೆಯಾ? ಗಾಂಧಿ-ನೆಹರೂ ಥರದ ಜಾತ್ಯತೀತ ಚಹರೆಗಳನ್ನು ವಿನಾಕಾರಣ ವಿರೋಧಿಸುವಂತಹ ಒಂದು ಹೊಸ ಪೀಳಿಗೆಯನ್ನೆ ಹುಟ್ಟುಹಾಕಿರುವ ಕೋಮುವಾದಿ ರಾಜಕಾರಣಕ್ಕೆ ನಮ್ಮ ಇಂತಹ ವಿಮರ್ಶೆಗಳು ಎಷ್ಟರಮಟ್ಟಿಗೆ ನೆರವಾಗಬಲ್ಲವು ಅಥವಾ ಮಾರಕವಾಗಬಲ್ಲವು? ಎಂಬ ಪ್ರಶ್ನೆಗಳು ನನ್ನನ್ನು ಕಾಡುತ್ತಲೇ ಇದ್ದವು.

ಸ್ವತಃ ಗಾಂಧಿವಾದಿಯೂ, ಸ್ವಾತಂತ್ರ್ಯಪೂರ್ವ ರಾಜಕೀಯ-ಸಾಮಾಜಿಕ ಸಂಘರ್ಷಗಳನ್ನು ಕಂಡವರೂ ಆದ ದೊರೆಸ್ವಾಮಿ ತಾತನೇ ನನ್ನ ಈ ಚಡಪಡಿಕೆಗೆ ಸೂಕ್ತ ಉತ್ತರವಾಗಬಲ್ಲರು ಅನ್ನಿಸಿತ್ತು. ಅವರ ಮನೆಗೆ ಕಾಲಿಟ್ಟ ಕ್ಷಣದಿಂದಲೂ ಅದನ್ನು ಹೇಗೆ ಪ್ರಸ್ತಾಪ ಮಾಡುವುದೆಂಬ ಒದ್ದಾಟದಲ್ಲಿದ್ದೆ. ಯಾಕೆಂದರೆ ನಾನು ಯಾವತ್ತೂ ಅವರ ಜೊತೆ ಐದು ನಿಮಿಷಕ್ಕಿಂತ ಹೆಚ್ಚು ಕಾಲ ಹರಟಿದವನಲ್ಲ. ಎಂದಿನಂತೆ ಸರಾಗವಾಗಿ ಎದ್ದುಹೋಗದೆ, ಕೊಸರಾಡುತ್ತಿದ್ದ ನನ್ನ ಪರಿಸ್ಥಿತಿಯನ್ನು ಗ್ರಹಿಸಿದ ತಾತ ಕೇಳಿಯೇಬಿಟ್ಟರು, “ಯಾಕೆ ಇವರೇ, ಮತ್ತೆ ಏನಾದರು ಹೇಳುವುದಕ್ಕಿದೆಯಾ?”.

ಅಷ್ಟು ಸಾಕಯ್ತು ನನಗೆ, ” ಹೌದು ಸರ್. ತಾವು ಬಿಡುವಿದ್ದರೆ ಒಂದು ಸಣ್ಣ ಅನುಮಾನ ಬಗೆಹರಿಸಿಕೊಳ್ಳುವುದಿತ್ತು” ಮುಜುಗರ ಮುಂದಿಟ್ಟೆ.

“ಪರವಾಗಿಲ್ಲ ಹೇಳಿ, ಹೇಗೂ ನಾನೂ ಫ್ರೀಯಾಗಿದೀನಿ ಇವತ್ತು” ಎಂದರು. ತುಸು ಧೈರ್ಯ ಬಂದಂತಾಗಿ, ಗೆಳೆಯರ ಕವನ ಮತ್ತು ಗಾಂಧಿ-ಅಂಬೇಡ್ಕರ್ ತುಲನಾತ್ಮಕ ನೋಟಗಳ ವಿಮರ್ಶೆ, ಆ ಮೂಲಕ ಗಾಂಧಿಯನ್ನು ಗ್ರಹಿಸುವಲ್ಲಿ ನಮ್ಮಂತಹ ಹೊಸ ಪೀಳಿಗೆಯವರಿಗೆ ಉಂಟಾಗುತ್ತಿರುವ ಗೊಂದಲ, ಸದ್ಯದ ಸಾಂದರ್ಭಿಕ ಸನ್ನಿವೇಶಗಳಲ್ಲಿ ಗಾಂಧಿ-ಅಂಬೇಡ್ಕರ್ ಎಂಬ ಧೀಶಕ್ತಿಗಳನ್ನು ಪರಸ್ಪರ ವಿರುದ್ಧ ದಿಕ್ಕಿನಲ್ಲಿಟ್ಟು ನೋಡುವ ವಿಮರ್ಷೆಯ ಸಮಂಜಸತೆಯ ಬಗ್ಗೆ ಮಾತು ಬಿಚ್ಚಿದೆ.

ಒಂದು ಕ್ಷಣ ತಾತ ಗಂಭೀರವಾದರು. “ನೋಡಿ ಇವರೇ, ಈ ಪ್ರಪಂಚದ ಆಧುನಿಕ ಇತಿಹಾಸದಲ್ಲಿ ಇಡೀ ವಿಶ್ವದಲ್ಲಿ ಹೆಚ್ಚು ಗೌರವಕ್ಕೆ ಪಾತ್ರವಾದ ವ್ಯಕ್ತಿಯೆಂದರೆ ಅದು ಗಾಂಧಿ. ಅದೇ ವೇಳೆ, ಗಾಂಧಿಯನ್ನು ಅತಿಹೆಚ್ಚು ಟೀಕಿಸುವ, ವಿಮರ್ಶಿಸುವ, ಒಂದು ಕೈ ದ್ವೇಷಿಸಿಯೂ ಬಿಡುವ ದೇಶ ಅಂತ್ಯಾವುದಾದರು ಇದ್ದರೆ ಅದು ಭಾರತ. ಇದು ನಮ್ಮ democratic beautyಯೂ ಹೌದು, ಈ ದೇಶದ ವಿಪರ್ಯಾಸವೂ ಹೌದು….”

“ಹಾಗಾದರೆ, ಅಂಬೇಡ್ಕರ್ ವಾದದ ದೃಷ್ಟಿಯಿಂದ ನೋಡಿದಾಗ ಗಾಂಧಿಯೇಕೆ ವಿಲನ್ ರೀತಿ ಚಿತ್ರಿತವಾಗುತ್ತಾರೆ ಸರ್ ನಾನು ಈ ಪ್ರಶ್ನೆ ಕೇಳಲು ತುಂಬಾ ಅವಸರಿಸಿಬಿಟ್ಟೆನೇನೊ ಅನ್ನಿಸಿತು.

ಆದರೂ ತಾತ, ಲಹರಿಗೆಡಲಿಲ್ಲ. “ಗಾಂಧಿ ವಿಚಾರದಲ್ಲಿ ನಿಮ್ಮ ’ವಿಲನ್ ಪದ ಬಳಕೆಯೇ ಬಾಲಿಶವಾದುದು. (ವಿಚಾರ ಮಂಡನೆಯ ಸಂಗತಿಗೆ ಬಂದರೆ ತಾತ ಮುಲಾಜು ನೋಡುತ್ತಿರಲಿಲ್ಲ.). ಪ್ರತಿ ವ್ಯಕ್ತಿಗು ವಿಶೇಷತೆಗಳು ಇರುವಂತೆ ಮಿತಿಗಳೂ ಇರುತ್ತವೆ. ಬರೀ ವಿಶೇಷತೆಗಳನ್ನೆ ಪರಿಗಣಿಸಿದರೆ ಅದು ವ್ಯಕ್ತಿಪೂಜೆಯಾಗಿಬಿಡುತ್ತೆ. ಆತನ ಮಿತಿಗಳನ್ನೇ ಟೀಕಿಸುತ್ತಾ ಕೂತರೆ ವಿಮರ್ಶೆ ಎನ್ನುವುದೇ ಒಂದು ಕಾಯಿಲೆಯಾಗಿಬಿಡುತ್ತೆ. ಈ ಎಚ್ಚರಿಕೆ ಮತ್ತು ಕಾಳಜಿ ಇಟ್ಟುಕೊಂಡು ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳನ್ನು ಸ್ಪರ್ಶಿಸಬೇಕೆ ವಿನಃ ಪೂರ್ವಗ್ರಹಗಳ ಆಲೋಚನೆಯನ್ನು ಹೊತ್ತು ಅಲ್ಲ.

