ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಸುಲಿಗೆ: ಶ್ರೀನಾಥ್ ಜೋಷಿಗೆ ನಂಟು!

10 months ago

ಬೆಂಗಳೂರು: ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಅಬಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡಿದ ಆರೋಪದಲ್ಲಿ ಸಿಕ್ಕಿಬಿದ್ದಿರುವ ನಿಂಗಪ್ಪ ಜೊತೆ ಸಂಪರ್ಕ ಹೊಂದಿದ್ದ ಆರೋಪವನ್ನು ಐಪಿಎಸ್ ಅಧಿಕಾರಿ ಶ್ರೀನಾಥ್ ರಾಘವೇಂದ್ರ ಜೋಷಿ ಎದುರಿಸುತ್ತಿದ್ದಾರೆ.

ಸುಲಿಗೆ ಮತ್ತು ಲಂಚ ಆರೋಪ ಪ್ರಕರಣದಲ್ಲಿ ಬಂಧಿಯಾಗಿರುವ ಮಾಜಿ ಹೆಡ್ ಕಾನ್ಸ್ ಟೇಬಲ್ ನಿಂಗಪ್ಪ ಜೊತೆ ಲೋಕಾಯುಕ್ತದಲ್ಲಿ ಎಸ್ಪಿ ಆಗಿ ಕಾರ್ಯನಿರ್ವಹಿಸುವಿದ್ದ ಜೋಷಿ ನಿರಂತರ ಸಂಪರ್ಕದಲ್ಲಿ ಇದ್ದುದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಜೋಷಿ ಅವರನ್ನು ವಶಕ್ಕೆ ಪಡೆಯಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿರುವ ಬೆನ್ನಲ್ಲೇ ಜೋಷಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿವಿ ಸಲ್ಲಿಸಿದ್ದಾರೆ.

ಕ್ರಿಪ್ಟೋ ಕರೆನ್ಸಿ ಸಂಬಂಧ: ಈ ನಡುವೆ ಬಂಧಿತ ಲಿಂಗಪ್ಪ ತಾನು ವಸೂಲಿ ಮಾಡಿದ ಹಣವನ್ನು ತನ್ನ ಹಾಗೂ ತನ್ನ ಸಂಬಂಧಿಕರ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಇದನ್ನು ಹೂಡಿಕೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಚಿತ್ರದುರ್ಗ ಮೂಲದ ನಿಂಗಪ್ಪ (46) ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ಹೆಸರುಗಳನ್ನು ಬಳಸಿಕೊಂಡು ಸರ್ಕಾರಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡುತ್ತಿದ್ದ.

ನಂತರ ನಿಮ್ಮ ವಿರುದ್ಧ ದೂರು ದಾಖಲಾಗಿದ್ದು, ದಾಳಿ ಮಾಡುವ ಸಂಭವ ಇದೆ ಎಂದು ಹೇಳಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟು, ಹಣ ವಸೂಲಿ ಮಾಡುತ್ತಿದ್ದ ಎಂಬ ದೂರಿನ ಮೇರೆಗೆ ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ.

ಜೂ.2ರಂದು ನಿಂಗಪ್ಪ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ನಿಂಗಪ್ಪನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಆರೋಪಿ ನಿಂಗಪ್ಪ ಕಳೆದ 6 ತಿಂಗಳಿನಿಂದ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ರೀತಿ ವಸೂಲಿ ಮಾಡಿದ ಹಣವನ್ನು ತನ್ನ ಹಾಗೂ ತನ್ನ ಸಂಬಂಧಿಕರ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

ಈತನ ಮೊಬೈಲ್‌ಗ‌ಳನ್ನು ಪರಿಶೀಲಿ ಸಿದಾಗ ಸುಮಾರು 13 ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಹಣ ಹೂಡಿಕೆ ಮಾಡಿರುವ ಸಂಗತಿ ಬಹಿರಂಗವಾಗಿದೆ. ಆರೋಪಿ ನಿಂಗಪ್ಪಗೆ ಅಬಕಾರಿ ಇಲಾಖೆಯ ಯಾವ ಯಾವ ಅಧಿಕಾರಿಗಳು ಎಷ್ಟೆಷ್ಟು ಹಣ ನೀಡಿದ್ದಾರೆ ಎಂಬ ಬಗ್ಗೆ ತನಿಖೆಯನ್ನು ಮುಂದುವರಿಸಲಾಗಿದೆ.

ಆರೋಪಿಯೊಂದಿಗೆ ಬೇರೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಆತನ ವಾಟ್ಸ್ ಅಪ್‌ ಸಂದೇಶಗಳು ಮತ್ತು ವಾಟ್ಸ್ ಅಪ್‌ ಕರೆಗಳ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣದಲ್ಲಿ ಶಾಮೀಲಾ ಗಿರುವವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply