ಕ್ಷಮಿಸಿ ಬಾಬಾ ಸಾಹೇಬರೇ…

1 year ago

ವಾಜಮಂಗಲದ ಬಾಬಾ ಸಾಹೇಬರು

ನಮ್ಮ ಮೈಸೂರು ಜಿಲ್ಲೆಯ ವಾಜಮಂಗಲ ಗ್ರಾಮದಲ್ಲಿ ಬಾಬಾ ಸಾಹೇಬರ ಭಾವಚಿತ್ರಕ್ಕೆ  ಅವಮಾನ ಮಾಡಿರುವ ರೀತಿಯನ್ನು ಇಷ್ಟು ಹೊತ್ತಾದರೂ ನನಗೆ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇದು ಬಾಬಾ ಸಾಹೇಬರ ಸಮುದಾಯದ ಮೇಲಿನ ಅಸಹನೆಯೋ ಇಲ್ಲವೇ ಅವರ ಜ್ಞಾನದ ಮೇಲಿರುವ ಅಸಹನೆಯೋ ಅಥವಾ ರಾಜಕೀಯವಾಗಿ ಗಲಭೆ ಹುಟ್ಟು ಹಾಕುವ ಹುನ್ನಾರವೋ ಎಂದು ಯೋಚಿಸುವಾಗ, ಯಾವ ಕಾರಣಗಳಿದ್ದರೂ ಅವರನ್ನು ಅವಮಾನಿಸುವ ಈ ಪರಿಯನ್ನು ಕಂಡಾಗ ನಿಜಕ್ಕೂ ದುಃಖವಾಗುತ್ತದೆ.

ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಅಧಿಕಾರಿಗಳಿಗೆ ನಾನೇ ಖುದ್ದಾಗಿ ಕರೆಮಾಡಿ ಪ್ರಕರಣವನ್ನು ಗಂಭೀರ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಲು ತಿಳಿಸಿದ್ದೇನೆ, ಶಿಕ್ಷೆಯೂ ಆಗುತ್ತದೆ.

ಆದರೆ ದೇಶದ ಕೋಟ್ಯಾಂತರ ಜನರನ್ನು ಉಳಿಸಿದ ಪುಣ್ಯಾತ್ಮನಿಗೆ ಈ ರೀತಿಯಲ್ಲಿ ಅವಮಾನ ಮಾಡಬೇಕೆಂಬ ಯೋಚನೆ ಬಂದಿರುವುದೇ ಅತ್ಯಂತ ಅಘಾತಕಾರಿ.

ವಿದೇಶದಿಂದ ಶಿಕ್ಷಣ ಮುಗಿಸಿ ಬಂದ ಬಾಬಾ ಸಾಹೇಬರಿಗೆ ಎಲ್ಲ ರೀತಿಯ ನಾಗರೀಕ ನಡವಳಿಕೆಗಳ ಪರಿಚಯವಿದ್ದು, ಎಲ್ಲರಿಗಿಂತಲೂ ಹೆಚ್ಚಿನ ಅಕ್ಷರ ಜ್ಞಾನ ಇದ್ದಾಗ್ಯೂ ಅವರಿಗೆ ಒಂದು ಬಾಡಿಗೆ ಮನೆ ಸಿಗಲಿಲ್ಲ.

ಶಿಕ್ಷಣ, ಭಾಷೆ, ವಿಜ್ಞಾನ, ಧರ್ಮಶಾಸ್ತ್ರ, ತತ್ವಶಾಸ್ತ್ರ, ಕಾನೂನು ಮತ್ತು ಇನ್ನಿತರೆ ವಿಷಯಗಳಲ್ಲಿ ಅಗಾಧವಾದ ಪಾಂಡಿತ್ಯವನ್ನು ಹೊಂದಿ ವಿದೇಶಗಳಲ್ಲಿ ದೊಡ್ಡ ವಿದ್ವಾಂಸರಿಂದ ಸೈ ಎನಿಸಿಕೊಂಡಿದ್ದ ಬಾಬಾ ಸಾಹೇಬರಿಗೆ ಈ ರೀತಿಯ ಅಮಾನವೀಯ ನಡವಳಿಕೆಯು ಎದೆಗೆ ಈಟಿ ಚುಚ್ಚಿದಂತೆ ಮಾಡಿತ್ತು.

ಹೇಗೋ ಒಬ್ಬರ ಮನೆಯಲ್ಲಿ ಸುಳ್ಳು ಹೇಳಿ ಬಾಡಿಗೆಗೆ ಮನೆ ಪಡೆದರೂ ಕೂಡಾ ಕೊನೆಯಲ್ಲಿ ಅವರ ಜಾತಿಯನ್ನು ಕಂಡು ಹಿಡಿದ ಮೇಲ್ಜಾತಿ ಜನರು ಅವರನ್ನು ಅಕ್ಷರಶಃ ಕೊಲೆ ಮಾಡಲು ಹುಡುಕುತ್ತಾರೆ.

ಇನ್ನು ಅವರ ವೃತ್ತಿಯ ಸ್ಥಳದಲ್ಲೂ ಸಹ ಬಾಬಾ ಸಾಹೇಬರ ಜ್ಞಾನಕ್ಕೆ ಹತ್ತಿರವೂ ಬಾರದ ಜನರು ಬಾಬಾ ಸಾಹೇಬರ ಮೇಲೆ ಅಸ್ಪೃಶ್ಯತೆ ಆಚರಿಸಿದ್ದು ಐತಿಹಾಸಿಕ ಪ್ರಮಾದಗಳಲ್ಲಿ ಒಂದು.

ಇಷ್ಟೆಲ್ಲಾ ನೋವು ಅವಮಾನಗಳನ್ನು ಅನುಭವಿಸಿದ್ದರೂ ಕೂಡಾ ಬಾಬಾ ಸಾಹೇಬರು ಎಂದಿಗೂ ಸಹ ಯಾರನ್ನೂ ದ್ವೇಷ ಮಾಡಲಿಲ್ಲ.

ಅವರೇ ಹೇಳುವಂತೆ, “ಯಾರಾದರೂ ನನ್ನ ಜಾತಿ ಶ್ರೇಷ್ಠ ಎಂದರೆ ಅವನನ್ನು ಬೈಯಬೇಡಿ, ಕಾರಣ ಅವನೊಬ್ಬ ಮಾನಸಿಕ ರೋಗಿ ಆಗಿರುತ್ತಾನೆ” ಎಂದು ಹೇಳಿ ಇಡೀ ಜನ ಸಮುದಾಯದ ಹಿತಕ್ಕಾಗಿ ಅವರು ದುಡಿದರು.

ನನ್ನ ಪ್ರಕಾರ ಭಾರತದಲ್ಲಿ ಎರಡು ವಿಧ, ಒಂದು ಬಾಬಾ ಸಾಹೇಬರು ಇದ್ದ ಭಾರತ; ಮತ್ತೊಂದು ಅವರು ಇಲ್ಲದ ಭಾರತ.

ಒಂದು ವೇಳೆ ಆ ಮಹನೀಯ ಈ ನೆಲದಲ್ಲಿ ಜನಿಸದೇ ಹೋಗಿದ್ದರೆ ಇಂದಿಗೂ ಸಹ ಪರಿಶಿಷ್ಟ ವರ್ಗಗಳ ದನಿಯು ಅಡಗಿರುತ್ತಿತ್ತು. ಸಮಾನತೆಯ ಕುರಿತ ಮಾತುಗಳಿಗೆ ಅಧಿಕೃತ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣ ಆಗುತ್ತಿತ್ತು. ನಮ್ಮಂತವರು ಅಧಿಕಾರದ ಬಗ್ಗೆ ಯೋಚಿಸುವುದಿರಲಿ, ಬದುಕುವುದಕ್ಕೂ ಕೂಡಾ ಪ್ರಯಾಸ ಪಡಬೇಕಿತ್ತು.

ಹೀಗಾಗಿ ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರ ಚಿತ್ರವನ್ನು ವಿರೂಪಗೊಳಿಸಲಾಗಿದೆ ಎಂಬ ಸಂಗತಿಯು ಮಾನವೀಯತೆಯೇ ತಲೆ ತಗ್ಗಿಸುವ ವಿದ್ಯಮಾನ.

ಏಕೆಂದರೆ ಬಾಬಾ ಸಾಹೇಬರು ಬದುಕಿದ್ದು ತನಗೋಸ್ಕರ ಅಲ್ಲ, ಈ ದೇಶಕ್ಕೋಸ್ಕರ ಎಂಬ ಸಂಗತಿಯು ನಮ್ಮೆಲ್ಲರಿಗೂ ನೆನಪಿರಬೇಕಿತ್ತು. ಹಾಗೆ ಇದ್ದಿದ್ದರೆ ಅವರಿಗೆ ಅವಮಾನ ಮಾಡಬೇಕೆಂಬ ಯೋಚನೆ ಎಂತಾ ಸಂದರ್ಭದಲ್ಲೂ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ!!

ಕ್ಷಮಿಸಿ ಬಾಬಾ ಸಾಹೇಬರೇ…

– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

Leave a Reply