ಇಂದಿರಾ ಕ್ಯಾಂಟೀನ್ ಗಳ ಗುಣಮಟ್ಟದ ಬಗ್ಗೆ ಗಮನಹರಿಸಿ

5 months ago

ಮುಖ್ಯಮಂತ್ರಿ ಸಿದ್ದರಾಮಯ್ಯನವರು 2013ರಿಂದ 2018ರ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಡವರು ಮತ್ತು ಕಡಿಮೆ ಸಂಬಳ ಪಡೆದು ಬದುಕು ಸಾಧಿಸುವ ಜನರಿಗಾಗಿ ಕಡಿಮೆ ಬೆಲೆಯಲ್ಲಿ ತಿಂಡಿ ಮತ್ತು ಊಟ ನೀಡುವ ಪ್ರಮುಖವಾದ ಯೋಜನೆಯಾಗಿದ್ದ ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆ ಮತ್ತು ಸ್ಥಿತಿಗತಿಗಳ ಬಗ್ಗೆ ತುರ್ತು ಗಮನವನ್ನು ಹರಿಸಬೇಕಾಗಿದೆ. ಬಡವರು ಮತ್ತು ದುಡಿಯುವ ಮಂದಿ ಇಂದಿರಾ ಕ್ಯಾಂಟೀನ್ ಅವರ ಬದುಕಿಗೆ ಮತ್ತು ಆರ್ಥಿಕ ಪರಿಸ್ಥಿತಿಗೆ ಅನುಕೂಲಕರವಾಗಿತ್ತು. ಆರಂಭದ ದಿನಗಳಲ್ಲಿ ಬಹಳ ಶುದ್ಧವಾಗಿ ಮತ್ತು ಸ್ವಚ್ಛವಾಗಿ ವಾತಾವರಣವನ್ನು ಇಟ್ಟು ಗುಣಮಟ್ಟದ ತಿಂಡಿ ಮತ್ತು ಊಟ ಒದಗಿಸಿ ಯೋಜನೆ ಯಶಸ್ವಿಯಾಗಿ ಸಾಗುತ್ತಿತ್ತು.

ನಂತರ ಬಂದ ಬಿಜೆಪಿ ಸರ್ಕಾರ ಇದರ ಬಗ್ಗೆ ಅಷ್ಟಾಗಿ ಆಸಕ್ತಿಯನ್ನು ಹೊಂದಿರಲಿಲ್ಲ. ಈ ಕಾರಣದಿಂದಾಗಿ ಇದರ ನಿರ್ವಹಣೆಯನ್ನು ಕಡೆಗಣಿಸಿ ಕೆಲವು ಪ್ರದೇಶಗಳಲ್ಲಿ ಕ್ಯಾಂಟೀನ್ ಗಳು ಮುಚ್ಚಲ್ಪಟ್ಟವು ಮತ್ತು ಕೆಲವು ಪ್ರದೇಶಗಳಲ್ಲಿ ಟಾಟಾಚಾರಕ್ಕೆ ಇವುಗಳು ಕಾರ್ಯವನ್ನು ನಿರ್ವಹಿಸುತ್ತಿದ್ದವು.

2023ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಕಳೆದ ಎರಡುವರೆ ವರ್ಷದ ಅವಧಿಯಲ್ಲಿ ಅಧಿಕಾರವನ್ನು ನಡೆಸುತ್ತಿದ್ದಾರೆ. ಆದರೆ ಇಂದಿರಾ ಕ್ಯಾಂಟೀನ್ ಗಳ ವಿಚಾರದಲ್ಲಿ ಬಹಳಷ್ಟು ಚರ್ಚೆಗಳು ನಡೆದಿದೆಯಾದರೂ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿರುವುದಿಲ್ಲ.

ನವಂಬರ್ 19 ಇಂದಿರಾಗಾಂಧಿರವರ ಜನ್ಮದಿನವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸರ್ಕಾರ ದೃಢವಾದಂತಹ ನಿರ್ಧಾರವನ್ನು ಕೈಗೊಂಡು ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆ ಮತ್ತು ಅಲ್ಲಿ ಕೊಡುವಂತಹ ಆಹಾರ ಪದಾರ್ಥಗಳ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಆಡಳಿತಾತ್ಮಕವಾದ ಕ್ರಮಗಳನ್ನು ಕೈಗೊಳ್ಳಬೇಕು. ಇನ್ನೂ ಬಹಳಷ್ಟು ಕಡೆ ಇಂತಹ ಕ್ಯಾಂಟೀನ್ ಗಳ ಅವಶ್ಯಕತೆ ಇದೆ. ಇವುಗಳ ಕಡೆಯೂ ಗಮನವನ್ನು ಹರಿಸಬೇಕಾಗಿದೆ.

ಯೋಜನೆಗಳನ್ನು ಘೋಷಿಸಿದರೆ ಸಾಲದು, ಯೋಜನೆಗಳು ನಿರ್ವಿಘ್ನವಾಗಿ ಮತ್ತು ಕ್ರಮಬದ್ಧವಾಗಿ ಮುಂದುವರೆಸಿಕೊಂಡು ಬರುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಕ್ರಮಗಳು ಕೈಗೊಳ್ಳಬೇಕು. ವಿಶೇಷವಾಗಿ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಕ್ಯಾಂಟೀನ್ ಗಳ ಶುಚಿತ್ವದ ಕಡೆಗೆ ಗಮನ ನೀಡಿದಾಗ ಮಾತ್ರವೇ ಯೋಜನೆ ಸಾಕಾರವಾಗುತ್ತದೆ.

ಕಾಂಗ್ರೆಸ್ ಪಕ್ಷಕ್ಕೆ ಬಡವರು ಮತ್ತು ಮಧ್ಯಮ ವರ್ಗದ ಹಾಗೂ ದುಡಿಯುವ ಜನ ಭರವಸೆಯಿಂದ ಬೆಂಬಲವನ್ನ ನೀಡುತ್ತಾ ಬಂದಿರುತ್ತಾರೆ. ಆದುದರಿಂದ ಇಂತಹ ವರ್ಗದ ಜನರ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆಗಳು ಯಾವುದೇ ಕಾರಣಕ್ಕೂ ಲೋಪಗಳಾಗದ ರೀತಿಯಲ್ಲಿ ನಿರಂತರವಾಗಿ ಮುಂದುವರಿಸಬೇಕಾದದ್ದು ಸರ್ಕಾರ ಮತ್ತು ಪಕ್ಷದ ಕರ್ತವ್ಯವಾಗಿರುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply