ನಿಮ್ಮಲ್ಲಿ ಬರೀ ಮುಖವಾಡಗಳು ಮಾತ್ರ ಇದೆ

2 years ago

ಡಿಯರ್ sdpi ನಮ್ಮ ಮುಖದಲ್ಲಿ ಚರ್ಮ ಇದೆ. ನಿಮ್ಮಲ್ಲಿ ಬರೀ ಮುಖವಾಡಗಳು ಮಾತ್ರ ಇದೆ….

ಈ ಒಂದು ಫೋಟೊ ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನಗಳಿಂದ ವೈರಲ್ ಆಗುತ್ತಿದೆ. ಮುನೀರ್ ಕಾಟಿಪಳ್ಳ, ಪ್ರಮೋದ್ ಮುತಾಲಿಕ್ ಜಂಟಿ ಪತ್ರಿಕಾಗೋಷ್ಟಿ, ಕೋಮುವಾದಿಯೊಂದಿಗೆ ಜಂಟಿ ಕಾರ್ಯಕ್ರಮ ನಡೆಸಿದ ಮುನೀರ್ ಕಾಟಿಪಳ್ಳ… ಹೀಗೆ ಬಗೆ ಬಗೆಯ ಒಕ್ಕಣೆಗಳೊಂದಿಗೆ ಕೋಮುವಾದಿ Sdpi ನ ಐಟಿ ಸೆಲ್ ನ ಜನಗಳು ಇದನ್ನು ಹಂಚುತ್ತಿದ್ದಾರೆ‌. Sdpi ಜೊತೆ ವೇದಿಕೆ ಹಂಚಲು ನಿರಾಕರಿಸುವ ನಿಮಗೆ ಮುತಾಲಿಕ್ ಜೊತೆ ವೇದಿಕೆ ಹಂಚಲು ನಾಚಿಕೆ ಆಗುವುದಿಲ್ಲವೆ?  “ನಿಮ್ಮ ಮುಖದಲ್ಲಿ ಚರ್ಮ ಇಲ್ಲವೆ” ಎಂದು ಸುಳ್ಳು ಹರಡುವುದರಲ್ಲಿ ಪಂಟರ್ ಗಳಾದ sdpi, pfi ಕಾರ್ಯಕರ್ತರು ಪೋಸ್ಟ್ ಹಾಕಿದ್ದಾರೆ. ಈ ಕುರಿತು ದೂರದ ಊರಿನ ಹಲವರು ನನ್ನಲ್ಲಿ ಇದೇನೆಂದು ಪ್ರಶ್ನಿಸಿದ್ದಾರೆ. ಅವರಿಗಾಗಿ ಈ ಸ್ಪಷ್ಟೀಕರಣ.

ಇದು ಮುತಾಲಿಕ್ ಜೊತೆ ಜಂಟಿ ಕಾರ್ಯಕ್ರಮವೊ, ಜಂಟಿ ಪತ್ರಿಕಾಗೋಷ್ಠಿಯೊ ಅಲ್ಲ. ಅಂತಹ ದುಃಸ್ಥಿತಿ ನಮಗೆ ಯಾವತ್ತೂ ಬರುವುದಿಲ್ಲ. ಇದು ಮಂಗಳೂರು, ಉಡುಪಿ ಭಾಗದ ಪ್ರತಿಯೊಬ್ಬರಿಗೂ ತಿಳಿದಿದೆ. ಇದು ಪತ್ರಕರ್ತರ ಅಧ್ಯಯನ ಕೇಂದ್ರ ಮಂಗಳೂರಿನಲ್ಲಿ ಸುಮಾರು ಹತ್ತು, ಹನ್ನೆರಡು ವರ್ಷಗಳ ಹಿಂದೆ ಹಮ್ಮಿಕೊಂಡ ಮಾಧ್ಯಮ ಚರ್ಚಾಗೋಷ್ಠಿಯ ಕಾರ್ಯಕ್ರಮದ ಫೋಟೊ. ಆಗ ಪಬ್ ದಾಳಿ, ಹೋಮ್ ಸ್ಟೇ ದಾಳಿಗಳಿಂದ ಮಂಗಳೂರಿನಲ್ಲಿ ಬಲಪಂಥೀಯ ಸಂಘಟನೆಗಳ ಅನೈತಿಕ ಪೊಲೀಸ್ ಗಿರಿ ಉತ್ತುಂಗದಲ್ಲಿತ್ತು. ಡಿವೈಎಫ್ಐ, ಎಸ್ಎಫ್ಐ ವಿರುದ್ಧ ದಿಕ್ಕಿನಲ್ಲಿ ನಿಂತು ಪ್ರತಿರೋಧ ಒಡ್ಡುತ್ತಿತ್ತು.

ಅಂತಹ ಸಂದರ್ಭದಲ್ಲಿ ಪ್ರೇಮಿಗಳ ದಿನ ಎಂಬುದು ಪರ ವಿರುದ್ಧದ ಪ್ರತಿಭಟನೆಗಳಿಗೆ ವೇದಿಕೆ ಆಗಿತ್ತು. ಪ್ರಮೋದ್ ಮುತಾಲಿಕ್ ರ ಶ್ರೀರಾಮ ಸೇನೆ ಪ್ರೇಮಿಗಳ ದಿನಾಚರಣೆ ಆಚರಿಸದಂತೆ ಕರೆ ನೀಡಿತ್ತು. ಆಚರಣೆಯ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿತ್ತು. ಮಾಧ್ಯಮಗಳಲ್ಲಿ ಇದು ದೊಡ್ಡ ಸುದ್ದಿ ಆಗಿತ್ತು.

ಈ ಎಲ್ಲಾ ಹಿನ್ನೆಲೆಯಲ್ಲಿ ಆಗ ಮಂಗಳೂರಿನಲ್ಲಿದ್ದ ಪತ್ರಕರ್ತರಾದ ನವೀನ್ ಸೂರಿಂಜೆ, ಹಿಂದು ವಿನಲ್ಲಿದ್ದ  ಸುದಿಪ್ತೊ ಮೊಂಡಲ್, ಅನಿಶಾ ಸೇಠ್, ಪ್ರಜಾವಾಣಿಯ ಪ್ರವೀಣ್ ಪಡಿಗಾರ್, ವಾರ್ತಾ ಭಾರತಿಯ ಸತ್ಯ, ಸಮಯದಲ್ಲಿದ್ದ ಇರ್ಷಾದ್ ಉಪ್ಪಿನಂಗಡಿ, ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿದ್ದ ವಿನೋಬಾ, ಟಿ ವಿ 9 ನ ರಾಜೇಶ್ ರಾವ್ ಮುಂತಾದವರು ಜೊತೆಯಾಗಿ “ಪತ್ರಕರ್ತರ ಅಧ್ಯಯನ ಕೇಂದ್ರ” ದಿಂದ ಪ್ರೇಮಿಗಳ ದಿನಾಚರಣೆಯ ಕುರಿತು ಚರ್ಚಾ ಗೋಷ್ಠಿಯನ್ನು ಏರ್ಪಡಿಸಿದ್ದರು. ಪ್ರೇಮಿಗಳ ದಿನಾಚರಣೆಯ ಬಹಿಷ್ಕಾರಕ್ಕೆ ಕರೆ ನೀಡಿದ್ದ ಬಲಂಪಥೀಯ ಗುಂಪುಗಳ ಪರವಾಗಿ ಪ್ರಮೋದ್ ಮುತಾಲಿಕ್, ಪ್ರೇಮಿಗಳ ದಿನಾಚರಣೆಯ ಪರ ನಿಂತಿದ್ದ ಎಡ, ಪ್ರಜಾಸತ್ತಾತ್ಮಕ  ಶಕ್ತಿಗಳ ಪರವಾಗಿ ನಾನು (ಮುನೀರ್ ಕಾಟಿಪಳ್ಳ) ಭಾಗಿಯಾಗಿದ್ದೆವು. ಇನ್ನೂ ಇಬ್ಬರು ವಿಭಿನ್ನ ವಿಚಾರಧಾರೆಯವರು ಭಾಗಿಯಾಗಿದ್ದರು ಎಂಬುದು ನೆನಪು. ಅದೊಂದು ಮಾಧ್ಯಮ ಪ್ಯಾನಲ್ ಡಿಬೇಟ್ ತರದ ಕಾರ್ಯಕ್ರಮ. ನಾವು ಪರಸ್ಫರ ವಿರುದ್ದವಾದ ವಾದಗಳನ್ನು ಮಂಡಿಸಿದೆವು. ಆಗಿನ ಸಾಮಾಜಿಕ, ರಾಜಕೀಯ ಸಂದರ್ಭದಲ್ಲಿ ಆ ಚರ್ಚಾಗೋಷ್ಠಿ ವ್ಯಾಪಕ ಕುತೂಹಲ ಕೆರಳಿಸಿತ್ತು.

