ಈಗ ನಮಗೀಗ ಬೇಕಿರುವುದು ಕ್ರಿಕೆಟ್ ಆಟ, ಕ್ರಿಕೆಟ್ ರಾಜಕೀಯವಲ್ಲ

5 months ago

ಗಂಭೀರ ತೊಲಗಲಿ.

ನೂರ ನಾಲ್ವತ್ತು ಕೋಟಿ ಭಾರತೀಯರಲ್ಲಿ ಕನಿಷ್ಠ ಐವತ್ತು ಕೋಟಿ ಭಾರತೀಯರು ಕ್ರಿಕೆಟ್ ಪ್ರೇಮಿಗಳು. ಅದರಲ್ಲಿ ನಾನೂ ಒಬ್ಬ. T20 ಇರಲಿ, ಏಕದಿನದಾಟ ಇರಲಿ ಅಥವಾ ಟೆಸ್ಟ್ ಪಂದ್ಯವೇ ಇರಲಿ; ನಾನು ಮಾತ್ರ ಖಾಯಂ ನೋಡುಗ.

ನಿನ್ನೆ ಮ್ಯಾಚ್ ನೋಡುತ್ತಿದ್ದೆ. ಭಾರತದ ಮೊದಲನೆಯ ಇನ್ನಿಂಗ್ಸ್ ಆರಂಭವಾಗಿತ್ತು. ನಿಧಾನವಾಗಿ ಆಟ ಕುದುರಿಕೊಳ್ಳುತ್ತಿರುವಾಗಲೆ ರಾಹುಲ್ ಪೆವಿಲಿಯನ್ ನತ್ತ ನಡೆದ. ಸೌಥ್ ಆಫ್ರಿಕನ್ನರ ವಿರುದ್ಧ ಯಶಸ್ಸು ಕಾಣದ ಯಶಸ್ವಿ ಚನ್ನಾಗಿ ಆಡುತ್ತಿದ್ದ. ೫೭ರನ್ನುಗಳಾಗಿದ್ದವು. ಈ ಬಾಲಿಗೆ ಬೌಂಡರಿ ಬಾರಿಸಿದರೆ ೬೧. ಫಸ್ಟ್ ಕ್ಲಾಸಿಗೆ ೬೦ ತಾನೆ ಬೇಕು. ಹಗಲುಗನಸು  ಕಾಣಲಾರಂಭಿಸಿದ್ದೆ. ೫೦೦ ಗಿಂತ ಹೆಚ್ಚು ಬಾರಿಸಬೇಕು. ಹಾಗಾದರೆ ಮ್ಯಾಚ್ ಡ್ರಾ ಆಗುವುದು. ಡ್ರಾ ಆದರೂ ಸೌಥ್  ಆಫ್ರಿಕನ್ನರು ಸೀರೀಸ್ ಗೆದ್ದಂತಲ್ಲವೆ? ಕಡಿವಾಣವಿಲ್ಲದ ಹುಚ್ಚು ಕುದುರೆ ಓಡುತ್ತಿತ್ತು.

“ಯಶಸ್ವಿ ಓಟ್” ಕಿರುಚಿದ ಕಮೆಂಟೇಟರ್. ಭಾರತ ತಂಡವೇ ಔಟ್ ಆಗಿತ್ತು. ‘ಇದನ್ನೂ ಸೋಲುತ್ತೇವೆ’ ಎಂದು ಟಿ. ವಿ. ಆಫ್ ಮಾಡಿದೆ. ಮೂರುವರೆಗೆ ಮತ್ತೆ ಕ್ರಿಕೆಟ್ ನೆನಪಾಯಿತು. ಕುದುರಿಕೊಂಡಿರಬಹುದೆಂಬ ದೂರದ ಆಸೆ, ಟಿ.ವಿ. ಆನ್ ಮಾಡಿದೆ. ಭಾರತದ ಕೊನೆ ಜೋಡಿ ಆಡುತ್ತಿತ್ತು!! “ಭುಮ್ರಾ ಔಟ್”. ತೆರೆ ಬಿತ್ತು ಭಾರತದ ಮೊದಲ ಇನ್ನಿಂಗ್ಸ್ ಗೆ. ತೇರೆ ಬೀಳಲಿದೆ ಸೌಥ್ ಆಫ್ರಿಕಾ vs ಭಾರತದ ಟೆಸ್ಟ್ ಮ್ಯಾಚಿಗೆ. ಭಾರತ ಹೀನಾಯವಾಗಿ ಸೋಲಲಿದೆ ಟೆಸ್ಟ್ ಸರಣಿಯನ್ನು. 

ಇತ್ತೀಚಿನ ದಿನಗಳಲ್ಲಿ ಭಾರತದ ಪುರುಷರ ಕ್ರಿಕೆಟ್ ನೆಲ ಕಚ್ಚುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ನಾನು ಚಡ್ಡಿಯಿಂದ ಪ್ಯಾಂಟಿಗೆ ಭಡ್ತಿ ಪಡೆಯುವ ಸಮಯದಿಂದಲೆ ಈ ಆಟವನ್ನು ಹೃದಯಕ್ಕೆ ನುಗ್ಗಿಸಿಕೊಂಡವನು. ವೆಸ್ಟ್ ಇಂಡೀಸ್ ನ ಕ್ಲೈವ್ ಲಾಯ್ಡ್, ವಿವಿಯನ್ ರಿಚರ್ಡ್ಸ್, ಆಂಡಿ ರಾಬರ್ಟ್ಸ್, ಜುಯೆಲ್ ಗಾರ್ಡನರ್ ನಮ್ಮ ಪುಟ್ಟ ಹೃದಯಗಳಲ್ಲಿ ನಡುಕ ಹುಟ್ಟಿಸುತ್ತಿದ್ದರು. ನೆರೆಯ ಪಾಕಿಸ್ತಾನದ ಮಿಯಾಂದಾದಾನ ಆ ಕೊನೆಯ ಬಾಲಿನ ಸಿಕ್ಸರ್ ಹೇಗೆ ಮರೆಯಲು ಸಾಧ್ಯ? ಒಂದೇ ಒಂದು ಬಾಲಿನಲ್ಲಿ ಚೇತನ್ ಶರ್ಮಾನೆಂಬ ವೇಗಿ ಭಾರತದ ಸಿನಿಮಾರಂಗದ ಓಂಪುರಿಯಾಗಿದ್ದ.

ಕಪಿಲ ಬಂದ, ಕೆಟ್ಟ ಕನಸುಗಳು ಮರೆಯಾಗಲಾರಂಭಿಸಿದವು. ೧೯೮೩ರಲ್ಲಿ ವಿಶ್ವಕಪ್ ತಂದ. ಹದಿನಾರು ವರ್ಷದ ಸಚಿನ್ ಬಂದ. ಬದಲಾವಣೆ ತಂದ. ವಂಗಬಂದು ಗಂಗೂಲಿ ಅವನ ಜೊತೆಯಾದ. ಯಶಸ್ಸು ಮೆಟ್ಟಲಾಗಲಾರಂಭಿಸಿತ್ತು. ದ್ರಾವಿಡ್ ಗೋಡೆಯಾದ, ಲಕ್ಷ್ಮಣ ಜಂಗಮನಾದ ಜಗತ್ತೇ ನಮ್ಮದಾಯಿತು. ಬಾಬ್ ಕಟ್ ದೋನಿಯ ಹೆಲಿಕಾಪ್ಟರ್ ಶಾಟ್, ವಿರಾಟ್ ಕೊಹ್ಲಿಯ ಕವರ್ ಡ್ರೈವ್ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದವು. ಭಾರತ ಕ್ರಿಕೆಟ್ ಸಾರ್ವಭೌಮವಾಯಿತು. ಕ್ರಿಕೆಟ್ಟಿನ  ಸುವರ್ಣಯುಗ ಆರಂಭವಾಗಿತ್ತು. 

ಕ್ರಿಕೆಟ್ಟಿನಲ್ಲಿ ಹಣ ಹೊಳೆಯಾಗಿ ಹರಿಯಲಾರಂಭಿಸಿತು. ಜಾಹಿರಾತು ಕುಣಿಕುಣಿದಾಡಿತು. ಆಟಗಾರರು ವಿಜ್ಞಾನಿಗಳಿಗಿಂತ ಜನಪ್ರಿಯರಾದರು. ಎಸ್.ಎಸ್. ಎಲ್.ಸಿ.ಯ ಹುಡುಗರು ಕೋಟಿ ಕೋಟಿ ಹಣ ಎಣಿಸಲಾರಂಭಿಸಿದರು. ಉದ್ಯಮಿಗಳನ್ನೂ ಸಿನಿಮಾ ನಟರನ್ನು ಮೀರಿನಿಂತರು. ಇವರನ್ನು ಕಂಡ ಯುವಕರು ನನ್ನಂತ ಹಿರಿಯರು ಸಹ ಹುಚ್ಚರಾದರು.

