ಸೆಪ್ಟೆಂಬರ್ 2 ರಿಂದ ರಾಜ್ಯಾದ್ಯಂತ 1-5 ನಮೂನೆ ಡಿಜಿಟಲ್ ಪೋಡಿ ದುರಸ್ಥಿ ಅಭಿಯಾನ: ಕೃಷ್ಣ ಬೈರೇಗೌಡ
ಹಾಸನದಲ್ಲಿ ಯಶಸ್ವಿಯಾದ ಡಿಜಿಟಲ್ ಪೋಡಿ ಅಭಿಯಾನ
ರೈತರ ದಶಕಗಳ ಸಮಸ್ಯೆಗೆ ಇಲಾಖೆಯಿಂದ ಶಾಶ್ವತ ಪರಿಹಾರ
ಇದರಿಂದ ರಾಜ್ಯದ ಕನಿಷ್ಟ 10 ಲಕ್ಷ ರೈತರಿಗೆ ಸದುಪಯೋಗ
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟ ಕಂದಾಯ ಸಚಿವ
ಬೆಂಗಳೂರು: ಸೆಪ್ಟೆಂಬರ್ 2 ರಿಂದ 1-5 ನಮೂನೆ ಪೋಡಿ ದುರಸ್ಥಿ ಕಾರ್ಯವನ್ನು ಅಭಿಯಾನ ಮಾದರಿಯಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ದಶಕಗಳಿಂದ ಬಾಕಿ ಉಳಿದಿರುವ ಪೋಡಿ ದುರಸ್ಥಿ ಕಾರ್ಯಕ್ಕೆ ಚುರುಕು ನೀಡುವ ಸಂಬಂಧ ವಿಕಾಸಸೌಧದಲ್ಲಿ ಶುಕ್ರವಾರ ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕಂದಾಯ ನಿರೀಕ್ಷಕರೂ ಸೇರಿ ಇಲಾಖೆಯ ಎಲ್ಲಾ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಕೃಷ್ಣ ಬೈರೇಗೌಡ ಅವರು ಸಭೆ ನಡೆಸಿದರು.
ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹತ್ತಾರು ವರ್ಷಗಳ ಹಿಂದೆ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದ್ದರೂ ಸಹ, ಪೋಡಿ ದುರಸ್ಥಿ ಆಗದೆ ಬಾಕಿ ಉಳಿದಿದೆ. ಲಕ್ಷಾಂತರ ರೈತರು ಅನೇಕ ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರೂ ಸಹ, ಕೆಲವೇ ಕೆಲವರಿಗೆ ಮಾತ್ರ ಪೋಡಿ ದುರಸ್ಥಿಯಾಗಿದ್ದು ಬಹುತೇಕರಿಗೆ ಆಗಿರುವುದಿಲ್ಲ. ಇದರಿಂದಾಗಿ ಹಲವು ರೈತರು ತೀವ್ರ ತೊಂದರೆಗೆ ಸಿಲುಕಿದ್ದು, ಅಧಿಕಾರಿಗಳು ಸೆಪ್ಟೆಂಬರ್ 2 ರಿಂದ ಅಭಿಯಾನ ಮಾದರಿಯಲ್ಲಿ 1-5 ನಮೂನೆ ಪೋಡಿ ದುರಸ್ಥಿ ಕೆಲಸಕ್ಕೆ ಮುಂದಾಗಬೇಕು, ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸೂಚಿಸಿದರು.
ಜಮೀನು ಮಂಜೂರಾಗಿದ್ದರೂ ಪೋಡಿಯಾಗಿ ಆರ್.ಟಿ.ಸಿ ಆಗದೆ ಇರುವುದರಿಂದ, ಅಂತಹ ರೈತರ ಪರಿಸ್ಥಿತಿ ತ್ರಿಶಂಕುವಿನಂತೆ ಆಗಿದೆ. ತಾಲ್ಲೂಕು ಕಛೇರಿ, ಸರ್ವೆ ಕಛೇರಿಗಳಿಗೆ ಅಲೆದು ಅಲೆದು ಪ್ರಯೋಜನವಾಗದೆ ತೀವ್ರ ತೊಂದರೆಗೆ ತುತ್ತಾಗಿದ್ದಾರೆ. ಈ ಬಗ್ಗೆ ಬಹಳ ವರ್ಷಗಳಿಂದ ಚರ್ಚೆಗಳು, ಪ್ರಯತ್ನಗಳು ಆಗುತ್ತಿದ್ದರೂ ಸರಿಯಾದ ಪರಿಹಾರ ದೊರೆತಿರುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಮಸ್ಯೆಯನ್ನು ಪರಿಹರಿಸಲು, ಸೂಕ್ತ ಪರಿಹಾರ ಕ್ರಮಕೈಗೊಳ್ಳಲು ಸೂಚಿಸಿದ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆ ದುರಸ್ಥಿಗೆ ಬಾಕಿಯಿರುವ ಪ್ರಕರಣಗಳ ವಿಲೆಗೆ ವ್ಯವಸ್ಥಿತವಾದ ಯೋಜನೆ ಆರಂಭಿಸಿದೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ಪೋಡಿ ದುರಸ್ಥಿ ಮಾಡಲು ಅವಶ್ಯವಿರುವ 1-5 ನಮೂನೆಗಳನ್ನು ತಯಾರಿಸಲು ಕಾಗದದ ಕಡತಗಳನ್ನು ತಯಾರಿಸಲು ಪ್ರಯತ್ನಿಸಲಾಗಿತ್ತು. ಆದರೆ, ಆ ಕೆಲಸವೂ ಸಮರ್ಪಕವಾಗಿ ಆಗಿರುವುದಿಲ್ಲ. ಆದ ಕೆಲವು ಕಡತಗಳು ಕಾಣೆಯಾಗಿವೆ ಅಥವಾ ಕೈಗೆ ಸಿಗುವುದಿಲ್ಲ. ಇದರಿಂದ ಕಡತಗಳು ಇದ್ದರೂ ಅನೇಕರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಈ ಸಮಸ್ಯೆಗಳಿಂದ ಕಂದಾಯ ಇಲಾಖೆ ಪೋಡಿ ದುರಸ್ಥಿ 1-5 ಕಡತಗಳನ್ನು ಕಂಪ್ಯೂಟರ್ಗಳನ್ನು ಬಳಸಿ ಗಣಕೀಕರಿಸಿದ (ಡಿಜಿಟಲ್) 1-5 ಕಡತಗಳನ್ನು ತಯಾರಿಸಲು ಆರಂಭಿಸಿದೆ ಎಂದರು.
ಡಿಜಿಟಲ್ ಆ್ಯಪ್ ಮುಖಾಂತರ ಮಾಡುವುದರಿಂದ ಸರಳ, ವೇಗವಾಗಿ ಕಡತಗಳನ್ನು ತಯಾರಿಸಬಹುದು. ಯಾರ ಬಳಿ ವಿಳಂಬವಾಗಿದೆ ಎಂಬುದು ಪಾರದರ್ಶಕವಿರುವುದರಿಂದ, ವೇಗವಾಗಿ ಕೆಲಸವಾಗಬಹುದು. ಮೂಲ ಮಂಜೂರಿ ದಾಖಲೆಗಳನ್ನು ಸುರಕ್ಷಿತವಾಗಿಡಬಹುದು. ಮುಂದೆ ತಿದ್ದಲು, ನಕಲು ಮಾಡಲು ಸಾಧ್ಯವಿಲ್ಲ. ಒಬ್ಬ ರೈತನಿಗೆ ತಯಾರು ಮಾಡಿದ 1-5 (ನಮೂನೆ)ಕಡತ, ಆ ಸರ್ವೆ ನಂಬರಿನ ಎಲ್ಲಾ ರೈತರಿಗೂ ಅದೇ ಕಡತ ಅನುಕೂಲವಾಗುತ್ತದೆ. 1-5(ನಮೂನೆ)ಕಡತ ಕಾಣೆಯಾಗಲು ಅಥವಾ ಕಳೆದು ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ಅಭಿಯಾನವನ್ನು ಸೆಪ್ಟೆಂಬರ್ 02 ರಿಂದ ರಾಜ್ಯಾದ್ಯಂತ ಆರಂಭಿಸುತ್ತಿದ್ದೇವೆ. ರಾಜ್ಯದಲ್ಲಿ ಎಲ್ಲೆಲ್ಲಿ ರೈತರಿಗೆ ಮಂಜೂರಾಗಿರುವ ಜಮೀನುಗಳ ದುರಸ್ಥಿಯಾಗದೆ ಬಾಕಿ ಉಳಿದಿದೆ ಅಂತಹ ಪ್ರತಿಯೊಂದು ಕಡೆಯಲ್ಲೂ ಡಿಜಿಟಲಾಗಿ 1-5(ನಮೂನೆ)ಕಡತ ಸೆಪ್ಟೆಂಬರ್ 02 ರಿಂದ ತಯಾರಿ ಮಾಡಲಾಗುವುದು. 1-5(ನಮೂನೆ)ಕಡತ ಎಲ್ಲಾ ಸರ್ಕಾರಿ ಜಮೀನಿಗೆ (ರೈತರಿಗೆ ಮಂಜೂರಾಗಿರುವ), ರೈತರ ಅರ್ಜಿಗೆ ಕಾಯದೆ ಕಂದಾಯ ಇಲಾಖೆ ಸ್ವಯಂ ಕಡತಗಳನ್ನು ತಯಾರಿಸಲಿದೆ ಎಂದು ಹೇಳಿದರು.
1-5ನಮೂನೆ ಪ್ರಕಾರ ತಯಾರಾದ ಕಡತಗಳನ್ನು ಮುಂದೆ 6-10 ಮಾಡಿ ಅವರಿಗೆ ಸರ್ವೆಯೊಂದಿಗೆ ದುರಸ್ಥಿ ಮಾಡಿದ ನಂತರ ಹೊಸ ಸರ್ವೆ ನಂಬರ್ ಪಹಣಿಯೊಂದಿಗೆ ಸಂಪೂರ್ಣ ದಾಖಲೆ ಮಾಡಿಕೊಡಲಾಗುವುದು. ಇದನ್ನು ಅಭಿಯಾನ ಮಾದರಿಯಲ್ಲಿ ಅನುಷ್ಠಾನ ಮಾಡಲಾಗುವುದು. ಇದೊಂದು ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ ರೈತರಿಗೆ ನೆಮ್ಮದಿಯನ್ನು ನೀಡುವ ಅಭಿಯಾನವಾಗಲಿದೆ. ಹೀಗಾಗಿ ಎಲ್ಲಾ ಅಧಿಕಾರಿಗಳೂ ಈ ಯೋಜನೆ ಯಶಸ್ವಿಯಾಗಲು ಸಹಕರಿಸಬೇಕಿದೆ. ಆ ಮೂಲಕ ರೈತರ ದೀರ್ಘ ಕಾಲದ ಸಮಸ್ಯೆಗಳನ್ನು ಪರಿಹರಿಸಲು ತಮ್ಮಿಂದಾದ ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿದರು.
ಹಾಸನದಲ್ಲಿ ಯಶಸ್ವಿಯಾದ ಪೈಲಟ್ ಯೋಜನೆ: ಡಿಜಿಟಲಾಗಿ 1-5(ನಮೂನೆ) ಪೋಡಿ ದುರಸ್ಥಿ ಕಾರ್ಯವನ್ನು ರಾಜ್ಯಾದ್ಯಂತ ವಿಸ್ತರಿಸುವ ಮುನ್ನ ಈ ಯೋಜನೆಯನ್ನು ಹಾಸನದಲ್ಲಿ ಪ್ರಾಯೋಗಿಕವಾಗಿ ನಡೆಸಲಾಗಿದೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಇದೀಗ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪೋಡಿ ದುರಸ್ಥಿಗೊಳಿಸಿ ರೈತರಿಗೆ ನೆಮ್ಮದಿ ನೀಡಬೇಕು ಎಂಬ ಉದ್ದೇಶದಿಂದ ಎಂಟು ತಿಂಗಳ ಹಿಂದೆಯೇ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹಾಗೂ ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಸೇರಿ ಹಿರಿಯ ಅಧಿಕಾರಿಗಳ ಜೊತೆ ನಿರಂತರವಾಗಿ ಚರ್ಚಿಸಲಾಯಿತು. ಚರ್ಚೆಯ ಫಲವಾಗಿ ಇದೀಗ ಡಿಜಿಟಲ್ ಆ್ಯಪ್ ಸಿದ್ದಗೊಂಡಿದೆ. ಇದರ ಸಹಾಯದಿಂದ 1-5(ನಮೂನೆ) ಪೋಡಿ ದುರಸ್ಥಿ ಕಾರ್ಯವನ್ನು ಸುಲಭವಾಗಿ ನಿಭಾಯಿಸಬಹುದು ಎಂದರು.
ಆ್ಯಪ್ ಗೆ ಹಾಸನದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಿ ಕಳೆದ ಕೆಲ ತಿಂಗಳಿನಿಂದ ಪೋಡಿ ದುರಸ್ಥಿ ಕೆಲಸವನ್ನು ಯಶಸ್ವಿಯಾಗಿ ಮುನ್ನಡೆಸಲಾಗುತ್ತಿದೆ. ಇದರ ಸಹಾಯದಿಂದ ಪೋಡಿ ದುರಸ್ಥಿ ಕೆಲಸ ನೂರಕ್ಕೆ ನೂರರಷ್ಟು ಸಾಧ್ಯ ಎಂಬುದನ್ನು ಹಾಸನದಲ್ಲಿ ಸಾಧಿಸಿ ತೋರಿಸಲಾಗಿದೆ. ಹೀಗಾಗಿ ಅಧಿಕಾರಿಗಳು ಪೋಡಿ ದುರಸ್ಥಿ ಬಗ್ಗೆ ಇನ್ನೂ ಕಥೆ ಹೇಳುವ ಅಗತ್ಯವಿಲ್ಲ. ಇಲಾಖೆಯ ಬಳಿ ಪ್ರತಿ ತಾಲೂಕಿನ ಡಾಟಾ ಇದ್ದು, ದುರಸ್ಥಿ ಕೆಲಸ ಎಲ್ಲಾ ತಾಲೂಕುಗಳಲ್ಲೂ ಅಭಿಯಾನ ಮಾದರಿಯಲ್ಲಿ ಆರಂಭವಾಗಬೇಕು ಎಂದರು.
ಅಲ್ಲದೆ, ಈ ಆ್ಯಪ್ ಮೂಲಕ ಯಾವ ಫೈಲು ಯಾವ ಅಧಿಕಾರಿಯ ಬಳಿ ಎಷ್ಟು ದಿನದಿಂದ ಬಾಕಿ ಇದೆ ಎಂಬ ಮಾಹಿತಿಯನ್ನೂ ಪತ್ತೆಹಚ್ಚಬಹುದು. ಹೀಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಿ. ನಿಮ್ಮ ತಾಲೂಕಿನಲ್ಲಿ ದರ್ಖಾಸ್ತು ಪೋಡಿ ಆಗಬೇಕಿರುವ ಸರ್ವೇ ನಂಬರ್ ಎಷ್ಟಿದೆ ಎಂದು ಮೊದಲು ಪಟ್ಟಿ ಮಾಡಿ, ಮುಖ್ಯವಾಗಿ ಜಿಲ್ಲಾಧಿಕಾರಿಗಳು ಪ್ರತಿ ವಾರ ಗ್ರಾಮ ಆಡಳಿತ ಅಧಿಕಾರಿಯಿಂದ ತಹಶೀಲ್ದಾರ್ ವರೆಗೆ ಎಲ್ಲಾ ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆ ನೀಡಬೇಕು, ಈ ಬಗ್ಗೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕು ಹಾಗೂ ಪೋಡಿ ದುರಸ್ಥಿ ಕೆಲಸದ ಬಗ್ಗೆ ನಿರಂತರ ಮೇಲುಸ್ತುವಾರಿ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.