” ಹಾಗಾದ್ರೆ ಸರ್, ಪೂನಾ ಒಪ್ಪಂದದ ಮೂಲಕ ನೋಡಿದಾಗ ಗಾಂಧಿಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?” ಮತ್ತೆ ನನ್ನ ಪ್ರಶ್ನೆ ಮುಂದಿರಿಸಿದೆ.

“ಗಾಂಧಿ-ಅಂಬೇಡ್ಕರ್ ರನ್ನು ತೂಗಿ ನೋಡುವಾಗ, ಖಂಡಿತವಾಗಿಯೂ ಪೂನಾ ಒಪ್ಪಂದ ಒಂದು ಬಹುಮುಖ್ಯವಾದ ಅಳತೆಗೋಲು. ಅದಕ್ಕೂ ಮೊದಲು ನಾವು ಗಾಂಧಿ ಮತ್ತು ಅಂಬೇಡ್ಕರ್ ಅಂದ್ರೆ ಏನು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಇಬ್ಬರು ವ್ಯಕ್ತಿಗಳಷ್ಟೇ ಅಲ್ಲ. ಭಾರತವನ್ನು ಕಟ್ಟಿಕೊಡುವ ಎರಡು ನೋಟಗಳು. ಗಾಂಧಿ ಈ ಭಾರತವನ್ನು ತುಂಬಾ ಚೆನ್ನಾಗಿ ಗ್ರಹಿಸಿದರು. ಆದರೆ ಅಂಬೇಡ್ಕರ್ ಈ ಭಾರತವನ್ನು ಆಳವಾಗಿ ಅನುಭವಿಸಿದರು. ಗ್ರಹಿಕೆ ಮತ್ತು ಅನುಭವಗಳ ನಡುವೆ ಯಾವ ವ್ಯತ್ಯಾಸವಿದೆಯೋ, ಅದೇ ವ್ಯತ್ಯಾಸ ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಇರುವುದು. ನಾನು ಗಾಂಧಿವಾದಿಯಾದರು, ಈ ದೇಶವನ್ನು ರೂಪಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ರಿಗೆ ಇದ್ದ ಸ್ಪಷ್ಟತೆಯನ್ನು ಗೌರವಿಸುತ್ತೇನೆ. ಯಾಕೆಂದರೆ ಗಾಂಧಿಯವರ ರಾಜಕೀಯ ಹೋರಾಟ ಎಷ್ಟು ಸ್ಪಷ್ಟತೆಯಿಂದ ಕೂಡಿತ್ತೊ, ಅಂಬೇಡ್ಕರರ ಸಾಮಾಜಿಕ ಹೋರಾಟ ಅಷ್ಟೇ ದೂರದೃಷ್ಟಿ ಹೊಂದಿತ್ತು. ಮೇಲ್ವರ್ಗದ ಗಾಂಧಿಯವರು ಗ್ರಹಿಸಿದ್ದ ಭಾರತೀಯ ಸಮಾಜಕ್ಕಿಂತ ನಿಮ್ನ ವರ್ಗದ ಅಂಬೇಡ್ಕರ್ ಅನುಭವಿಸಿದ್ದ ಸಮಾಜ ನಮ್ಮನ್ನು ರೂಪಿಸಬೇಕಿದೆ. ಹಾಗಂತ ಗಾಂಧಿ, ಅಂಬೇಡ್ಕರ್ ವಾದಗಳು ವೈಷಮ್ಯವನ್ನು ತುಂಬಿಕೊಂಡ ತದ್ವಿರುದ್ಧ ಧೃವಗಳಲ್ಲ. ಉತ್ತಮತೆಯೆಡಗೆ ತುಡಿದ ಎರಡು ಭಿನ್ನ ಮಾರ್ಗಗಳು. ಅಂತಹ ಬೌದ್ಧಿಕ ಜಟಾಪಟಿಗಳು ಇದ್ದಾಗಲೇ ನಾವು ಆರೋಗ್ಯವಂತ ಸಶಕ್ತ ಸಮಾಜವಾಗುತ್ತೇವೆ. ಇಂಥಾ ಒಟ್ಟಾರೆ ಉತ್ಕೃಷ್ಟ ವಾತಾವರಣದಿಂದಲೇ ನಾವು ಆಂಗ್ಲರನ್ನೂ ಮಣಿಸಲು ಸಾಧ್ಯವಾದದ್ದು. ಇದನ್ನು ಅರ್ಥ ಮಾಡಿಕೊಳ್ಳದೆ ನಾವು ವಿಘಟನೆಗೆ ಅಂತಹ ಜಟಾಪಟಿಗಳನ್ನು ಸರಕಾಗಿಸಿಕೊಳ್ಳಬಾರದು. ವಿಮರ್ಶೆಗೆ ಆಯಾ ಕಾಲಘಟ್ಟದ ತುರ್ತಿನ ಹೊಣೆಗಾರಿಕೆಯೂ ಇರಬೇಕಾಗುತ್ತದೆ. ಗಾಂಧಿವಾದಿಯಾದ ನನಗೆ ಇವತ್ತು ಅಂಬೇಡ್ಕರ್ ವಿಚಾರಧಾರೆಗಳು ಹೆಚ್ಚು ಸಮಂಜಸವಾಗಿ ಕಾಣುತ್ತವೆ. ಹಾಗಾಗಿ ಗಾಂಧಿವಾದಿಯಾಗಿಯೇ ನಾನು ಅವುಗಳನ್ನು ಸ್ವೀಕರಿಸುತ್ತೇನೆ. ಇಲ್ಲಿ ಯಾರನ್ನೊ ಹೀರೊ ಎಂದು ಬಿಂಬಿಸುವ, ಮತ್ತ್ಯಾರನ್ನೋ ವಿಲನ್ ಆಗಿಸುವ ಪ್ರಶ್ನೆಯೇ ಉದ್ಭವಿಸದು. ಈ ಎರಡೂ ವಾದಗಳ ಒಟ್ಟಾರೆ ತುಡಿತವಾದ ಉತ್ತಮತೆ ನಮ್ಮ ಆದ್ಯತೆಯಾಗಬೇಕು”

ತಾತ ಹೀಗೆಲ್ಲ ಮಾತಾಡುತ್ತಿದ್ದರೆ, ಆ ಪುಟಾಣಿ ಮಂಚದ ಮೇಲೆ ಅವರ ಆಕಾರ ಕ್ಷಣಕ್ಷಣಕ್ಕೂ ಹಿಗ್ಗಿದಂತೆ, ಗಾಂಧಿಗಿಂತಲೂ ವಿಸ್ತಾರವಾದಂತೆ, ಸ್ವಾತಂತ್ರ್ಯದ ಬುದ್ಧನಂತೆ ನನ್ನ ಕಣ್ಣಿಗೆ ಕಾಣಿಸಿದರು. ನಾನು ಎತ್ತಿದ್ದ ವಿಚಾರಕ್ಕೆ ಇಂಥಾ ಅಲ್ಪಾವಧಿ ಚರ್ಚೆ ಒಂದು ತೀರ್ಮಾನವನ್ನು ಒದಗಿಸಲಾರದು ಅನ್ನೋದು ನನಗೆ ಚೆನ್ನಾಗಿ ಗೊತ್ತಿತ್ತು. ಅಲ್ಲದೇ, ತಾತನಿಗೆ ಇನ್ನೂ ಹೇಳುವುದು ಬಹಳಷ್ಟಿದೆ, ನಾನೂ ಕೇಳಿಸಿಕೊಳ್ಳುವುದು ಬೆಟ್ಟದಷ್ಟಿದೆ ಎಂಬುದು ಮನದಟ್ಟಾಯ್ತು. ಆದರೆ, ನಾನು ತುರ್ತಾಗಿ ಹೋಗಲೇಬೇಕಿದ್ದ ಸಮಯ ಹತ್ತಿರವಾದದ್ದರಿಂದ, ಬೇಸರದಲ್ಲೆ “ಹೌದು ಸಾರ್. ನೀವು ಹೇಳುತ್ತಿರೋದು ಸರಿ. ಗಾಂಧಿ ಮತ್ತು ಅಂಬೇಡ್ಕರ್ ರನ್ನು ನಮ್ಮ ಬಲಗಳಾಗಿ ಬಳಸಿಕೊಳ್ಳಬೇಕೆ ವಿನಾಃ ಪರಸ್ಪರ ಕಾದಾಟದ ಅಸ್ತ್ರಗಳನ್ನಾಗಿ ಅಲ್ಲ. ಆದರೆ ಈ ಕುರಿತು ಇನ್ನೂ ವಿಸ್ತೃತವಾದ ಚರ್ಚೆ ನಡೆಯಬೇಕಿದೆ. ನನಗಂತು ನಿಮ್ಮ ಬಳಿ ಕೇಳುವುದಕ್ಕೆ ಸಾಕಷ್ಟು ವಿಷಯಗಳಿವೆ. ಆದ್ರೆ ಯಾರನ್ನೊ ಅರ್ಜೆಂಟಾಗಿ ಭೇಟಿ ಮಾಡ್ಬೇಕಿದೆ ಸರ್. ಹಾಗಾಗಿ ತಾವು ಅನುಮತಿ ಕೊಟ್ಟರೆ ಹೊರಡ್ತೀನಿ. ಒಂದು ದಿನ ಬಿಡುವು ಮಾಡಿಕೊಂಡು, ನೀವೂ ಆರಾಮಾಗಿರುವ ಸಮಯ ನೋಡಿಕೊಂಡು ಬರ್ತೀನಿ. ಈ ವಿಚಾರದಲ್ಲಿ ನಿಮ್ಮ ಮಾತನ್ನು ಇನ್ನಷ್ಟು ಕೇಳಿಸಿಕೊಳ್ಳಬೇಕು ಸರ್. ಅಷ್ಟರಲ್ಲಿ ಇನ್ನೂ ಸ್ವಲ್ಪ ಇತಿಹಾಸವನ್ನು ಓದಿಕೊಂಡು ಬರುತ್ತೇನೆ” ಅಂದೆ.

