ಮೊದಲು ಯಾವುದೇ ಒಂದು ಕ್ಷೇತ್ರದಲ್ಲಿ ಅಥವಾ ವಾರ್ಡ್‌ಗಳಲ್ಲಿ ನಡೆಯಬೇಕಾದಂತಹ ಉಮಗಾರಿಗಳ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅದಕ್ಕೆ ಅನುಮೋದನೆಯನ್ನು ಪಡೆದು ನಂತರ ಸಂಬಂಧಪಟ್ಟ ಸರ್ಕಾರ ಅಥವಾ ಸಂಸ್ಥೆಗಳಲ್ಲಿ ಯೋಜನೆಗೆ ಅನುಗುಣವಾಗಿ ಹಣವನ್ನು ಬಿಡುಗಡೆ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ರಾಜ್ಯ ಸರ್ಕಾರಗಳು ತಮ್ಮ ಶಾಸಕರನ್ನು ಸಂತೃಪ್ತಿಗೊಳಿಸುವ ಸಲುವಾಗಿ ವಿವಿಧ ಯೋಜನೆಗಳಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಾರೆ. ಇದೇ ಪದ್ಧತಿ ಬಿ.ಬಿ.ಎಂ.ಪಿ.ಯಲ್ಲಿಯೂ ಇದೆ. ಹಣ ಬಂದ ನಂತರ ಅದನ್ನು ಖರ್ಚು ಮಾಡಿ ಅದರಿಂದ ಒಂದಷ್ಟು ಆದಾಯವನ್ನು ಮಾಡಿಕೊಳ್ಳುವ ಸಲುವಾಗಿ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಹಿಂಬಾಲಕರು, ಅಧಿಕಾರಿಗಳು ಅನಗತ್ಯವಾದ ಅವಶ್ಯಕತೆ ಇಲ್ಲದ ಉಪಯುಕ್ತತೆಯೂ ಇಲ್ಲದ ಕಾಮಗಾರಿಗಳಿಗೆ ಯೋಜನೆಗಳನ್ನು ಸಿದ್ಧಪಡಿಸಿ ಅವುಗಳಿಗಾಗಿ ಕ್ಷೇತ್ರಾಭಿವೃದ್ಧಿಗಾಗಿ ಬಂದಿರುವ ಹಣವನ್ನು ಪೋಲು ಮಾಡುವಂತಹ ವ್ಯವಸ್ಥೆಯೊಂದು ರೂಪಿತಗೊಂಡಿದೆ.
ಅದಕ್ಕಾಗಿ ಉದ್ಯಾನವನಗಳಲ್ಲಿ ಪರಿಸರಕ್ಕೆ ಮಾರಕವಾದ ಯಾವ ಜನರು ಕೇಳದಿದ್ದರೂ ಅನಗತ್ಯವಾದ ಕಟ್ಟಡಗಳನ್ನು ನಿರ್ಮಿಸುವುದು, ಪದೇ ಪದೇ ನಡಿಗೆದಾರರ ಹೆಸರಿನಲ್ಲಿ ಕಲ್ಲುಗಳನ್ನು ಬದಲಾಯಿಸುವುದು, ಕುಳಿತುಕೊಳ್ಳುವವರು ಮೂರು ಜನ ಇಲ್ಲದಿದ್ದರೂ ಉದ್ಯಾನದ ತುಂಬಾ ಬೆಂಚುಗಳನ್ನು ಅಳವಡಿಸುವುದು, ಯಾವುದೋ ಜನರು ಇಲ್ಲದಿದ್ದರೂ ಒಂದು ನಿರ್ದಿಷ್ಟವಾದ ಕಂಪನಿಯಿಂದಲೇ ಗುಣಮಟ್ಟವಿಲ್ಲದ ಆಟದ ಸಾಮಾನುಗಳನ್ನು ಮತ್ತು ಜಿಮ್ ಸಲಕರಣೆಗಳನ್ನು ಅಳವಡಿಸಿ ನೂರಾರು ಕೋಟಿ ರೂಪಾಯಿಗಳನ್ನು ಇದರ ನೆಪದಲ್ಲಿ ಪೋಲು ಮಾಡುತ್ತಿದ್ದಾರೆ.
ಭದ್ರವಾಗಿರುವ ಕಟ್ಟಡಗಳನ್ನು ಒಡೆದು ಹಾಕುವುದು, ಅದೇ ಸ್ಥಳದಲ್ಲಿ ಮತ್ತೆ ಕಟ್ಟಡವನ್ನು ನಿರ್ಮಿಸುವುದು, ಆಟದ ಮೈದಾನಗಳ ಅಭಿವೃದ್ಧಿ ಹೆಸರಿನಲ್ಲಿ ಮತ್ತೆ ಮತ್ತೆ ಪ್ರೇಕ್ಷಕರ ಗ್ಯಾಲರಿಯ ಮೆಟ್ಟಿಲುಗಳನ್ನು ಹೊಸದಾಗಿ ಅಳವಡಿಸುವುದು; ಹೀಗೆ ಒಟ್ಟಾರೆಯಾಗಿ ಬಂದಂತಹ ಎಲ್ಲಾ ಹಣವನ್ನು ಖರ್ಚು ಮಾಡಿ ಸಾಧನೆಯನ್ನು ಮಾಡಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.
ಸರ್ಕಾರದ ಹಣ, ಸರ್ಕಾರದ ಜಾಗ ಇಲ್ಲಿ ನಿರ್ಮಾಣವಾಗುವ ಆಟದ ಮೈದಾನಗಳು, ಟೆನ್ನಿಸ್ ಕೋರ್ಟ್‌ಗಳು, ಈಜುಕೊಳಗಳು, ರಂಗಮಂದಿರಗಳು, ಸಮುದಾಯ ಭವನಗಳು, ಉದ್ಯಾನವನಗಳು ಹೀಗೆ ಎಲ್ಲವೂ ಸಹ ಚುನಾಯಿತ ಪ್ರತಿನಿಧಿಗಳ ಸಂಬಂಧಿಕರ ಅಥವಾ ಹತ್ತಿರದವರ ಹೆಸರಿನಲ್ಲಿ ಗುತ್ತಿಗೆಗಳನ್ನು ನೀಡುವುದು ಸರ್ಕಾರಕ್ಕೆ ಒಂದು ಪೈಸೆ ಕಟ್ಟಿದರೆ, ಜನರಿಂದ ಹತ್ತು ಪಟ್ಟು ಹೆಚ್ಚು ವಸೂಲಿ ಮಾಡಿ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಇದರ ಮಾಲೀಕರಂತೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನಸಾಮಾನ್ಯರು ಕಟ್ಟುವ ತೆರಿಗೆ ಹಣ, ಬೆವರು ಸುರಿಸಿ ದುಡಿದಂತಹ ಮೂಲದಿಂದ ಬಂದಿರುತ್ತದೆ. ಹೀಗೆ ಬೇಕಿಲ್ಲದ ಉಪಯುಕ್ತವಲ್ಲದ, ಮುಂದಾಲೋಚನೆಯಿಲ್ಲದ, ಹಣ ಹೊಡೆಯುವ ಸಲುವಾಗಿಯೇ ರೂಪಿಸುವಂತಹ ಯೋಜನೆಗಳಿಗೆ ಕಡಿವಾಣ ಹಾಕದಿದ್ದರೆ ಚುನಾಯಿತ ಪ್ರತಿನಿಧಿಗಳು ಒಂದೊಂದು ಅವಧಿಯಲ್ಲಿಯೇ ನೂರಾರು ಕೋಟಿಯ ಒಡೆಯರಾಗುತ್ತಾರೆ.
ಇದಕ್ಕಾಗಿಯೇ ಆಡಳಿತ ಪಕ್ಷ ಬೇಕು ಎಂದು ಬಾಯಿ ಬಡಿದುಕೊಳ್ಳುವುದು, ಪಕ್ಷಾಂತರವನ್ನು ಮಾಡಿ ಆಡಳಿತ ಪಕ್ಷವನ್ನು ಸೇರುವುದು, ಹೇಳುವುದು ಮಾತ್ರ ಕ್ಷೇತ್ರದ ಅಭಿವೃದ್ಧಿ, ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನಕ್ಕೆ ಎಂಬ ಬೊಗಳೆ ಮಾತುಗಳು. ಇಲ್ಲಿ ಆಗುತ್ತಿರುವುದು ಇವರ ಅಭಿವೃದ್ಧಿ, ಇವರ ಹಿಂಬಾಲಕರ ಸಂಬಂಧಿಕರ ಅಭಿವೃದ್ಧಿ, ಲಂಗು ಲಗಾಮಿಲ್ಲದೆ ಬೊಕ್ಕಸದ ಹಣ ಇದೇ ರೀತಿಯಲ್ಲಿ ಪೋಲಾಗುತ್ತಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ರಾಜ್ಯ ಸರ್ಕಾರಗಳ ಸಾಲದ ಪ್ರಮಾಣ ಬೆಟ್ಟದಂತೆ ಬೆಳೆಯುತ್ತದೆ. ಪಾರದರ್ಶಕತೆ ಇಲ್ಲದಿದ್ದರೆ ಕಾಮಗಾರಿಗಳು ಗುಣಮಟ್ಟವನ್ನು ಕಾಯ್ದುಕೊಳ್ಳುವುದಿಲ್ಲ. ಖಜಾನೆಯ ಹಣವೂ ಸದುಪಯೋಗವಾಗುವುದಿಲ್ಲ.
- ಕೆ.ಎಸ್. ನಾಗರಾಜ್, ಬೆಂಗಳೂರು