ವಿಷಯ ಇಷ್ಟೆ. ಕೋಮುವಾದಿಗಳೊಂದಿಗೆ  ಅಂತರ ಕಾಯ್ದುಕೊಳ್ಳುವುದು, ಒಂದೇ ವೇದಿಕೆ ಹಂಚಿಕೊಳ್ಳದಂತೆ ಗರಿಷ್ಠ ಎಚ್ಚರ ವಹಿಸುವುದು ನಮ್ಮ ಘೋಷಿತ ನಿಲುವು. (ಯಾವುದೋ ಕ್ರೀಡಾಕೂಟವೊ, ಜಾತ್ರೆ, ಉರೂಸ್ ಗಳಲ್ಲೊ, ಸ್ಥಳೀಯ ಜನರ ಹೋರಾಟಗಳಲ್ಲೊ ಅನಿವಾರ್ಯವಾಗುವುದು ಬೇರೆ ವಿಚಾರ) ಅದಕ್ಕೆ ನಾವು ಬದ್ದರಾಗಿದ್ದೇವೆ. pfi ನ ರಾಜಕೀಯ ವೇದಿಕೆ Sdpi ಕೋಮುವಾದಿ ಎಂಬುದು ನಮ್ಮ ಅಧಿಕೃತ ನಿಲುವು. ಅದರಿಂದಾಗಿ ಬಿಜೆಪಿಯಂತೆ ಅವರೊಂದಿಗೂ ಅಂತರ ಕಾಯ್ದುಕೊಳ್ಳುತ್ತೇವೆ. ಅದರಲ್ಲಿ ವೈಯುಕ್ತಿಕವಾದದ್ದು ಏನೂ ಇಲ್ಲ. ಇದಕ್ಕಾಗಿ ವ್ಯಕ್ತಿಗತ ದೂಷಣೆ, ಸುಳ್ಳು ಆರೋಪಗಳ ಮೂಲಕ ಚಾರಿತ್ರ್ಯ ವಧೆ, ಕೆಸರೆರಚುವಿಕೆಯನ್ನು Sdpi ನಿರಂತರವಾಗಿ ಮಾಡುತ್ತಿದೆ. ಜನತೆಗೆ ಎಲ್ಲವೂ ಗೊತ್ತು. ಕೆಲವರು ಅಪ ಪ್ರಚಾರವನ್ನು ನಂಬಲೂಬಹುದು. ಅದಕ್ಕೆ ಏನೂ ಮಾಡಲಾಗುವುದಿಲ್ಲ. ಸುಳ್ಳು ಕೋಮುವಾದಿಗಳ ಪ್ರಧಾನ ಅಸ್ತ್ರ. ನಮಸ್ಕಾರ.

– ಮುನೀರ್ ಕಾಟಿಪಳ್ಳ, ಸಾಮಾಜಿಕ ಹೋರಾಟಗಾರರು

Leave a Reply