“ಖಂಡಿತ ಬನ್ನಿ. ನನಗೆ ಮೊದಲೇ ತಿಳಿಸಿದರೆ ನಾನೂ ಒಂದಿಷ್ಟು ಟಿಪ್ಪಣಿ ಮಾಡಿ (ಯಾವ ವಿಚಾರವನ್ನೂ ಅವರು ಸೂಕ್ತ ಆಧಾರ, ಪುರಾವೆಗಳಿಲ್ಲದೆ ಮಂಡಿಸುತ್ತಿರಲಿಲ್ಲ) ಇಟ್ಟುಕೊಳ್ತೀನಿ. ಮಾತಾಡಲು ಅನುಕೂಲವಾಗುತ್ತೆ. ನಿಮ್ಮಂತ ಯುವಕರು, ಗಾಂಧಿ-ಅಂಬೇಡ್ಕರ್ ಥರದ ವಿಚಾರಗಳ ಬಗ್ಗೆ ಆಸಕ್ತಿ ತಳೆಯೋದು ತುಂಬಾ ಮುಖ್ಯ. ಗೊಂದಲಗಳನ್ನು ಬಗೆಹರಿಸಿಕೊಂಡಾಗಲೆ ನಮಗೆ ಸ್ಪಷ್ಟತೆ ಬರಲು ಸಾಧ್ಯ. ಇಲ್ಲವಾದಲ್ಲಿ ಕೇವಲ ಆ ಸಂದರ್ಭಕ್ಕೆ ಪ್ರತಿಕ್ರಿಯಿಸುವುದಷ್ಟೇ ನಮ್ಮ ಹೊಣೆಗಾರಿಕೆ ಅನ್ನಿಸಿಬಿಡುತ್ತೆ. ಪ್ರತಿಕ್ರಿಯೆ ಮತ್ತು ಆಲೋಚನೆಗಳಲ್ಲಿ ದೂರದೃಷ್ಟಿ ಇಲ್ಲದೇ ಇರುವುದೇ ನಮ್ಮ ಹೊಸ ಪೀಳಿಗೆಗೆ ಇರುವ ದೊಡ್ಡ ಕೊರಗು. ವಿಚಾರಶೀಲರಾಗೋದು ಯುವಪೀಳಿಗೆಯ ತುರ್ತು ಅಗತ್ಯ. ನೀವು ಯಾವಾಗ್ಲಾದ್ರೂ ಬನ್ನಿ. ಮಾತಾಡೋಣ” ಎಂದರು.

ಅವರಿಂದ ಬೀಳ್ಕೊಟ್ಟು ಹೊರಟೆ. ಅದಾದ ಮೇಲೆ, ಅವರು ಸಂಗಡ ಆರಾಮಾಗಿ ಕೂತು ಗಾಂಧಿ-ಅಂಬೇಡ್ಕರ್ ಕುರಿತು ಚರ್ಚಿಸುವ ಅದೃಷ್ಟವೇ ನನಗೆ ಒದಗಿ ಬರಲಿಲ್ಲ. 

– ಗಿರೀಶ್ ತಾಳಿಕಟ್ಟೆ, ಬರಹಗಾರರು

Leave a Reply