ಏರ್ ಗನ್ ಮೂಲಕ ಗಾಳಿ ಬಿಟ್ಟು ಪೊಲೀಸರ ಅತಿಥಿಯಾದ ಕಾರ್ಮಿಕ

10 months ago

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಜೊತೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಸ್ನಾನ ಮಾಡುತ್ತಿರುವಾಗ ಒಳ ಉಡುಪು ತೆಗೆದು ಏರ್‌ಗನ್‌ನಿಂದ ಗುದದ್ವಾರಕ್ಕೆ ಗಾಳಿ ಬಿಟ್ಟ ಭೂಪ, ಹಾರೋಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ.

ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಸ್ಟವ್ ಕ್ರಾಫ್ಟ್ ಕಾರ್ಖಾನೆಯಲ್ಲಿ ಹಾಸನ ಮೂಲದ ಪರಮೇಶ್ ಎಂಬುವವರು ಕಳೆದ 17 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ.

ಜತೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದ ಗೋವಿಂದ ಎಂಬಾತನಿಗೂ ಪರಮೇಶ್ ಅವರಿಗೂ ಸಣ್ಣ ಜಗಳವಾಗಿದೆ. ಇದೇ ಸಣ್ಣ ಜಗಳಕ್ಕೆ ಪರಮೇಶ್ ಅವರ ಮೇಲೆ ಕೋಪಗೊಂಡಿದ್ದ ಗೋವಿಂದ, ಕೆಲಸ ಮುಗಿಸಿ ಸ್ನಾನ ಮಾಡುತ್ತಿರುವಾಗ ಏರ್ ಕಂಪ್ರೆಸರ್ ಹಿಡಿದು ಪರಮೇಶ್‌ನ ಒಳಉಡುಪು ತೆಗೆದು ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದಾನೆ.

ಇದರಿಂದ ಪರಮೇಶ್ ಅವರ ಹೊಟ್ಟೆ ಊದಿಕೊಂಡಿದ್ದು, ನೋವು ತಡೆಯಲು ಸಾಧ್ಯವಾಗದೆ ಕಿರುಚಿಕೊಂಡಿದ್ದಾನೆ. ಕೂಡಲೇ ಗೋವಿಂದ ಸ್ಥಳದಿಂದ ಓಡಿ ಹೋಗಿದ್ದಾನೆ. ತಕ್ಷಣ ಪರಮೇಶ್ ಕಾರ್ಖಾನೆಯ ವೈದ್ಯರಿಗೆ ತೋರಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಪಕ್ಕದಲ್ಲೇ ಇರುವ ಚಂದ್ರಮ್ಮ ದಯಾನಂದ ಸಾಗರ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಳೆದ 24 ದಿನದಿಂದ ಚಿಕಿತ್ಸೆ ಕೊಡಿಸುತ್ತಿದ್ದು, ಗೋವಿಂದ ಎಂಬುವವನು ನನ್ನ ಗಂಡನ ಗುದದ್ವಾರದ ಒಳಗೆ ಗಾಳಿ ಬಿಟ್ಟು ಕೊಲ್ಲಲು ಪ್ರಯತ್ನಿಸಿದ್ದಾನೆ. ಕೂಡಲೇ ಆತನ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಪರಮೇಶ್ ಅವರ ಪತ್ನಿ ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪರಮೇಶ್ ಪತ್ನಿ ನೀಡಿದ ದೂರು ಆಧರಿಸಿ ಹಾರೋಹಳ್ಳಿ ಪೊಲೀಸರು ಇದೀಗ ಗಾಳಿ ಬಿಟ್ಟ ಗೋವಿಂದನನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

Leave a Reply