ಮರಭೂಮಿಯಲ್ಲಿ ಓಯಸಿಸ್ ಹುಡುಕಿಕೊಳ್ಳುವಂತೆ ರಾಜಕೀಯ ನಾಯಕರು ಕ್ರಿಕೆಟ್ ಹುಡುಕಿಕೊಂಡು ಬಂದರು. ಆಟ ಬರದ ಆಟಗಾರರಿಗೆ ವ್ಯವಸ್ಥಾಪಕರಾದರು. ಬಂದವರೇ ರಾಜಕೀಯ ಪ್ರಾರಂಭಿಸಿದರು. ತಮ್ಮ ಹುಡುಗರು “ಇರಲಿ” ಎಂದರು. ಮಾಜಿ ಸಂಸದನೊಬ್ಬ ನಾನಲ್ಲಿ ಸಂಘ ಬೆಳಸುವೆ ಎಂದ. ಧರ್ಮಾಧಾರಿತ ಸೆಲೆಕ್ಷನ್ ಮಾಡಲಾರಂಭಿಸಿದ. ಪ್ರತಿಭೆ ಯಾರಿಗೆ ಬೇಕೆಂದ. ನಿಷ್ಠೆಯೇ ಮೂಲವೆಂದ. ಯರ್ರಾ ಬಿರ್ರಿ ಕ್ರಿಕೆಟ್ಟಿಗರನ್ನು ಸೆಲೆಕ್ಟ್ ಮಾಡಿದ.

ಹೀಗೆಯೇ ಅಲ್ಲವೆ ದೈತ್ಯ ವೆಸ್ಟ್ ಇಂಡೀಸ್ ಕ್ರಿಕೆಟ್ ಗತಕಾಲಕ್ಕೆ ಇಳಿದದ್ದು. ಹೀಗೆ ಅಲ್ಲವೆ ಪಾಕಿಸ್ತಾನ ಅಮೇರಿಕೆಯ ಬಚ್ಚಾಗಳೆದರು ಮಂಡಿಯೂರಿದ್ದು. ಹೀಗೆ ಅಲ್ಲವೆ ನ್ಯೂಜಿಲೆಂಡ್ ಎದರು ನಮ್ಮವರು  ವಾಶ್ ಔಟ್ ಆಗಿದ್ದು. ಈಗ ಸೌಥ್ ಆಫ್ರಿಕಾದೆದರು ಮಂಡಿಯೂರಲಾರಂಭಿಸಿದ್ದು.

ಇನ್ನಿಷ್ಟು ದಿನ ಇದು ಮುಂದುವರಿದರೆ ಬಂಗ್ಲಾ, ಶ್ರಿಲಂಕಾ, ಜಿಂಬಾಬ್ವೆ ತಂಡಗಳೆದರು ಬೆವರಿಳಿಸಿಕೊಳ್ಳಬೇಕಾದೀತು.

ಕಟ್ಟುವುದು ಕಷ್ಟ, ಕೆಡುವುದು ಸುಲಭ. ಕೋಚ್ ಗಂಭೀರನಿಗೆ ಗಂಭೀರತೆ ಸಾಲದು. ಇವನಿಗಿಂತ ದಿಗ್ಗಜರು ನಮ್ಮಲಿದ್ದಾರೆ. ಅವರಿಗೆ ಕ್ರಿಕೆಟ್ಟನ್ನು ಗೌರವ ಪೂರ್ವಕವಾಗಿ ಬಿಟ್ಟು ಕೊಡಲಿ.

ಭಾರತದಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ವೃತ್ತಿ ಪರತೆಗೆ ಕೊರತೆಯಿಲ್ಲ. ಕ್ರಿಕೆಟ್ ಸೌಲಭ್ಯಗಳಿಗೆ ಕೊರತೆ ಇಲ್ಲ. ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಹಣದ ಕೊರತೆ ಇಲ್ಲ. ಆದರೆ ಇಲ್ಲಿ ಕೊರತೆ ಇರುವುದು ಬಿ. ಸಿ. ಸಿ. ಐ ಮನಸ್ಥಿತಿಗೆ. ಇಲ್ಲಿ ಕೊರತೆ ಇರುವುದು ಇವರ ಇಚ್ಛಾಶಕ್ತಿಯಲ್ಲಿ.

ಈಗ ನಮಗೀಗ ಬೇಕಿರುವುದು ಕ್ರಿಕೆಟ್ ಆಟ. ಕ್ರಿಕೆಟ್ ರಾಜಕೀಯವಲ್ಲ. ಗಂಭೀರ ತೊಲಗಲಿ. ರಾಜಕೀಯ ರಹಿತವಾದ ಆಟ ಬೆಳೆಯಲಿ. ಮಕ್ಕಳು ಆಡಲಿ. ಜಗತ್ತನ್ನು ಜಯಿಸಲಿ. ಕ್ರಿಡಾ ಮನೋಭಾವ ಹೆಚ್ಚಲಿ.

– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply